ಹಳ್ಳಿಯ ವಿವಿಧ ವಿನೋಧಗಳು – ಅರವಿಂದ ಕುಲಕರ್ಣಿ

ಹಳ್ಳಿಯ ಜೀವನವೇ ಅಂದ ಚಂದ. ಅದರಲ್ಲಿಯೂ ಬಾಲ್ಯದ ನೆನಪುಗಳು ಸುಮಧುರ. ಹಳ್ಳಿ ಹಾಗೂ ಬಾಲ್ಯದ ನೆನಪುಗಳು ಸೇರಿದಾಗ ಮರೆಯಲಾಗದ ಸಿಹಿ ಸಿಹಿ ನೆನಪುಗಳನ್ನು ಕೊಡುತ್ತವೆ. ಆ ನೆನಪಿನ ಬುತ್ತಿ ಕೊನೆಯವರೆಗೂ ಸಂತೋಷದ ಟಾನಿಕ್ ಆಗಿರುತ್ತದೆ. ಅರವಿಂದ ಕುಲಕರ್ಣಿ ಅವರು ಬರೆದಿರುವ ತಮ್ಮ ಬಾಲ್ಯದ ಜೊತೆಗಿನ ಹಳ್ಳಿಯ ಸೊಗಡನ್ನು ತಪ್ಪದೆ ಮುಂದೆ ಓದಿ…

ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಒಂದು ಕುತೂಹಲ ಪ್ರಸಂಗ. ಆಗ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಅನೇಕ ಜನ ಭಿಕ್ಷುಕರು ವಿವಿಧ ವೇಷ ಭೂಷಣಗಳನ್ನು ಹಾಕಿಕೊಂಡು ಭಿಕ್ಷಕ್ಕೆ ಬರುತ್ತಿದ್ದರು. ಅವರಲ್ಲಿ ವೇಷಗಾರರು, ಹೆಳವರು, ದುರುಗ್ ಮೂರಗಿಯವರು ಮತ್ತು ಸುಡುಗಾಡು ಸಿದ್ಧರು , ಮಂಗ್ಯಾನ ಅಡಿಸುವವರು, ಕರಡಿ ಕುಣಿಸುವವರು ಇತ್ಯಾದಿ.ಈ ವೇಷಗಾರರು ಕೊರಳಲ್ಲಿ ಒಂದು ಪಿಯಾನೋ ಹಾಕಿಕೊಂಡು ಸುಂದರವಾಗಿ ಹಾಡುವವರು.”ಜಯತು ಜಯ ವಿಠಲ” ಅಂತಾ ಅವರು ರಾಗವಾಗಿ ಹಾಡುವುದನ್ನು ಕೇಳುವುದೇ ಒಂದು ಸೊಗಸು.

ಫೋಟೋ ಕೃಪೆ : ondeinda

ಇನ್ನು ಈ ಸುಡುಗಾಡು ಸಿದ್ಧರು ಬಂದೆಂದರೆ ಕನ್ನಡ ಶಾಲೆಗೆ ಹೋಗುವ ನಾವೆಲ್ಲ ಸಹಪಾಠಿಗಳು ಅವರ ಆಟವನ್ನು ಅತ್ಯಂತ ಕುತೂಹಲದಿಂದ ನೋಡುತ್ತಿದ್ದೇವು.ಅವರ ಬಣ್ಣ ಬಣ್ಣದ ಅಂಗಿ ಮೇಲೆ ಒಂದು ರುಮಾಲು, ಮುಖ, ಗಲ್ಲದ ಮೇಲೆ ಗಂಧ ಹಣೆಯ ಮೇಲೆ ಹಳದಿ ಕುಂಕುಮ,ಮತ್ತು ಬಿಳೀ ಬಣ್ಣ ದಿಂದ ಚಿತ್ರ ವಿಚಿತ್ರವಾಗಿ ಬರೆದುಕೊಂಡು ಬರುತ್ತಿದ್ದರು. ಬಗಲಲ್ಲಿ ಒಂದು ಬಣ್ಣ ಬಣ್ಣದ ಜೋಳಿಗೆ. ಕೈಯಲ್ಲಿ ಒಂದು ಬಿಳಿ ಶಂಖ ಅದನ್ನು ಮನೆಯ ತಲ ಬಾಗಿಲಿಗೆ ಬಂದು ಜೋರಾಗಿ ಉದುತ್ತ ಬರುವವರು. ಈ ವಿಚಿತ್ರ ವೇಷದ ಅಗಂತುಕನನ್ನು ನೋಡಿ ಊರ ನಾಯಿಗಳು ವವ್ವ, ವಾವ್ವ ಎಂದು ಬೆನ್ನು ಹತ್ತುತ್ತಿದ್ದವು. ಅವುಗಳನ್ನು ನಿವಾರಿಸುತ್ತ ಅವನು ಮುಂದೆ ಸಾಗುತ್ತಿದ್ದನು ಮತ್ತು ಅವರ ಬಗ್ಗೆ ಒಂದು ಪ್ರತೀತಿ ಅವರು “ರಾತ್ರಿ 1 ಗಂಟೆಗೆ ಊರಲ್ಲಿ ತಿರುಗುತ್ತಾರೆ ಮತ್ತು ಅವರಿಗೆ ಹಕ್ಕಿಗಳ ಭಾಷೆ ತಿಳಿಯುತ್ತದೆ. ಅವುಗಳ ಮಾತು ಕೇಳಿ ಊರಿನ ಜನರ ಭವಿಷ್ಯ ಹೇಳುತ್ತಾರೆ.” ಎನ್ನುವದು ನಮ್ಮ ಗೆಳೆಯರೆಲ್ಲ ಮಾತಾಡುತ್ತಿದ್ದೆವು. ಇದು ಆಗ ಬಾಲ್ಯದಲ್ಲಿ ಇಂತಹ ವಿಷಯದಲ್ಲಿ ನಾವು ಕಣ್ಣರಳಿಸಿ ಕೇಳುತ್ತಿದ್ದೆವು .ಇದು ನಿಜವಲ್ಲ ಎನ್ನುವದು ಈಗ ಗೊತ್ತಿದೆ.

ಹೀಗೆ ಮನೆ ಮನೆಗೆ ಹೋಗುವ ಸುಡುಗಾಡು ಸಿದ್ದ ಒಬ್ಬ ಒಂದು ಮನೆಯ ಮುಂದೆ ನಿಂತು ತನ್ನ ಶಂಖ ಧ್ವನಿ ಮಾಡಿದ. ಅದೊಂದು ಖಾಲಿ ಮನೆ. ಆ ಮನೆಯಲ್ಲಿ ನಾಲ್ಕಾರು ಜನರು ಖಾಲಿ ಮಂದಿ ಇಸ್ಪೀಟ್ ಆಡುವವರು. ರಮ್ಮಿ ಆಟ, ಸಂಜಿವರೆಗೂ ಆಡಿದರೂ ಗೆಲವು ಸೋಲು 40 – 50 ರೂಪಯಿ ಒಳಗೇ. ಖಾಲಿ ಹೊತ್ತು ಕಳೆಯುವ ಜನ.ಇವರು ಹೊಲಕ್ಕೆ ಹೋಗುವವರು ಅಲ್ಲ ಮತ್ತು ಬೇರೆ ಕೆಲಸವೂಇಲ್ಲ.

ಎಲ್ಲ ಒಕ್ಕಲುತನದ ಕೆಲಸ ಆಳುಗಳ ಹಿರೆತನದಲ್ಲಿ ಇವರು ಹೊಲಕ್ಕೆ ಹೋಗುವದಿಲ್ಲ ಅಂದ ಮೇಲೆ ಉತ್ಪನವು ಅಷ್ಟಕ್ಕಷ್ಟೇ. ಒಂದು ಸಣ್ಣ ಗುಡಾರ ಹಾಸಿ ಕೊಂಡು ಇವರು ಕುಡ್ರುವವರು. ಎಲೆ ಅಡಿಕೆ ತಂಬಾಕು ಭರಪೂರ. ಈ ಸುಡುಗಾಡು ಸಿದ್ಧ ಆ ಮನೆಗೆ ಬಂದ ಆ ಸಮಯದಲ್ಲಿ ಅಲ್ಲಿ ಬಾಗಿಲ ಹತ್ತಿರ ಒಂದು ಆರಾಮ ಕುರ್ಚಿ ಅಲ್ಲಿ ಒಬ್ಬ ಸಭ್ಯ ಗ್ರಹಸ್ಥರು ಅಪರ ವಯಸ್ಕರು. ಸುಮಾರು ಎಪ್ಪತ್ತರ ಹರೆಯದ , ಬಿಳಿ ಧೋತರ ಸ್ಥಳೀಯ ಸಿಂಪಿಗನು ಹೊಲಿದ ಬಿಳಿ ಒಳಂಗಿ , ಹಳೆಯ ಕಾಲದ ಕನ್ನಡಕ ಹಾಕಿಕೊಂಡು ಒಂದು ಸಂಯುಕ್ತ ಕರ್ನಾಟಕ ಪೇಪರ ಓದುತ್ತ ಕೂತಿದ್ದರು. ಅವರು ಆಟದಲ್ಲಿ ಭಾಗವಸುತ್ತಿದ್ದಿಲ್ಲ.

ಫೋಟೋ ಕೃಪೆ : google

ಈ ಸುಡುಗಾಡು ಸಿದ್ಧ ಅಲ್ಲಿಗೆ ಬಿಕ್ಷಕ್ಕಾಗಿ ಬಂದ . ಅವನು ಯಥಾ ಪ್ರಕಾರ ತನ್ನ ಶಂಖ ಊದಿ , ಕೈ ಚಳಕಿನಿಂದ ಜಾದೂ ಮಾಡಿ ತೋರಿಸುತ್ತಿದ್ದ. ಅವನ ಕೈಯಲ್ಲಿ ಕರಿ ಬಣ್ಣದ ಲಿಂಬೆ ಗಾತ್ರದ ಗುಂಡು ಇತ್ತು. ಅದನ್ನು ಅವ ನುಂಗುವುದು. ಮತ್ತು ಒಂದು ತರಹ ದ್ವನಿ ಮಾಡಿ . ಅದನ್ನು ಬಾಯಿಯಿಂದ ತೆಗೆಯುವುದು.ಮತ್ತೊಂದು ಸಲ ಕೈಯಲ್ಲಿ ಆ ಗುಂಡು ಹಿಡಿದು ಮುಷ್ಟಿ ಮಾಡಿ “ಇದು ಈಗ ನೋಡಿ ಇದು ಮಾಯ ಆಯ್ತು. ” ನೋಡಿ !ನೋಡಿ! ಇದನ್ನು ಬಾಯಿಯಿಂದ ತೆಗೆಯುತ್ತೇನೆ ಅಂತಾ ಹೇಳುತ್ತ ಮತ್ತೆ ದ್ವನಿ ಮಾಡಿ ಬಾಯಿಯಿಂದ ತೆಗೆದು ತೋರಿಸುವುದು.

“ನನ್ನ ಜಾದೂ ನೋಡಿ !ನೋಡಿ !ಎಂದು ಹೇಳುತ್ತ ತನ್ನ ಬಿಳಿ ಶಂಖ ಉದುತ್ತಿದ್ದ.”

ಅವನಿಗೆ ಇವರಲ್ಲಿ ಯಾರಾದರೂ ನನ್ನ ಜಾದೂ ಮೆಚ್ಚಿ ಸ್ವಲ್ಪ ಇನಾಮು(ಪುಡಿ ಕಾಸು) ಕೊಡುತ್ತಾರೆ ಅಂತ ಆಶೆ. ಆದರೆ ಇಸ್ಪೀಟು ಆಟದಲ್ಲಿ ಮಗ್ನ ಆಗಿದ್ದ ಅವರು

” ಓ ನನಗೆ ಜೋಕರ್ ಬಂತು, ನಂದು ಸೀಕ್ವೆನ್ಸ್ ಆತು.,ನನ್ನದು ಇನ್ನೂ ಕೌಂಟ್ ಐತಿ. “ಅಂತ ಇದ ಮಾತಿನಲ್ಲಿ ಅವರು. ಸಿದ್ದ ಏನೆಲ್ಲ ಜಾದೂ ಮಾಡಿದರೂ ಇವನ ಕಡೆ ಇಸ್ಪೀಟ್ ಆಡುವವರು ಹೊರಳಿ ಸುದ್ದ ನೋಡಲಿಲ್ಲ. ಇದನ್ನೆಲ್ಲ ನೋಡಿದ ಆರಾಮ ಖುರ್ಚಿ ಯಲ್ಲಿ ಪೇಪರ ಓದುತ್ತ ಕುಳಿತ ಗ್ರಹಸ್ಥರು ಈ ಸುಡುಗಾಡು ಸಿದ್ಧನ ಕಡೆ ನೋಡಿ” ಏ ಅವರೆಲ್ಲಿ ನಿನ್ನ ಕಡೆ ಎಲ್ಲಿ ನೋಡಬೇಕೋ ತಮ್ಮಾ ಅವರು ಆಟದಲ್ಲಿ ಮಗ್ನ ಅಗ್ಯಾರ. ನೀನು ಒಂದು ಸಣ್ಣ ಲಿಂಬೆ ಗಾತ್ರದ ಗುಂಡ ನುಂಗಿ ತೊರಸತ್ತಿದ್ದಿ , ತಮ್ಮಾ ಅವರು ಎಂಟು ,ಎಂಟು ಎತ್ತಿನ ಕಮತಾ ನುಂಗ್ಯಾರ. ಹತ್ತು ಹತ್ತು ಕೂರ್ಗಿ ಹೊಲಾ ನುಂಗ್ಯಾರ.ಎರಡ್ಯಾರಡು ಹೆಂಡರನ್ನ ನುಂಗ್ಯಾರ.

ಜೋಡ್ ಗ್ವಾದ್ಲಿಮನಿ ನುಂಗ್ಯಾರ. ಅಷ್ಟೆಲ್ಲ ನುಂಗಿ ನೀರ ಕುಡದು ಗಪ್ಪನ ಕುಂತಾರ. ಆದರ ನೀ ಒಂದು ಸಣ್ಣ ಗುಂಡ ನುಂಗಿ ಮತ್ತ ತೊರಸತಿ ಅದನ್ನ. ಅವರು ಅದನ್ನೆಲ್ಲ ನುಂಗಿ ಆದನ್ನ ತೋರಸವಲ್ಲರು. ನಿನ್ನಕ್ಕಿಂತ ದೊಡ್ಡ ಜಾದೂಗಾರ ಅದಾರ ಅವರು ನೀ ಮತ್ತೆಲ್ಲರ್ ನಿನ್ನ ಆಟ ತೋರಿಸು. ನಾಲ್ಕು ದುಡ್ಡು ಬಂದೀತು ಎಂದು ತಿಳಿ ಹೇಳಿದರು. ಸಿದ್ದ ಇಲ್ಲಿ ಏನು ಗೀಟು ದಿಲ್ಲ ಅಂತಾ ಕಾಲು ಕಿತ್ತ. ನಾವು ಇದನ್ನು ಕೇಳಿ ನಕ್ಕದ್ದೆ ನಕ್ಕದ್ದು.


  • ಅರವಿಂದ ಕುಲಕರ್ಣಿ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW