ಅಬುಧಾಬಿಯಲ್ಲಿ ಕೊಟ್ಟ ಮಾತಿನಂತೆ ತಪ್ಪದೆ ಬಂದ ನಟ ವಿಜಯ್ ರಾಘವೇಂದ್ರ, ಇದೇನಿದು!…ಈಗ ವಿಜಯ ರಾಘವೇಂದ್ರ ಅವರು ಅಬುಧಾಬಿಯಲ್ಲಿ ಏನು ಮಾಡುತ್ತಿದ್ದಾರೆ ಅಂತ ಯೋಚ್ನೆ ಮಾಡಬೇಡಿ…ತಪ್ಪದೆ ಮುಂದೆ ಓದಿ….
ಸಾವಿಲ್ಲದ ಮನೆಯಿಂದ ಸಾಸಿವೆ ತರುವುದು ಅಸಾಧ್ಯ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಸಾವು ನಿಚ್ಚಿತ. ಆ ಸಾವು ಹೇಗೆ?, ಯಾವಾಗ ಬರುತ್ತೆ ಯಾರಿಗೂ ಗೊತ್ತಿಲ್ಲ. ಆ ಭಗವಂತ ಪ್ರತಿಯೊಬ್ಬನ ಆಯಸ್ಸನ್ನು ಇಷ್ಟೇ ಅಂತ ಬರೆದು ಕಳುಹಿಸಿರುತ್ತಾನೆ. ಹೀಗಿರುವಾಗ ಯಾರ ಸಾವಿನ ಸುತ್ತ ಎಷ್ಟೇ ಚರ್ಚೆ ಮಾಡಿದರೂ ವ್ಯರ್ಥ.
ಸಾವು ಅಂತ ವಿಷಯ ಬಂದಾಗ ಸೆಲೆಬ್ರೆಟಿ ವಿಷಯದಲ್ಲಿ ಸಾಕಷ್ಟು ಚರ್ಚೆಗಳಾಗುತ್ತದೆ. ಎಲ್ಲರೂ ಮರೆತಿರಬಹುದು, ಸೆಲೆಬ್ರೆಟಿ ಮೈಯಲ್ಲೂ ಎಲ್ಲರಂತೆ ಹರಿಯುವುದು ಕೆಂಪು ರಕ್ತ, ಅವರಿಗೂ ಭಾವನೆಗಳಿವೆ. ಸಂತೋಷವಾದಾಗ ನಗುತ್ತಾರೆ, ನೋವಾದಾಗ ಅಳುತ್ತಾರೆ. ಇತ್ತೀಚಿಗೆ ಸ್ಪಂದನ ರಾಘವೇಂದ್ರ ಅವರ ವಿಚಾರದಲ್ಲಿ ಸಾಕಷ್ಟು ಚರ್ಚೆಗಳಾದವು. ಸ್ಪಂದನ ಸಿಕ್ಕಾಪಟ್ಟೆ ಡೈಯಟ್ ಮಾಡ್ತಿದ್ರಂತೆ, ವರ್ಕ್ ಔಟ್ ಮಾಡ್ತಿದ್ರಂತೆ, ತೂಕ ಬೇಗ ಇಳಿಸಿದರಂತೆ ಹೀಗೆ ಏನೇನೋ ಗುಲ್ಲುಗಳು, ಅವರ ಮನೆಯವರಿಗೆ ಸಾಂತ್ವನ ಹೇಳುವುದಕ್ಕಿಂತ ಅಂತೇ ಕಂತೆ ವಿಚಾರಗಳೇ ಹೆಚ್ಚಾದವು. ಏನೇ ಸುದ್ದಿಗಳು ಇದ್ದರು ವಾಸ್ತವದ ಸತ್ಯ ಮಾತ್ರ ಇಷ್ಟೇ, ಸ್ಪಂದನ ರಾಘವೇಂದ್ರ ಇನ್ನಿಲ್ಲ. ಅವರೇ ಇಲ್ಲದ ಮೇಲೆ ಚರ್ಚೆಗಳು ಬೇಕಿತ್ತಾ ಅನ್ನೋ ಒಂದು ಪ್ರಶ್ನೆ.
ಸ್ಪಂದನಾ ಅವರು ಇಲ್ಲದೆ ವಿಜಯ ರಾಘವೇಂದ್ರ, ಮಗ ಶೌರ್ಯ ಅವರ ಮುಂದಿನ ಬದುಕನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಕ್ಯಾಮೆರಾ ಕಣ್ಣುಗಳಿಂದ ತಪ್ಪಿಸಿಕೊಂಡು ಮನಸ್ಸುಪೂರ್ತಿ ಅಳಲು ಆಗದೆ, ಭಾರವನ್ನೆಲ್ಲ ಮನಸ್ಸಲ್ಲೇ ಹೊತ್ತು ನಿಂತಾಗ ಅದನ್ನು ನೋಡಿ ಅವರಿಗೆ ಭೇಷ್ ಅನ್ನಬೇಕೋ, ಅಥವಾ ಮನಸ್ಸು ಪೂರ್ತಿಯಾಗಿ ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳಿ… ಅಂತ ಹೇಳಿ ಸಮಾಧಾನ ಮಾಡಬೇಕೋ ಅವರವರ ವಿವೇಚನೆಗೆ ಬಿಟ್ಟದ್ದು.
ಆಪ್ತರ ಸಾವು ಜೀವನದಲ್ಲಿ ಧೃತಿ ಗೆಡಿಸುತ್ತದೆ. ಜೀವನ ಮುಂದಿನ ಹಾದಿ ಕಾಣದಂತೆ ಮಾಡುತ್ತದೆ. ಆದರೆ ವಿಜಯ ರಾಘವೇಂದ್ರ ಅವರು ಒಡಲಿನಲ್ಲಿ ಎಷ್ಟೇ ನೋವಿದ್ದರೂ, ತಾವು ಮೊದಲೇ ಒಪ್ಪಿಕೊಂಡಿದ್ದ ಅಬುದಾಬಿಯಲ್ಲಿನ ‘ಮ್ಯಾನ್ ಆಫ್ ಕೇವ್’ ಅಂಗಡಿ ಉದ್ಘಾಟನೆ ಕಾರ್ಯಕ್ರಮಕ್ಕೆ ತಪ್ಪಿಸಲಿಲ್ಲ. ಸ್ಪಂದನಾ ಅವರು ಬದುಕಿದ್ದಾಗಲೇ ಅಬುದಾಬಿ ‘ಮ್ಯಾನ್ ಆಫ್ ಕೇವ್’ ಅಂಗಡಿ ಉದ್ಘಾಟನೆಗೆ ಬರುವುದಾಗಿ ಒಪ್ಪಿಕೊಂಡಿದ್ದರು. ತಮ್ಮಿಂದ ನಡೆಯಬೇಕಿದ್ದ ಒಳ್ಳೆ ಕೆಲಸ ನಿಲ್ಲಬಾರದು ಎನ್ನುವ ಕಾರಣಕ್ಕೆ ವಿಜಯ ಅವರು ಅಬುದಾಬಿಗೆ ಹೋಗಿ ‘ಮ್ಯಾನ್ ಆಫ್ ಕೇವ್’ ಅಂಗಡಿಯಲ್ಲಿ ರಿಬ್ಬನ್ ಕಟ್ ಮಾಡಿ, ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ್ದಷ್ಟೇ ಅಲ್ಲ, ಅಂಗಡಿ ಕೆಲ್ಸಗಳು ನಿರ್ವಿಘ್ನವಾಗಿ ಸಾಗಲಿ… ಅಂಗಡಿ ಮಾಲೀಕ ಶಿವರಾಜ್ ಮತ್ತು ಅಲ್ಲಿನ ೨೫ ಕಾರ್ಮಿಕರಿಗೆ ಒಳ್ಳೆದಾಗಲಿ… ಎಂದು ಶುಭ ಹಾರೈಸಿದರು. ಅಬುಧಾಬಿ ಕನ್ನಡಿಗರ ಶಕ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮತ್ತು ಕನ್ನಡ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿದ್ದರು.
ವಿಜಯ ಅವರು ಒಪ್ಪಿಕೊಂಡ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಹೋದವರು ಮತ್ತೆ ಬರಲಾರರು, ಆದರೆ ಬದುಕಿರುವವರಿಗೆ ಸಾಂತ್ವನ ಹೇಳುವ ಮತ್ತು ಧೈರ್ಯ ಕೊಡುವ ಕೆಲಸ ನಮ್ಮದಾಗಿರಲಿ ಎನ್ನುತ್ತಾ ವಿಜಯ ರಾಘವೇಂದ್ರ ಹಾಗು ಅವರು ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಆ ಭಗವಂತ ಕೊಡಲಿ ಎಂದು ಎಲ್ಲರೂ ಪ್ರಾರ್ಥಿಸೋಣ.
ಮಾಹಿತಿ ಹಾಗೂ ಫೋಟೋ ಕೃಪೆ : ಕನ್ನಡಿಗ ಕ್ರಿಯೇಷನ್ಸ್
- ಆಕೃತಿ ನ್ಯೂಸ್
