ಮಹಿಳಾ ದಿನಾಚರಣೆ ವಿಶೇಷತೆ

ಮತ್ತೊಂದು ವಿಚಾರವೆಂದರೆ ಪ್ರತಿವರ್ಷವೂ ಮಹಿಳಾ ದಿನಾಚರಣೆಯು ಒಂದೊಂದು ಘೋಷವಾಕ್ಯವನ್ನು ಹೊಂದಿರುತ್ತದೆ. ಹಾಗೆಯೇ 2024ರ ಘೋಷವಾಕ್ಯ “Inspire Inclusion ” ಎಂದರೆ ಮಹಿಳೆಯರ ಬೆಳವಣಿಗೆ ಜೊತೆಗೆ ಆಯಾ ದೇಶದ ಪ್ರಗತಿ ಕೂಡ ಹೆಚ್ಚು ವೇಗ ಪಡೆದು ಕೊಳ್ಳುತ್ತದೆಂಬುದಾಗಿದೆ. ಶಿಕ್ಷಕಿ ಅನ್ಸರಿ ಮೊಯಿನ್. ಡಿ ಅವರ ಲೇಖನಿಯಲ್ಲಿ ಮಹಿಳಾ ದಿನಾಚರಣೆ, ತಪ್ಪದೆ ಮುಂದೆ ಓದಿ…

Happy Women’s Day ” ಎಂಬ ಶುಭ ಹಾರೈಕೆಯು ಕೇಳಿದಾಕ್ಷಣ ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಹೆಣ್ಣು ಪುರುಷರಿಗೆ ಸರಿಸಮನಾಗಿ ಸ್ವಾವಲಂಬಿ ಜೀವನ ನಡೆಸಬಲ್ಲಷ್ಟು ಸಮರ್ಥಳಾಗಿದ್ದಾಳೆಂಬ ಹೆಮ್ಮೆ ನಮಗಾಗುತ್ತದೆ. ಮರುಕ್ಷಣವೇ ಪ್ರಚಲಿತವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು, ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ವೇಶ್ಯಾವಾಟಿಕೆ, ಅತ್ಯಾಚಾರ, ಕೊಲೆ ಪ್ರಕರಣಗಳು ಕಂಡಾಗ ಮಹಿಳೆಯರಿಗೆ ನಿಜವಾದ ಸಬಲತೆ ಹಾಗೂ ಸ್ವಾತಂತ್ರ್ಯ ಸಿಕ್ಕಿದೆಯೇ? ಎಂಬ ಅನುಮಾನ ಮೂಡಿ ಒಮ್ಮೆಲೆ ಮಹಿಳಾ ದಿನಾಚರಣೆಗೆ ಅರ್ಥವಿದೆಯೇ ಎಂಬ ಪ್ರಶ್ನಾರ್ಥಕ ಭಾವನೆ ಮನಸ್ಸನ್ನು ಕಾಡುತ್ತದೆ.

ವಾಸ್ತವವಾಗಿ ಇದು ಹಬ್ಬವೇನೂ ಅಲ್ಲ. ನ್ಯೂಯಾರ್ಕಿನಲ್ಲಿ ಕ್ಲಾರಾಜೆಟ್ ಕಿನ್ ಎಂಬ ಮಹಿಳಾ ಕಾರ್ಮಿಕ ಸಮಾನ ಕೆಲಸಕ್ಕಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯಗಳನ್ನು ಪಡೆಯಲಿಕ್ಕಾಗಿ ತಿಂಗಳುಗಟ್ಟಲೆ ಹೋರಾಟ ನಡೆಸಿ ಗೆಲುವು ಸಾಧಿಸಿದ ಒಂದು ಸ್ಮರಣೀಯ ದಿನ. ವಿಶ್ವಸಂಸ್ಥೆ 1975 ರಲ್ಲಿ ಈ ದಿನವನ್ನು ‘ವಿಶ್ವ ಮಹಿಳಾ ದಿನ’ ಎಂದು ಘೋಷಿಸಿತು. ಇದು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ದುಡಿದ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹಿಸುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಯ ಸಂಕೇತ ದಿನವಾಗಿದೆ. ಅಷ್ಟೇ ಅಲ್ಲದೆ ಲಿಂಗ ಸಮಾನತೆಯ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸುವುದಕ್ಕೂ ಸಹಕಾರಿಯಾಗಿದೆ.

ಮಹಿಳಾ ದಿನಾಚರಣೆಯೆಂದರೆ ಕೇವಲ ವರ್ಷಕ್ಕೊಮ್ಮೆ ಕಾರ್ಯಕ್ರಮ ಆಚರಿಸಿ ಮುಗಿಸುವಂತಹದ್ದಲ್ಲ. ಮಹಿಳಾ ಸಬಲೀಕರಣದ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ಮುನ್ನಡೆದಿದ್ದರೂ ಸಹ ಕೇವಲ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಸಾಧನೆಗೈದಿದ್ದಾರೆ. ಇದಕ್ಕೆ ಕಾರಣಗಳು ಹಲವು. ವಿವಿಧ ಅವಕಾಶಗಳು ಇದ್ದರೂ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಲ್ಲಿ ವಿಫಲರಾಗುವುದು, ಮಾಹಿತಿಯ ಕೊರತೆ, ಆಯ್ಕೆಯಲ್ಲಿನ ಗೊಂದಲ, ಹೆಣ್ಣು ಮುನ್ನಡೆಯಲು ಎದುರಾಗುವಂತಹ ಕೌಟುಂಬಿಕ ಹಾಗೂ ಸಾಮಾಜಿಕ ಅಡೆತಡೆ ,ಉದ್ಯೋಗ ಕ್ಷೇತ್ರಗಳಲ್ಲಿ ಲಿಂಗ ತಾರತಮ್ಯ, ನೈತಿಕ ಮೌಲ್ಯಗಳ ಕುಸಿತ, ಇತ್ಯರ್ಥವಾಗದೆ ನ್ಯಾಯಾಲಯಗಳಲ್ಲಿ ಉಳಿದಿರುವ ಅತ್ಯಾಚಾರ ಪ್ರಕರಣಗಳು, ಮಹಿಳಾ ಮೀಸಲಾತಿ, ಜಾಗತಿಕ ಮಟ್ಟದ ತಿಳುವಳಿಕೆ ಕೊರತೆ ಹೀಗೆ ಹಲವಾರು ಕಾರಣಗಳು ಹೆಣ್ಣನ್ನು ಹಿಂಜರಿಯುವಂತೆ ಕಾಲೆಳೆಯುತ್ತಿವೆ.

ಹಾಗಂತ ಪುರುಷರನ್ನು ನಿಯಂತ್ರಿಸಬೇಕೆಂದೇನಿಲ್ಲ. ಇಬ್ಬರಲ್ಲೂ ಧನಾತ್ಮಕ ಪೈಪೋಟಿ ಇರಬೇಕು. ಪುರುಷರಿಗೆ ಸರಿಸಮಾನವಾದ ಸಾಧನೆಯ ಸ್ಪರ್ಧಿಯಾಗಬೇಕು.

ಮಹಿಳಾ ದಿನಾಚರಣೆಗೂ ಬಣ್ಣಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ನೇರಳೆ, ಹಸಿರು ಮತ್ತು ಬಿಳಿ ಬಣ್ಣಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ನೇರಳೆ ನ್ಯಾಯ ಹಾಗೂ ಘನತೆ, ಹಸಿರು ಭರವಸೆ ಮತ್ತು ಬಿಳಿ ಶಾಂತಿಯನ್ನು ಪ್ರತಿನಿಧಿಸುತ್ತವೆ.

ಮತ್ತೊಂದು ವಿಚಾರವೆಂದರೆ ಪ್ರತಿವರ್ಷವೂ ಮಹಿಳಾ ದಿನಾಚರಣೆಯು ಒಂದೊಂದು ಘೋಷವಾಕ್ಯವನ್ನು ಹೊಂದಿರುತ್ತದೆ. ಹಾಗೆಯೇ 2024ರ ಘೋಷವಾಕ್ಯ”Inspire Inclusion ” ಎಂದರೆ ಮಹಿಳೆಯರ ಬೆಳವಣಿಗೆ ಜೊತೆಗೆ ಆಯಾ ದೇಶದ ಪ್ರಗತಿ ಕೂಡ ಹೆಚ್ಚು ವೇಗ ಪಡೆದುಕೊಳ್ಳುತ್ತದೆಂಬುದಾಗಿದೆ.

ಕಾನೂನುಗಳು ಕಾನೂನಾಗಿಯೇ ಉಳಿಯದೆ ಆಚರಣೆಗೆ ಬರಬೇಕು. ಅಂದು ಮಾತ್ರ ಹೆಣ್ಣು ಮಕ್ಕಳನ್ನು ಪ್ರೀತಿಯಿಂದ ಗೌರವಿಸುವುದಲ್ಲ.ಪ್ರತಿದಿನವೂ ಹೆಣ್ಣುಮಕ್ಕಳ ದಿನದಂತೆ ಅವರನ್ನು ಗೌರವದಿಂದ ಕಾಣಬೇಕಿದೆ. ‘ಯತ್ರನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ತತ್ರ ದೇವತಾಃ’ ಎಂಬ ಮಾತು ಮಾತಾಗಿಯೇ ಉಳಿಯದೇ ಅದನ್ನು ಆಚರಣೆಗೆ ತರಬೇಕೆಂದರೆ ಮಹಿಳೆಯರ ಸಾಧನೆಗೆ ಕುಟುಂಬ, ಸಮಾಜ ಹಾಗೂ ಪುರುಷರ ನೈತಿಕ ಬೆಂಬಲವೂ ಸಿಗಬೇಕು. ಹೀಗಾದಲ್ಲಿ ಮಾತ್ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣವಾಗುತ್ತದೆ.

ಮಹಿಳೆಯರಿಗೆ ‘ಮಹಿಳಾ ದಿನಾಚರಣೆ’ಯ ಶಭಾಶಯಗಳು…….


  • ಅನ್ಸರಿ ಮೊಯಿನ್. ಡಿ – ಶಿಕ್ಷಕರು, ಗೌರಿಬಿದನೂರು.
0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW