‘ವ್ಯಾಮೋಹದ ಪರದೆ ಸರಿದಾಗ’ ಸಣ್ಣಕತೆ

ಯಾರೂ ಯಾರಿಗೂ ಇಲ್ಲ. ಆ ಕ್ಷಣಕ್ಕೆ ಆದವರೇ ಎಲ್ಲ ಅನಿಸಿತು. ಅಸಹಾಯಕರಿಗಾಗಿ ಮಾತ್ರ ನನ್ನ ಮುಂದಿನ ಬದುಕು ಮುಡಿಪು ನಳಿನಿಗೆ ಅನಿಸಲು ಕಾರಣವೇನು? ಕತೆಗಾರ್ತಿ ಶೋಭಾ ನಾರಾಯಣ ಹೆಗಡೆ ಅವರ ಕತೆಯನ್ನು ಪೂರ್ತಿಯಾಗಿ ಓದಿ…

ರಾಧಮ್ಮನ ದಿನ ಕಾರ್ಯ ಸಾಂಗವಾಗಿ ನಡೆಯುತ್ತಿತ್ತು. ಬಂಧು ಬಳಗ ಎಲ್ಲ ನೆರೆದಿದ್ದರು. ರಾಧಮ್ಮನ ಗುಣಗಾನ ಮಾಡುತ್ತಿದ್ದರು. ಹಲವರು ಅಮ್ಮನ ಕಳೆದುಕೊಂಡ ದುಃಖದಲ್ಲಿ ಮೈಮರೆತು ಅಲ್ಲೇ ಮೂಲೆಯಲ್ಲಿ ಕುಳಿತ ನಳಿನಿಗೆ ಅವರ ಮಾತುಗಳಿಂದ ಮೈಪರಚಿದಂತಾಗಿತ್ತು. ಇದ್ದಾಗ ಬಾರದವರು, ಸತ್ತಾಗ ಬಂದು ಹೊಗಳುತ್ತಿದ್ದಾರೆ ಎಂದು
ಅಸಹ್ಯ ಎನಿಸಿತು. ಎಂತ ವಿಚಿತ್ರ ಈ ಜಗತ್ತು ಎಂದು ಯೋಚಿಸುತ್ತಿದ್ದವಳಿಗೆ ಅತ್ತೆ ಸುಮಾರ ಕೂಗು ಕೇಳಿ ತಿರುಗಿ ನೋಡಿದಳು. ಅವರ ಕೈಸನ್ನೆ ನೋಡಿ ಹ್ಮ… ಅತ್ತೆ ತನ್ನನ್ನೇ ಕೂಗುತ್ತಿದ್ದಾರೆ ಎಂದು ಅಲ್ಲಿಂದ ಎದ್ದು ಸೋದರತ್ತೆಯ ಬಳಿ ನಡೆದಳು ನಳಿನಿ.

ಅತ್ತೆಯ ಕೈಯಲ್ಲಿ ಅಮ್ಮನ ತಾಳಿ ಸರವಿತ್ತು. ನಳಿನಿಯ ಕಂಡೊಡನೆಯೇ ‘ಇಲ್ನೋಡು ಮಗ… ನಿನಗೆ, ತಂಗಿಗೆ ಮತ್ತೆ ಸೊಸೆಗೆ ಅಂತ ಮೂರು ಪಾಲು ಮಾಡಿದೀವಿ’ ಅಂದ್ರು. ‘ಯಾಕತ್ತೆ… ಮೂರು ಪಾಲು. ಅಮ್ಮನ ಬಂಗಾರ ಹೆಣ್ಣು ಮಕ್ಕಳಿಗೇ ಸೇರಬೇಕು. ನಿನ್ನೆ ಮಾವ ಕೇಳಿದಾಗ ಹೇಳಿದ್ನಲ್ವಾ?…ಸೊಸೆಗೆ ಅಮ್ಮನ ಉಳಿದ ಎಲ್ಲ ಬಂಗಾರ ಸೇರುತ್ತೆ.ನಮಗೆ
ಹೆಣ್ಣು ಮಕ್ಕಳಿಗೆ ಅಮ್ಮನ ತಾಳಿ ಸರ ಬಿಟ್ಟು ಇನ್ಯಾವ ಬಂಗಾರವೂ ಬೇಡ’… ಅಂದಳು ನಳಿನಿ.

‘ಹಾಗಲ್ಲ ತಂಗಿ…ಅಪ್ಪ ಬಂದು ನನ್ನ ಕೇಳಿದ್ರು. ಸೊಸೆ ಬಿಟ್ಟು ನಿಮಗೆ ಅಕ್ಕ ತಂಗೀರಿಗೆ ಮಾತ್ರ ಹೇಗೆ ಹಂಚೋದು? ಕೇಳಿದರು ಅತ್ತೆ’… ನಳಿನಿಗೆ ಇಲ್ಲಿ ತವರ ಬಾಂಧವ್ಯಕ್ಕಿಂತ ವ್ಯಾಪಾರ ಮನೋಭಾವವೇ ತುಸು ಜಾಸ್ತಿ ಅನಿಸಿತು. ಅದರಲ್ಲೂ ಅಪ್ಪ ಅತ್ತೆಯನ್ನು ಕೇಳಿದ್ದು ಸಮಂಜಸ ಎನಿಸಲಿಲ್ಲ. ಅಪ್ಪನಿಗೆ ಇಷ್ಟ ಇಲ್ಲ ಅಂದ್ರೆ ಕೊಡೋಲ್ಲ ಅನ್ನಬೇಕಿತ್ತು ಎಂದನಿಸಿತು ಮನದಲ್ಲಿ.
ಮತ್ತೆ ಅತ್ತೆ ಎಂದರು ‘ಒಂದು ಕೆಲಸ ಮಾಡು, ನೀನು ಮತ್ತೆ ಸೊಸೆ ರಶ್ಮಿ ಹಂಚಿಕೊಳ್ಳಿ. ತಂಗಿಗೆ ಏನು ಕಡಿಮೆ. ಅವಳಿಗೆ ಬೇಡ’… ಅಂದರು. ಆಗ ನಳಿನಿಗೆ ಎಲ್ಲಿತ್ತೋ ಕೋಪ. ಅತ್ತೆ ಇದು ಬಡತನ, ಸಿರಿತನದ ಪ್ರಶ್ನೆ ಅಲ್ಲ, ನಾವು ಮದುವೆಯಾದಾಗಿನಿಂದ ಅಮ್ಮನ ಮನೆಯಿಂದ ಏನೇನೂ ತಗೋಂಡಿಲ್ಲ. ಅಮ್ಮನ ಮನೆಯ ಅರಿಶಿನ ಕುಂಕುಮ ಅಂತ ಒಂದೇ ಒಂದು ಸೀರೆನೂ ಆಸೆ ಪಟ್ಟಿಲ್ಲ.

ಬಸಿರು, ಬಾಣಂತನ, ಸೀಮಂತ ಕೂಡ ಮಾಡಿಲ್ಲ ತವರು ನಮಗೆ. ನಾವೇ ನಮ್ಮ ಕೈಯಿಂದ ಹಣ ಹಾಕಿ ಹಬ್ಬ ಹರಿದಿನ ಅಂತ ಉಂಡು ಹೋದ್ವಿ. ಆಗ ಬಡತನ ಇತ್ತು ಸರಿ. ಇದ್ರಿಂದ ಅಮ್ಮ ತುಂಬಾ ನೊಂದಿದ್ದಳು. ಅವಳ ಆರೋಗ್ಯ ಹದಗೆಟ್ಟಾಗ ಒಮ್ಮೆ ನುಡಿದಿದ್ದಳು ‘ತಾಯಿ ಆಗಿ ಏನೇನೂ ಮಾಡಲಿಲ್ಲ ನಾನು. ನೀವೆಲ್ಲ ತಾಯಿಯಂತೆ ನನ್ನ ಆರೈಕೆ ಮಾಡ್ತಾ ಇದೀರಿ. ನಾನು ಗುಣಮುಖಳಾದ ಮೇಲೆ ಹೆಣ್ಣು ಮಕ್ಕಳಿಗೆ ಏನಾದರೂ ಚಿನ್ನ ಮಾಡಿಸಿಕೊಡುವೆ. ಹೇಗಿದ್ದರೂ ತಮ್ಮ ಈಗ ದುಡೀತಾ ಇದಾನೆ’… ಅಂದಿದ್ರು.

ಈಗ ಅಮ್ಮ ಇಲ್ಲ. ಇನ್ನು ಅವರ ಆಸೆಕೂಡ ಈಡೇರಲ್ಲ. ಅದಕ್ಕೋಸ್ಕರ ಅವರ ಆತ್ಮ ಕೊರಗದಿರಲಿ ಅನ್ನುವ ಉದ್ದೇಶಕ್ಕೆ ಮಾತ್ರ ಅಮ್ಮನ ಚಿನ್ನ ಕೇಳಿದೆ. ಇಲ್ಲಿಯವರೆಗೆ ನನಗೆ ಏನೇ ಕಷ್ಟ ನೋವು ಬರಲಿ. ತವರ ಸಹಾಯ ಕೇಳಿಲ್ಲ, ಕೇಳೋದೂ ಇಲ್ಲ. ಎಂದು ದುಃಖದಲ್ಲಿ ನುಡಿದಳು ನಳಿನಿ. ನಳಿನಿಗೆ ತುಂಬಾ ಅಪಮಾನ ಆಗಿತ್ತು. ಅಲ್ಲೇ ಇದ್ದ ತಂಗಿ,ತಮ್ಮರ ಮುಖ ನೋಡಿದಳು.ಅಂತ ಸಮಯದಲ್ಲಿ ತಮ್ಮ, ತಂಗಿ ಕೂಡ ಅಕ್ಕನ ಸಹಾಯಕ್ಕೆ ಬಾರದಾಗಿದ್ದು ಅತೀವ ಸಂಕಟವಾಗಿತ್ತು.ತಮ್ಮ ,ತಂಗಿ ಇದನ್ನು ಸೂಕ್ಷ್ಮವಾಗಿ ಬೆಗೆ ಹರಿಸಬಹುದಿತ್ತು. ಯಾಕೆಂದರೆ ತನ್ನ ಕೈಯಲ್ಲಿ ಬೆಳೆದವರು. ಆದರೂ ಸುಮ್ಮನೆ ಇದ್ದರು. ಎಲ್ಲರೂ ತನ್ನನ್ನು ಕೀಳಾಗಿ ಕಂಡ ಅನುಭವವಾಗಿ, ನನಗೆ ಏನೂ ಬೇಡ ಎಂದು ಹೊರ ಹೊರಟಳು. ಹಾಗಾಗೋಲ್ಲ. ಇದು ವೈದಿಕರು ನೀಡಿದ ಪ್ರಸಾದ. ತಗೋಬೇಕು ಎನ್ನುತ್ತ ಅತ್ತೆ ತಾಳಿ ಸರದ ಮೂರು ಪಾಲಿನಲ್ಲಿ ಒಂದು ಪಾಲು ಅವಳ ಕೈಗೆ ತುರುಕಿದರು. ಈ ಅನೀರೀಕ್ಷತದಿಂದ ನಳಿನಿಗೆ ದುಃಖ ತಡೆಯಲಾಗಲಿಲ್ಲ. ಅಲ್ಲಿಂದ ಹೊರ ನಡೆದಳು.ಅವಳ ಗಂಡ ಶ್ರೀಕಾಂತ್ ಕೂಡ ಅಲ್ಲೇ ಇದ್ದ.ಎಲ್ಲವನ್ನು ಗಮನಿಸಿದ್ದ.ನಳಿನಿ ಹೊರ ಬರುವಾಗ ಹೆಂಡತಿಯ ಮುಖ ದಿಟ್ಟಿಸಿದ ಶ್ರೀಕಾಂತ್. ಆದರೆ ಗಂಡನ ಮುಖ ನೋಡಲು ಧೈರ್ಯ ಸಾಲಲಿಲ್ಲ ನಳಿನಿಗೆ.

ಹೊರಗಡೆ ಬಂದವಳು ಸೀದಾ ಅರಳೀಕಟ್ಟೆಯ ಮೇಲೆ ಕೂತಳು.ಅಳು ಉಕ್ಕಿ ಬಂತು.ಇವರೆಲ್ಲ ತನ್ನವರಾ ಅನಿಸಿತು. ಇವರಿಗಾಗಿ ತನ್ನ ಜೀವ ತೇಯ್ದೆನಾ ಅನಿಸಿತು.ಹಳೆಯದೆಲ್ಲ ನೆನಪಾಗ ತೊಡಗಿತು ನಳಿನಿಗೆ.

ಆಗಷ್ಟೇ ಹತ್ತನೇ ತರಗತಿ ಮುಗಿದಿತ್ತು.ಮನೆಯಲ್ಲಿ ಕಡುಬಡತನ.ತಂಗಿ, ತಮ್ಮ ತುಂಬಾ ಚಿಕ್ಕವರು.ಮಂದೆ ಓದಿಸೋಕೆ ಆಗಲ್ಲ ಅಂತ ಅಪ್ಪ ಖಡಾಖಂಡಿತವಾಗಿ ನುಡಿದಿದ್ದರು. ತೋಟ, ಗದ್ದೆ, ಮನೆಗೆಲಸದಲ್ಲಿ ನೆರವಾಗುತ್ತ, ಆಕಡೆ ಈಕಡೆ ಓಡಾಡಿಕೊಂಡಿದ್ದ ದಿನಗಳವು. ಬಂಧುಗಳ ಮದುವೆಯಲ್ಲಿ ಶ್ರೀ ಪರಿಚಯವಾಗಿದ್ದು ಗೊತ್ತಿಲ್ಲ. ಅವರ ಪ್ರೀತಿ ಸೆಳೆದಿತ್ತು. ಹುಡುಗ ಒಳ್ಳೆಯವನು. ಅವರ ಪ್ರೀತಿಯನ್ನು ನಿರಾಕರಿಸಲಾಗಲಿಲ್ಲ. ಒಪ್ಪಿಗೆ ನೀಡಿದೆ. ಅಪ್ಪನಿಗೆ ಚೂರು ಇಷ್ಟ ಆಗಲಿಲ್ಲ. ಯಾಕೆಂದರೆ ಹುಡುಗ ಶ್ರೀಮಂತ ಅಲ್ಲ ಅಂತ. ಆದರೆ ನನಗೆ ಶ್ರೀಮಂತಿಕೆಗಿಂತ ಗುಣ ಬೇಕಿತ್ತು. ಒಟ್ಟಾರೆ ನನ್ನ ಹಠಕ್ಕೆ ಮಣಿದು ಅಪ್ಪ ಒಪ್ಪಿಗೆ ನೀಡಿದರು. ಮದುವೆ ಆಗುವ ಮೊದಲು ಶ್ರೀಗೆ ಒಂದು ಕಂಡಿಷನ್ ಹಾಕಿದ್ದೆ. ನೀವು ಈ ಮನೆಗೆ ಅಳಿಯನಿಗಿಂತ ಮಗನಾಗಿ ಇರಬೇಕು. ನನ್ನ ತಂಗಿ, ತಮ್ಮನ ಒಂದು ದಡ ಮುಟ್ಟಿಸಬೇಕೆಂದು. ಹಾಗಿದ್ದರೆ ಈ ಮದುವೆ. ಇಲ್ಲ ಎಂದರೆ ಮದುವೆ ಬೇಡ ನನಗೆ ಎಂದೆ. ಶ್ರೀ ಒಳ್ಳೆಯವರು. ಅವರು ನನ್ನ ಶರತ್ತನ್ನು ಒಪ್ಪಿದರು. ಒಳ್ಳೆಯ ಮುಹೂರ್ತದಲ್ಲಿ ಮದುವೆ ಆಯಿತು. ಗಂಡನ ಮನೆ ಸೇರಿದೆ. ಅತ್ತೆಯ ಮನೆ ಗಂಡನ ಮನೆಯಾಗದೇ ತವರೇ ಆಗಿದ್ದು ತನ್ನ ಪಾಲಿನ ಸೌಭಾಗ್ಯವಾಗಿತ್ತು.

ಶ್ರೀ ಹೇಳಿದಂತೆ ನಡೆದುಕೊಂಡರು. ತಂಗಿ ತಮ್ಮರ ಒಂದು ದಡ ಸೇರಿಸಿದರು. ಅಪ್ಪನಿಗೆ ಆಸರೆಯಾಗಿ ನಿಂತರು. ನಮ್ಮ ಕಷ್ಟ ನಷ್ಟಗಳ ಬದಿಗೊತ್ತಿ ಸಹಾಯ ಮಾಡಿದರು. ತಂಗಿ ಓದು ಮುಗಿದ ಮೇಲೆ ಒಳ್ಳೆಯ ಸಂಬಂಧ ಹುಡುಕಿ ಮದುವೆ ಮಾಡಿದರು. ತಮ್ಮ ಕೂಡ ದುಡಿಮೆಗೆ ನಿಂತ. ಅವನಿಗೂ ಮದುವೆ ಮಾಡಿ ಅವನ ಜೀವನಕ್ಕೂ ದಾರಿ ಮಾಡಿಕೊಟ್ಟರು.

ಮನೆ ಮಗಳು ಅನ್ನುವುದಕ್ಕಿಂತ ಮನೆಯ ಹಿರಿ ಮಗನಂತೆ ಆಸರೆಯಾದೆ ಪತಿಯ ಸಹಕಾರದಿಂದ. ಈಗ ನೋಡಿದರೆ ಯಾವುದೂ ನೆನಪಿಲ್ಲ ಇವರಿಗೆ. ನನ್ನಲ್ಲಿ ಏನೂ ಇಲ್ಲ ಎಂದು
ಎಷ್ಟು ತುಚ್ಛವಾಗಿ ನೋಡುತ್ತಿದ್ದಾರೆ. ನಾನೂ ಇವರಂತೆ ನನ್ನ ಸಂಸಾರವನ್ನು ಮಾತ್ರ ನೋಡಿಕೊಂಡಿದ್ದರೆ, ಇವರು ಈ ಮಟ್ಟದಲ್ಲಿ ಬೆಳೆಯಲು ಆಗುತ್ತಿತ್ತಾ? ಕಾಂಚಾಣದ ಮುಂದೆ ಮನುಷ್ಯತ್ವದ ಮೌಲ್ಯ ಕಳಪೆಯಾಗಿ ಕಂಡಿತು ನಳಿನಿಗೆ. ಹೃದಯ ಹೇಳಲಾರದ ಅವ್ಯಕ್ತ ನೋವಿನಿಂದ ಚೀರುತ್ತಿತ್ತು. ಮೊದಲೇ ಅಮ್ಮನ ಕಳೆದುಕೊಂಡ ದುಃಖವೇ ಅರ್ಧ ಹೈರಾಣವಾಗಿಸಿತ್ತು. ಕಷ್ಟ ಬಂದಾಗ ಹೆಗಲು ಕೊಡದ ಬಂಧುಬಳಗ,ಇಂದು ಮುಂದೆ ಬಂದು ನಿಂತಿದಾರೆ…ಕಷ್ಟದಲ್ಲಿ ಮಿಡಿದು ಹೆಗಲು ನೀಡಿದ ನಾನು,ಗುರುತಿಸುವವರೇ ಇಲ್ಲದೇ , ಎಲ್ಲರಿಗಿಂತ ಹಿಂದೆ ಉಳಿದೆ.

ಇಷ್ಟೇ ಜಗತ್ತು… ನಮ್ಮವರು, ತನ್ನವರೆಲ್ಲ ಲೆಕ್ಕಾಚಾರದ ಪಟ್ಟಿಗೆ ಮಾತ್ರ ಸೀಮಿತ. ಉಳ್ಳವರು ಶಿವಾಲಯ ಮಾಡುವರಯ್ಯ, ನಾನೇನು ಮಾಡಲಿ ಬಡವನಯ್ಯಾ…ಆ ಕ್ಷಣದಲ್ಲೂ ದಾಸರ ವಾಣಿ ನೆನಪಿಗೆ ಬಂತು ನಳಿನಿಗೆ.ಇಲ್ಲ, ನನಗೆ ಯಾರೂ ಇಲ್ಲ,ಯಾರೂ ಬೇಡ. ನನ್ನ ಕರ್ತವ್ಯ ನಾನೀವರೆಗೆ ಮಾಡಿರುವೆ.ಯಾರಿಂದಲೂ ಏನೂ ನಿರೀಕ್ಷಿಸಲಾರೆ. ಎದ್ದು ನಿಂತಳು ನಳಿನಿ. ತುಂಬಿದ ಕಣ್ಣು ವರೆಸಿಕೊಂಡಳು. ಅವಳ ಮುಂದೆ ಒಬ್ಬ ಬಡ ಭಿಕ್ಷುಕಿ ತನ್ನ ಚಿಕ್ಕ ಹಸುಳೆಗೆ ಹಾಲಿಲ್ಲದ ಒಣ ಎದೆಯಿಂದ ಹಾಲೂಡಿಸುತ್ತಿದ್ದಳು.ಆ ಮಗು ಹಾಲು ಇಲ್ಲದೆ ಬರಡಾದ ತಾಯ ಮೊಲೆ ಚೀಪುತ್ತಾ ಚೀರುತ್ತಿತ್ತು. ಅದನ್ನು ನೋಡಿ ನಳಿನಿಗೆ ಕರುಳು ಹಿಂಡಿದ ಹಾಗಾಯಿತು. ವೈದಿಕರು ಪ್ರಸಾದ ರೂಪದಲ್ಲಿ ಕೊಟ್ಟ ಅಮ್ಮನ ಅರ್ಧ ತಾಳಿ ಸರವಿತ್ತು. ಮುಷ್ಟಿ ಬಿಚ್ಚಿ ನೋಡಿದಳೊಮ್ಮೆ, ಅಮ್ಮ ನನ್ನ ಉದ್ದಟತನವ ಕ್ಷಮಿಸು ಎಂದು ಮೇಲೆ ಆಕಾಶವ ದಿಟ್ಟಿಸಿ ನುಡಿದಳು. ಆ ಭಿಕ್ಷುಕ ತಾಯಿಯ ಕೈಗೆ ಆ ಚಿನ್ನದ ತಾಳಿ ಸರ ಇತ್ತು ಹೇಳಿದಳು. ಇದರಿಂದ ನನಗೆ ಯಾವುದೇ ಉಪಯೋಗವಿಲ್ಲ ತಾಯಿ. ಯಾವ ಒಡವೆಯನ್ನೂ ನಾನು ಆಸೆ ಪಟ್ಟವಳಲ್ಲ. ನನ್ನ ಅಮ್ಮ ಇರುವತನಕ ಅವರನ್ನು ಚೆನ್ನಾಗಿ ನೋಡಿಕೊಂಡು ನನ್ನ ಕರ್ತವ್ಯ ನಿಭಾಯಿಸಿದ ಸಂತೃಪ್ತಿ ನನಗಿದೆ. ನಿನಗಾದರೂ ಉಪಯೋಗವಾದೀತು. ನಿನ್ನ ಕಂದನ ಹಸಿವನ್ನಾದರೂ ಕಿಂಚಿತ್ ತಣಿಯಲಿ ಇದರಿಂದ ಎನ್ನುತ್ತ ಎದ್ದು ಹೊರಟೇ ಬಿಟ್ಟಳು. ಆ ಭಿಕ್ಷುಕ ತಾಯಿ ಅಮ್ಮ ಅಮ್ಮ ಎಂದು ಕೂಗುತ್ತಲಿದ್ದಳು. ಧೃಡ ಹೆಜ್ಜೆಯಿಂದ ನಡೆಯುತ್ತಿದ್ದವಳು ಒಮ್ಮೆ ತಿರುಗಿ ನೋಡಿದಳು. ಭಿಕ್ಷುಕ ತಾಯಿ  ಮಂಡಿಯೂರಿ ಇವಳಿಗೆ ನಮಿಸುತ್ತಲಿದ್ದಳು. ಹೇ ಭಗವಂತ… ನನ್ನ ಆಯುಷ್ಯವನ್ನೆ ಸವೆಸಿದವರಿಗೆ ಕೃತಜ್ಞತೆಯ ಪದದ ಗಂಧಗಾಳಿಯೇ ತಿಳಿಯದು..ಆದರೆ ಚೂರು ಚಿನ್ನ ಕೈಗಿತ್ತ ಮಾತ್ರಕ್ಕೆ ಅವಳು ಮಂಡಿಯೂರಿ ನಮಿಸುತಿಹಳು.ಇದೇ ಅಲ್ಲವೇ ಕೃತಜ್ಞತೆಗಿರುವ ಮೌಲ್ಯ?.

ಕರ್ತವ್ಯಕ್ಕೂ, ಸಹಾಯಕ್ಕೂ ಎಷ್ಟೊಂದು ಅಜ ಗಜಾಂತರ ವ್ಯತ್ಯಾಸ? ಅರಿವಿಲ್ಲದೆಯೇ ಕಂಬನಿ ಜಾರಿತು ನಳಿನಿಯ ಕೆನ್ನೆಯಿಂದ. ಯಾರೂ ಯಾರಿಗೂ ಇಲ್ಲ. ಆ ಕ್ಷಣಕೆ ಆದವರೇ ಎಲ್ಲ ಅನಿಸಿತು. ಅಸಹಾಯಕರಿಗಾಗಿ ಮಾತ್ರ ನನ್ನ ಮುಂದಿನ ಬದುಕು ಮುಡಿಪು. ಎಂದು ಮನದಲ್ಲಿ ಧೃಡ ಸಂಕಲ್ಪ ಮಾಡುತ್ತ ಮನದ ವ್ಯಾಮೋಹದ ಪರದೆ ಸರಿಸಿ ನಡೆದಳು ನಳಿನಿ.


  • ಶೋಭಾ ನಾರಾಯಣ ಹೆಗಡೆ – ಶಿರಸಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW