ನಮ್ಮಪ್ಪ ‘ ಹರಿದು ಹೊಲೆದ ಸೀರೆ ಉಟ್ಟರೆ ದರಿದ್ರ ಬರುತ್ತದೆ ಉಡಬಾರದು ‘ ಎನ್ನುತ್ತಿದ್ದರು. ಆದರೆ ನಮ್ಮ ಮೇಡಂ ಮಹತಾಯಿ ಹೊಸ ಸೀರೆಗಳನ್ನೇ ಹರಿಸಿ, ಹೊಲಿಸಿ, ಉಡುತ್ತಿದ್ದರು. ಅವರಿಗೇನೂ ದರಿದ್ರ ಬಂದಿರಲಿಲ್ಲಪ್ಪ! ಕೊನೆಯವರೆಗೆ ಶ್ರೀಮಂತರಾಗಿಯೇ ಇದ್ದರು!!! …- ಶಾಂತಾ ನಾಗರಾಜ್, ಅವರ ಒಂದು ಸೀರೆಯ ಕತೆಯನ್ನು ತಪ್ಪದೆ ಮುಂದೆ ಓದಿ…
ಮನುಷ್ಯನಿಗೆ ಕಲ್ಪನಾಶಕ್ತಿ ಪ್ರಖರವಾಗಿದ್ದರೆ, ಯಾವುದನ್ನು ಇನ್ಯಾವುದೋ ಮಾಡಿ ಆನಂದಿಸಬಹುದು. ಅದಕ್ಕೆ ನಮ್ಮ ಹೆಚ್ ಎಂ ಜಾನಕೀ ಅಯಂಗಾರ್ ಪ್ರತ್ಯಕ್ಷ ಮಾದರಿ. ಇದು ೧೯೫೬ನೇ ಇಸವಿ ಕಥೆ. ನಾನಾಗ ವಾಣಿ ಗರ್ಲ್ಸ್ ಹೈಸ್ಕೂಲಿನ ತಾಜಾ ವಿದ್ಯಾರ್ಥಿನಿ. ಆನೇಕಲ್ ಎನ್ನುವ ಹಳ್ಳಿಯ ಭಾವಿಯಿಂದ ಬೆಂಗಳೂರು ಎನ್ನುವ ಸಮುದ್ರಕ್ಕೆ ಬಂದು ಬಿದ್ದು , ಕಕ್ಕಾವಿಕ್ಕಿಯಾಗಿ ಎಲ್ಲವನ್ನೂ ಮತ್ತು ಎಲ್ಲರನ್ನೂ ಕಣ್ಣರಳಿಸಿಕೊಂಡು ಬಾಯಿಬಿಟ್ಟುಕೊಂಡು ನೋಡುತ್ತಿದ್ದ ೧೩ರ ಬಾಲೆ. ಕೊನೆಯ ಬೆಂಚಿನಲ್ಲಿ ಮುದುರಿ ಕುಳಿತಿದ್ದ ನನ್ನನ್ನು , ತಾವು ನಿಂತಿದ್ದ ವೇದಿಕೆಯಿಂದಲೇ ಗಮನಿಸಿದ ಈ ಹೆಚ್ಚೆಮ್ಮು, “ ಹೇ ಹೂ ಈಸ್ ದಟ್? ಸ್ಟಾಂಡ್ ಅಪ್ “ ಎಂದು ಗದರಿಸಿ ನಿಲ್ಲಿಸಿ, “ ಮೂರು ಮೆಣಸಿನಕಾಯಿ ಉದ್ದ ಇಲ್ಲ, ಹಿಂದಗಡೆ ಬೆಂಚಲ್ಲಿ ಕೂತಿದೀಯಾ? ಬಾ ಇಲ್ಲಿ ಮುಂದೆ ಕೂತ್ಕೊ “ ಎಂದು ಕರೆದು ಕ್ಕಿಕ್ಕಿರಿದಿದ್ದ ಮುಂದಿನ ಬೆಂಚಿನ ಆಕಾಂಕ್ಷಿಗಳನ್ನು ಚದುರಿಸಿ, ಒಂದಿಬ್ಬರನ್ನು ಹಿಂದೆ ಕಳಿಸಿ, “ ಇನ್ಮೇಲಿಂದ ಇದು ನಿನ್ನ ಕಾಯಂ ಜಾಗ. ಹಿಂದೆಲ್ಲೂ ಕೂತ್ಕೊಳ್ಳೋ ಹಂಗಿಲ್ಲ “ ಎಂದು ನನ್ನನ್ನು ಮುಂದುವರಿದವಳನ್ನಾಗಿಸಿದರು.
ಅವರು ಇಂಗ್ಲೀಷ್ ಪಾಠ ಮಾಡುತ್ತಿದ್ದರು. ನನಗೋ ಅದು ‘ ಯಾವುದೋ ಅದು ಕಂಡುಕೇಳಿಲ್ಲದ ಸ್ವರ್ಗದ ಭಾಷೆ ‘ ಎನಿಸುತ್ತಿತ್ತು. ಪಾಠವೇನೋ ತಲೆಯಮೇಲೆ ಹಾದು ಹೋಗುತ್ತಿತ್ತು. ಆದರೆ ಕಣ್ಣುಗಳು ಏನು ಮಾಡಬೇಕು? ಮೊದಲೇ ಬೆಂಗಳೂರಿನ ಜನ ಬೆರಗು, ಯಾವುದೋ ಭಾಷೆಯಾಡುವ ಈ ಹೆಚ್ಚೆಮ್ಮು ತೀರಾ ಬೆರಗು. ಸರಿ ಅವರನ್ನೇ ಕೂಲಂಕಷವಾಗಿ ಗಮನಿಸಲು ಶುರುಮಾಡಿದೆ. ಮೊದಲಿಗೇ ಅವರ ಸೀರೆ ವಿಚಿತ್ರವೆನಿಸಿತು. ತಲೆಯಲ್ಲಿ ಪ್ರಶ್ನೆಗಳ ಸುರಿಮಳೆ! ನಮ್ಮ ತಾಯಿ ಒಂಬತ್ತು ಗಜದ ಕಾಟನ್ ಸೀರೆಯನ್ನು ಕಚ್ಚೆ ಹಾಕಿ ಉಡುತ್ತಿದ್ದರು. ಮದುವೆ ಸಮಾರಂಭಗಳಿಗೆ ರೇಷ್ಮೆಕಚ್ಚೆ ಸೀರೆ. ನಮ್ಮಕ್ಕನೂ ಸಾದಾ ಸೀರೆ ಮತ್ತು ರೇಷ್ಮೆ ಸೀರೆ ಉಡುತ್ತಿದ್ದಳು. ಅವರ ಯಾವ ಸೀರೆಯೂ ಈ ಹೆಚ್ಚೆಮ್ ಸೀರೆಯಂತಿರಲಿಲ್ಲ. ಏನಿರಬಹುದು ವೆತ್ಯಾಸ? ನನ್ನ ಕಣ್ಣುಗಳಿಂದ ಎಕ್ಸರೇ ಕಿರಣಗಳು ಸೀರೆಯ ಕಣಕಣವನ್ನೂ ತಲುಪಿದವು. “ ಯುರೇಕಾ “ ತಿಳಿಯಿತು!!! ಈ ಹೆಚ್ಚೆಮ್ಮ್ ಸೀರೆಗೆ ಬಾರ್ಡರು ಮತ್ತು ಸೆರಗುಗಳನ್ನು ಹೊರಗಿನಿಂದ ಅಂಟಿಸಿ ಸೇರಿಸಲಾಗಿತ್ತು. ‘ ಯಾಕೆ ಹೀಗೆ ?’ ಉತ್ತರ ಬಗೆಹರಿಯಲಿಲ್ಲ. ಆಗಿನಕಾಲದಲ್ಲಿ ಈಗಿನಂತೆ ಅಟ್ಯಾಚ್ ಬಾರ್ಡರ್ ಸೀರೆಗಳು ಇನ್ನೂ ಹುಟ್ಟೇ ಇರಲಿಲ್ಲ. ಮುಕ್ಕಾಲು ಗಂಟೆ ಕಳೆದು ಮೇಡಂ ಕ್ಲಾಸ್ ಮುಗಿಸಿ ಹೋದಮೇಲೂ ನನ್ನ ಸಮಸ್ಯೆಗೆ ಪರಿಹಾರ ಸಿಗಲಿಲ್ಲ.

ಫೋಟೋ ಕೃಪೆ : google
ನಮ್ಮ ತಂದೆ ಮನೆಯಲ್ಲಿ ಪ್ರತಿವರ್ಷ ಗಣಪತಿಹಬ್ಬಕ್ಕೆ ಗಣಪತಿಯನ್ನು ಮಾಡುತ್ತಿದ್ದರು. ಜೇಡಿಮಣ್ಣಿನ ಗಣಪ ಕಲಾತ್ಮಕವಾಗಿರುತ್ತಿತ್ತು. ಗಣಪತಿಯ ಪಂಚೆಯ ಬಾರ್ಡರನ್ನು ನನ್ನ ಕೈ ಬೆರಳುಗಳು ಸಣ್ಣಗಿದ್ದ ಕಾರಣ ನನಗೆ ಹೇಳಿಕೊಟ್ಟು ಮಾಡಿಸುತ್ತಿದ್ದರು. ಜೇಡಡಿಮಣ್ಣನ್ನು ಬತ್ತಿಯ ಹಾಗೆ ಸಣ್ಣಗೆ ಹೊಸೆದು ಪಂಚೆಯ ತುದಿಗೆ ಅಂಟಿಸುತ್ತಿದ್ದೆ. ಅದರ ಮೇಲೆ ತಂದೆ ಚಿತ್ತಾರ ಮಾಡುತ್ತಿದ್ದರು. ನನಗದರ ನೆನಪಾಗಿ ಅಮ್ಮನಿಗೆ “ ನಮ್ಮ ಮೇಡಂ ಸೀರೆಗೆ ಬಾರ್ಡರ್ ಅಂಟಿಸಿಕೊಂಡು ಉಡುತ್ತಾರೆ” ಅಂತ ಹೇಳಿದೆ. ಅಮ್ಮ ಬಿದ್ದುಬಿದ್ದು ನಕ್ಕರು “ ಯಾರಾದ್ರೂ ಸೀರೆಗೆ ಬಾರ್ಡರ್ ಅಂಟಿಸ್ತಾರೇನೇ ಪೆದ್ದಿ. ಹೊಲಿದಿರಬೇಕು “ ಅಂದರು. “ ಇಡೀ ಸೀರೆಗೂ ಸೆರಗಿಗೂ ಹಾಗೇ ಇತ್ತಮ್ಮಾ “ ಅಂತ ಸಮರ್ಥಿಸಿಕೊಂಡೆ. “ ಎಲ್ಲೋ ಹಿಂಜಿರತ್ತೆ ಕಣೆ, ಎಲ್ಲಾ ಕಡೇಗೂ ಹೊಲಿಗೆ ಹಾಕ್ಸಿರಬೇಕು “ ಅನ್ನುವುದು ನನ್ನ ಜಾಣ ಅಮ್ಮನ ಊಹೆ!
ಮರುದಿನ ಅವರು ಕ್ಲಾಸಿಗೆ ಬಂದಾಗ ನೋಡ್ತೀನಿ ಮತ್ತೊಂದು ಬಣ್ಣದ ಸೀರೆಗೆ ಮತ್ತೊಂದು ಬಾರ್ಡರನ್ನು ಹೊಲಿದ ಸೀರೆ ಉಟ್ಟಿದ್ದಾರೆ! ಮರುದಿನ, ಅದರ ಮರುದಿನ, ಮತ್ತೆ ಮೂರು ದಿನ ಎಲ್ಲ ದಿನಗಳಲ್ಲೂ ಹೀಗೆ ಬಾರ್ಡರ್ ಸೆರಗು ಹೊಲಿದ ಸೀರೆಗಳೇ! ಎಲ್ಲವೂ ಹೊಸ ಕಂಚಿ ರೇಷ್ಮೆ ಸೀರೆಗಳೇ! ಎಲ್ಲಕ್ಕೂ ಬೇರೆಬೇರೆ ಬಣ್ಣಗಳ ಜರಿ ಬಾರ್ಡರ್ ಗಳೇ!! ಏನೀ ವೈಚಿತ್ರಂ???!!!
ಬಹಳ ದಿನಗಳ ನಂತರ ನಮ್ಮ ಹೆಚ್ಚೆಮ್ಮ್ ತಂಗಿಮಗಳು ಅದೇ ಶಾಲೆಯಲ್ಲಿ ನನಗೆ ಗೆಳತಿಯಾದ ಮೇಲೆ ಅವಳಿಂದ ನನಗೆ ತಿಳಿದದ್ದು ‘ ಈ ಮೇಡಮ್ ವರ್ಷಕ್ಕೆ ಆರು ಹೊಸ ಕಂಚಿರೇಷ್ಮೆ ಸೀರೆ ಕೊಳ್ಳುತ್ತಾರಂತೆ. ನೇಕಾರರು ನೇಯ್ದ ಅಂಚು ಸೆರಗು ಅವರಿಗೆ ಇಷ್ಟವಾಗುವುದಿಲ್ಲವಂತೆ. ಮೊದಲು ಒಡಲ ಬಣ್ಣ ನೋಡದೇ ಕೇವಲ ಬಾರ್ಡರ್ ಅಂದಚೆಂದಗಳನ್ನು ನೋಡಿ ಆರುಸೀರೆ ಆರಿಸುತ್ತಾರೆ. ನಂತರ ತಾವು ಕನವರಿಸಿಕೊಂಡು ಬಂದ ಬಣ್ಣದ ಒಡಲಿನ ಸೀರೆಗಳನ್ನು, ಅವುಗಳ ಬಾರ್ಡರ್ ಚೆನ್ನಾಗಿಲ್ಲದಿದ್ದರೂ ಖರೀದಿಸಿತ್ತಾರೆ! ನಂತರ ಮನೆಗೇ ಒಬ್ಬ ಮಹಿಳಾಟೈಲರ್ ಕರೆಸಿ ಆಸೀರೆಯ ಬಾರ್ಡರ್ ಇದಕ್ಕೆ, ಈ ಸೀರೆಯ ಒಡಲಿಗೆ ಬೇರೆ ಬಾರ್ಡರ್, ಹೀಗೆ (“ ವಾಣಿ ಜುಟ್ಚು ಪಿಕಿ ವೀಣಿಕಿ ಪೆಟ್ಚಿ, ವೀಣಿ ಜುಟ್ಚು ಪಿಕಿ ವಾಣಿಕಿ ಪೆಟ್ಚಿ “ ಎನ್ನುವ ಸಿನಿಮಾ ಹಾಡನ್ನು ನೆನಪಿಸಿಕೊಳ್ಳಿ ) ಹೊಸ ಸೀರೆಗಳ ಬಾರ್ಡರ್ ಸೆರಗು ಮತ್ತು ಒಡಲುಗಳು ಅದಲುಬದಲಾದ ಮೇಲೆ ಆ ಹೊಚ್ಚ ಹೊಸ ಇವರ ಮನ ಒಪ್ಪುವ ಸೀರೆಗಳು ತಾವು ಕೃತಾರ್ಥರಾಗಿ, ಇವರಿಗೆ ತೃಪ್ತಭಾವವನ್ನು ತರುತ್ತಾ ಈ ಮೇಡಮ್ ಅವರ ದೇಹದ ಮೇಲೆ ವಿಜೃಂಭಿಸುತ್ತದೆ!!! ಪಾಪ ! ಮಗ್ಗದ ಮೇಲೆ ತಿಂಗಳುಗಟ್ಟಲೆ ಕೂತು ತನ್ನ ಕಲ್ಪನೆಯನ್ನೆಲ್ಲಾ ಬಳಸಿ ಸೀರೆ ನೇಯ್ದ ನೇಕಾರ ತಾನು ನೈದ ಸೀರೆಗಳಿಗಾದ ಈ ಪ್ರಹಾರಗಳನ್ನು ಕಂಡಿದ್ದರೆ ನೇಣು ಹಾಕಿಕೊಳ್ಳುತ್ತಿದ್ದನೇನೋ.
ನಮ್ಮಪ್ಪ ‘ ಹರಿದು ಹೊಲೆದ ಸೀರೆ ಉಟ್ಟರೆ ದರಿದ್ರ ಬರುತ್ತದೆ ಉಡಬಾರದು ‘ ಎನ್ನುತ್ತಿದ್ದರು. ಈ ಮಹತಾಯಿ ಹೊಸ ಸೀರೆಗಳನ್ನೇ ಹರಿಸಿ, ಹೊಲಿಸಿ, ಉಡುತ್ತಿದ್ದರು. ಅವರಿಗೇನೂ ದರಿದ್ರ ಬಂದಿರಲಿಲ್ಲಪ್ಪ! ಕೊನೆಯವರೆಗೆ ಶ್ರೀಮಂತರಾಗಿಯೇ ಇದ್ದರು!!!
- ಶಾಂತಾ ನಾಗರಾಜ್ – ಖ್ಯಾತ ಮನಃಶಾಸ್ತ್ರಜ್ಞರು, ಲೇಖಕರು
