ಮೂಲರಾಮನ ಮೂರ್ತಿ ಹರಣದೊಳಗಿಂಬಿಟ್ಟು, ನಿತ್ಯ ಪೂಜೆಯ ಮಾಡೊ ಯತಿವರ್ಯನೆ…ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ತರಣಿಯೆಳೆ ಕಿರಣಗಳು ಧರೆಯನ್ನು ಚುಂಬಿಸುವ
ಮೊದಲೆದ್ದು ಕರಮುಗಿವೆ ರಾಘವೇಂದ್ರ
ಸರಿದಾರಿ ತೋರುತ್ತ ಕರಪಿಡಿದು ಕಾಪಿಡುವೆ
ಬೇಡುವಾ ಮೊದಲೆ ನೀ ಯತಿವರೇಂದ್ರ
ಕರೆದಾಗ ಬಳಿಬಂದು ದುಗುಡವನು ಸರಿಸುತ್ತ
ದುರಿತಗಳ ಘನವಾಗಿ ಕಳೆದುಬಿಡುವೆ
ಪರಿಪರಿಯ ವೇದನೆಯನೋಡಿಸುತ ಪೊರೆಯುತಿಹೆ
ಭವರೋಗ ಹರನೀನು ಕಲ್ಪತರುವೆ
ಮೂಲರಾಮನ ಮೂರ್ತಿ ಹರಣದೊಳಗಿಂಬಿಟ್ಟು
ನಿತ್ಯ ಪೂಜೆಯ ಮಾಡೊ ಯತಿವರ್ಯನೆ
ಪಾಲಿಸುವೆ ಶರಣಾಗಿ ಬಂದವರನನವರತ
ಕರುಣರಸ ಪರಿಪೂರ್ಣ ಸುಗುಣೇಂದ್ರನೆ
ಯತಿಕುಲೋತುಂಗ ನೀನೆಂದು ನಾ ನಂಬುತ್ತ
ಶಿರಬಾಗಿ ವಂದಿಸುವ ನಾನು ಶರಣೆ
ಗತಿನೀನೆಯೆಂದವರ ಗುರಿಯೆಡೆಗೆ ಸಾಗಿಸುವ
ಭಕ್ತ ವತ್ಸಲ ಗುರುವೆ ತೋರು ಕರುಣೆ
- ಬಿಟ್ಟೀರ ಚೋಂದಮ್ಮ – ಬೆಂಗಳೂರು.
