ಕಾಶಿ ಅನುಭವ (ಭಾಗ ೮) – ಡಾ.ಪ್ರಕಾಶ ಬಾರ್ಕಿ



‘ನಾನು ಹೊರಡಲು ಉತ್ಸುಕನಾಗಿದ್ದು‌ ಏಷ್ಯಾದ ಅತೀ ದೊಡ್ಡ “ವಸತಿ ವಿಶ್ವವಿದ್ಯಾಲಯ” ಕಣ್ತುಂಬಿಕೊಳ್ಳಲು.ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ “ಬನಾರಸ್ ಹಿಂದೂ ವಿಶ್ವವಿದ್ಯಾಲಯ” ವಿದೆ’ – ಡಾ. ಪ್ರಕಾಶ ಬಾರ್ಕಿ. ಮುಂದೆ ಓದಿ ಕಾಶಿ ಅನುಭವದಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಒಳನೋಟ…

ಆಧ್ಯಾತ್ಮಿಕ ರಾಜಧಾನಿ ಕಾಶಿಯಲ್ಲಿ ಸೂರ್ಯ ಮೈಮುರಿದೇಳುವ ಮುಂಚೆಯೇ “ಗಂಗೆ”ಯಲ್ಲಿ ಮುಳುಗೆದ್ದವನೆ, ಮೈ ಕೊರೆಯುವ ಚಳಿ, ಇಬ್ಬನಿಯ ತಂಪಿಗೆ ಬೆದರಿ ನಡುಗುತ್ತ ಹಲ್ಲು ಕಟಕಟಿಸ ತೊಡಗಿದೆ. “ಹರಿಶ್ಚಂದ್ರ ಘಾಟ್”ನ ಒಂದು ಚುಂಗು ಬಳಸಿಕೊಂಡೇ ಆಳೆತ್ತರಕ್ಕೆ ಬೆಳೆದು ನಿಂತಿದ್ದ.. ನಾ ತಂಗಿದ್ದ “ಕರ್ನಾಟಕ ವಸತಿ ಗೃಹ”ಕ್ಕೆ ಓಡಿದೆ.

ಜೈ ಭೋಲೆನಾಥ….
ಜೈ ಭೋಲೆನಾಥ….…ಗುನುಗುತ್ತಾ…

ನನಗಿಂತಲೂ ಮೊದಲೆ ಅದೇಷ್ಟೋ ಸಾಧುಗಳು ಮುಳುಗೆದ್ದು… ಅದು ಸಹಜವೆಂಬಂತೆ ಗಂಗೆಯ ತಟದಲ್ಲಿ ಅಲ್ಲಲ್ಲಿ ಬರೀ ಮೈಯಲ್ಲಿ ಧ್ಯಾನಕ್ಕಿಳಿದಿದ್ದರು. ಅವರ ಕೂದಲನ್ನು ಕೊಂಕಿಸಲಾಗದ ಚಳಿ ಸೇಡು ತೀರಿಸಿಕೊಳ್ಳುವಂತೆ ನನ್ನ ಹಿಂಡಿ ಹಿಪ್ಪೆ ಮಾಡಿತು.

ಬಿಸಿ..ಬಿಸಿ ಚಹಾ ಹೀರಿದಾಗಲೆ ಚಳಿ ತಹಬದಿಗೆ ಬಂದು ಮೈ ನಡುಕ ನಿಂತಿದ್ದು.

ಫೋಟೋ ಕೃಪೆ : Tripoto

ಕಚೋರಿ,ಜಿಲೇಬಿ, ನಾಷ್ಟಾ ನನಗೆ ತೀರಾ ಹೊಸದು ಅದರ ಕಲ್ಪನೆಯು ಇರಲಿಲ್ಲ. ಬೆಳ್ಳಂಬೆಳಿಗ್ಗೆ ಬಾಯಿ ನೀರೂರುವ ಜಿಲೇಬಿ ಚಪ್ಪರಿಸಿ ಹೊಟ್ಟೆಗೆ ಸೇರಿಸಿದೆ. ಜೀವ ಸಂತೃಪ್ತ.

ನಾನು ಹೊರಡಲು ಉತ್ಸುಕನಾಗಿದ್ದು‌ ಏಷ್ಯಾದ ಅತೀ ದೊಡ್ಡ “ವಸತಿ ವಿಶ್ವವಿದ್ಯಾಲಯ” ಕಣ್ತುಂಬಿಕೊಳ್ಳಲು. ಅಲ್ಲಿನ ಕ್ಯಾಂಪಸ್ ಸೌಂದರ್ಯ ರಾಶಿ ಸವಿಯಲು. ಅಲ್ಲಿರುವ ಕಾಶಿಯ “ವಿಶ್ವನಾಥ” ಮಂದಿರದ ಯಥಾವತ್ತು ನಕಲಿನ “ವಿಶ್ವನಾಥ ಮಂದಿರ ನೊಡಿ, ಶಿವನ ಸಾನಿಧ್ಯವನ್ನ ಮತ್ತೊಮ್ಮೆ ಅನುಭವಿಸುವ ಅವಕಾಶಕ್ಕಾಗಿ.

ಫೋಟೋ ಕೃಪೆ : NDTV

ಸ್ವಾತಂತ್ರ್ಯ ಪೂರ್ವದ ಘಟನೆಯಿದು…

ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞನೊಬ್ಬರು “ಭಾರತದಲ್ಲಿ ಅತೀ ದೊಡ್ಡ ಮತ್ತು ಭಾರತೀಯ ಶಿಕ್ಷಣ, ವಿದೇಶಿ ಜ್ಞಾನವನ್ನು ಸಹ ನೀಡುವ ನಮ್ಮದೇ ವಿಶ್ವವಿದ್ಯಾಲಯ ಕಟ್ಟಬೇಕೆಂದು ಕನಸು ಕಂಡು ಹಣ ಹೊಂದಿಸಲು ಅಲೆಯತೊಡಗಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಊರುರು ಸುತ್ತಿ ಶ್ರಿಮಂತರು, ವ್ಯಾಪಾರಸ್ಥರು, ಜನಸಾಮಾನ್ಯರಿಂದಲೂ ದೇಣಿಗೆ ಸಂಗ್ರಹಿಸತೊಡಗಿದರು‌. ಕಿಂಚಿತ್ತೂ ಅಳುಕಿಲ್ಲದೆ, ತಮ್ಮ ವರ್ಚಸ್ಸನ್ನು ಬದಿಗಿಟ್ಟು ಸಂಪನ್ಮೂಲ ಕ್ರೂಢಿಕರಿಸಲು ಸತತ ಬೇಡತೊಡಗಿದರು.

ಇದರ ಭಾಗವಾಗಿಯೇ ಅಂದು “ವಿಶ್ವದಲ್ಲಿಯೇ ಆಗರ್ಭ ಶ್ರಿಮಂತ” ಎಂದು ಹೆಸರುವಾಸಿಯಾಗಿದ್ದ ಹೈದರಾಬಾದ್ ನಿಜಾಮನ ಅರಮನೆಗೂ ನಡೆದರು.

ನಿಜಾಮನಿಗೆ ಭೇಟಿಯಾಗಿ, ತಮ್ಮ ಕನಸಿನ ಕೂಸಾದ “ಹಿಂದೂ ವಿಶ್ವವಿದ್ಯಾಲಯ” ಕಟ್ಟಲು ದೇಣಿಗೆ ನೀಡುವಂತೆ ಕೋರಿದಾಗ, ನಿಜಾಮನ ಮುಖ ಕೋಪದಿಂದ ಕೆಂಪೇರಿತು. ಅದೂ “ಹಿಂದೂ ವಿದ್ಯಾಲಯ” ಕಟ್ಟಲು ನನ್ನ ಬಳಿ ಹಣ ಕೇಳುವಿರಾ? ಎಂದು ಹಲ್ಲು ಕಡಿಯುತ್ತಾ ಕೋಪದಿಂದ ಆ ಧೀಮಂತ ವ್ಯಕ್ತಿಯತ್ತ ತನ್ನ “ಚಪ್ಪಲಿ” ಬೀಸಿದ‌.

ಫೋಟೋ ಕೃಪೆ : newsupdainikbhaskar

ಕೊಂಚವು ಗಲಿಬಿಲಿಗೊಳ್ಳದ ಆ ವ್ಯಕ್ತಿ ಗಾಳಿಯಲ್ಲಿ ತನ್ನೆಡೆಗೆ ರಭಸದಿಂದ ತೂರಿಬಂದ “ಚಪ್ಪಲಿ”ಯನ್ನೆ ದೇಣಿಗೆ ಎಂದುಕೊಂಡು ಹೊರನಡೆದರು.

ಈಗಿನಂತೆ ಆಗಲೂ ಶ್ರೀಮಂತರ, ಖ್ಯಾತನಾಮರ “ವಸ್ತುಗಳ”ನ್ನು ಕೊಳ್ಳುವ ಹುಂಬ ಮಹಾಶಯರಿದ್ದರು.

ಆಗಲೇ ಅರಮನೆಯಿಂದ ಹೊರಬಿದ್ದ ಆ ವ್ಯಕ್ತಿ ನಿಜಾಮರ ಚಪ್ಪಲಿಯನ್ನ ಅಳುಕಿಲ್ಲದೆ ಊರಿನ ಜನನೀಬಿಡ ಸ್ಥಳದಲ್ಲಿ ಹರಾಜಿಗಿಟ್ಟ. ಜನಸಂದಣಿ ಸೇರತೊಡಗಿತು. ಹರಾಜು ಭರ್ಜರಿಯಾಗಿಯೇ ನಡೆದಿತ್ತು.

ಈ ವಿಷಯ ನವಾಬನ ಕಿವಿಗೆ ಅಪ್ಪಳಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಧಂಗಾಗಿ ಹೋದ ನವಾಬ “ತನ್ನ ಚಪ್ಪಲಿ ಕಡಿಮೆ ದರಕ್ಕೆ ಹರಾಜಾದರೆ ತನ್ನದೆ ಘನತೆಗೆ ಕುಂದು ಎಂದರಿತು ಆತಂಕಗೊಂಡ. ಅರಮನೆಯ ಧೂತನೊಬ್ಬನನ್ನ ಆ ಸ್ಥಳಕ್ಕೆ ಕಳುಹಿಸಿ “ಅತೀ ಹೆಚ್ಚು” ಹಣ ತೆತ್ತು ಚಪ್ಪಲಿ ತರುವಂತೆ ಆದೇಶಿಸಿದ.

ಇಲ್ಲಿಗೆ ನವಾಬನಿಂದ “ದೇಣಿಗೆ ಸಂಗ್ರಹಿಸಿದಂತಾಯಿತು.

(ಈ ಮೇಲಿನ ಘಟನೆ ಹೇಳಿದವರು BHU ಭೋದಕ ಸಿಬ್ಬಂದಿಯೋರ್ವರು ಮತ್ತು ಅಂತರ್ಜಾಲದಲ್ಲಿ ಸಹ ಇದೆ. ಆದರೆ ಘಟನೆ ದಾಖಲಿರುವ ನಿಖರ “ಪುಸ್ತಕ” ತಿಳಿದಿದ್ದರೆ ಕಮೆಂಟ್’ನಲ್ಲಿ ತಿಳಿಸಿ)

ಮದನಮೋಹನ ಮಾಳವೀಯಾ ಜೀ (ಫೋಟೋ ಕೃಪೆ : hindujagruti.org)

ಇಂತಹ ಹತ್ತಾರು ಘಟನೆಗಳಿಗೆ ಧೃತಿಗೆಡದೆ ಸಂಪನ್ಮೂಲ ಕ್ರೂಢಿಕರಿಸಿ, ತನ್ನ ಕನಸ್ಸಾದ ” ಬನಾರಸ್ ಹಿಂದೂ ವಿಶ್ವವಿದ್ಯಾಲಯ”ವನ್ನು 1916 ರಲ್ಲಿ ಸ್ಥಾಪಿಸಿ, ಕಟ್ಟಿ ಬೆಳೆಸಿದ ಆ ವ್ಯಕ್ತಿ, ಶಿಕ್ಷಣ ತಜ್ಞ, ಅದ್ಭುತ ವ್ಯಕ್ತಿತ್ವ “ಪಂಡಿತ್ ಮದನಮೋಹನ ಮಾಳವೀಯ”.

ಮಹಾತ್ಮ ಗಾಂಧಿಯವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಜೀ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್‌ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿಯೊಂದಿಗೆ ಮಾಳವಿಯಾ ಜೀ ಸಹ ಭಾಗವಹಿಸಿದ್ದರು.

ಅವರ ಘನ ಸೇವೆಗೆ 2014ರಲ್ಲಿ ಮರಣೋತ್ತರ “ಭಾರತ ರತ್ನ”ವನ್ನು ಅವರ ಮುಡಿಗೇರಿಸಲಾಯಿತು.

*****

ಮಹಾಮಾನ್ ಮಾಳವೀಯ ಜೀ ನೋವುಂಡು ಕಟ್ಟಿ ಬೆಳೆಸಿದ ಹೆಮ್ಮರ “ಬನಾರಸ್ ಹಿಂದೂ ವಿಶ್ವವಿದ್ಯಾಲಯ” (BHU) ಎದುರಿಗೆ ನಿಂತು ಈ ಮೇಲಿನ ಘಟನೆ ನೆನಪಿಸಿಕೊಂಡೆ. ಎದೆಯ ತುಂಬಾ ಅವರೆಡೆಗೆ ಗೌರವ ಪೂಜ್ಯ ಭಾವ.

ಚುರುಗುಟ್ಟುವ ಬಿಸಿಲಿಗೆ ಮೈಯೊಡ್ಡಿ ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ನಳನಳಿಸುತ್ತ ನಿಂತಿದ್ದ “ಮದನಮೋಹನ ಮಾಳವೀಯಾ” ಜೀ ಯವರ ಪ್ರತಿಮೆಗೆ ಕೈ ಮುಗಿದು ಕ್ಯಾಂಪಸ್ ಒಳಡಿಯಿಟ್ಟೆ.

ಕ್ಯಾಂಪಸ್ ಅತೀವ ವಿಶಾಲವಾಗಿದೆ. ಹಚ್ಚ ಹಸಿರಿನ ಕಾನನ. ಚಿಕ್ಕ ಪೊದೆಗಳು, ಹೂವಿನ ಸಸಿಗಳು, ವಿವಿಧ ಬಣ್ಣಗಳ ಅರಳಿಸಿಕೊಂಡ ಮರಗಳು, ಬೃಹತ್ ಹಳೆಯ ವೃಕ್ಷ ಸಂತತಿ ತುಂಬಿ ತುಳುಕುತ್ತಿವೆ. ಪಕ್ಷಿಗಳ ಕಲರವ, ಜನದಟ್ಟಣೆ ಸಾಕಷ್ಟಿತ್ತು. ಹೆಗಲಿಗೆ ಬ್ಯಾಗೇರಿಸಿಕೊಂಡು ಓಡಾಡುವ ವಿದ್ಯಾರ್ಥಿಗಳ ಗುಂಪು ಸರ್ವೆ ಸಾಮಾನ್ಯವೆಂಬಂತೆ ಕ್ಯಾಂಪಸ್ ತುಂಬಾ ವಿವಿಧ ದಿಕ್ಕಿನೆಡೆಗೆ ನಡೆಯುತ್ತಿದ್ದವು. ಅದೊಂದು ಪರಿಸದೊಳಡಗಿದ ಪುರಾತನ ಕಟ್ಟಡಗಳ ಬೃಹತ್ ಗೂಡು.

ಫೋಟೋ ಕೃಪೆ : The Economic Time

ಸಂತ ಕನಕದಾಸರ ಪ್ರಸಿದ್ದ ಭಕ್ತಿಗೀತೆ “ಬಯಲು ಆಲಯದೊಳಗೋ…. ಆಲಯ ಬಯಲೊಳಗೋ..” ಎಂಬಂತೆ, ಕಟ್ಟಡಗಳು ಕಾಡಿನೊಳಗೋ… ಕಾಡು ಕಟ್ಟಡಗಳೋಳಗೋ ಎಂಬಂತಿತ್ತು.
ಅಲ್ಲಲ್ಲಿ ದಟ್ಟ ಮರಗಳನ್ನು ಬದಿಗೆ ಸರಿಸಿ “ಪುರಾತನ ಶೈಲಿಯ ಕಟ್ಟಡಗಳು” ವಿವಿಧ ಭಂಗಿಗಳಿಂದ ಸೆಟೆದು ಬೆಳೆದಿವೆ. ಹಲವು ಶಾಖೆಗಳ ಹೆಸರಿನಲ್ಲಿ.

ಬರೀ ಕಾಲು ನಡಿಗೆಯಿಂದ ಸಂಪೂರ್ಣ ಕ್ಯಾಂಪಸ್ ಸುತ್ತುವುದು ಅಸಾಧ್ಯವೇನಿಸಿತು. ಸಹಾಯಕ್ಕೆಂದೆ ಕ್ಯಾಂಪಸ್ಸೊಳಗೆ “ಓಡಾಡಿಕೊಂಡಿದ್ದ” ರಿಕ್ಷಾಗಳ ಮೂಲಕ ಸವಾರಿ ಹೊರಟೆ.
ಕ್ಯಾಂಪಸ್ ದೃಷ್ಟಿಯ ಹರವಿಗೆ ನಿಲುಕದಷ್ಟೂ ವಿಶಾಲ. ವಾರಣಾಸಿ ದೊರೆ “ಕಾಶಿ ನರೇಶ”ರ ಬಳುವಳಿಯಾದ ಒಟ್ಟು ಪ್ರದೇಶ 1350 ಎಕರೆ (5.5 km) ಕ್ಯಾಂಪಸ್ ಚಾಚಿಕೊಂಡಿದೆ. ರಸ್ತೆಗಳು ಸಂಪೂರ್ಣ ಡಾಂಬರು ಹೊದ್ದುಕೊಂಡು ಮೈ ಮೇಲೆ ವಿವಿಧ ವೃಕ್ಷಗಳ ಬಣ್ಣ ಬಣ್ಣದ ಹೂವುಗಳನ್ನು ಹರಡಿಕೊಂಡಿವೆ. ಬೃಹತ್ ಮರಗಳು ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿ, ತಂಪೆರೆಯುತ್ತಾ… ನೆಲದ ಮೇಲೆ ಹೂವ ಹಾಸಿಗೆ ನಿರ್ಮಿಸಿದಂತ ವಾತಾವರಣ ಬಲು ರೋಮಾಂಚಕ. ಇಂತಹ ಧರೆಗಿಳಿದ ಸ್ವರ್ಗದಂತ ನಿಸರ್ಗದೊಳಡಗಿದ ಪ್ರತಿಷ್ಠಿತ ವಿದ್ಯಾಲಯಕ್ಕೆ ಓದಲು ಬರುವ ವಿದ್ಯಾರ್ಥಿಗಳು ನಿಜವಾಗಲೂ ಪುಣ್ಯವಂತರು ಅನಿಸುತ್ತಿದೆ.

20 ಸಾವಿರ ವಿದ್ಯಾರ್ಥಿಗಳು ಮತ್ತು 60 ಹಾಸ್ಟೆಲ್’ಗಳಿರುವ ಈ ವಿದ್ಯಾಲಯ “ಏಷ್ಯಾದ ಬೃಹತ್ ವಿಶ್ವವಿದ್ಯಾನಿಲಯ”. ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿದೆ. 1916ರ ಫೆಬ್ರವರಿ 4ರಂದು ಭಾರತದ ಆಗಿನ ವೈಸರಾಯ್ “ಲಾರ್ಡ್ ಹರ್ಡಿಂಗ್”ನಿಂದ ಶಿಲಾನ್ಯಾಸಗೊಂಡಿತ್ತು‌.

ಬನಾರಸ್ ಹಿಂದೂ ವಿಶ್ವವಿದ್ಯಾಲಯ ಒಳನೋಟ (ಫೋಟೋ ಕೃಪೆ : saurenergy )

ಈ ವಿಶ್ವವಿದ್ಯಾನಿಲಯದಲ್ಲಿ ಐದು ಮುಖ್ಯ ಶಿಕ್ಷಣ ಸಂಸ್ಥೆಗಳಿವೆ, 134 ಬೋಧಕ ವಿಭಾಗಗಳನ್ನು ಹೊಂದಿದ್ದು, ಪ್ರಸಿದ್ಧ ಐಐಟಿ ಸಂಸ್ಥೆ, 2 ಅಂತರ್’ ಶಿಕ್ಷಣ (interdisciplinary) ಸಂಸ್ಥೆ ಹೊಂದಿದೆ. ದೇಶ-ವಿದೇಶಗಳ ಎಲ್ಲಾ ವಿದ್ಯಾರ್ಥಿಗಳನ್ನು ಸೇರಿಸಿ ವಿಶ್ವವಿದ್ಯಾನಿಲಯದ ಒಟ್ಟು ದಾಖಲಾತಿಯ ಸಂಖ್ಯೆ ಸುಮಾರು ೧೫೦೦೦ಕ್ಕಿಂತಲೂ ಹೆಚ್ಚಾಗಿದೆ. ಇಂಜಿನಿಯರಿಂಗ್ (IT-BHU), ವಿಜ್ಞಾನ, ಭಾಷಾಧ್ಯಯನ, ಪತ್ರಿಕೋದ್ಯಮ & ಸಮೂಹ ಸಂವಹನ, ಕಾನೂನೂ ಮತ್ತು ವೈದ್ಯಕೀಯ (IMS-BHU), ವ್ಯವಸ್ಥಾಪನೆ ಅಧ್ಯಯನದ ಬೋಧಕವರ್ಗ, ಇವುಗಳು ಭಾರತದಲ್ಲೇ ಅತ್ಯುತ್ತಮ ಶ್ರೇಣಿಯಲ್ಲಿವೆ. BHU ವಿಶ್ವದೆಲ್ಲೆಡೆಯ 34 ರಾಷ್ಟ್ರಗಳಿಂದ ವಿದ್ಯಾರ್ಥಿಗಳನ್ನು ತನ್ನೆಡೆಗೆ ಸೆಳೆದು ವಿಧ್ಯೆ ಧಾರೆಯರಿಯುತ್ತಿದೆ.

ಶಿಕ್ಷಣ ತಜ್ಞ ಮಾಳವೀಯಾ ಜೀ ಈ ಬೃಹತ್ ವಿಶ್ವವಿದ್ಯಾಲಯ ಕಟ್ಟಿ ಬೆಳೆಸಲು ಬನಾರಸ್’ನ್ನೆ ಆರಿಸಿಕೊಂಡಿದ್ದರ ಮುಖ್ಯ ಕಾರಣವೆಂದರೆ “ಕಾಶಿ ಪುರಾತನ ಸಾಂಪ್ರದಾಯಿಕ ಪಾಂಡಿತ್ಯ, ವಿಜ್ಞಾನ ಮತ್ತು ಆಧ್ಯಾತ್ಮಿಕತನ ಮೇಳೈಸಿಕೊಂಡ ನಗರವೆಂದು. ಪ್ರಾಚೀನ ಕಲಿಕಾ ಕೇಂದ್ರಗಳಾದ ತಕ್ಷಶಿಲ, ನಳಂದ ಮತ್ತು ಇತರ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ಭೋದನಾ ಜ್ಞಾನ ಮತ್ತು ಪಾಶ್ಚಾತ್ಯ ಆಧುನಿಕ ವಿಶ್ವವಿದ್ಯಾಲಯಗಳ ಜ್ಞಾನ ವೈಖರಿಯನ್ನು ಸಮ್ಮಿಳಿತಗೊಳಿಸಿ, ಸಮಗ್ರ ಮತ್ತು ಸರ್ವತೋಮುಖ ಭಾರತೀಯ ಶಿಕ್ಷಣವನ್ನು ಸಂಯೋಜಿಸುವುದು ಅವರ ಧ್ಯೇಯವಾಗಿತ್ತು.




ಹಿಂದೂ ಶಾಸ್ತ್ರಗಳು, ಧರ್ಮ, ನೀತಿಶಾಸ್ತ್ರಗಳು ಹಾಗೂ ಸಂಸ್ಕೃತ ಸಾಹಿತ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಮತ್ತು ಹಿಂದೂ ಧರ್ಮವನ್ನು ಜನಪ್ರಿಯಗೊಳಿಸಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲೆಂದು ಮತ್ತು ಭಾರತದ ಪುರಾತನ ನಾಗರೀಕತೆಯನ್ನು ಕೂಡಾ ತಿಳಿಸಿಕೊಡುವಲ್ಲಿ ಪ್ರಮುಖ ಕೆಲಸ ಮಾಡುತ್ತಿದೆ.

ವಿಶ್ವವಿದ್ಯಾನಿಲಯದ ಹೆಸರು “ಹಿಂದೂ” ಪದವನ್ನು ಒಳಗೊಂಡಿದ್ದರೂ ಸಹ ಕೇವಲ ಹಿಂದೂವಲ್ಲದೆ ವಿವಿಧ ಧರ್ಮದ ವಿದ್ಯಾರ್ಥಿಗಳನ್ನು ಮತ್ತು ಬೋಧಕವರ್ಗದವರನ್ನು ಸೇರಿ ಯಾವಾಗಲೂ ಎಲ್ಲಾ ಧರ್ಮದ ಸದಸ್ಯರನ್ನು ಸಮಾನವಾಗಿ ಸಮ್ಮತಿಸುತ್ತಿದೆ.

ಒಂದು ದಡದಿಂದ ಇನ್ನೊಂದು ದಡದವರೆಗೂ ಕ್ಯಾಂಪಸ್ ತುಂಬಾ ಓಡಾಡಿದೆ. ನಮ್ಮ ಹೆಮ್ಮೆಯ ವಿಶ್ವವಿದ್ಯಾಲಯದ ನಿಸರ್ಗ, ತಂಪು ಹವೆ, ಶಿಕ್ಷಣದ ಘಮ ಸವಿಯುತ್ತಾ… ಕ್ಯಾಂಪಸ್ಸಿನೊಳಗಿದ್ದ “ಕಾಶಿ ವಿಶ್ವನಾಥ” ಮಂದಿರದ ತದ್ರೂಪಿ ಮಂದಿರ ಪ್ರವೇಶಿಸಿ ಶಿವನ ಸ್ತುತಿಸಿದೆ. ನಮ್ಮೊಳಗೆ ದಟ್ಟ ಚೈತನ್ಯ ತುಂಬುವ ಸಾನಿಧ್ಯವದು.

ಫೋಟೋ ಕೃಪೆ : justdial

ಇನ್ನು ಹೊರಡುವ ಸಮಯವಾಯಿತೆಂದು ಹೊಟ್ಟೆ ಚುರುಗುಟ್ಟಿದಾಗ ನಡು ಮಧ್ಯಾಹ್ನವಾಗಿತ್ತು. ಸೂರ್ಯನಿಗೆ ಮುಪ್ಪಡರಿದಂತಾಗಿ ಬೆಳಕು ಕ್ಷೀಣವಾದ ಸಮಯ. ಅಲ್ಲಿದ್ದ “ಫಹಲ್’ವಾನ್ ಲಸ್ಸಿ ಶಾಪ್”ಲ್ಲಿ ಮಣ್ಣಿನ ಚಿಕ್ಕ ಮಡಕೆಯಲ್ಲಿ ಲಸ್ಸಿ ಮೇಲೊಂದಿಷ್ಟು ಮಧುರ ರಬ್ಡಿ ಸಿಹಿ (ತೆಳು ಖೋವಾ ತರದ್ದೆ) ಸವಿದು ಕ್ಯಾಂಪಸ್’ನಿಂದ ಹೊರಟೆ.

ದೂರದೃಷ್ಟಿ ವ್ಯಕ್ತಿತ್ವದ, ಶಿಕ್ಷಣ ತಜ್ಞ ” ಮಾಳವೀಯಾ” ಜೀ ಪ್ರತಿಮೆ ಎದುರುಗೊಂಡು, ಧನ್ಯತಾ ಭಾವದಿಂದ ನೋಡುತ್ತಾ.. ಕೈ ಮುಗಿದು ಮೂಕವಿಸ್ಮಿತನಾದೆ.


  • ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW