ಮಗು ಹುಟ್ಟಿದ ಮೇಲೆ ರೋಹಿಣಿ ಮತ್ತು ನಿತಿನ್ ನಡುವೆ ಮಾತುಕತೆ, ಪ್ರಣಯ, ಚೇಷ್ಟೆ ಎಲ್ಲ ದೂರವಾದವು. ನಿತಿನ್ ಅಂತೂ ರೋಸಿ ಹೀಗಿದ್ದ. ಅನಿಷ್ಟ ಮಗುವನ್ನು ಬಂದ ಮೇಲೆ ರೋಹಿಣಿ ನನ್ನಿಂದ ದೂರವಾದಳು ಎಂದು ಸಿಡುಕುತ್ತಿದ್ದ, ಮುಂದೇನಾಯಿತು ಪುಷ್ಪಾ ಹಾಲಭಾವಿ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಸುಲಗ್ನೆ ಸಾವಧಾನ , ಸುಮೂರ್ತೆ ಸಾವಧಾನ ಎನ್ನುತ್ತ ಪುರೋಹಿತರು ಮದುವೆಯ ವಿಧಿ, ವಿಧಾನಗಳನ್ನು ಪೂರ್ಣಗೊಳಿಸಿ ಗಟ್ಟಿಮೇಳ, ಗಟ್ಟಿಮೇಳ ಎನ್ನುತಿದ್ದ ಹಾಗೆ ಮೇಳದವರು ಗಟ್ಟಿಮೇಳ ಬಾರಿಸುತಿದ್ದಂತೆ ನೆರೆದ ಜನರು ಆರತಕ್ಷತೆಯನ್ನು ವಧು, ವರರಿಗೆ ಹಾಕಿ ಅವರ ಬದುಕು ಹಸನಾಗಲಿ ಎಂದು ಮನದುಂಬಿ ಹಾರೈಸಿದ್ದರು.
ವಧು ರೋಹಿಣಿ, ವರ ನಿತಿನ್ ಅಕ್ಕಪಕ್ಕದ ಮನೆಯವರಾಗಿದ್ದು ಬಾಲ್ಯದಲ್ಲಿ ಕೂಡಿ ಆಡಿದವರು. ನಿತಿನ್ ತಂದೆ ಜಗದೀಶರು ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ಟ್ರಾನ್ಸಫರ್ ಆಗಿ ಬೇರೆ ಊರಿಗೆ ಹೋದಾಗ ನಿತಿನ್ ಹಾಗೂ ರೋಹಿಣಿ ಅವರ ಗೆಳೆತನ ತಾತ್ಕಾಲಿಕವಾಗಿ ಹಿನ್ನೆಲೆಗೆ ಸೇರಿತ್ತು. ಮತ್ತೆ ಇವರ ಗೆಳೆತನ ಚಿಗುರೊಡೆದಿದ್ದು ಧಾರವಾಡದ ಎಸ್. ಡಿ. ಎಮ್ ಎಂಜಿನಿಯರಿಂಗ್ ಕಾಲೇಜಿನಲ್ಲಿ. ರೋಹಿಣಿಯ ತಂದೆ ಸುರೇಶ ಆಭರಣದ ಅಂಗಡಿಯ ಮಾಲೀಕರಾಗಿದ್ದ ಕಾರಣ ರೋಹಿಣಿ ಧಾರವಾಡದಲ್ಲಿಯೇ ಪಿ.ಯು.ಸಿ ಮುಗಿಸಿ ಎಸ್ ಡಿ.ಎಮ್ ಎಂಜಿನಿಯರಿಂಗ ಕಾಲೇಜಿಗೆ ಸೇರಿದ್ದಳು. ತಂದೆ ಜಗದೀಶ್ ಅವರಿಗೆ ಹಾಸನಕ್ಕೆ ವರ್ಗವಾದಾಗ ನಿತಿನ್ ತನ್ನ ಬಾಲ್ಯದ ಗೆಳತಿ ರೋಹಿಣಿಯನ್ನು ಮನದಲ್ಲಿಟ್ಟು ಕೊಂಡು ಧಾರವಾಡದ ಎಸ್.ಡಿ.ಎಮ್ ಕಾಲೇಜ್ ಆರಿಸಿ ಕೊಂಡಿದ್ದ. ಜಗದೀಶ್ ಅವರು ಸುರೇಶ ಅವರ ಸಹಾಯದಿಂದ ನಿತಿನ್ಗೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿದ್ದರು.
ಅಂದು ಕಾಲೇಜಿನಲ್ಲಿ ಇಬ್ಬರೂ ಮುಖಾ ಮುಖಿಯಾದಾಗ ಇಬ್ಬರ ಕಣ್ಣುಗಳು ಆನಂದದಿಂದ ಅರಳಿದ್ದವು. ಹುಡುಗಾಟ, ಟ್ರಿಪ್, ಓದು, ಪ್ರ್ಯಾಕ್ಟಿಕಲ್, ಪರೀಕ್ಷೆ ಎನ್ನುತ್ತಲೇ ಎಂಜಿನಿಯರಿಂಗ್ ಮುಗಿಸಿ ಇಬ್ಬರೂ ಹೊರ ಬಂದಿದ್ದರು. ಕ್ಯಾಂಪಸ್ ಇಂಟರ್ವ್ಯೂನಲ್ಲಿ ಇಬ್ಬರಿಗೂ ಬೆಂಗಳೂರಿನಲ್ಲಿ MNC ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು.
ಅಂದು ಊರಿಗೆ ಹೊರಟಿದ್ದ ನಿತಿನ್ , ರೋಹಿಣಿಗೆ .. ‘ನಾವಿಬ್ಬರೂ ನಮ್ಮ ಬಾಲ್ಯದಿಂದಲೇ ಒಬ್ಬರೊಬ್ಬರನ್ನು ನೋಡುತ್ತಾ ಬಂದಿದ್ದೇವೆ.ಇಬ್ಬರಿಗೂ ನಮ್ಮ ಗುಣಾವಗುಣಗಳು ಗೊತ್ತು. ನಾನು ನಿನ್ನನ್ನು ಪ್ರೀತಿಸ್ತಾ ಇದ್ದೀನಿ. ನಿನ್ನನ್ನೇ ಮದುವೆಯಾಗೋ ಆಸೆ ಇದೆ.ಇದಕ್ಕೆ ನೀನು ಮನಃಸ್ಪೂರ್ತಿಯಾಗಿ ಒಪ್ಪಿದರೆ ಮದುವೆಯಾಗೋಣ. ಇಲ್ಲದಿದ್ದರೆ ಹೀಗೆ ಗೆಳೆಯರಾಗೇ ಇರೋಣ ‘ಎಂದಾಗ ರೋಹಿಣಿ ‘ಯಾರೋ ಗೊತ್ತಿಲ್ಲದವರ ಜೊತೆ ಹೊಂದಾಣಿಕೆ ಮಾಡಿಕೊಂಡು ಬಾಳುವುದಕ್ಕಿಂತ ,ಗೊತ್ತಿರುವ ನಿನ್ನ ಜೊತೆ ಬಾಳು ಹಂಚಿ ಕೊಳ್ಳುವುದು ಸುಲಭ ಅಂತ ನನ್ನ ನಂಬಿಕೆ, ನನ್ನ ನಂಬಿಕೆಗೆ ದ್ರೋಹ ಬಗೆಯುವುದಿಲ್ಲ ಅಂತ ಅಂದುಕೊಂಡು ನಿನಗೆ ನನ್ನ ಒಪ್ಪಿಗೆ ಕೊಡುತ್ತೇನೆ’ ಎನ್ನುತ್ತಾಳೆ.
ಇಂದು ಹಿರಿಯರ ಆಶೀರ್ವಾದದೊಂದಿಗೆ ಪತಿ, ಪತ್ನಿಯರಾಗಿದ್ದಾರೆ ಇಬ್ಬರೂ. ಬೆಂಗಳೂರಿನಲ್ಲಿ ಪುಟ್ಟ ಮನೆ ಮಾಡಿಕೊಂಡು ಇಬ್ಬರೂ ಸಂಸಾರ ಸಾಗರದಲ್ಲಿ ಪ್ರತಿ ಕ್ಷಣದ ಸೊಗಸನ್ನು ಮೊಗೆಮೊಗೆದು ಆಸ್ವಾದಿಸುತ್ತಿದ್ದಾಗಲೇ ಹೊಸ ಅತಿಥಿಯ ಆಗಮನದ ಕುರುಹು ಬದುಕನ್ನು ಮತ್ತಷ್ಟು ರಂಗೇರಿಸುತ್ತದೆ. ರೋಹಿಣಿಯ ತಂದೆ ಜಗದೀಶ ಹಾಗೂ ತಾಯಿ ತಾರಾ ಮಗಳಿಗೆ , ಅಳಿಯನಿಗೆ ಬಂಗಾರ ಹಾಕಿ ಅದ್ದೂರಿಯಾಗಿ ಸೀಮಂತ ಮಾಡಿ ಹೆರಿಗೆಗೆ ಮಗಳನ್ನು ಧಾರವಾಡಕ್ಕೆ ಕರೆ ತಂದಿದ್ದರು.ಹೆಂಡತಿಯನ್ನು ಬಿಟ್ಟಿರಲಾರದ ನಿತಿನ್ ಅಲ್ಲೇ ಬೆಂಗಳೂರಿನಲ್ಲಿಯೇ ಹೆರಿಗೆಯಾಗಲಿ ಎಂದು ಪಟ್ಟು ಹಿಡಿದಾಗ ,ಅವನ ತಾಯಿ ನಳಿನಿ ಅವರು ಮಗನಿಗೆ ಪ್ರತಿಯೊಂದು ಹೆಣ್ಣು ಆಶಿಸುವುದು ಹೆರಿಗೆಯ ಸಮಯದಲ್ಲಿ ತಾಯಿಯ ಪ್ರೀತಿ, ಕಕ್ಕುಲಾತಿಯನ್ನು , ರೋಹಿಣಿ ಬಾಣಂತನ ಅವಳ ತವರುಮನೆಯಲ್ಲಿಯೇ ಆಗಲಿ ಎಂದಾಗ ವಿಧಿ ಇಲ್ಲದೆ ಸುಮ್ಮನಾಗಿದ್ದ. ಪ್ರತಿ ದಿನ ಇಬ್ಬರೂ ಮೊಬೈಲ್ನಲ್ಲಿ ತಮ್ಮ ಮಗುವಿನ ಬಗ್ಗೆ ಕನಸುಗಳ ಗೋಪುರವನ್ನೇ ಕಟ್ಟಿ ಕಟ್ಟಿ ಪೇರಿಸುತಿದ್ದರು.

ಫೋಟೋ ಕೃಪೆ :google
ಅಂದು ಹೆರಿಗೆಯ ನೋವು ಪ್ರಾರಂಭವಾದಾಗ ರೋಹಿಣಿಗಿಂತ,ನಿತಿನ್ ಹೆಚ್ಚು ಗಾಭರಿಯಾಗಿದ್ದ.ಮೊದಲೇ ತೋರಿಸುತಿದ್ದ ಡಾಕ್ಟರ್ ಗೆ ಫೋನು ಮಾಡಿ ಬೇಕಾದ ಬಟ್ಟೆ ಬರೆಗಳನ್ನು ತೆಗೆದುಕೊಂಡು ಆಸ್ಪತ್ರೆಗೆ ಕಾರಿನಲ್ಲಿ ಕರೆ ತಂದಿದ್ದ.ಅಂದು ಅದೇಕೋ ಸಾಯಂಕಾಲದಿಂದಲೇ ಮೋಡ ಮುಸುಕಿದ ವಾತಾವರಣ ಹೊತ್ತೇರಿದಂತೆ ಶುರುವಾದ ಜಿಟಿ ಜಿಟಿ ಮಳೆ ರಭಸ ಪಡೆದುಕೊಂಡಿತ್ತು.ರೋಹಿಣಿಗೂ ಹೆರಿಗೆ ನೋವು ಕ್ಷಣ ಕ್ಷಣಕ್ಕೆ ಜಾಸ್ತಿಯಾಗುತ್ತಾ ಹೋಗಿ ರಾತ್ರಿ ಒಂದು ಗಂಟೆ ಸುಮಾರಿಗೆ ಹೆರಿಗೆಯಾಗುವ ಸಮಯದಲ್ಲಿ ಹೊರಗೆ ಬಂದ ಮಗುವಿನ ತಲೆಯನ್ನು ಡಾಕ್ಟರ್ ಎಳೆಯುವಾಗ ಒಂದು ಕ್ಷಣ ಕರೆಂಟ ಹೋಗಿ ಮತ್ತೆ ಬಂದಾಗ ಮುದ್ದಾದ ಗಂಡು ಮಗುವಿನ ಜನನವಾಗಿತ್ತು. ಗಂಡು ಮಗುವೆಂದು ಎಲ್ಲರೂ ಸಂತೋಷ ಪಟ್ಟಿದ್ದರು.
ಮಗುವಿಗೆ ಅನಿಕೇತ ಎಂದು ಹೆಸರಿಟ್ಡಿದ್ದರು ದಂಪತಿಗಳು.ಮೂರು ತಿಂಗಳಾಗುವ ತನಕ ಮಗು ಅತ್ತಾಗ ಹಾಲೂಡಿಸುತಿದ್ದ ರೋಹಿಣಿಗೆ ಆ ನಂತರ ಮಗುವಿನಲ್ಲಿ ಏನೋ ಕೊರತೆ ಇದೆ ಅನಿಸ ತೊಡಗಿತ್ತು.ಹಾಲು ಕುಡಿದು ಸುಮ್ಮನೆ ಮಲಗುತಿದ್ದ ಆರು ತಿಂಗಳ ಮಗು ವಿನಲ್ಲಿ ಬೇರೇನೂ ಚಟುವಟಿಕೆಗಳು ಕಾಣದಾದಾಗ ಸಂಶಯ ಬಂದು ಮಕ್ಕಳ ಡಾಕ್ಟರ್ ಹತ್ತಿರ ತೋರಿಸಿದಾಗ ಮಗುವಿಗೆ ಬುದ್ದಿ ಮಾಂದ್ಯತೆ ಇರುವುದು ಗೊತ್ತಾಗಿ ರೋಹಿಣಿ ಭೋರೆಂದು ಅತ್ತಿದ್ದಳು.ನಿತಿನ್ ಕೂಡಾ ಮಂಕಾಗಿ ಕುಳಿತಿದ್ದ. ಆದರೂ ಬೇರೆ ಬೇರೆ ಡಾಕ್ಟರ್ ಗೆ ತೋರಿಸಿದಾಗಲೂ ಎಲ್ಲರಿಂದಲೂ ಇದೇ ಉತ್ತರ ಬಂದಾಗ ಇಬ್ಬರೂ ಭೂಮಿಗಿಳಿದು ಹೋಗಿದ್ದರು. ವಿಧಿ ಇವರಿಬ್ಬರ ಬಾಳಲ್ಲಿ ಒಂದು ಕ್ಷಣ ಕರೆಂಟ್ ಹೋಗಿ ಆಟವಾಡಿತ್ತು. ಮೃದುವಾದ ತಲೆಯನ್ನು ಹೊರಗೆಳೆಯುವಾಗ ಕರೆಂಟ್ ಹೋದ ಕಾರಣ ಡಾಕ್ಟರ್ ಕೈ ತಲೆಯನ್ನು ಒಂದು ಸ್ವಲ್ಪ ಜೋರಾಗಿ ಒತ್ತಿದ ಕಾರಣ ಮೆದುಳಿಗೆ ಪೆಟ್ಟಾಗಿ ಮಗು ಬುದ್ದಿಮಾಂದ್ಯವಾಗಿ ಹುಟ್ಟಿತ್ತು.
ಯಾರ ಮುಖದಲ್ಲೂ ಹೊಸ ಮಗುವಿನ ಆಗಮನದ ಖುಷಿ ಇಲ್ಲ. ಯಾಂತ್ರಿಕವಾಗಿ ದಿನ ಕಳೆಯುತ್ತಿವೆ. ಮಗುವಿಗೆ ಒಂದು ವರ್ಷವಾಗುವ ತನಕ ಹಾಗೂ ಹೀಗೂ ಕೆಲಸಕ್ಕೆ ಹೋಗದೆ ದಿನ ತಳ್ಳಿದ್ದಳು ರೋಹಿಣಿ. ಆದರೆ ಇನ್ನೂ ಹೆಚ್ಚು ರಜೆ ಕೇಳಿದರೆ ಕೆಲಸಕ್ಕೇ ಕುತ್ತು ಎಂದು ಒಬ್ಬ ಕೆಲಸದವಳನ್ನು ಗೊತ್ತು ಮಾಡಿ ಅಮ್ಮನನ್ನು ಕರೆಸಿಕೊಂಡಿದ್ದಳು. ಆಫೀಸಿನಲ್ಲಿ ಇದ್ದರೂ ಮನಸ್ಸೆಲ್ಲ ಮಗುವಿನ ಕಡೆಗೆ. ಗಂಟೆಗೊಮ್ಮೆ ಫೋನ್ಮಾಡಿ ಅಮ್ಮನಿಗೆ ಮಗುವಿನ ಬಗ್ಗೆ ಊಟ ಮಾಡ್ತಾ, ಮಲಗ್ತಾ, ಹಾಲು ಕುಡಿತಾ ಎಂದು ಕೇಳುವುದು. ಮನೆಗೆ ಬಂದ ತಕ್ಷಣ ಮಗುವಿನತ್ತಲೇ ಚಿತ್ತ ಅವಳದು. ಅವಳಿಗೇ ಒಂದು ರೀತಿಯ ಅಪರಾಧಿ ಭಾವ ತಾನು ಮಗುವನ್ನು ಸರಿಯಾಗಿ ನೋಡಿ ಕೊಳ್ಳುತ್ತಿದ್ದೇನೋ ಇಲ್ವೋ ಎಂದು. ನಿತಿನ್ ನೋಡಿಕೊಂಡರೂ ಅವನ ಬಗ್ಗೆಯೂ ಅನುಮಾನ. ನಿತಿನ್ ಅಂತೂ ಅವಳ ಮನಸ್ಸಿನಿಂದ ದೂರವಾಗಿ ಬಿಟ್ಟಿದ್ದ. ಮಾತುಕತೆ, ಪ್ರಣಯ, ಚೇಷ್ಟೆ ಎಲ್ಲ ದೂರವಾಗಿದ್ದವು. ಅಂದು ರೋಸಿ ಹೋಗಿದ್ದ ನಿತಿನ್
ನಿನಗೆ ಮೂರೂ ಹೊತ್ತು ಮಗುವಿನದೇ ಚಿಂತೆ. ನನ್ನ ಬಗ್ಗೆ ಒಂಚೂರು ಕಾಳಜಿಯಿಲ್ಲ. ಈ ಅನಿಷ್ಟ ಯಾಕಾಗಿ ಹುಟ್ತೋ ಏನೋ. ಮನೆ ಅನ್ನುವುದು ನರಕವಾಗಿದೆ.ಅದನ್ನು ಯಾವುದಾದರೂ ಅಂಗವಿಕಲ ಆಶ್ರಮಕ್ಕೆ ಸೇರಿಸಿ ದುಡ್ಡು ಕೊಡೋಣ. ಅಲ್ಲಿ ನೋಡಿ ಕೊಳ್ಳುವವರು ಇರುತ್ತಾರೆ ಎಂದಿದ್ದನು. ಇದನ್ನು ಕೇಳಿದ ರೋಹಿಣಿ ರೌದ್ರಾವತಾರ ತಾಳಿ …ಅದು ನಾನು ಹೆತ್ತ ಮಗು,ಅದು ನನ್ನ ಕರುಳ ಕುಡಿ,ಗಂಡಸಾದ ನಿನಗೇನು ಗೊತ್ತು ಹೆತ್ತ ತಾಯಿಯ ಸಂಕಟ .ನಾನು ನಿನ್ನನ್ನು ನಂಬಿದ್ದೆ ,ನನ್ನ ಭಾವನೆಗಳನ್ನು ನೀನು ಗೌರವಿಸುತ್ತೀ ಎಂದು .ಆದರೆ ನೀನು ಇಷ್ಟು ಹೃದಯ ಹೀನ ಅಂತ ಅಂದು ಕೊಂಡಿರಲಿಲ್ಲ ಎಂದು ಕಿರುಚಾಡ ತೊಡಗಿದಾಗ ಮನೆಯಲ್ಲಿದ್ದ ಅಮ್ಮ,ಅತ್ತೆ ಎಲ್ಲರೂ ಗಾಭರಿಗೊಂಡಿದ್ದರು.
ನಿತಿನ್ಗಂತೂ ಅವಳನ್ನು ಸಮಾಧಾನ ಪಡಿಸುವುದರಲ್ಲಿ ಸಾಕಾಗಿ ಹೋಗಿತ್ತು.ಅಲ್ಲೀತನಕ ಅಷ್ಟೋ,ಇಷ್ಟೋ ಇದ್ದ ಮಾತುಗಳೂ ಸ್ಥಬ್ತವಾಗಿದ್ದವು. ಅಮ್ಮ,ಅತ್ತೆ ಇಬ್ಬರೂ ವಯಸ್ಸಾದವರು ಎಷ್ಟು ದಿನ ಅಂತ ಅನಿಕೇತನನ್ನು ನೋಡಿ ಕೊಳ್ಳಲು ಸಾಧ್ಯ?ನಿಧಾನಕ್ಕೆ ಅವರು ಬರುವುದೂ ನಿಂತು ಹೋಯಿತು.ಈಗ ಕೆಲಸದವಳ ಮೇಲೇ ಅವಲಂಬನೆ.
ಅಂದು ತಲೆ ನೋವಿನ ಕಾರಣ ಕೆಲಸ ಮುಗಿಸಿ ಮಧ್ಯಾನ್ಹ ಬೇಗನೆ ಮನೆಗೆ ಬಂದವಳಿಗೆ ಹೊಲಸು ಮಾಡಿಕೊಂಡು ಅದರಲ್ಲೇ ಹೊರಳಾಡುತಿದ್ದ ಮಗನನ್ನು ನೋಡಿ ಅವಳ ಕರುಳು ಕಿತ್ತು ಬಂದಿತ್ತು. ಅವನನ್ನು ನೋಡಿ ಕೊಳ್ಳುವ ಆಯಾ ಆರಾಮಾಗಿ ಒಳ ರೂಮಿನಲ್ಲಿ ಹರಟೆ ಹೊಡೆಯುವ ಸದ್ದು.ಇವಳಿಗೆ ನಖಶಿಕಾಂತ ಉರಿದು ಹೋಯಿತು.ಆ ಕ್ಷಣವೇ ಅವಳನ್ನು ಕೆಲಸದಿಂದ ಬಿಡಿಸಿ ಕಳಿಸಿದ್ದಳು.
ಅನಿಕೇತನನ್ನು ಸ್ವಚ್ಚ ಮಾಡಿ ಬೇರೆ ಬಟ್ಟೆ ಹಾಕಿ ಮಲಗಿಸಿದ್ದಳು. ಅಮ್ಮನ ಸ್ಪರ್ಶ ಸುಖಕ್ಕೆ ಅನಿಕೇತ ಜೋರಾಗಿ ತಲೆ ಅಳ್ಳಾಡಿಸಿದ್ದ. ಈ ಪ್ರಕರಣ ಆದ ನಂತರ ರೋಹಿಣಿ ಕೆಲಸಕ್ಕೆ ತಿಲಾಂಜಲಿ ಇತ್ತಿದ್ದಳು. ರೋಹಿಣಿ ತನ್ನ ಹೆಚ್ಚಿನ ಸಮಯವನ್ನು ಅನಿಕೇತ್ ಜೊತೆ ಕಳೆಯಲಾರಂಭಿಸಿದಾಗ ಅವನಲ್ಲೂ ಸಕಾರಾತ್ಮಕ ಬದಲಾವಣೆ ಕೊಂಚ ಮಟ್ಟಿಗೆ ಕಂಡು ಬಂದಿತ್ತು ಮ್ಮ.,ಮ್ಮ.,ಪ್ಪ.,ಪ್ಪ ಎಂದು ಅಮ್ಮ, ಅಪ್ಪನನ್ನು ಗುರುತಿಸ ತೊಡಗಿದಾಗ ಇಬ್ಬರೂ ಅವನನ್ನು ಎತ್ತಿ ಮುದ್ದಾಡಿದ್ದರು. ಆರು ವರ್ಷದ ಅನಿಕೇತನಿಗೆ ಎದುರು ಮನೆಯ ಪಾಪು ಅಂದರೆ ತುಂಬಾ ಇಷ್ಟ. ಆ ಪಾಪು ಬಂದಾಗ ಅವನ ಕಣ್ಣುಗಳು ಅರಳುವುದನ್ನು ನೋಡಿದ್ದ ರೋಹಿಣಿಗೆ ಅನಿಕೇತನಿಗಾಗಿ ಇನ್ನೊಂದು ಮಗು ಬೇಕೆನಿಸಿತ್ತು ಅವಳಿಗೆ. ಆ ದಿನ ತಾನಾಗಿಯೇ ಬಳಿಗೆ ಬಂದಿದ್ದ ರೋಹಿಣಿಯನ್ನು ಬಾಹು ಬಂಧನದಲ್ಲಿ ಬಂಧಿಸಿದ್ದ ನಿತಿನ್.
ಇತ್ತೀಚೆಗೆ ರೋಹಿಣಿ ಗೆಲುವಾಗಿದ್ದಳು. ಇದು ನಿತಿನ್ ಗೆ ಸ್ವಲ್ಪ ಸಮಾಧಾನ ತಂದಿತ್ತು. ಎರಡು ದಿನದಿಂದ ಜ್ವರ ಬಂದು ಮಂಕಾಗಿದ್ದ ಅನಿಕೇತನನ್ನು ಡಾಕ್ಟರಿಗೆ ತೋರಿಸಿಕೊಂಡು ಬಂದಿದ್ದರು. ಆದರೆ ಬಂದ ಜ್ವರ ನೆತ್ತಿಗೇರಿ ಅನಿಕೇತ ಬಾರದ ಲೋಕಕ್ಕೆ ಹೋಗಿದ್ದ. ಅನಿಕೇತನಿಲ್ಲದ ಮನೆ ಬಿಕೋ ಎನ್ನುತಿತ್ತು. ಇಡೀ ದಿನ ಅವನನ್ನು ನೋಡಿ ಕೊಳ್ಳುವುದರಲ್ಲೇ ಸಮಯ ಹೋಗಿದ್ದೇ ಗೊತ್ತಾಗದ ರೋಹಿಣಿಗೆ ಹುಚ್ಚು ಹಿಡಿಯುವಂತಾಗಿತ್ತು. ಅಂದು ತಲೆ ತಿರುಗಿ ಬಿದ್ದ ಅವಳನ್ನು ಬಲವಂತವಾಗಿ ಡಾಕ್ಟರ್ ಹತ್ತಿರ ಚೆಕ್ ಅಪ್ ಕರೆ ತಂದಿದ್ದ ನಿತಿನ್. ಡಾಕ್ಟರ್ ಚೆಕ್ ಮಾಡಿ ರೋಹಿಣಿಗೆ ಮೂರು ತಿಂಗಳಾಗಿದೆ ಎಂದಾಗ ಇಬ್ಬರ ಕಣ್ಣುಗಳು ತುಂಬಿ ಬಂದಿದ್ದವು. ಡಾಕ್ಟರ್ ಅವರಿಬ್ಬರಿಗೂ ಧೈರ್ಯ ಹೇಳಿ ಅನಿಕೇತನನಿಗೆ ಇಷ್ಟವಾದ ಮಗು ಬರ್ತಾ ಇದೆ. ಯಾವ ಕಾರಣಕ್ಕೂ ಬೇಸರಿಸದೆ ನಗು ನಗುತ್ತಾ ಇದ್ದು ಹೊಸ ಮಗುವಿನ ಆಗಮನಕ್ಕೆ ತಯಾರಿ ಮಾಡಿಕೊಳ್ಳಿ ಎಂದು ಹೇಳಿದ್ದರು.
ಸುಸೂತ್ರವಾಗಿ ಹೆರಿಗೆಯಾಗಿ ಹೆಣ್ಣು ಮಗು ಅದಿತಿ ಜನಿಸಿತ್ತು. ಮೂರು ತಿಂಗಳು ಉಸಿರು ಬಿಗಿ ಹಿಡಿದು ಕೊಂಡಿದ್ದ ಇಬ್ಬರೂ ಮಗುವಿನ ಅಳು, ನಗು, ಶಬ್ದಕ್ಕೆ ಬೆಚ್ಚಿ ಬೀಳುವುದು ,ಐದು ತಿಂಗಳಿಗೆ ಮೊಗಚಿ ಬಿದ್ದು ಮುಂದೆ ಹೋಗಲು ಪ್ರಯತ್ನಿಸಿದಾಗ ನಿಡಿದಾದ ನಿಟ್ಟುಸಿರು ಬಿಟ್ಟಿದ್ದರು. ಅದಿತಿಯ ಮೊದಲನೇ ವರ್ಷದ ಹುಟ್ಟು ಹಬ್ಬಕ್ಕೆ ಅನಿಕೇತನನ ಹೆಸರಿನಲ್ಲಿ ಅಂಗವಿಕಲ ಮಕ್ಕಳ ಆಶ್ರಮಕ್ಕೆ ದುಡ್ಡು ಕೊಟ್ಟು ಹುಟ್ಟು ಹಬ್ಬವನ್ನು ಆಚರಿಸಿದ್ದರು.ಅನಿಕೇತನನ ಫೋಟೋ ತೋರಿಸಿ ಅಣ್ಣಾ,ಅಣ್ಣಾ ಎಂದಾಗ ಮುದ್ದು ಅದಿತಿ ಣ್ಣಾ,ಣ್ಣಾ ಎಂದಾಗ ಇಬ್ಬರೂ ಅವಳನ್ನು ಅಪ್ಪಿ ಮುತ್ತಿನ ಮಳೆಗೆರೆದಿದ್ದರು.
ಇಂದು ಬದುಕಿನ ಮುಸ್ಸಂಜೆ ಯಲ್ಲಿರುವ ರೋಹಿಣಿ,ನಿತಿನ್ ಅದಿತಿಯ ಮದುವೆ ಮಾಡಿ ತಮ್ಮ ಆಸ್ತಿಯಲ್ಲಿ ಅರ್ಧ ಅವಳಿಗೆ ಕೊಟ್ಟು,ಉಳಿದ ಅರ್ಧ ಆಸ್ತಿಯನ್ನು ಅನಿಕೇತನನ ಹೆಸರಿನಲ್ಲಿ ಅಂಗವಿಕಲರ ಆಶ್ರಮಕ್ಕೆ ಕೊಟ್ಟು ಅಲ್ಲೇ ಉಳಿದು ಅಸಹಾಯಕರ ಸೇವೆ ಮಾಡುತ್ತ ಸಾರ್ಥಕ ಜೀವನ ನಡೆಸುತಿದ್ದಾರೆ.
- ಪುಷ್ಪಾ ಹಾಲಭಾವಿ – ಧಾರವಾಡ.
