ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ

‘ಬಾಲಿ’ ಎಂದೇ ಜನಪ್ರಿಯರಾಗಿದ್ದ ‘ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ’ ಇತ್ತೀಚಿನ ದಿನಗಳಲ್ಲಿ ಜೀ ಟಿವಿಯ ‘ಸರಿಗಮ’ದ ತೀರ್ಪುಗಾರರ ಮಂಡಳಿಯಲ್ಲಿ ಕಾಣಿಸಿಕೊಂಡಿದ್ದರು, ಈಗ ಅವರ ನೆನಪು ಮಾತ್ರ. ಅವರ ಕುರಿತು ಖ್ಯಾತ ಪತ್ರಕರ್ತರಾದ ಎನ್.ಎಸ್.ಶ್ರೀಧರ ಮೂರ್ತಿ ಅವರು ಲೇಖನವನ್ನು ತಪ್ಪದೆ ಮುಂದೆ ಓದಿ…

ಚಲನಚಿತ್ರ ಮತ್ತು ಸುಗಮ ಸಂಗೀತದ ಕುರಿತು ಅಪಾರ ಅರಿವನ್ನು ಹೊಂದಿದ್ದ ಅವರು ಈ ಕ್ಷೇತ್ರದ ತಿಳಿವಳಿಕೆಯ ಮಟ್ಟಿಗೆ ನನಗೆ ಗುರುಗಳೇ! ಒಂದು ಕಾಲದಲ್ಲಿ ಅವರು ಪ್ರತಿನಿತ್ಯವೂ ನಮ್ಮ ಮನೆಗೆ ಬರುತ್ತಿದ್ದರು. ಸಂಗೀತದ ಹಲವು ಸೂಕ್ಷ್ಮಗಳನ್ನು ಅಧಿಕೃತವಾಗಿ ಹೇಳುವುದರ ಜೊತೆಗೆ ಸಂಗೀತ ಇತಿಹಾಸದ ಹಲವು ಪುಟಗಳನ್ನು ತೆರೆದಿಡುತ್ತಿದ್ದರು. ಸಂಗೀತಕ್ಕೆ ಸಂಬಂಧಿಸಿದಂತೆ ಅವರು ಒಂದು ರೀತಿಯಲ್ಲಿ ‘ನಡೆದಾಡುವ ವಿಶ್ವಕೋಶ’ವೇ ಆಗಿದ್ದರು. ನನ್ನ ಅನೇಕ ಲೇಖನಗಳ ಮತ್ತು ಪುಸ್ತಕಗಳ ಹಿಂದೆ ಅವರ ಸಲಹೆ ಮಾರ್ಗದರ್ಶನಗಳಿವೆ.

ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ಪಾಲಕ್ಕಾಡ್ ರಾಘವೇಂದ್ರ ವಾರಿಯರ್ ಅವರಿಂದ ಮೃದಗಂ ಕಲಿಕೆ ಆರಂಭಿಸಿದ್ದ ಬಾಲಿ ಕ್ರಮೇಣ ಡೋಲಕ್, ಮೃದಗಂ, ತಬಲಾ ಎಲ್ಲಾ ಪರ್ಕಷನ್ ವಾದ್ಯಗಳಲ್ಲಿಯೂ ಪರಿಣಿತಿಯನ್ನು ಪಡೆದು ‘ರಿದಂ ಕಿಂಗ್’ ಎನ್ನಿಸಿ ಕೊಂಡರು. ಪಾಶ್ಚಾತ್ಯ ವಾದ್ಯಗಳಾದ ಡ್ರಮ್ಸ್, ಬ್ಯಾಂಗೋ, ಕಾಂಗೋಸ್ ಗಳಲ್ಲಿ ಕೂಡ ಅವರಿಗೆ ಅಸಾಧಾರಣ ಪರಿಣಿತಿ ಇತ್ತು. ಸುಗಮ ಸಂಗೀತದ ಹಿರಿಯ ಕಲಾವಿದರಾದ ಬಾಳಪ್ಪ ಹುಕ್ಕೇರಿ, ಪಿ.ಕಾಳಿಂಗ ರಾವ್, ಮೈಸೂರು ಅನಂತ ಸ್ವಾಮಿ, ಸಿ.ಅಶ್ವತ್ಥ್ ಮೊದಲಾದವರ ಸಂಯೋಜನೆಯ ವಾದ್ಯಗೋಷ್ಟಿಗಳನ್ನು ಅವರು ನಿರ್ವಹಿಸಿದ್ದರು. ಕನ್ನಡದ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ‘ನಿತ್ಯೋತ್ಸವ’ದಿಂದಲೂ ಅವರು ಸಕ್ರಿಯರಾಗಿದ್ದರು. ಜಿ.ಕೆ.ವೆಂಕಟೇಶ್, ವಿಜಯಭಾಸ್ಕರ್, ಎಂ.ರಂಗರಾವ್, ಡಾ.ರಾಜೀವ ತಾರಾನಾಥ್, ಅಶ್ವತ್ಥ್-ವೈದಿಯವರು ಸಂಯೋಜಿಸಿದ್ದ ಚಿತ್ರಗೀತೆಗಳಿಗೆ ಬಾಲಿ ಆರೇಂಜರ್ ಆಗಿ ಕೆಲಸ ಮಾಡಿದ್ದರು. ಎಷ್ಟೋ ಸುಂದರ ಗೀತೆಗಳು ಅವರ ಕಲ್ಪನೆಯಲ್ಲಿ ಮೂಡಿದ್ದೂ ಇದೆ. ಶಂಕರ್ ನಾಗ್ ಅವರ ‘ನೀಲಿಕಣ್ಣಿನ ಹುಡುಗ’ನಾಗಿದ್ದ ಬಾಲಿ ಸಂಕೇತ್ ರೂಪಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಅವರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗುವ ಅವಕಾಶ ದೊರಕಿದ್ದು ಕಡಿಮೆ. ರಾಷ್ಟ್ರಪ್ರಶಸ್ತಿ ವಿಜೇತ ‘ಮೌನಿ’ ಅವರು ಸಂಗೀತ ನೀಡಿದ ಪ್ರಮುಖ ಚಿತ್ರ. ಹಿನ್ನೆಲೆ ಸಂಗೀತದ ಬಗ್ಗೆ ಅಡಿಯೋ-ವಿಡಿಯೋ-ಓದುವ ಹೀಗೆ ಮೂರು ಅಯಾಮದ ಪುಸ್ತಕವನ್ನು ಬರೆದಿದ್ದ ಬಾಲಿ ತಮ್ಮ ‘ರಮ್ಯ ಕಲ್ಚರಲ್ ಅಕಾಡಮಿ’ಯ ಮೂಲಕ ನೂರಾರು ಹೊಸ ಕಲಾವಿದರನ್ನು ರೂಪಿಸಿದ್ದರು. ಮೈಲುಗಲ್ಲಾಗುವ ಕಾರ್ಯಕ್ರಮಗಳನ್ನು ಮಾಡಿದ್ದರು.

ಇತ್ತೀಚಿನ ದಿನಗಳಲ್ಲಿ ಜೀ ಟಿವಿಯ ‘ಸರಿಗಮ’ದ ತೀರ್ಪುಗಾರರ ಮಂಡಳಿಯಲ್ಲಿ ಕಾಣಿಸಿ ಕೊಂಡಿದ್ದ ಬಾಲಿ, ಅದರ ಸೆಟ್ನಲ್ಲಿ ಆಗಾಗ ಸಿಕ್ಕುತ್ತಿದ್ದರು.ಹೋಗಿ ಬನ್ನಿ ಸಾರ್, ನೀವು ಕೊಟ್ಟು ಹೋದ ಸಂಗೀತದ ಜ್ಞಾನ ಭಂಡಾರವನ್ನು ನಾನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಮಾಡುತ್ತೇನೆ.


  • ಎನ್.ಎಸ್.ಶ್ರೀಧರ ಮೂರ್ತಿ – ಲೇಖಕರು, ಪತ್ರಕರ್ತರು, ಉಪನ್ಯಾಸಕರು , ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading