ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ

ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ಲೇಖಕಿ ಶ್ರೀಮತಿ ಸುಮಾ ಕಿರಣ್ ರವರು. ಈಗಾಗಲೇ ನಾಲ್ಕೈದು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಮೂಲತಃ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದವರು. ಯುವ ಲೇಖಕರನ್ನು ಓದುಗರಿಗೆ ಪರಿಚಯಿಸುತ್ತಿರುವ ಸಾಹಿತ್ಯಲೋಕದ ಮತ್ತೊಬ್ಬ ಕವಿ ನಾರಾಯಣಸ್ವಾಮಿ (ನಾನಿ) ಅವರು. ಅವರ ಲೇಖನಿಯಲ್ಲಿ ಯುವ ಸಾಹಿತಿಗಳ ಪರಿಚಯವಾಗುತ್ತಿದೆ ತಪ್ಪದೆ ಓದಿ…

ಸಾಹಿತ್ಯದ ಆಭಿರುಚಿ ಬೆಳಸಿಕೊಂಡು ಬರಹವನ್ನು ಬರೆಯಬೇಕು ಎಂದು ಹಂಬಲವಿದ್ದರೆ ಸಾಲದು ಅದಕ್ಕೆ ಸತತವಾದ ಪ್ರಯತ್ನವನ್ನು ಮಾಡಬೇಕು. ಓದು ಬರಹವನ್ನು ಪ್ರೀತಿಸಬೇಕು. ಆಗ ನಮಗೆ ಬರವಣಿಗೆಯು ಒಲಿಯಬಹುದು. ಹಲವು ವರುಷಗಳ ಹಿಂದೆಯಷ್ಟೆ ಸಾಹಿತ್ಯದ ಬರವಣಿಯಲ್ಲಿ ತೊಡಗಿಸಿಕೊಂಡು ಹಲವಾರು ಸಾಹಿತ್ಯದ ಗ್ರೂಪ್‌ ಗಳಲ್ಲಿ ಬರಹಗಾರಳಾಗಿ ಸೇರಿ ತನ್ನ ಸತತ ಪರಿಶ್ರಮದಿಂದ ಕವಿತೆ ಕಥೆ ಲೇಖನಗಳನ್ನು ಬರೆಯುವುದನ್ನು ಕಲಿತು ಹಲವು ಸಾಹಿತ್ಯದ ಗ್ರೂಪ್ ಗಳಲ್ಲಿ ನಿವಾ೯ಹಕಿಯಾಗಿ ಗುರುತಿಸಿಕೊಂಡು, ನಾಲ್ಕೈದು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ತನ್ನನ್ನು ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಳ್ಳುತ್ತಿರುವ ಲೇಖಕಿ ಶ್ರೀಮತಿ ಸುಮಾ ಕಿರಣ್ ರವರು.

ಶ್ರೀಮತಿ ಸುಮಾ ಕಿರಣ್ ರವರು ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದಲ್ಲಿ ಶ್ರೀ ನಾಗಭೂಷಣಯ್ಯ ಮತ್ತು ಶ್ರೀಮತಿ ಶಾಂತಿ ಇವರ ಒಡಲಿನಲ್ಲಿ ಜನಿಸಿದರು. ತನ್ನ ಬಾಲ್ಯದ ವಿಧ್ಯಾಭ್ಯಾಸವನ್ನು ಬಸ್ರೂರಿನ ಹಿಂದೂ ಶಾಲೆ, ಮಾಧ್ಯಮಿಕ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆಯಲ್ಲಿ ಹಾಗೂ ಶ್ರೀ ಶಾರದಾ ಕಾಲೇಜ್ ನಲ್ಲಿ ಪದವಿ ಪೂವ೯ ಶಿಕ್ಷಣವನ್ನು ಮುಂದುವರಿಸಿ, ಅದೇ ಕಾಲೇಜಿನಲ್ಲಿ ಪದವಿಯನ್ನು ಕೂಡ ಪಡೆದರು. ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾನಸಗಂಗೋತ್ರಿ ಮೈಸೂರು ಇಲ್ಲಿ ಮುಗಿಸಿ, ಶಿಕ್ಷಕರ ತರಬೇತಿ ಶಿಕ್ಷಣವನ್ನು ಡಾ. ಟಿ. ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿಯಲ್ಲಿ , ಬಿ. ಎಡ್ ನ್ನು ಮುಗಿಸಿರುತ್ತಾರೆ. ಪ್ರಸ್ತುತ ಪೇಜಾವರ ಮಠದ ಶಾಲೆಯಾದ ಆನಂದ ತೀರ್ಥ ವಿದ್ಯಾಲಯದಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಉಡುಪಿಯಲ್ಲಿ ವಾಸವಾಗಿದ್ದಾರೆ.

ಶ್ರೀಮತಿ ಸುಮಾ ಕಿರಣ್ ರವರು ಕನ್ನಡದ ಶಿಕ್ಷಕಿಯಾಗಿ ವೃತ್ತಿಯಲ್ಲಿ ತೊಡಗಿಸಿಕೊಂಡ ನಂತರ ನಾಲ್ಕೈದು ವಷ೯ಗಳಿಂದ ಕನ್ನಡ ಸಾಹಿತ್ಯದ ಬರವಣಿಗೆಯ ಕಡೆ ಮನಸ್ಸು ಮಾಡಿ ಕನ್ನಡ ಸಾಹಿತ್ಯವನ್ನು ಪ್ರವೃತ್ತಿಯಾಗಿ ಬೆಳಸಿಕೊಂಡು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಕಥೆ, ಕವನ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸ. ಸಾಮಾಜಿಕ, ವೈಚಾರಿಕ, ಪ್ರಚಲಿತ, ಶಿಶು ಬೋಧಕ, ಐತಿಹಾಸಿಕ, ಭಾವನಾತ್ಮಕ, ಪರಿಸರ ಸಂಬಂಧಿ, ಚಿಂತನಾತ್ಮಕ, ಹಾಸ್ಯ ಹಾಗೂ ಕೌಟುಂಬಿಕ ವಿಷಯಗಳನ್ನು ಆಧರಿಸಿ ಅನೇಕ ಲೇಖನ/ಕವನ/ಕಥೆಗಳನ್ನು ಬರೆದಿದ್ದಾರೆ. “ಹಂಫ್ರಿ ಡೇವಿ” ಎಂಬ ಇಂಗ್ಲೀಷ್ ಕವನ ಸಂಕಲನವನ್ನು ಕನ್ನಡಕ್ಕೆ ಅನುವಾದ ಮಾಡಿ ಅನುವಾದಕರಾಗಿ ಕೂಡ ಗುರುತಿಸಿಕೊಂಡಿದ್ದಾರೆ.

ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರವಾದ “ಶಕುನಿ” ಯ ಆತ್ಮಕಥನವನ್ನು ಬರೆದು ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಯಶಸ್ವಿಯಾಗಿದ್ದಾರೆ. ಇದುವರೆಗೂ ಹಲವು ಪತ್ರಿಕೆ ನಿಯತಕಾಲಿಕೆಗಳಿಗೆ ಬರೆದ ಹಲವು ಅಂಕಣಗಳನ್ನು ಒಗ್ಗೂಡಿ “ಮನದ ಮಾತು – ಹಲವು ಬಗೆ” ಎಂಬ ಪುಸ್ತಕವನ್ನು ಪ್ರಕಟಿಸಿ ಓದುಗರ ಮನವನ್ನು ಸೆಳೆದಿದ್ದಾರೆ. ಇತ್ತೀಚೆಗೆ ಅವರ ನಾಲ್ಕನೇ ಕೃತಿಯು ಕಿರುಗಥೆಗಳ ಸಂಕಲನ “ಕಥಾಬಿಂದು” ಬಿಡುಗಡೆ ಮಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಬಹುಮುಖ ಪ್ರತಿಭೆಯ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.

ಶ್ರೀಮತಿ ಸುಮಾ ಕಿರಣ್ ರವರು ಬರೀ ಶಿಕ್ಷಕಿ ಬರಹಗಾತಿ೯ ಯಾಗಿ ಗುರುತಿಸಿಕೊಳ್ಳದೇ ಹಲವು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ನೇಮಕವಾಗಿ ಕನ್ನಡ ಕಟ್ಟುವ ಬೆಳೆಸುವ ಕಾಯಕದಲ್ಲೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರು ಇದರ ಉಡುಪಿ ತಾಲೂಕು ಘಟಕದ ಕಾರ್ಯದರ್ಶಿಯಾಗಿ. ಉಡುಪಿ ಬರಹಗಾರ ವೇದಿಕೆಯ ಗೌರವ ಸಲಹೆಗಾರರಾಗಿ, ದಾವಣಗೆರೆಯ ಪತ್ರಿಕೆಯಾದ “ಜನಮಿಡಿತದ” ಉಡುಪಿ ಜಿಲ್ಲಾ ಭಾಗದ ಪ್ರತಿನಿಧಿ ಹಾಗೂ ಅಂಕಣಕಾರ್ತಿಯಾಗಿ ಕಾಯ೯ವನ್ನು ನಿವ೯ಹಿಸುತ್ತಿದ್ದಾರೆ.

ಇವರು ಮೂಡ್ಕೇರಿ ಬಸ್ರೂರು ಎಂಬ ತಮ್ಮೂರಿನಲ್ಲಿ ಕಾವೇರಿ ಸಾಹಿತ್ಯ ವೇದಿಕೆಯೆಂಬ ಕನ್ನಡದ ಸಂಘಟನೆಯನ್ನು ಕಟ್ಟಿಕೊಂಡು ಇದರ ಕಾರ್ಯದರ್ಶಿಯಾಗಿರುತ್ತಾರೆ. ಈ ವೇದಿಕೆ ಮೂಲಕ ಸಾಹಿತ್ಯ ಕೃತಿ ಮುದ್ರಣ ಹಾಗೂ ಬಿಡುಗಡೆಗೆ ಧನಸಹಾಯ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡುತ್ತಾ ಸಮಾಜ ಸೇವಾ ಕಾಯ೯ಗಳನ್ನು ಮಾಡುತ್ತಾ ಗುರುತಿಸಿಕೊಂಡಿದ್ದಾರೆ.

ಶ್ರೀಮತಿ ಸುಮಾ ಕಿರಣ್ ರವರ ಕನ್ನಡ ಬರವಣಿಗೆ ಮತ್ತು ಅವರ ಸಮಾಜ ಸೇವಾ ಕಾಯ೯ಗಳನ್ನು ಗುರುತಿಸಿ ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು ಇವರಿಗೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಧಾರವಾಡ ಘಟಕವು “ನಾಡೋಜ ಪಾಟೀಲ ಪುಟ್ಟಪ್ಪ ಸಾಹಿತ್ಯ ಪ್ರಶಸ್ತಿ”. ಬೆಳಕು ಶೈಕ್ಷಣಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಟ್ರಸ್ಟ್(ರಿ), ಬೆಂಗಳೂರು ಇವರು “ಜಾನ್ಸಿ ರಾಣಿ ಲಕ್ಷ್ಮೀ ಬಾಯಿ” ರಾಜ್ಯ ಪ್ರಶಸ್ತಿ, ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯು “ಅಕ್ಕಮಹಾದೇವಿ” ಪ್ರಶಸ್ತಿ, ಚಂದನ ಸಾಹಿತ್ಯ ವೇದಿಕೆಯು “ಚಂದನ ಸೌರಭ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ರಾಜ್ಯಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಹಲವಾರು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹಲವಾರು ಸಾಹಿತ್ಯ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಕೂಡ ಮೆಚ್ಚುಗೆ ಗಳಿಸಿರುತ್ತಾರೆ.

ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ಕನ್ನಡಮ್ಮನ ಮಡಿಲು ಸೇರಿಸಿಸಲು ಯೋಜನೆ ಹಾಕಿಕೊಂಡು ಸಿದ್ದತೆಯಲ್ಲಿ ತೊಡಗಿರುವ ಶ್ರೀಮತಿ ಸುಮಾ ಕಿರಣ್ ರವರಿಗೆ ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನಷ್ಟು ಕೃತಿಗಳನ್ನು ಹೊರತರಲಿ ಅವು ಧಮನಿತರ, ರೈತರ, ಮಹಿಳೆಯರ ಪರವಾದ ಕಾವ್ಯಸಂವೇದನೆಯನು ಚಿಂತಿಸುವ ಕೃತಿಗಳಾಗಲಿ, ಕನ್ನಡ ಸಾಹಿತ್ಯದ ಬರವಣಿಗೆಯಿಂದ ಅವರಿಗೆ ಗೌರವ ಪ್ರಶಸ್ತಿ ಪುರಸ್ಕಾರಗಳು ಸಿಗಲಿ ಎಂದು ಆಶಿಸುವೆ ಶುಭವಾಗಲಿ.


  • ನಾರಾಯಣಸ್ವಾಮಿ .(ನಾನಿ) – ವಕೀಲರು, ಲೇಖಕರು, ಬಂಡಹಟ್ಟಿ ಮಾಸ್ತಿ ಮಾಲೂರು ತಾಲ್ಲೂಕು

0 0 votes
Article Rating

Leave a Reply

4 Comments
Inline Feedbacks
View all comments

[…] ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸ… […]

[…] ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸ… […]

[…] ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸ… […]

[…] ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸ… […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

4
0
Would love your thoughts, please comment.x
()
x
Aakruti Kannada

FREE
VIEW