ಲೇಖಕಿ ವಿಜಯಶ್ರೀ ಎಂ ಹಾಲಾಡಿ ಅವರ ಕೃತಿಗಳ ಕುರಿತು ಹಿರಿಯ ಸಾಹಿತಿಗಳಾದ ಎಸ್ ವಿ ಪ್ರಭಾವತಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕವನ : ಕತ್ತಲೆ ಗೆ ಎಷ್ಟೊಂದು ಬಣ್ಣ
ಪ್ರಬಂಧ ಸಂಕಲನ: ಕಣ್ಣ ಕಾಡಿನ ಹಾಡು
ಲೇಖಕಿ : ವಿಜಯಶ್ರೀ ಹಾಲಾಡಿ
ವಿಜಯಶ್ರೀ ಅವರ ಎರಡು ಕವನ ಸಂಕಲನಗಳಿಗೆ ಈಗಾಗಲೇ ವಿಮರ್ಶೆ ಬರೆದಿರುವ ನನಗೆ ಅವರ ಶೈಲಿ ಪರಿಚಿತ. ಈಗ ಅವರ ಇನ್ನೆರಡು ಪುಸ್ತಕ ಗಳು ನನ್ನ ಎದುರಿವೆ. ಅವು ಕತ್ತಲೆಗೆ ಎಷ್ಟೊಂದು ಬಣ್ಣ ಎಂಬ ಕವನ ಸಂಕಲನ ಮತ್ತು ಕಣ್ಣ ಕಾಡಿನ ಹಾಡು ಎಂಬ ಪ್ರಬಂಧ ಸಂಕಲನ. ತಾತ್ವಿಕ ಉದ್ಗಾರವನ್ನೋ ಪ್ರಶ್ನೆ ಯನ್ನೋ ಎತ್ತುವ ಒಂದು, ಸೌಂದರ್ಯ ರಸಾಸ್ವಾದನೆಯ ಇನ್ನೊಂದು.

ಎಲ್ ಜಿ ಮೀರಾ , ರಾಜೇಶ್ವರಿ ಭೋಗಯ್ಯ , ಜಿ ಪಿ ಬಸವರಾಜು , ಹೆಚ್ ಎಸ್ ಶಿವಪ್ರಕಾಶ್ ಮತ್ತು ಸ್ವತಃ ವಿಜಯಶ್ರೀ ಎಲ್ಲವನ್ನೂ ಬರೆದು ಬಿಟ್ಟಿರುವ ಈ ಕತ್ತಲೆ ಯ ಬಣ್ಣದ ಬಗ್ಗೆ ನಾನೇನು ಬರೆಯಬಲ್ಲೆ. ನಮ್ಮ ಫೇಸ್ ಬುಕ್ ನಲ್ಲಿ ನಾನು ಗಮನಿಸಿದಂತೆ ಈ ಕವಯತ್ರಿ ಗೆ ಕತ್ತಲೆಂದರೆ ಪ್ರೀತಿ . ಕುವೆಂಪು ಸೂರ್ಯೋದಯವನ್ನು ದೇವರ ದಯೆ ಎಂದರೆ ಇವರು ಚಂದ್ರೋದಯವನ್ನು ಕೃಪೆ ಎಂದು ಭಾವಿಸಿದಂತಿದೆ. ವಾಸ್ತವವಾಗಿ ಬೆಳಕು ಎಲ್ಲಕ್ಕೂ ಬಣ್ಣ ನೀಡುತ್ತದೆ . ಅದು ಹೊಸದಾಗಿ ನೀಡುವುದಲ್ಲ ಅದಾಗಲೇ ಇರುವ ಬಣ್ಣವನ್ನು ಹೊಳೆದು ತೋರಿಸುತ್ತದೆ. ಅದು ಬರುವ ಮೊದಲು ಕಪ್ಪಾಗಿದ್ದ ಮರ ಗಿಡ ಕಲ್ಲು ಮಣ್ಣು . ಮನೆ ಮಠ ಬೆಕ್ಕು ನಾಯಿ ಕೊನೆಗೆ ಮನುಷ್ಯರೂ ಸಹ ತಮ್ಮ ತಮ್ಮ ಒರಿಜಿನಲ್ ಬಣ್ಣ ಗಳಲ್ಲಿ ನಿಲ್ಲುತ್ತವೆ. ಇದನ್ನು ಅನುಭವ ದಿಂದ ಲೆಕ್ಕ ಹಾಕಿ ಬಿಡಬಹುದು ಇಂಥಿಂಥದೇ ಎಂದು ಉದಾ : ಹಸಿರು ಕೆಂಪು ಬಿಳಿ ನೀಲಿ ಹಳದಿ …. ಹೀಗೆ. ಆದರೆ ಈ ಕತ್ತಲಿದೆಯಲ್ಲ ಅದು ಕಣ್ಣು ಮುಚ್ಚಿದರೂ ಗಾಢ ಬಿಟ್ಟರೂ ಗಾಢ. ಊಹಿಸಿದಷ್ಟೂ ಬಣ್ಣ . ಅಷ್ಟೇ ಅಲ್ಲ ಧ್ವನಿ ಕೂಡ. ಧ್ಯಾನಸ್ಥ ಸ್ಥಿತಿಯಲ್ಲಿ ಅದು ವಿಸ್ತಾರಗೊಳ್ಳುತ್ತಾ ಆನಾದಿ ಅನಂತ ವಾಗುತ್ತದೆ. ಇದನ್ನು ಅವರ ಎಲ್ಲಾ ಕವಿತೆ ಗಳಲ್ಲಿ ಕಾಣಬಹುದು.
ಇಲ್ಲಿ ಒಂದಿಷ್ಟು ಹೆಣ್ಣಿನ ನೋವಿನ ಚಿತ್ರ ಗಳು ಇವೆ. ಸ್ವಾರಸ್ಯ ವೇನೆಂದರೆ ಅವೂ ಅನಾದಿ ಅನಂತ. ಒಂದು ಗುಟ್ಟಿನ ಮಾತು. ಗಂಡಸರಿಗೂ ಕಷ್ಟಗಳು ಇವೆಯಮ್ಮ . ಈ ಥರದ್ದಲ್ಲದಿದ್ದರೆ ಬೇರೆ ಥರದ್ದು.

ಕಣ್ಣ ಕಾಡಿನ ಹಾಡು ಪ್ರಬಂಧ ಗಳ ಸಂಕಲನ . ಇದರಲ್ಲಿ ಬಹುತೇಕ ಫೇಸ್ ಬುಕ್ ನಲ್ಲಿ ಓದಿದ್ದೆ,ಮೆಚ್ಚಿದ್ದೆ, ಮನೆ. ಮನೆಯ ಸುತ್ತ ಕಾಡು. ಕಾಡಿನ ಒಳಗೂ ಮನೆಯ ಒಳಗೂ ಬೆಕ್ಕು ನಾಯಿ ಹಸು ಅಳಿಲು ಚಿಟ್ಟೆ ಓತಿಕ್ಯಾತ ಆಹಾ ಎಂತಹ ಸುಂದರ ಪ್ರಪಂಚ. ನನಗೆ ಹೀಗಿರಲು ಆಸೆ. ನಾನು ಹುಟ್ಟಿ ಬೆಳೆದದ್ದೇ ಹಳ್ಳಿಯಲ್ಲಿ. ಆದರೆ ಬೆಂಗಳೂರೆಂಬ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಒಂದು ಜಿರಲೆ ಹಲ್ಲಿ ಇರುವೆ ಗೊದ್ದ ಬಂದರೂ ನಾವೇ ಕೊಲ್ಲುತ್ತೇವೆ . ಹೀಗಾಗಿ ಇವರ ವರ್ಣನೆ ನನಗೆ ತುಂಬಾ ಇಷ್ಟ ವಾಗುತ್ತಿತ್ತು ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕೆಂಪು ಬೆಳಕು . ಯಾರೋ ಸತ್ತ ದಿನ ಮನೆಯ ಸುತ್ತ ಕೇಳಿದ ನಿಟ್ಟುಸಿರು ಇಂಥವು ನಮ್ಮ ಇಂದ್ರಿಯ ಗಳಿಗೆ ಮೀರಿದ್ದು ಒಂದು ಇದೆ ಎಂದು ನಾನೇ ಪದೇ ಪದೇ ಹೇಳುತ್ತಿದ್ದ ಮಾತನ್ನು ನೆನಪಿಸುತ್ತಿತ್ತು . ಅನಾದಿ ಅನಂತ ಎಂಬ ವಿಷ್ಣು ಸಹಸ್ರನಾಮ ದ ಪದದ ಸಾಕ್ಷಾತ್ಕಾರ ವಾಗುವುದೇ ಕತ್ತಲಿನಲ್ಲಿ . ನೀಲಿ ಆಕಾಶ ಸದಾ ನಮಗೆ ಮೋಸ ಮಾಡುತ್ತದೆ . ಇಲ್ಲದ್ದನ್ನು ಇದೆ ಎಂದು ತೋರಿಸಿ ಕತ್ತಲು ಹಾಗಲ್ಲ . ಇಲ್ಲ ಏನೂ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೆ. ನನಗೂ ಅದೇ ಇಷ್ಟ. ಶುಭವಾಗಲಿ.
ಪ್ರತಿ ಯೊಂದು ಪದ್ಯವನ್ನು ಪ್ರಬಂಧ ವನ್ನು ಓದಿ ಬರೆಯುವ ಶಕ್ತಿಯನ್ನು ಕಳೆದುಕೊಂಡಿರುವೆ ವಿಜಯಶ್ರೀ . ಕ್ಷಮೆ ಇರಲಿ.
- ಎಸ್ ವಿ ಪ್ರಭಾವತಿ
