ಆ ಹುಡುಗ ಯಾರ ತಂಟೆಗೂ ಹೋಗದೆ ಇರುವಂತೆ ಒಂದು ಪಾಠವನ್ನು ಕಲಿತ, ಆ ಪಾಠ ಯಾವುದು? ಆ ಹುಡುಗ ಯಾರು ಗೊತ್ತಾ?…ಸಿದ್ಧರಾಮ ಕೂಡ್ಲಿಗಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
” ಆ ಹುಡುಗ ಅದೇ ತಾನೇ ರಾಯಚೂರಿನಿಂದ ಕೊಪ್ಪಳಕ್ಕೆ ಬಂದಿದ್ದ. ಹೈಸೂಲ್ ನ ೫ ಕ್ಲಾಸ್ ನಲ್ಲಿ ಓದುತ್ತಿದ್ದ. ಹಲವಾರು ಗೆಳೆಯರೊಂದಿಗೆ ಖುಷಿಯಾಗಿದ್ದ. ಅಲ್ಲಿಯ ಶಿಕ್ಷಕರೂ ಸಹ ಅಷ್ಟೇ ಶ್ರದ್ಧೆಯಿಂದ ಅತ್ಯುತ್ತಮವಾಗಿ ಬೋಧಿಸುತ್ತಿದ್ದರು. ಒಮ್ಮೆ ಈ ಹುಡುಗನ ಆತ್ಮೀಯ ಗೆಳೆಯನೊಬ್ಬ” ಒಬ್ಬಾಂವ ನನಗ ಭಾಳ ಕಾಡ್ತಾನಲೇ ೪ ಒದ್ದು ಬಿಡಾಣ ಸರಿಹೋಕ್ಕಾನ ” ಎಂದ. ಈ ಹುಡುಗನಿಗೆ ಗೆಳೆಯನಿಗೆ ಇಷ್ಟೂ ಸಹಾಯ ಮಾಡದಿದ್ದರೆ ಹೇಗೆ ? ಎಂದು ಒಪ್ಪಿದ. ನೇರವಾಗಿ ಆ ಗೆಳೆಯ ಮತ್ತೊಬ್ಬನನ್ನು ತೋರಿಸಿ ” ಇವನಲೇ ನಂಗ್ ಕಾಡ್ಸೋದು ” ಎಂದು ತೋರಿಸಿದ. ಈ ಹುಡುಗ ಇಷ್ಟೇ ಸಾಕು ಎಂದು ಆ ಅಮಾಯಕ ಮತ್ತೊಬ್ಬ ಹುಡುಗನನ್ನು ಹೊಡೆದ. ಅವನೋ ಪಾಪ ನರಪೇತಲ. ಅವನನ್ನು ಬಗ್ಗಿಸಿ ಚೆನ್ನಾಗಿ ಗುದ್ದಿದ. ಆ ಹುಡುಗ ಹೋ ಎಂದು ಅಳಲು ಸುರುಮಾಡಿದ ನಂತರ ಈ ಹುಡುಗ ಹಾಗೂ ಈತನ ಗೆಳೆಯ ಅಲ್ಲಿಂದ ಕಾಲ್ಕಿತ್ತರು. ೨ ದಿನ ಹೊಡೆಸಿಕೊಂಡ ಹುಡುಗ ಶಾಲೆಗೆ ಬರಲೇ ಇಲ್ಲ. ಈ ಹುಡುಗನೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

೩ನೇ ದಿನ ಈ ಹುಡುಗ ಯಥಾರೀತಿ ಶಾಲೆಗೆ ಹೋದ. ಸ್ವಲ್ಪ ಹೊತ್ತಿನಲ್ಲಿಯೇ ಶಾಲೆಯ ಹೆಡ್ ಮಾಸ್ಟರ್ ರಿಂದ ಈ ಹುಡುಗನಿಗೆ ಬುಲಾವ್ ಬಂತು. ಬೇರೆ ಹುಡುಗನನ್ನು ಹೊಡೆಸಿದ ಗೆಳೆಯನೂ ಜೊತೆಯಲ್ಲಿ ಬಂದ. ಈ ಹುಡುಗ ಹೆದರುತ್ತಲೇ ಹೆಡ್ ಮಾಸ್ಟರ್ ರ ಕೋಣೆಯನ್ನು ಹೊಕ್ಕು ನೋಡುತ್ತಾನೆ ಅಲ್ಲಿ ಯಾರೋ ಹಿರಿಯರು ಕೂತಿದ್ದರು. ಇದೇನಪ್ಪ ಪೀಕಲಾಟ ಎಂದು ಹುಡುಗ ನಡುಗುತ್ತಲೇ ಹೆಡ್ ಮಾಸ್ಟರ್ ಹತ್ರ ಹೋದ. ಹೆಡ್ ಮಾಸ್ಟರ್ ಹಾಗೂ ಆ ಹಿರಿಯರು ಈ ಹುಡುಗನ ಗೆಳೆಯನನ್ನು ಕೇಳಿದರು ” ಅಂವನನ್ನ ಹೊಡ್ದಾವ್ ಇವ್ನ ಏನ್ ? ” ಗೆಳೆಯ ” ಹೌಂದ್ರಿ ಸರ್, ಬ್ಯಾಡ ಬ್ಯಾಡ ಅಂದ್ರೂ ಅವನನ್ನ ನೆಲಕ್ಕ ಹಾಕಿ ಗುದ್ದಿದನ್ರೀ ” ಎಂದ. ಈ ಹುಡುಗನಿಗೆ ಏನು ನಡೆಯುತ್ತಿದೆಯೆಂದೇ ಅರಿವಾಗುತ್ತಿಲ್ಲ. ಆ ಗೆಳೆಯನನ್ನು ತರಗತಿಗೆ ಕಳಿಸಿದರು. ಆ ಹಿರಿಯರು ” ನಮ್ ಹುಡುಗಂಗ ದನಾ ಬಡ್ದಂಗ್ ಬಡ್ದಾನ್ರೀ ಸರ್. ೨ ದಿನಾ ಆತು ಜ್ವರ ಬಂದು, ಭೇದಿ ಬ್ಯಾರೆ ಹತ್ತೈತ್ರಿ ಸರ್, ಹೆಂಗ್ ಬಡ್ದಿದ್ದಾನ್ ಇಂವ ” ಎಂದು ಆ ಹಿರಿಯರು ದೂರಿದರು. ಹೆಡ್ ಮಾಸ್ಟರ್ ಈ ಹುಡುಗನನ್ನು ಪಕ್ಕಕ್ಕೆ ಕರೆದರು. ಟೇಬಲ್ ಮೇಲೆ ಏನೋ ತೆಗೆದುಕೊಂಡು ಕಿವಿಯನ್ನು ನಿಧಾನವಾಗಿ ಉಜ್ಜ ತೊಡಗಿದರು. ಆಗ ಗೊತ್ತಾಯಿತು ನೋಡಿ ಆ ಹುಡುಗನಿಗೆ ಹೆಡ್ ಮಾಸ್ಟರ್ ಉಸುಕಿನ ಹರಳನ್ನು ಕಿವಿಗೆ ಒತ್ತಿ ಹಿಂಡುತ್ತಿದ್ದರು. ಆ ನೋವಿಗೆ ಹುಡುಗನ ಕಣ್ಣಿಂದ ಪಳ್ಳನೆ ಧಾರಾಕಾರ ನೀರು. ” ತಿಂದ್ ಅನ್ನ ಹೆಚ್ಚಾಗೈತೇನಲೇ ಮಗನ, ಇನ್ನೊಮ್ಮೆ ಹೊಡೀತಿ ಯಾರ್ನರ, ನಿಮ್ಮವ್ವ ಟೀಚರ್ ಅದಾರ ಕರೆಸಲೇನ್ ? ” ಎಂದು ಮತ್ತಷ್ಟು ಜೋರಾಗಿ ಕಿವಿ ಉಜ್ಜತೊಡಗಿದರು. ಮೊದಲೇ ಹೆಡ್ ಮಾಸ್ಟರ್ ಅಂದರೆ ಶಿಸ್ತಿನ ಸಿಪಾಯಿ, ಅವರೆಂದರೆ ಆ ಶಾಲೆಯಲ್ಲಿ ಎಲ್ಲರೂ ನಡುಗುತ್ತಾರೆ ಇನ್ನು ಈ ಹುಡುಗನ ಪರಿಸ್ಥಿತಿಯನ್ನು ನೀವೇ ಯೋಚಿಸಿ. ಇಡೀ ಮುಖವೆಂಬೋ ಮುಖವೆಲ್ಲ ಕೆಂಪಗೆ ಕಾದ ಹೆಂಚಿನಂತಾದ ಹುಡುಗ ತಕತಕನೆ ಕುಣಿಸುತ್ತಾ ” ಇಲ್ಲ ಸಾರಾ, ಇಲ್ಲ ಸಾರ್… ” ಎಂದು ಚೀರ ತೊಡಗಿದ. ಇಷ್ಟಕ್ಕೆ ಬಿಡದೆ ಹೆಡ್ ಮಾಸ್ಟರ್ ಕೆನ್ನೆಗೂ ಏಟುಕೊಟ್ಟರು. ಅಳುತ್ತಿದ್ದ ಆ ಹುಡುಗನನ್ನು ಹೆಡ್ ಮಾಸ್ಟರ್ ಎಚ್ಚರಿಕೆ ನೀಡಿ ಕಳಿಸಿದರು.

ಈ ಹುಡುಗನ ಪರಿಸ್ಥಿತಿ ಹೇಗೆಂದರೆ ಮನೆಯಲ್ಲಿ ತಂದೆ ತಾಯಿ ಇಬ್ಬರೂ ಮಗ ಚೆನ್ನಾಗಿ ಓದಲಿ ಎಂಬ ಹಂಬಲ. ಅಲ್ಲದೆ ಇವನನ್ನು ಸರಿದಾರಿಗೆ ತರುವ ಜವಾಬ್ದಾರಿ ನಿಮ್ಮದೇ ಎಂದೂ ಬೇರೆ ಶಾಲೆಯಲ್ಲಿ ತಿಳಿಸಿದ್ದುದರಿಂದ, ತನ್ನದೇ ತಪ್ಪಿರುವುದರಿಂದಲೂ ಈ ಹುಡುಗ ಮನೆಯಲ್ಲಿ ಈ ವಿಷಯವನ್ನು ಹೇಳಲೇ ಇಲ್ಲ. ಯಾಕೆಂದರೆ ಹೇಳಿದರೆ ಮನೆಯಲ್ಲೂ ಒದೆಸಿಕೊಳ್ಳಬೇಕಾಗುತ್ತದೆ ಎಂಬ ಭಯ. ಸ್ವಲ್ಪ ಬೈದರೇ ಇಂದಿನ ಪಾಲಕರು ಶಿಕ್ಷಕರ ಜನ್ಮವನ್ನೇ ಜಾಲಾಡಿಬಿಡುವಂತಹ ಇಂದಿನ ದಿನಗಳಿಗೂ, ಶಾಲೆಯಲ್ಲಿ ಹೊಡೆದಿದ್ದಾರೆಂದು ಹೇಳಿದರೆ ಮನೆಯಲ್ಲಿಯೂ ಹೊಡೆದು, ಶಾಲೆಗೂ ಬಂದು ಮತ್ತಷ್ಟೂ ಹೊಡೆದು ನಮ್ಮ ಹುಡುಗನನ್ನು ಸರಿದಾರಿಗೆ ತನ್ನಿ ಎಂದು ಹೇಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂತೂ ಇಂತೂ ಅಂದಿನಿಂದ ಆ ಹುಡುಗ ಯಾರ ತಂಟೆಗೂ ಹೋಗದೆ ಇರುವ ಪಾಠವನ್ನು ಕಲಿತ.
ಅಂದಹಾಗೆ ಹೆಡ್ ಮಾಸ್ಟರ್ ರಿಂದ ಒದೆ ತಿಂದ ಹುಡುಗ ನಾನೇ. ಅವರು ಆ ರೀತಿ ಶಿಕ್ಷೆ ಕೊಟ್ಟು ಕಲಿಸದಿದ್ದರೆ ನಾನು ೪ ಅಕ್ಷರ ಕಲಿಯುತ್ತಿರಲಿಲ್ಲ. ನನ್ನನ್ನು ತಿದ್ದಿ ತೀಡಿದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಹೈಸ್ಕೂಲ್ ನ ಶಿಸ್ತಿನ ಸಿಪಾಯಿ ಎಂದೇ ಹೆಸರಾಗಿದ್ದ ಆ ಹೆಡ್ ಮಾಸ್ಟರ್ ಶ್ರೀ.ಬಿ.ಎಂ.ಹನುಮನಾಳ ಗುರುಗಳಿಗೂ ಎಲ್ಲ ಶಿಕ್ಷಕರಿಗೂ ನಮನಗಳು. ಇತ್ತೀಚೆಗೆ ಆ ಹೆಡ್ ಮಾಸ್ಟರ್ ರನ್ನು ಕಂಡಾಗ ನನ್ನ ಕಣ್ಣುಗಳು ತೇವಗೊಂಡವು. ಅವರಿಗೆ ಭಕ್ತಿಪೂರ್ವಕವಾಗಿ ನಮಸ್ಕರಿಸಿದೆ. ಅವರೂ ಸಹ ಅಷ್ಟೇ ಪ್ರೀತಿಯಿಂದ ಮಾತನಾಡಿಸಿ ಆಶೀರ್ವದಿಸಿದರು. ”
- ಸಿದ್ಧರಾಮ ಕೂಡ್ಲಿಗಿ
