ವಿಶ್ವ ಹಸಿವಿನ ದಿನವಂತೆ ! – ರೂಪಶ್ರೀ ಎಂ

ಯಾರಿಗೆ ಏನು ಕೊಡಲಾಗದಿದ್ದರೂ ಇನ್ನೊಬ್ಬರ ಅನ್ನವನ್ನ ಕಸಿದುಕೊಳ್ಳಬೇಡಿ. ಹಳಸಿದ ಅನ್ನವನ್ನು ದಾನದ ಹೆಸರಲ್ಲಿ ನೀಡಬೇಡಿ. ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆದು ಮುಂದೆ ಆಸ್ಪತ್ರೆ, ಚಿಕಿತ್ಸೆ ಎಂತಲೋ, ಯಾರಿಂದಲೋ ಮೋಸವೋ, ಒಟ್ಟಿನಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ. ರೂಪಶ್ರೀ ಎಂ ಅವರ ಹಸಿದ ಹೊಟ್ಟೆಯ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ನೀವೆಷ್ಟು ಸಿರಿವಂತರು ? ಎಷ್ಟೇ ಸಿರುವಂತರಾದರೂ ನಾವು ಇನ್ನೊಬ್ಬರ ಮೇಲೆ ಅವಲಂಬಿಗಳೇ ! ಹೊಟ್ಟೆಗೆ ತಿನ್ನುವುದು ಅನ್ನವೇ ! ಬಯಕೆಗಳಿಗೆ ಮಿತಿ ಇಲ್ಲ, ; ಊಟವನ್ನು ಮಾತ್ರವೇ ಹೊಟ್ಟೆ ತುಂಬಿದಾಕ್ಷಣ ಸಾಕು ಎನ್ನುವುದು…. ಮನುಷ್ಯಕುಲ!

ಅಮ್ಮಾ….. ಹಸಿವು ಅಮ್ಮಾ.. ಯಾರಾದರೂ ಹೀಗೆ ಹೇಳಿದರೆ ನಿಮ್ಮ ಜೀವ ಸುಮ್ಮನೇ ಸಹಿಸುತ್ತದೆಯೇನು?

ಯಾರಿಗೆ ಏನು ಕೊಡಲಾಗದಿದ್ದರೂ ಇನ್ನೊಬ್ಬರ ಅನ್ನವನ್ನ ಕಸಿಯಬೇಡಿ. ಅಥವಾ ಬಡವರ ತುತ್ತಿನ ಚೀಲ ತುಂಬಿಸಿ ಕೊಳ್ಳಬಹುದಾದ ಕೆಲಸ ಕಿತ್ತುಕೊಳ್ಳಬೇಡಿ . ಅರೆಹೊಟ್ಟೆ ಬಡಿಸಬೇಡಿ… ಹೊಟ್ಟೆ ತುಂಬಾ ಬಡಿಸಿಬಿಡಿ.. ತೃಪ್ತಿ ಆಗುವಷ್ಟು.

ನೀವು ತಿನ್ನಲಾಗದಂಥ ಅನ್ನವನ್ನು ಇನ್ನೊಬ್ಬರಿಗೆ ಕೊಡಬೇಡಿ. ( ಹಳಸಿದ್ದು, ಏನಾದ್ರೂ ಬಿದ್ದಿರೋದು) ಅದನ್ನುಣ್ಣುವವನು ನಿಮ್ಮ ಕುತಂತ್ರ ಅರಿಯದಿರಬಹುದು. ಆದರೆ ವಿಶ್ವವ್ಯಾಪಿ ಭಗವಂತ ಎಲ್ಲವನ್ನೂ ನೋಡುತ್ತಿರುತ್ತಾನೆ.. ನಮ್ಮ ಕರ್ಮಕ್ಕೆ ತಕ್ಕ ಫಲ ನಿಶ್ಚಿತ.

ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆದು ಮುಂದೆ ಆಸ್ಪತ್ರೆ, ಚಿಕಿತ್ಸೆ ಎಂತಲೋ, ಯಾರಿಂದಲೋ ಮೋಸವೋ, ಒಟ್ಟಿನಲ್ಲಿ ನಷ್ಟ ಕಟ್ಟಿಟ್ಟ ಬುತ್ತಿ. ನೀವು ಮಾಲೀಕರೇ ಆಗಿರಿ, ಮಲತಾಯಿಯೇ ಆಗಿರಿ, ಮಗ / ಮಗಳೇ ಆಗಿರಿ, ಅತ್ತೆ / ಸೊಸೆಯೇ ಆಗಿರಿ , ಯಾರೇ ಆಗಿರಿ ನೀವು ಮೊದಲು ಮನುಷ್ಯರು ಎಂಬುದನ್ನು ಮರೆಯದಿರಿ , ಸಿರಿವಂತಿಕೆಯಿಂದಾಗಿ ಮನುಷ್ಯ ಸಂಬಂಧಗಳಿಂದ ದೂರ ಉಳಿಯಬೇಡಿರಿ.

ಬರೀ ಭಿಕ್ಷುಕರು ಮಾತ್ರವಲ್ಲ, ತಾಯಿ ಇಲ್ಲದ ತಬ್ಬಲಿ ಮಕ್ಕಳು ಸಾಕಷ್ಟು ಕೆಲಸ ಮಾಡಿ ಮಲತಾಯಿ ಊಟಕ್ಕೆ ಕರೆಯುತ್ತಾಳೆ ಎಂದು ಬೆನ್ನಿಗಂಟಿದ ಹೊಟ್ಟೆ ಹಿಡಿದು ತಮ್ಮನೋ / ತಂಗಿಯೋ ಅಮ್ಮನ ಕೈತುತ್ತು ತಿನ್ನುವುದನ್ನು ಆಸೆಗಣ್ಣಿನಿಂದ ನೋಡುತ್ತಾ ನಿಂತಿರಬಹುದು !

ನಿಮ್ಮ ಮನೆಯ ಮಗ / ಮಗಳು ಕೆಲಸ ಹುಡುಕುವ ಪ್ರಯತ್ನದಲ್ಲಿ ಸೋತು ನಿರಾಸೆಯಲ್ಲಿ ಮನೆಗೆ ಹಸಿದು ಬಂದಿರಬಹುದು. ಅಸಹಾಯಕ ದೀನ ಮನೆ ಬಾಗಿಲಿಗೆ ಬಂದಿರಬಹುದು,
ನಿಮ್ಮ ಗಂಡನೋ/ ಹೆಂಡತಿಯೋ ದುಡಿದು ಬಂದು ತುಂಬಾ ಹಸಿವಾಗುತ್ತಿದೆ ಎಂದರೂ, ಕೇಳಿಸಿತೋ ಇಲ್ಲವೋ ಎಂಬಂತೆ ತಮ್ಮದೇ ಲೋಕದಲ್ಲಿ ಮುಳುಗಿದ್ದರೆ ಅವರಿಗೆ
ಹೇಗೆನಿಸಿರಬಹುದು ಯೋಚಿಸಿ. ಎಲ್ಲೋ ನಿಮ್ಮ ಸಂಭ್ರಮದ ಕೂಟದಲ್ಲಿ ಹಸಿದ ಜೀವ ಉಣ್ಣಲು ಮುಜುಗರದಿಂದ ಕಾದು ನಿಂತಿರಬಹುದು. ಮದುವೆ ಛತ್ರದ ಹೊರಗೆ ಸ್ವಾಭಿಮಾನಿ ವೃದ್ಧ ದಂಪತಿಗಳು ಇರಬಹುದು.. ಮಗ – ಸೊಸೆ ಜೊತೆಗೆ ಜಗಳವಾಗಿ ವೃದ್ಧೆಯೊಬ್ಬಳು ಹಸಿದಿರಬಹುದು.

ಬೇಡವಾದ ಜೀವವೊಂದನ್ನು ಆಸ್ಪತ್ರೆಗೆ ಸೇರಿಸಿ ತಿರುಗಿಯೂ ನೋಡದ ಬಂಧುಗಳು ಇಂದು ಬಂದಾರೂ, ನಾಳೆ ಬಂದಾರೋ ಎಂದು ಕಾದು ಸುಣ್ಣವಾಗಿ ಅಕ್ಕ ಪಕ್ಕದ ಬೆಡ್ ಮೇಲಿನ ರೋಗಿಗಳ ಬಂಧುಗಳು ತರುವ ಬುತ್ತಿಯನ್ನು ನೋಡಿ ನಿಟ್ಟುಸಿರು ಬಿಡುತ್ತಿರುವ ಜೀವ ಇರಬಹುದು. ಹೀಗೆ ನಮ್ಮ ಸುತ್ತಲೂ ತುತ್ತು ಅನ್ನಕ್ಕಾಗಿ ಪರಿತಪಿಸುವ ಜೀವಗಳು ಇವೆ. ಜೊತೆಗೆ ತಿನ್ನುವ ಪ್ರತಿ ತುತ್ತಿನಲ್ಲೂ ಕಣ್ಣೀರಿನ ಹನಿ ಸೇರಿಸಿ ಉಣ್ಣುವಂತೆ ಚುಚ್ಚುಮಾತು , ಹಂಗಿನ ಮಾತು ಎಂದಿಗೂ ಬೇಡ. ಕಾಲಚಕ್ರ ಉರುಳುತ್ತಿರುತ್ತದೆ ಎಂಬುದು ನೆನಪಿರಲಿ.

ಪ್ರತಿ ಹೊಟ್ಟೆಯನ್ನೂ ತುಂಬಿಸುವ ರೈತ ಎಂದಿಗೂ ” ನಾನು ಬೆಳೆದ ಪದಾರ್ಥ, ಇಡೀ ಜಗತ್ತು ಬದುಕಿರುವುದು ನನ್ನಿಂದ ” ಎಂದು ಎಂದಿಗೂ ಅನ್ನದೇ ನಿಸ್ವಾರ್ಥವಾಗಿ ಭೂತಾಯಿ ಸೇವೆ ಮಾಡುತ್ತಿರುವಾಗ, ನಾವೇಕೆ ನಾನು ! ನನ್ನಿಂದ ! ಎನ್ನಬೇಕು ಅಲ್ವೇ ? ಅಷ್ಟಕ್ಕೂ ನಮ್ಮದು ಎನ್ನುವುದು ಇಲ್ಲಿ ಏನೂ ಇಲ್ಲ, ಕೊಡಲು ನಾವು ಯಾರು ? ಏನನ್ನು ಕೊಡಲು ಸಾಧ್ಯ? ಎಲ್ಲವನ್ನೂ ನಾವು ಭಗವಂತನಿಂದ ಪಡೆದದ್ದು…

ಹಸಿದವರಿಗೆ ಸ್ವಾಭಿಮಾನ ತುಸು ಹೆಚ್ಚೇ ಇರುತ್ತದೆ. ಕೇಳುವ ಮೊದಲೇ ಅವರ ಭಾವನೆಯನ್ನು ತಿಳಿದು ಸ್ಪಂದಿಸಿದರೆ ನಾವು ಕಳೆದುಕೊಳ್ಳುವುದೇನೂ ಇಲ್ಲ…


  • ರೂಪಶ್ರೀ ಎಂ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading