ನಿನ್ನ ತುಳಿಯುವವರು ತುಳಿಯುತಲಿರಲಿ… ಅಂಜದೆ ಅಳುಕದೆ ಅಳದೆ ಮುನ್ನುಗ್ಗಿಬಿಡು…ರಶ್ಮಿಪ್ರಸಾದ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ತಪ್ಪದೆ ಮುಂದೆ ಓದಿ….
ನೀ ಪ್ರಯತ್ನಿಸಬೇಕೆಂಬ ಜಿದ್ದಿಗೆಬಿದ್ದು
ಹೋರಾಡುವಾಗ ಒಂಟಿಯಾಗಿಬಿಡು
ಏಕೆಂದರೆ ಇಲ್ಲಿ ಪ್ರೋತ್ಸಾಹಿಸುವರಿಗಿಂತ
ನಿನ್ನ ಹೆದರಿಸಿ ಹಿಮ್ಮೆಟ್ಟಿಸುವವರೆ ಹೆಚ್ಚು.!
ನೀ ಜಯಿಸಲೇಬೇಕೆಂದು ಬಯಕೆಯಿದ್ದು
ಬಲದಿ ನಿಂತಾಗ ಕುರುಡನಾಗಿಬಿಡು
ಏಕೆಂದರೆ ಇಲ್ಲಿ ಭರವಸೆಯಿಡುವವರಿಗಿಂತ
ಭ್ರಮೆ ಹುಟ್ಟಿಸಿ ಬೀಳಿಸುವವರೆ ಹೆಚ್ಚು.!
ನೀ ಗುರಿ ತಲುಪಬೇಕೆಂಬ ಹಠಕೆಬಿದ್ದು
ನಡೆಯುವಾಗ ಕಿವುಡನಾಗಿಬಿಡು
ಏಕೆಂದರೆ ಇಲ್ಲಿ ದಾರಿ ತೋರುವವರಿಗಿಂತ
ನಿನ್ನ ದಿಕ್ಕು ತಪ್ಪಿಸುವವರೆ ಹೆಚ್ಚು.!
ನೀ ಸಾಧಿಸಲೇಬೇಕೆಂಬ ತಪಸ್ಸಿಗಿಳಿದು
ಕುಳಿತಿರುವಾಗ ಮೂಕನಾಗಿಬಿಡು
ಏಕೆಂದರೆ ಇಲ್ಲಿ ಕೇಳುವವರಿಗಿಂತ
ನಿನ್ನ ಕುಹಕದಿ ಕಡೆಗಣಿಸುವವರೆ ಹೆಚ್ಚು.!
ನೀ ಬೆಳಕಾಗಬೇಕೆಂದು ಹಂಬಲಿಸುತ
ಬೆಳಗುವಾಗ ಜಾಗೃತನಾಗಿಬಿಡು
ಏಕೆಂದರೆ ಇಲ್ಲಿ ಬತ್ತಿಯಾಗುವವರಿಗಿಂತ
ನಿನ್ನ ಬುಡಕೆ ಬತ್ತಿಯಿಡುವವರೆ ಹೆಚ್ಚು.!
ನಿನ್ನ ತುಳಿಯುವವರು ತುಳಿಯುತಲಿರಲಿ
ನಿತ್ಯ ಹಳಿಯುವವರು ಹಳಿಯುತಿರಲಿ
ಅಂಜದೆ ಅಳುಕದೆ ಅಳದೆ ಮುನ್ನುಗ್ಗಿಬಿಡು
ಬಾಳಶೃಂಗ ಉತ್ತುಂಗಗಳ ಗಮ್ಯ ತಲುಪಿಬಿಡು.!
- ರಶ್ಮಿಪ್ರಸಾದ್ (ರಾಶಿ)
