ಹಿಂಗಾರಿ ಬೆಳೆ ಹೊತ್ತಿರೊ ಭೂತಾಯಿಗೆ ಚರಗ ಸಮಪ೯ಣೆ, ಎಳ್ಳ ಅಮವಾಸ್ಯೆ ಎಂದರೆ ಆಹಾರ ಸಂಸ್ಕೃತಿಗೆ ಪ್ರತೀಕವಾದ ಹಬ್ಬ.ಬಾಲ್ಯದ ನೆನಪುಗಳನ್ನು ಹೊತ್ತು ತರುವ ಈ ಹಬ್ಬ ಇಂದು ಸ್ಟೇಟಸ್ ನಲ್ಲಿ ನೋಡಿ ಖುಷಿ ಪಡಬೇಕಾಗಿದೆ. ಯುವ ಲೇಖಕಿ ಸೃಷ್ಠಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ರೈತರು ವಿಶೇಷವಾಗಿ ಉತ್ತರ ಕರ್ನಾಟಕದ ರೈತರು ವರ್ಷಪೂರ್ತಿ ಕಾದು ಕೊನೆಗೆ ವಿಚ್ರಂಬಣೆಯಿಂದ ಆಚರಿಸುವ ಹಬ್ಬ ಎಳ್ಳು ಅಮಾವಾಸ್ಯೆ. ಹಿಂಗಾರಿ ಬೆಳೆಗಳನ್ನು ಹೊತ್ತು ನಿಂತ ಭೂತಾಯಿಗೆ ಎಳ್ಳು ಬೆಲ್ಲವನ್ನು ನೈವೇದ್ಯ ಆಗಿ ಚಿಮ್ಮಿಸುವ ಹಬ್ಬ. ರೈತರ ಕುಟುಂಬದಲ್ಲಿ ಬೆಳೆದಿರೋ ನನಗೆ ಚಿಕ್ಕಂದಿನಿಂದಲೂ ಹಬ್ಬದ ವಿಜ್ರಂಭಣೆಯೆಂದ ತಕ್ಷಣ ನೆನಪಿಗೆ ಬರುವುದು ಎಳ್ಳು ಅಮಾವಾಸ್ಯೆ. ಹಬ್ಬದ ಆಚರಣೆ ಒಂದೇ ದಿನವಿದ್ದರೂ ವಾರದ ಮೊದಲೆ ಹಬ್ಬದ ತಯಾರಿ ಜೋರಾಗಿರುತ್ತದೆ. ಮಹಾಭಾರತದ ಹಿನ್ನೆಲೆ ಇರುವ ಈ ಹಬ್ಬದ ದಿನವೆಂದು
ಪಾಂಡವರು ಹಾಗೂ ಕೌರವರು ನಡುವೆ ನಡೆದ ಕುರುಕ್ಷೇತ್ರದಲ್ಲಿ ತೀರಿಹೋದ ಅವರ ಬಂಧು ಮಿತ್ರರಿಗೆ ಪಿಂಡ ಪ್ರದಾನ ಮಾಡುವ ದಿನವೆಂದು ಕೂಡ ಹೇಳುತ್ತಾರೆ.
ಎಳ್ಳ ಅಮವಾಸ್ಯೆ ಎಂದರೆ ಆಹಾರ ಸಂಸ್ಕೃತಿಗೆ ಪ್ರತೀಕವಾದ ಹಬ್ಬ. ಹಬ್ಬದ ಹಿಂದಿನ ದಿನ ಸಂಜೆ ಎಲ್ಲ ತರಹದ ತರಕಾರಿಗಳನ್ನು ತೊಳೆದು ಸೋಸಿ ಜೋಡಿಸಿಕೊಳ್ಳುತ್ತೇವೆ. ಹಬ್ಬದ ದಿನ ನಸುಕು ಮುಂಜಾನೆಯಲ್ಲಿ ಅಮ್ಮ ಅಜ್ಜಿ ಇಬ್ಬರು ಸೇರಿ ಸಜ್ಜೆ ಹಾಗೂ ಜೋಳದ ಕಡಬು, ಬಜ್ಜಿ (ಎಲ್ಲ ತರಹದ ತರಕಾರಿಯಿಂದ ತಯಾರಿಸಿದ ಪಲ್ಲೆ) ಕುಂಬಳಕಾಯಿ ಬರ್ತಾ, ಪುಂಡಿಪಲ್ಯ, ಕಾಳಪಲ್ಯ, ಶೇಂಗಾ ಹೋಳಿಗೆ, ಅಂಬಲಿ ಹೀಗೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಈ ಕಡೆ ಅಪ್ಪ, ದೊಡ್ಡಪ್ಪ ಎಲ್ಲರೂ ಸೇರಿ ಎತ್ತುಗಳಿಗೆ ಗೊಂಡೆ, ಹಣೆಕಟ್ಟುಗಳಿಂದ ಅಲಂಕರಿಸಿ ಅವುಗಳ ಕೊರಳಿಗೆ ಗೆಜ್ಜೆ ಕಟ್ಟಿ ರಿಬಿನ್ ಹಾಗೂ ಬಲೂನುಗಳಿಂದ ಎತ್ತಿನ ಗಾಡಿಯನ್ನು ಕೂಡ ಸಿಂಗರಿಸುತ್ತಾರೆ. ಅಕ್ಕಪಕ್ಕದ ಮನೆಯವರೆಲ್ಲರೂ ಸೇರಿ ಒಬ್ಬರೇ ಹಿಂದೆ ಒಬ್ಬರು ಎತ್ತಿನಗಾಡಿಯಲ್ಲಿ ಕೂತು ಹಾಡುತ್ತ ಕೂಗುತ್ತಾ ನಮ್ಮ ನಮ್ಮ ಹೊಲ, ಗದ್ದೆಗಳ ಕಡೆ ಪ್ರಯಾಣ ಬೆಳೆಸುತ್ತೇವೆ. ಪ್ರತಿದಿನಕ್ಕಿಂತ ಈ ದಿನ ಮಾತ್ರ ನಮ್ಮ ಹೊಲ ವಿಶೇಷವಾಗಿ ಕಾಣುತ್ತದೆ. ಹೊಲದಲ್ಲಿ ಇರುವ ಲಕ್ಷ್ಮಿಗೆ ನೈವೇದ್ಯ ನೀಡುವುದರಿಂದ ಪೂಜೆ ಪ್ರಾರಂಭವಾದರೆ ಅಲ್ಲಿಂದ ಹಿರಿಯರ ಸಮಾಧಿಗಳಿಗೆ, ಹೊಲದಲ್ಲಿರುವ ಬಾವಿ ಕೆರೆಗಳಿಗೆ, ನೈವೇದ್ಯ ಅರ್ಪಿಸುತ್ತೇವೆ.
ಅಪ್ಪನ ಜೊತೆ ಸೇರಿ ಜೋಳದ ಹೊಲದಲ್ಲಿ ಚರಗು ಚೆಲ್ಲುವುದೆಂದರೆ ಅದೇನೋ ಖುಷಿ. ಅಕ್ಕ ಪಕ್ಕ ಹೊಲದವರ ಜೊತೆ ಸ್ಪರ್ಧಿಗಳ ಹಾಗೆ ಜೋರಾಗಿ ‘ ಸಜ್ಜಿ ರೊಟ್ಟಿ ಜವಳಿ ಕಾಯಿ ಚಾಂಗೆ ಬಲೊ’ ಅಂತ ಕಿರುಚುತ್ತ ಎಳ್ಳು ಬೆಲ್ಲ ಹಾಗೂ ತಂದಿರುವ ನಾನಾ ಬಗೆಯ ಖಾದ್ಯಗಳನ್ನು ಚರಗ ಚೆಲ್ಲುತ್ತಿದ್ದೇವೆ. ಹೀಗೆ ಮಾಡುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ ಅದೇನೆಂದರೆ ಸಿಂಗಾರಿ ಬೆಳೆಗಳಾದ ಜೋಳ ಕಡಲೆಗಳಿಗೆ ಹುಳ ಬಿದ್ದು ಬೆಳೆ ನಾಶವಾಗಬಾರದು ಎಂದು ಚರಗ ಚೆಲ್ಲಿದಾಗ ಅದನ್ನು ತಿನ್ನಲು ಹುಳಗಳು ಆಚೆ ಬಂದಾಗ ಅವುಗಳನ್ನು ಹಕ್ಕಿಗಳು ತಿಂದು ಹುಳಗಳನ್ನು ನಾಶ ಮಾಡುತ್ತವೆ ಎಂಬುವುದು ನಂಬಿಕೆ. ಕೊನೆಯದಾಗಿ ಅಕ್ಕಪಕ್ಕ ಹೊಲದವರು ಕುಟುಂಬದವರು ಎಲ್ಲರೂ ಸೇರಿ ಎಳ್ಳ ಅಮಾವಾಸ್ಯೆಯ ಭರ್ಜರಿ ಭೊಜನವನ್ನು ಸವಿದು ಹರಟೆ ಹೊಡೆಯುತ್ತಾ ಸಂಜೆ ಎತ್ತಿನಗಾಡಿಯಲ್ಲಿ ಬರುವಾಗ ಕಬ್ಬು, ಕಡಲೆ, ಬಾರೆಹಣ್ಣು, ತೆಗೆದುಕೊಂಡು ಬರುತ್ತೇವೆ. ಹೊಸದಾಗಿ ಆಚರಿಸುವವರಿಗೆ ಕೇಳುವರಿಗೆ ಇದು ತುಂಬಾ ಸರಳ ಹಬ್ಬ ಅನ್ನಿಸಬಹುದು. ಆದರೆ ನಮಗೆ ಇದು ತುಂಬಾ ವಿಶೇಷ . ಚಿಕ್ಕವರಿದ್ದಾಗ ಕೇವಲ ಹಬ್ಬದ ಸಡಗರವಾಗಿತ್ತು. ದೊಡ್ಡವರಾದಾಗ ಇದರ ಮಹತ್ವ ಅರಿತಾಗ ಮನಸ್ಸಿನ ಮೂಲೆಯಲ್ಲಿ ನಾನು ರೈತನ ಮಗಳಂತ ಕೇಳಲು ಖುಷಿಯಾಗುತ್ತಿತ್ತು. ವಿದ್ಯಾಭ್ಯಾಸ, ದುಡಿಮೆ ಅಂತ ಪಟ್ಟಣದತ್ತ ಸೇರಿದೀವಿ. ಅಮ್ಮ ಕಾಲ್ ಮಾಡಿದಾಗ ಎಳ್ಳ ಅಮವಾಸ್ಯೆ ಹಬ್ಬ ಎಂದ ತಕ್ಷಣ ಒಂದು ಕಡೆ ಬಾಲ್ಯದ ನೆನಪುಗಳು ಹಸಿಯಾದರೂ ಇನ್ನೊಂದು ಕಡೆ ಈ ವರ್ಷವೂ ಕೂಡ ಅವರ ಸ್ಟೇಟಸ್ ಗಳನ್ನು ನೋಡಿ ನಾನು ಹಬ್ಬ ಆಚರಿಸುವಂತಾಯಿತು ಅನ್ನುವ ಕೊರಗು ಕಾಡುತ್ತಿದೆ.
- ಸೃಷ್ಠಿ – ವಿಜಯಪುರ
