ಯುದ್ಧವೋ ಬುದ್ಧನೋ…- ರಘುನಾಥ್ ಕೃಷ್ಣಮಾಚಾರ್

ತಾಳ್ತಜೆಯವರು, ಜನಪ್ರಿಯವಾದ ವೈದಿಕ ಧರ್ಮವನ್ನು ಬಿಟ್ಟು ಅಷ್ಟೇನೂ ಜನಪ್ರಿಯವಲ್ಲದ, ವಿಪುಲವಾದ ಮಾಹಿತಿಗಳಿಲ್ಲದ ಬೌದ್ಧ ಸಂಸ್ಕತಿಯನ್ನು ಆರಿಸಿಕೊಂಡದ್ದು, ಅವರ ಕಳೆದ ಎರಡು ದಶಕಗಳಿಗೂ ಮಿಕ್ಕು ಅದರ ಅಧ್ಯಯನದಲ್ಲಿ ತೊಡಗಿಸಿಕೊಂಡದ್ದರ ಫಲ ಈ “ಬೌದ್ಧಾಯನ.” ಈ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ತಾಳ್ತಜೆ ವಸಂತ ಕುಮಾರ್ ಅವರ ಬೌದ್ಧಾಯನ. ಹದಿನೇಳು ಹದಿನೆಂಟನೇ ಶತಮಾನದಲ್ಲಿ ರೂಪುಗೊಂಡ ಭಾರತಾಧ್ಯಯನಕ್ಕೆ ಎರಡು ಮುಖಗಳಿವೆ. ಒಂದು ವೈದಿಕ ಧರ್ಮ, ಸಾಹಿತ್ಯ, ಇತಿಹಾಸ, ಪುರಾಣ, ಶಾಸನ ಇತ್ಯಾದಿಗಳನ್ನು ಭಾರತದ ಅಧಿಕೃತ ಸಂಸ್ಕತಿಗಳೆಂದು ಮಾಡಿದ ವಿದೇಶಿ ವಿದ್ವಾಂಸರ ಅಧ್ಯಯನ. ಎರಡನೆಯದು, ವೈದಿಕೇತರ ಧರ್ಮ, ಸಾಹಿತ್ಯ, ಕಲೆ, ಶಾಸನ ಇತ್ಯಾದಿಗಳನ್ನು ಕೇಂದ್ರವನ್ನಾಗಿನಿಟ್ಟುಕೊಂಡು ಅಭ್ಯಾಸ ಮಾಡಿದ ದೇಶೀ ವಿದ್ವಾಂಸರ ಪ್ರಯತ್ನ.

ಮೊದಲನೆಯದು ಪಡೆದುಕೊಂಡಷ್ಟು ಪ್ರಾಮುಖ್ಯತೆಯನ್ನು ಸಹಜವಾಗಿಯೇ ಎರಡನೆಯದು ಪಡೆದುಕೊಳ್ಳಲಿಲ್ಲ. ಬ್ರಿಟಿಷರ ಒಡೆದು ಆಳುವ ನೀತಿಗೆ ಪೂರಕ ಸಾಮಗ್ರಿಯನ್ನು ಮೊದಲಿನವು ಒದಗಿಸಿದಂತೆ ಎರಡನೆಯದು ಒದಗಿಸಲಿಲ್ಲ. ಏಕೆಂದರೆ ಅವು ವೈದಿಕತೆಯ ವಿರುದ್ಧ ಬಂಡೆದ್ದ ವೇದ ಪ್ರಾಮಾಣ್ಯವನ್ನು ನಿರಾಕರಿಸಿದ ಧರ್ಮಗಳು ಆಗಿದ್ದವು. ಕಳೆದ ಶತಮಾನದಲ್ಲಿನ ಮಾರ್ಕ್ಸವಾದಿ ಪ್ರಭಾವದಿಂದ ಆ ಧರ್ಮಗಳು ವಹಿಸಿದ ಐತಿಹಾಸಿಕ ಪಾತ್ರದ ವಿಶ್ಲೇಷಣೆಗಳು ಮುಖ್ಯವಾದವು. ಇಂತಹವರಲ್ಲಿ ಲಾಲ್ ಜೋಶಿ, ರಾಹುಲ ಸಾಂಕೃತ್ಯಾಯನ, ಡಿ.ಡಿ.ಕೊಸಾಂಬಿ ಮುಂತಾದವರು ಮುಖ್ಯರು.

ತಾಳ್ತಜೆಯವರು, ಜನಪ್ರಿಯವಾದ ವೈದಿಕ ಧರ್ಮವನ್ನು ಬಿಟ್ಟು ಅಷ್ಟೇನೂ ಜನಪ್ರಿಯವಲ್ಲದ, ವಿಪುಲವಾದ ಮಾಹಿತಿಗಳಿಲ್ಲದ ಬೌದ್ಧ ಸಂಸ್ಕತಿಯನ್ನು ಆರಿಸಿಕೊಂಡದ್ದು, ಅವರ ಕಳೆದ ಎರಡು ದಶಕಗಳಿಗೂ ಮಿಕ್ಕು ಅದರ ಅಧ್ಯಯನದಲ್ಲಿ ತೊಡಗಿಸಿಕೊಂಡದ್ದರ ಫಲ ಈ “ಬೌದ್ಧಾಯನ.” ಈ ಕೃತಿಯಲ್ಲಿ ಎಂಟು ಅಧ್ಯಾಯಗಳಿದ್ದು ಮೊದಲ ಭಾಗದಲ್ಲಿ ಅಧ್ಯಯನದ ಅವಶ್ಯಕತೆ, ಸಾಮಗ್ರಿ ಅದರ ಮಹತ್ವಗಳನ್ನು ಸಮರ್ಥವಾಗಿ ಮಂಡಿಸಲಾಗಿದೆ. ಎರಡನೆಯ ಅಧ್ಯಾಯದಲ್ಲಿ ಇಲ್ಲಿಯವರೆಗೆ ಭಾರತದ ನೆಲೆಯಲ್ಲಿ ನಡೆದಿರುವ ಅಧ್ಯಯನದ ಸ್ಥೂಲ ಸಮೀಕ್ಷೆಯನ್ನು ಮಾಡಲಾಗಿದೆ.

ಮೂರನೆಯ ಅಧ್ಯಾಯದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಬೌದ್ಧ ಸಂಸ್ಕತಿಯ ಅಧ್ಯಯನದ ಸಮೀಕ್ಷೆಯನ್ನು ವಿಸ್ತಾರವಾಗಿ ಮಾಡಿ ಅದರ ಮಹತ್ವ ಮತ್ತು ಮಿತಿಗಳನ್ನು ಗುರುತಿಸಲಾಗಿದೆ. ಉದಾಹರಣೆಗೆ, ಗೋವಿಂದ ಪೈ ಅವರು ಬುದ್ಧನ ನಿರ್ವಾಣದ ತೇದಿಯನ್ನು ಕಿಸ್ತ ಪೂರ್ವ 501 ಎಂದು ನಿಗದಿಪಡಿಸಿದ್ದು ಅದು ಇತರ ವಿದ್ವಾಂಸರ ಕಣ್ಣಿಗೆಬೀಳದೇ ಹೋದ ಸಂಗತಿಯನ್ನು ದಾಖಲಿಸಲಾಗಿದೆ. ಅವರು ಸತಿಯ ಪುತ್ರ ಎಂದು ಕರೆದು ಕೊರಗರನ್ನು ಗುರುತಿಸಿರುವುದು ಹಾಗೂ ಅವರು ಮಂಗಳೂರಿನ ಮೂಲ ನಿವಾಸಿಗಳೆಂದು ಅವರ ಮೇಲೆ ಆದ ಬೌದ್ಧಧರ್ಮದ ಪ್ರಭಾವವನ್ನು ಇಲ್ಲಿ ಸಮರ್ಥವಾಗಿ ನಿರೂಪಿಸಲಾಗಿದೆ. ಅದೇ ರೀತಿ ಡಾ. ಎಂ. ಚಿದಾನಂದಮೂರ್ತಿಯವರು ಅಶೋಕನ ಶಿಲಾಶಾಸನಗಳ ನಂತರವೇ ಬೌದ್ಧ ಧರ್ಮವು ಕರ್ನಾಟಕ್ಕೆ ಬಂದಿತು ಎಂಬುದನ್ನು, ಅದಕ್ಕೂ ಮೊದಲೇ, ಸಂಗೀತಿಯಲ್ಲಿ ಭಾಗವಹಿಸಿದ್ದ ಮಹಾ ಶಾಸಿಕರ ಬಗ್ಗೆ ಉಲ್ಲೇಖಗಳನ್ನು ತೋರಿಸಿ ಅವರ ಮಾತುಗಳನ್ನು ಅಲ್ಲಗಳೆದಿದ್ದಾರೆ.

ನಾಲ್ಕನೆಯ ಅಧ್ಯಾಯದಲ್ಲಿ ಕ್ರಿಸ್ತ ಪೂರ್ವ ಮೂರನೆಯ ಶತಮಾನದಿಂದ ಪ್ರಾರಂಭವಾದ ಬೌದ್ಧ ಸಂಸ್ಕತಿ ಕ್ರಿಸ್ತ ಶಕ ಆರನೆಯ ಶತಮಾನದವರೆಗೂ ಪ್ರಕರ್ಷಾವಸ್ಥೆಯಲ್ಲಿದ್ದು ಆನಂತರ ಉಳಿದ ಧರ್ಮಗಳ ಪ್ರಾಬಲ್ಯದಿಂದಾಗಿ ಕ್ರಮೇಣ ಇಳಿಮುಖಾವಸ್ಥೆಯನ್ನು ಎದುರಿಸಬೇಕಾಯಿತು ಎಂಬುದನ್ನು ದಾಖಲಿಸಿದ್ದಾರೆ. ಅಲ್ಲಿಯವರೆಗೆ ಅದು ಪ್ರಬಲವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಆರನೂರಕ್ಕೂ ಮಿಕ್ಕ ಪ್ರಾಕೃತ ಶಾಸನಗಳು ಇಲ್ಲಿ ದೊರೆತಿರುವುದನ್ನು ಆಧಾರವಾಗಿ ಮಂಡಿಸಿದ್ದಾರೆ. ಶಂಕರಾಚಾಯರು ಜೈನರು ಮತ್ತು ಶೈವರು ಬೌದ್ಧಧರ್ಮದ ಅವನತಿಗೆ ಹೇಗೆ ಕಾರಣರಾದರು ಎಂಬುದನ್ನು ಇಲ್ಲಿ ನಿರೂಪಿಸಿದ್ದಾರೆ. ಅಲ್ಲದೆ ಬೌದ್ಧಧರ್ಮದ ಅನಾತ್ಮವಾದ ಮತ್ತು ನಿರೀಶ್ವರವಾದಗಳು ಮುಖ್ಯವಾಗಿ ಜನಪ್ರಿಯತೆಯನ್ನು ಕಳೆದುಕೊಳ್ಳಲು ಕಾರಣವಾದವು. ಅಲ್ಲದೆ, ಆನಂತರದಲ್ಲಿ ಅದರಲ್ಲಿನ ವಿಲಾಸಮುಖಿ ಬೆಳವಣಿಗೆಗಳು ಆಂತರಿಕ ದೌರ್ಬಲ್ಯಗಳು ಬೌದ್ಧಧರ್ಮ ಕಾಲ್ತೆಗೆಯುವುದಕ್ಕೆ ಕಾರಣವಾದುದುನ್ನು ಸ್ಪಷ್ಟಪಡಿಸಿದ್ದಾರೆ.

ಐದನೆಯ ಅಧ್ಯಾಯದಲ್ಲಿ, ಬೌದ್ಧಧರ್ಮದ ವಿಭಿನ್ನನೆಲೆಗಳನ್ನು ವಿವರವಾಗಿ ಮಂಡಿಸಿದ್ದಾರೆ. ಅವುಗಳನ್ನು ರಾಜಕೀಯ ನೆಲೆ, ಸಾಮಾಜಿಕ ನೆಲೆ, ಧಾರ್ಮಿಕ ನೆಲೆ, ಕಲೆಯ ನೆಲೆ, ಸಾಹಿತ್ಯಕ ನೆಲೆಗಳೆಂದು ವಿಂಗಡಿಸಬಹದು. ರಾಜಕೀಯವಾಗಿ ಶಾತವಾಹನರು, ಕದಂಬರು, ಗಂಗರನ್ನು ಪ್ರಭಾವಿಸಿ ಅದರ ಏಳಿಗೆಗೆ ಕಾರಣವಾಗುವಂತೆ ಮಾಡುವಲ್ಲಿ ಪ್ರಧಾನ ಪಾತ್ರವಹಿಸಿದವು. ಇದನ್ನು ಏಳನೆಯ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ ಹೂಯೆನ್ ತ್ಸಾಂಗ್, ಪಾಹಿಯಾನ್, ಇತ್ಸಿಂಗ್ ಮುಂತಾದವರ ಬರಹಗಳನ್ನು ಉದ್ಧರಿಸಿ ವಿಶ್ಲೇಷಿಸಲಾಗಿದೆ.

ಸಾಮಾಜಿಕ ನೆಲೆಯಲ್ಲಿ, ಸಂಘದ ಪರಿಕಲ್ಪನೆಯನ್ನು ಭಾರತೀಯ ಸಂದರ್ಭದಲ್ಲಿ ಮೊದಲಬಾರಿಗೆ ಜಾರಿಗೆ ತಂದು ಅಲ್ಲಿ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಸಿಕೊಟ್ಟದ್ದು ಮಹತ್ವದ ಸಾಧನೆಯೆಂದು ಸರಿಯಾಗಿಯೇ ಗುರುತಿಸಲಾಗಿದೆ. ಧಾರ್ಮಿಕವಾಗಿ ವೈಷ್ಣವಧರ್ಮ ಹೇಗೆ ವಿಷ್ಣುವಿನ ಅವತಾರಗಳ ಒಂಭತ್ತನೆಯ ಅವತಾರವಾಗಿ ಅಳವಡಿಸಿಕೊಂಡದ್ದು ನಾರಾಯಣ ಕಲ್ಪನೆಯನ್ನು ನಿರೂಪಿಸಲಾಗಿದೆ. ಶೈವ ಧರ್ಮದಲ್ಲಿ ಅವಲೋಕಿತೇಶ್ವರ—ತಾರಾ ಜನಪ್ರಿಯವಾಗಿ ರೂಪುಗೊಂಡದ್ದನ್ನು, ಲೋಕೇಶ್ವರ ಪರಿಕಲ್ಪನೆಯು ಬಂದದ್ದು ಇಲ್ಲಿಂದ ಎಂದು, ಜೈನ ತೀರ್ಥಂಕರರ ಪರಿಕಲ್ಪನೆಯ ಹಿಂದೆಯೂ ಬೌದ್ಧಧರ್ಮದ ಪ್ರಭಾವವನ್ನು ಗುರುತಿಸಬಹುದು ಎಂದು ಅಭಿಪ್ರಾಯಪಡಲಾಗಿದೆ.

ಶಿಲ್ಪ ಕಲೆಯಲ್ಲಿ ಕಾರ್ಲ, ಅಜಂತ ಮುಂತಾದ ಪ್ರಸಿದ್ಧ ಗುಹೆಗಳು ಕರ್ನಾಟಕದಲ್ಲಿನ ಐಹೊಳೆ, ಬಾದಾಮಿ, ಬನವಾಸಿ, ಮಂಗಳೂರು, ಕದಿರೆ ಮೂಲತಃ ಬೌದ್ಧ ವಿಹಾರಗಳಾಗಿದ್ದವು ಎಂಬುದನ್ನು ನಿರೂಪಿಸಲಾಗಿದೆ. ಅದರಂತೆಯೆ ಮಂಜುನಾಥ ಬೌದ್ಧ ಧರ್ಮಕ್ಕ್ಕೆ ಸೇರಿದವನು ಎಂದು ಸ್ಥಾಪಿಸಿದ್ದಾರೆ. ಅದೇ ರೀತಿ ಮಂಜುಶ್ರೀ. ಗಜ ಪೃಷ್ಠಾಕಾರದ ದೇಗುಲಗಳು ಇರುವೆಡೆಯಲ್ಲೆಲ್ಲಾ ಬೌದ್ಧ ಧರ್ಮದ ಪ್ರಭಾವವನ್ನು ಗುರುತಿಸಬಹುದಾಗಿದೆ.

ಧರ್ಮರಾಯನ ಕರಗ ಬೌದ್ಧ ಧರ್ಮದ್ದೆಂದು ಊಹಿಸಲಾಗಿದೆ. ಅದೇ ರೀತಿ ಕಾಮದಹನದಲ್ಲಿ ಮಾರನೊಡನೆ ಬುದ್ಧ ಸೆಣಸಿದ್ದನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತದೆ ಎಂದು ವಿವರಿಸಲಾಗಿದೆ. ಉತ್ತರ ಕರ್ನಾಟಕದ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ‘ಶರಣು’, ಬುದ್ಧಂ ಶರಣಂ ಗಚ್ಛಾಮಿ ಎಂಬುದರಿಂದ ಬಂದಿದ್ದು ಅದನ್ನು ಶಿವಶರಣರು ಸ್ವೀಕರಿಸಿದ್ದಾರೆ ಅದರಂತೆ ಅವರ ಶೂನ್ಯ ಸಂಪಾದನೆಯ ಹಿಂದೆ ‘ಸೂಂಣ ಸಂಪಾದನೆ’ಯ ಬೌದ್ಧ ಕಲ್ಪನೆ ಇರುವುದನ್ನು ಅಲ್ಲಮ ಮತ್ತು ಬಸವ ಮೊದಲು ನಾಥ ಪಂಥಕ್ಕೆ ಸೇರಿದ್ದರೆಂದು ಆದ್ದರಿಂದ ಬೌದ್ಧ ಧರ್ಮದ ಗಾಢ ಪ್ರಭಾವ ಅವರ ಮೇಲೆ ಆಗಿರುವುದನ್ನು ಅವರ ವಚನಗಳ ಆಧಾರದ ಮೇಲೆ ತೋರಿಸಿಕೊಡಲಾಗಿದೆ.

ಏಳನೆಯ ಅಧ್ಯಾಯದಲ್ಲಿ ಕನ್ನಡ ಲಿಪಿಯ ಹಿಂದೆ ಅಶೋಕನ ಬ್ರಾಹ್ಮೀ ಲಿಪಿ ಇರುವುದನ್ನು ಸೂಚಿಸಲಾಗಿದೆ. ಅಂತೆಯೇ ಸಾಹಿತ್ಯದಲ್ಲಿ ಕರ್ನಾಟಕದಲ್ಲಿ ಮೊದಲಿನದು ಬೌದ್ಧ ಸಾಹಿತ್ಯ ಎಂದು ವಾದಿಸಿದ ಟಿ. ಎಸ್. ವೆಂಕಣ್ಣಯ್ಯ ಅವರ ಊಹೆಯನ್ನು ಸಮರ್ಥಿಸಲಾಗಿದೆ. ಆದರೆ ಯಾವ ಕೃತಿಗಳೂ ಲಭ್ಯವಿಲ್ಲವೆಂದು, ಶ್ರೀ ವಿಜಯ ಉಲ್ಲೇಖಿಸಿದ ಕವಿರಾಜಮಾರ್ಗದಲ್ಲಿನ ಗದ್ಯಕಥಾ ಹಾಗೂ ಚಂಪೂಗಳ ಹಿಂದೆ ಬೌದ್ಧ ಸಾಹಿತ್ಯ ರೂಪಗಳ ಪ್ರಭಾವವನ್ನು ಗುರುತಿಸಬಹುದೆಂದು ಖ್ಯಾತಕರ್ನಾಟಕಗಳಲ್ಲಿ ಒಂದಾದ ಸ್ರಗ್ಧರ ಮೂಲತಃ ಬೌದ್ಧ ದೇವತೆಯಾದ್ದರಿಂದ ಹೆಚ್ಚು ಬಳಕೆಗೆ ಬರಲಿಲ್ಲವೆಂದು ಸೂಚಿಸಿದ್ದಾರೆ. ಕವಿರಾಜಮಾರ್ಗದಲ್ಲಿ ಉಲ್ಲೇಖಿತರಾದ ಗದ್ಯಪದ್ಯಾಶ್ರಮ ಗುರುಗಳಲ್ಲಿ ಮೂವರು ಬೌದ್ದರೆಂದೂ ಅದರೆ ಅವರ ಬರಹಗಳು ಲಭ್ಯವಿಲ್ಲವೆಂದೂ, ಬೌದ್ಧ ಧರ್ಮದ ನಾಶದೊಂದಿಗೆ ಅವು ಖಿಲವಾಗಿರಬಹುದೆಂದೂ ಅದಕ್ಕೆ ನಿದರ್ಶನವಾಗಿ ತಮಿಳಿನಲ್ಲಿ ಇರುವ ಏಕೈಕ ಬೌದ್ಧ ಕಾವ್ಯ ‘ಮಣಿಮೇಖಲೈ’ ಯನ್ನು ಪ್ರಸ್ತಾಪಿಸಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಕೂಡ ಬೌದ್ಧ ಸಾಹಿತ್ಯದಿಂಲೇ ಕನ್ನಡ ಸಾಹಿತ್ಯ ಆರಂಭವಾಗಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಪಂಪನ ‘ಮುನ್ನಿನ ಕಾವ್ಯಮನೆಲ್ಲವ ಇಕ್ಕಿ ಮೆಟ್ಟಿದವು’ ಎಂಬುದನ್ನು ಉಲ್ಲೇಖಿಸಿ ತಮ್ಮ ವಾದಕ್ಕೆ ಪೂರಕ ಸಾಮಗ್ರಿಯನ್ನು ಒದಗಿಸಿದ್ದಾರೆ.

ಆಧುನಿಕ ಕಾಲಕ್ಕೆ ಬರುತ್ತಿದ್ದಂತೆ ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲೇ ‘ಹಿತೋಪದೇಶ’ ಪತ್ರಿಕೆಗೆ ಬೌದ್ಧ ಧರ್ಮವನ್ನು ಕುರಿತ ಲೇಖನಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅವು ಈಗ ಲಭ್ಯವಿಲ್ಲದಿರುವುದನ್ನು ಆನಂತರ ಬಿದರೆ ಅಶ್ವತ್ಥಾಮಾಚಾರ್ಯ ಅವರು ಬೇರೆ ಭಾಷೆಗಳಲ್ಲಿ ಬುದ್ಧನ ಬಗ್ಗೆ ಇಲ್ಲಿಯವರೆಗೆ ಬಾರದೇ ಇರುವುದರಿಂದ ಪ್ರಥಮವಾಗಿ ತಾವು ಈ ಪ್ರಯತ್ನವನ್ನು ಕನ್ನಡದಲ್ಲಿ ಮಾಡುತ್ತಿರುವುದಾಗಿ ಹೇಳಿ, ಬುದ್ಧನ ಜೀವನ ಚಿತ್ರವನ್ನು, ಅವನ ಉಪದೇಶಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಗೋವಿಂದ ಪೈ ಅವರು 1910 ರ ಸುಮಾರಿಗೆ ‘ಸುತ್ತ ಪಿಟಕ’ ಮತ್ತು ‘ಅಬಿಧಮ್ಮ ಪಿಟಕ’ ಮುಂತಾದವುಗಳಿಂದ ಕನ್ನಡಕ್ಕೆ ತಂದದ್ದನ್ನು ಅವರು ‘ವೈಶಾಖಿ” ಎಂಬ ಮಹತ್ವದ ಶುದ್ದಾಂಗವಾದ ಬೌದ್ಧ ಕಾವ್ಯವನ್ನು ರಚಿಸಿದ್ದನ್ನು ಅದರ ಸಾಂಸ್ಕತಿಕ ಮಹತ್ವವನ್ನು ವಿಶ್ಲೇಷಿಸಿದ್ದಾರೆ- ಅದರ ಮೂಲದೊಡನೆ (ಮಹಾಪರಿನಿಬ್ಬಾನಸುತ್ತ) ಇಟ್ಟು ನೋಡುವುದರ ಮೂಲಕ.

ತರುವಾಯ ಜಿ.ಪಿ. ರಾಜರತ್ಮಂ ಅವರು ಮೂಲ ಪಾಲಿಯಿಂದ ಬೌದ್ಧ ಕೃತಿಗಳನ್ನು ಅನುವಾದಿಸಿದ್ದಲ್ಲದೆ ಅವುಗಳನ್ನ ಶಾಖ್ಯ ಮಂಟಪದ ಮೂಲಕ ಪ್ರಕಟಿಸಿದ್ದರ ಮಹತ್ವವನ್ನು ಮನಗಾಣಿಸಿದ್ದಾರೆ. ಬುದ್ಧ ವಚನ ಟ್ರಸ್ಟ್ ನವರು ಬುದ್ಧನ ಎಲ್ಲ ಕೃತಿಗಳನ್ನು ಕನ್ನಡಕ್ಕೆ ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ತಿಳಿಸಿ ದಿವಂಗತ ಎಚ್. ವಿ. ಶ್ರೀರಂಗರಾಜು ಅವರು ವಹಿಸಿದ ಪಾತ್ರವನ್ನು ತೋರಿಸಿಕೊಟ್ಟಿದ್ದಾರೆ.

ಈಚೆಗೆ ಬುದ್ಧನನ್ನು ಕುರಿತು ಆರ್. ಸಿ. ಹಿರೇಮಠ ಅವರು ಹಾಗೂ ಕಾಶಿವಿಶ್ವನಾಥ ಶೆಟ್ಟರು ಬರೆದಿರುವ ಕಾವ್ಯಗಳನ್ನು ಉಲ್ಲೇಖಿಸಿದ್ದಾರೆ. ಎಸ. ವಿ. ಪರಮೇಶ್ವರ ಭಟ್ಟ ಕನ್ನಡಕ್ಕೆ ಅನುವಾದ ಮಾಡಿರುವುದನ್ನು, ಮಧು ವೆಂಕಾರೆಡ್ಡಿ ತೇರಿಗಾಥವನ್ನು ಕನ್ನಡಕ್ಕೆ ತಂದಿರುವುದನ್ನು ಪ್ರಸ್ತಾಪಿಸಿದ್ದಾರೆ. ಡಾ. ತಾಳ್ತಜೆಯವರಿಗೆ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿರುವುದು ಔಚಿತ್ಯ ಪೂರ್ಣವಾಗಿದೆ. ಈಗ ಸೇಡಿಯಾಪು ಪರಂಪರೆಯಲ್ಲಿ ಬೇರು ಬಿಟ್ಟ ತಾಳûಜೆಯವರಿಗೆ ಅವರ ಹೆಸರಿನ ವಿದ್ವತ್ ಪ್ರಶಸ್ತಿ ಸಂದಿರುವುದು, ಅವರ ಮಾರ್ಗದರ್ಶನದಲ್ಲಿ ಬೆಳೆದ ನಮ್ಮೆಲ್ಲರಿಗೂ ಅಷ್ಟೇ ಅತೀವ ಸಂತಸವನ್ನು ತಂದಿದೆ. ಅದಕ್ಕಾಗಿ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತಾ, ಅವರಿಂದ ಕನ್ನಡ ವಿದ್ವತ್ ಪ್ರಪಂಚ ಮತ್ತಷ್ಟ್ಟು ಆಳ ಹರಹುಗಳನ್ನು ಪಡೆದುಕೊಳ್ಳಲಿ ಎಂದು ಹಾರೈಸುತ್ತೇನೆ.

ಯುದ್ಧವನ್ನು ಹಿಂಸೆಯನ್ನು ಸಮರ್ಥಿಸುತ್ತಿರುವ ಈ ಸಂದರ್ಭದಲ್ಲಿ ಅಹಿಂಸೆಯನ್ನು, ಬೌದ್ಧದ ಧರ್ಮವನ್ನು ಕುರಿತ ತಾಳ್ತಜೆಯವರ ಈ ಅಧ್ಯಯನ ಅತ್ಯಂತ ಸಮಕಾಲೀನವಾಗಿದೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW