ಯಾವುದೇ ಒಂದು ಬರಹ, ಅದರ ವಿಷಯ, ನಿರೂಪಣಾ ಶೈಲಿ, ಸರಳವಾಗಿ ಅರ್ಥವಾಗುವ ಭಾಷೆ, ಓದುಗರನ್ನು ಹಿಡಿದಿಡಬಲ್ಲ ಒಕ್ಕಣಿಕೆ , ಸಾಮಾಜಿಕ ಕಳಕಳಿ ಹಾಗೂ ಕುತೂಹಲದಿಂದ ಓದಿಸಿಕೊಂಡು ಹೋಗಬಲ್ಲ ನಿರಾಯಾಸ ಸಾಲುಗಳು.ಇವೇ ಮೊದಲಾದವು ಓದುಗನಿಗೆ ಮ್ಯಾಟರ್ ಆಗುತ್ತವೆಯೇ ವಿನಃ ಆ ಬರಹ ನಿಮ್ಮ ವೈಯಕ್ತಿಕವೋ, ಇತರರ ಅನುಭವವೋ ಅಥವಾ ಬರಹಗಾರನ ಕಲ್ಪನೆಯೋ ಎಂಬುದು ಅಮುಖ್ಯವಾಗುತ್ತದೆ.- ಹಿರಿಯೂರು ಪ್ರಕಾಶ್, ತಪ್ಪದೆ ಮುಂದೆ ಓದಿ…
“ಪ್ರಕಾಶಣ್ಣ… ನೀವು ರಿಟೈರ್ ಆದನಂತರ ಬರೆದ ಕೆಲವು ಬರಹಗಳನ್ನು ನೋಡಿದಾಗ , ರಿಟೈರ್ ಆಗಿದ್ದರಿಂದ ನೀವು ತುಂಬಾ ಬೇಸರದಲ್ಲಿದ್ದೀರೆಂದು ಕೊಂಡೆ. ಹುಟ್ಟಿದ ಮೇಲೆ ಸಾವು ಹೇಗೆ ನಿಶ್ಚಿತವೋ ಉದ್ಯೋಗಕ್ಕೆ ಅಂತ ಸೇರಿದ ಮೇಲೆ ನಿವೃತ್ತಿ ಎನ್ನುವುದು ಅಷ್ಟೇ ಅನಿವಾರ್ಯ. ಹೀಗಾಗಿ ಅದನ್ನು ಬಂದ ಹಾಗೆ ಸ್ವೀಕರಿಸಿ, ಖುಷಿ ಖುಷಿಯಾಗಿರಿ ” !
– ನಾನು ನಿವೃತ್ತಿಯಾದ ನಂತರ ಇಲ್ಲಿ ಹಂಚಿಕೊಂಡಿದ್ದ ಬರಹವೊಂದನ್ನು ನೋಡಿ ಆತ್ಮೀಯರೊಬ್ಬರು ನನಗೆ ಹೇಳಿದ ಪರಿ ಇದು. !
” ಸಾರ್….ಯಾಕೋ ತುಂಬಾ ನೋವಿನಲ್ಲಿದ್ದೀರ ಅನಿಸುತ್ತೆ , ನಾಲ್ಕಾರು ದಿನ ಪ್ರವಾಸ ಹೋಗಿ ಬನ್ನಿ, ಎಲ್ಲ ಸರಿ ಹೋಗುತ್ತೆ “…..
ಏನಾಯ್ತು….. ಯಾರಿಂದಲಾದರೂ ಮೋಸವಾಯ್ತೇ ? ಅಥವಾ ಈ ಬರಹಕ್ಕೆ ಎಂತ ಕಾರಣ, ಏನು ಸ್ಪೂರ್ತಿ.?
– ನೋವು- ನಂಬಿಕೆದ್ರೋಹಗಳ ಕುರಿತಂತೆ ಬರೆದಿದ್ದ ಮೊನ್ನೆಯ ಬರಹಕ್ಕೆ ಒಬ್ಬರಿಂದ ಬಂದಿದ್ದು, ಇಂಥಾದ್ದೊಂದು ಕೌತುಕ ತುಂಬಿದ ರಿಯಾಕ್ಷನ್ನು !!
ಈ ಫ಼ೇಸ್ ಬುಕ್ಕಲ್ಲಿ ನಮ್ಮ ಫ಼ೇಸೂ ಒಂದಿರಲಿ ಅಂತ ನಿರ್ದಿಷ್ಟ ಗೊತ್ತು-ಗುರಿ, ಕಾಸೂ- ಕ್ಲಾಸೂ ಏನೊಂದರ ನಿರೀಕ್ಷೆಯೂ ಇಲ್ಲದೇ ಆ ಕ್ಷಣಕ್ಕೆ ಏನೋ ಒಂದು ಅನಿಸಿದ್ದನ್ನು ಬರೆದು ಯಾವುದೇ ಅಡೆತಡೆಯಿಲ್ಲದೇ ಮುಖಪುಸ್ತಕದ ಮಸ್ತಕಕ್ಕೆ ಮುಲಾಜಿಲ್ಲದೇ ಒಗಾಯಿಸುವ ನನ್ನ ಬರಹಗಳ ಕಂಟೆಂಟುಗಳು ಹಲವು ಬಾರಿ ಇಂತಹಾ ಕಾಕತಾಳೀಯವೆಂಬಂತಹ ಸಂದಿಗ್ಧಕ್ಕೆ ಒಳಗಾಗಿರುವುದುಂಟು .

ಫೋಟೋ ಕೃಪೆ : google
ಸಾಮಾನ್ಯವಾಗಿ ಯಾವುದೇ ಪ್ರಕಾರದ ಬರಹ, ಕತೆ, ಕವನ ಇತ್ಯಾದಿಗಳು ಬರಹಗಾರನ ಕಲ್ಪನೆಯ ಔಟ್ ಪುಟ್ಟುಗಳು. ಅವು ಆತನ ಸ್ವಂತ ಅನುಭಗಳೇ ಆಗಿರಬಹುದು ಅಥವಾ ಇನ್ನೊಬ್ಬರ ಅನುಭವವೂ ಸೇರಿದಂತೆ ಒಂದು ಊಹಾತ್ಮಕ ಚಿತ್ರಣಗಳೂ ಆಗಿದ್ದಿರಬಹುದು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಬರೆಯುವ ಸ್ವಾತಂತ್ರ್ಯ ವಿರುವುದರಿಂದ ಅವರವರ ವೈಯಕ್ತಿಕ ವಿವರಗಳೂ ಬರಹಗಳ ರೂಪದಲ್ಲಿ ಬಂದು ಕಾಡುವುದುಂಟು. ಬರಹಗಾರನ ಬಗೆಗೆ ಸ್ವಲ್ಪಮಟ್ಟಿಗೆ ಅರಿತಿದ್ದಾಗ ಬರೆದಿದ್ದೆಲ್ಲವೂ ಆತನಲ್ಲಿ ಅಂತರ್ಗತವಾದ ಅನಿಸಿಕೆಗಳು ಅಥವಾ ಅವನ ವೈಯಕ್ತಿಕ ಅನುಭವಗಳ ವ್ಯಕ್ತ ಆಲಾಪನೆಗಳು ಎಂಬ ಭಾವನೆ ಮೂಡುವುದು ಸಹಜ.
ಅದು ಯಾರ ವಿಚಾರದಲ್ಲಿ ಹೇಗೋ ಏನೋ ನಂಗೊತ್ತಿಲ್ಲ. ಆದರೆ ನನ್ನೆಲ್ಲಾ ಬರಹಗಳು ಹೆಚ್ಚಾಗಿ ಹತ್ತು ಹಲವು ನಿತ್ಯ ನೈಜ ಅನುಭವಗಳ ಕಂತೆಯಂತೆ ಅಥವಾ ಕಲ್ಪನೆಯ ಮೂಲಕ ಕಟ್ಟಿಕೊಟ್ಟ ಬೊಂತೆಯಂತೆ ಇಲ್ಲವೇ ಕೊನೇಪಕ್ಷ ನಾಲ್ಕಾರು ಮಂದಿಯನ್ನಾದರೂ ಚಣಕಾಲ ಚಿಂತೆಗೆ ದೂಡುವಂತೆ ಮಾಡಿವೆಯಲ್ಲಾ…ಎಂಬುದೇ ಒಂದು ರೀತಿಯ ಯಾವುದೇ ಬೋರ್ಡ್ ಗಿಲ್ಲದ ಅವಾರ್ಡು, ರಿವಾರ್ಡು ಎಲ್ಲವೂ !
ಹೀಗಾಗಿ , ಯಾವುದೋ ಒಂದು ವಿಷಯ -ವಸ್ತು ಹಿಡಿದುಕೊಂಡು ಮೂರ್ನಾಲ್ಕು ಸಾಲುಗಳಲ್ಲಿ ಹೇಳಬಹುದಾದುದನ್ನು ನೂರೆಂಟು ಸಾಲುಗಳಲ್ಲಿ ತಿರುತಿರುಗಿ ಹೇಳುತ್ತಾ ಬೋರ್ ಹೊಡೆಸುತ್ತಲೇ ಸಾಹಿತ್ಯದ ಯಾವ ಪ್ರಕಾರಕ್ಕೂ ಸೇರದ, ಎಲ್ಲೂ ಸಲ್ಲದ ಬರಹಗಳಾಗಿದ್ದರೂ, ಕೆಲವರ ಮನದ ಮೂಲೆಯೊಳಗೆ ಎಲ್ಲೋ ಒಂದೆಡೆ ನೆಲೆ ನಿಂತಿವೆಯೆಂದರೆ ಅದಕ್ಕೆ ನೀವೇ ಕಾರಣ, ನಿಮ್ಮ ಪ್ರೀತಿಯೇ ಅದಕ್ಕೆ ಹೂರಣ.
ವಾಸ್ತವವೆಂದರೆ, ಒಬ್ಬ ಬರಹಗಾರ ತಾನು ಅನುಭವಿಸಿ ಬರೆಯುವ ಬರಹಗಳು ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಬಲ್ಲವು. ಇಲ್ಲಿಅನುಭವಿಸಿ ಬರೆದದ್ದು ಎಂದರೆ ಅರ್ಥ, ಅವು ನೇರವಾಗಿ ಅವನಿಗೇ ಘಟಿಸಿರಬಹುದಾದ ಅನುಭವಗಳಲ್ಲ ! ಅಥವಾ ತನ್ನ ವೈಯಕ್ತಿಕ ಬದುಕಿನ ಸಂಕಥನಗಳೂ ಅಲ್ಲ. ಬದಲಿಗೆ ಯಾವುದೇ ವಸ್ತು ವಿಚಾರ ಅಥವಾ ಘಟನೆಯ ಆಳಕ್ಕಿಳಿದು ಅವುಗಳನ್ನು ಅರ್ಥೈಸಿಕೊಂಡು ಅಕ್ಷರಕ್ಕಿಳಿಸುವುದು ಎಂದರ್ಥ. ಹೀಗಾಗಿ ಬರಹಗಳ ವಸ್ತು ವಿಷಯ ಏನೇ ಇದ್ದರೂ ಹಾಗೂ ಅಂತಹ ಬರಹಗಳಲ್ಲಿ ಕಾಗುಣಿತ, ವ್ಯಾಕರಣ ಅಥವಾ ವಾಕ್ಯಗಳ ಕ್ರಮಬದ್ಧಜೋಡಣೇ ಇಲ್ಲದೇ ಹೋದರೂ ಅವುಗಳನ್ನು ಅನುಭವಿಸಿ ಬರೆದಿದ್ದಾಗ ಅಲ್ಲಿನ ಪ್ರತೀ ಅಕ್ಷರಗಳೂ ಅರ್ಥವನ್ನು ಸಮರ್ಥವಾಗಿ ಅಭಿವ್ಯಕ್ತಿಸಲು ಸಶಕ್ತವಾಗಬಲ್ಲವು, ಹೇಳಬೇಕಾದದ್ದನ್ನು ಸ್ಪಷ್ಟವಾಗಿ ಹೇಳಬಲ್ಲವು ಹಾಗೂ ಸ್ವಂತ ಅನುಭವದಂತೆಯೇ ಮಿಡಿಯಬಲ್ಲವು….
ಅಷ್ಟನ್ನುಬಿಟ್ಟರೆ….. ಅಲ್ಲಿ ವೈಯಕ್ತಿಕ ಅಂತ ಏನೂ ಇರೋಲ್ಲ.
ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಎಲ್ಲರೊಂದಿಗೆ ಸಾಮಾಜಿಕವಾಗಿ ಬೆರೆಯುವುದರಿಂದ ನಮ್ಮನ್ನು ನಾವು ಒಂದು ನಿರ್ದಿಷ್ಟ ಹಂತದವರೆಗೆ ನೇರವಾಗಿ ತೆರೆದಿಟ್ಟುಕೊಳ್ಳುವುದು ಸಹಜ. ಆದರೆ ಬರಹಗಳ ವಸ್ತು-ವಿಚಾರ ಅಥವಾ ಇಲ್ಲಿ ಹಂಚಿಕೊಂಡ ಘಟನೆಗಳೆಲ್ಲವೂ ಬರಹಗಾರನ ವೈಯಕ್ತಿಕ ಅನುಭವಗಳೇ ಆಗಬೇಕೆಂದೇನೂ ಇಲ್ಲ. ಈ ಮಧ್ಯೆ ಕೆಲವು ಬರಹಗಳು ಹಾಗೆ ಅನಿಸಿದಂತೆ ಕಂಡರೂ ಅವು ಕೇವಲ ಸಾಂಧರ್ಭಿಕ ಅಥವಾ ಕಾಕತಾಳೀಯ.
ಬಹುಶಃ ಈ ಅನಿಸಿಕೆಗಳು ಅನೇಕ ಬರಹಗಾರರ ಅನಿಸಿಕೆಗಳೂ ಆಗಿರಬಹುದು ಅಥವಾ ವಿಭಿನ್ನವಾಗಿಯೂ ಇದ್ದಿರಬಹುದು. ಆದರೆ ನೆನಪಿಡಿ, ಯಾವುದೇ ಒಂದು ಬರಹ, ಅದರ ವಿಷಯ, ನಿರೂಪಣಾ ಶೈಲಿ, ಸರಳವಾಗಿ ಅರ್ಥವಾಗುವ ಭಾಷೆ, ಓದುಗರನ್ನು ಹಿಡಿದಿಡಬಲ್ಲ ಒಕ್ಕಣಿಕೆ , ಸಾಮಾಜಿಕ ಕಳಕಳಿ ಹಾಗೂ ಕುತೂಹಲದಿಂದ ಓದಿಸಿಕೊಂಡು ಹೋಗಬಲ್ಲ ನಿರಾಯಾಸ ಸಾಲುಗಳು.ಇವೇ ಮೊದಲಾದವು ಓದುಗನಿಗೆ ಮ್ಯಾಟರ್ ಆಗುತ್ತವೆಯೇ ವಿನಃ ಆ ಬರಹ ನಿಮ್ಮ ವೈಯಕ್ತಿಕವೋ, ಇತರರ ಅನುಭವವೋ ಅಥವಾ ಬರಹಗಾರನ ಕಲ್ಪನೆಯೋ ಎಂಬುದು ಅಮುಖ್ಯವಾಗುತ್ತದೆ.
ಎಲ್ಲೋ ಹೊರಗಡೆ ಹೊಟೇಲ್ ಗಳಲ್ಲಿ ಸೊಗದಾದ ಊಟದ ರುಚಿ ನೋಡುವಾಗ ಕೆಲವೊಮ್ಮೆ ಅಡಿಗೆ ಯಾರು ಮಾಡಿದ್ದು ಎಂದು ಕೇಳಬಹುದೇ ವಿನಃ ಆ ಅಡಿಗೆಗೆ ಏನೆಲ್ಲಾ ಪದಾರ್ಥಗಳನ್ನು ಹೇಗೆ ಎಷ್ಟು ಪ್ರಮಾಣದಲ್ಲಿ ಹಾಕಿರಬಹುದೆಂಬ ಬಗ್ಗೆ ಹೇಗೆ ಬಹುತೇಕರು ಯೋಚಿಸುವುದಿಲ್ಲವೋ ಹಾಗೆಯೇ ಬರಹವೊಂದಕ್ಕೆ ತಾನಾಗಿಯೇ ಓದಿಸಿಕೊಂಡು ಹೋಗಬಲ್ಲ ತಾಕತ್ತಿದ್ದರೆ, ಅದರ ಆಳ ಅಗಲ ಅನುಭವಗಳ ಬಗ್ಗೆ ಬಹಳಷ್ಟು ಜನ ಲೀಸ್ಟ್ ಬಾದರ್ಡ್ !
ಇದು ಒಂದಿಬ್ಬರ ಅನಿಸಿಕೆಗಳಿಗೆ ಕೊಡಬೇಕಾಗಿದ್ದ ಪ್ರತಿಕ್ರಿಯಾದರೂ, ಇದರಲ್ಲೂ ಸ್ವಲ್ಪಮಟ್ಟಿಗೆ ಒಂದು ಬರಹಕ್ಕಾಗುವ ಸರಕು ಇದೆಯೆನಿಸಿದ್ದರಿಂದ ಅದನ್ನೇ ಹರಕು ಮುರುಕಾಗಿ ಕೊರೆದು ಹಂಚಿಕೊಂಡಿದ್ದೇನೆ. ಸಾಧ್ಯವಾದರೆ ಎಂದಿನಂತೆ ಒಪ್ಪಿಸಿಕೊಳ್ಳಿ.
* ಮರೆಯುವ ಮುನ್ನ *
ಸಾಮಾಜಿಕ ಜಾಲತಾಣಗಳಲ್ಲಿ ಯಾರೂ ಯಾರಿಗೂ ತುಂಬಾ ವೈಯಕ್ತಿಕವಾಗಿ , ಆಪ್ತವಾಗಿ ಅಷ್ಟು ಸುಲಭವಾಗಿ ಕನೆಕ್ಟ್ ಆಗಲಾರರು…Of course, ಬಹಳಷ್ಟು ಜನರಿಗೆ ಅದರ ಅನಿವಾರ್ಯತೆಯೂ ಸಾಮಾನ್ಯವಾಗಿ ಇರದು. ಆದರೆ ಕೆಲವೊಂದು ಬರಹಗಳ ವಿಚಾರದಲ್ಲಿ ಆಪ್ತತೆ, ಮೆಚ್ಚುಗೆ, ನಿಕಟತೆಯೆಂಬುದು ಕೆಲವರಲ್ಲಾದರೂ ಉಂಟಾಗಿ ಒಂದು ತೆರನಾದ ಆತ್ಮೀಯತೆ ಬೆಸೆದುಬಿಡುತ್ತದೆ. ಅಂತಹ ಆತ್ಮೀಯ ಬಂಧ ಇದ್ದಾಗಲಷ್ಟೇ ನಿಮ್ಮ ಬರಹಗಳನ್ನು ನೋಡಿದಾಗ ತಕ್ಷಣಕ್ಕೆ ಸ್ಪಂದಿಸುವ ಮಿಡಿತ ಸ್ವಲ್ಪಮಟ್ಟಿಗೆ ಉಂಟಾಗಬಲ್ಲದು.
ಬಹುಶಃ ಈ ಹಿನ್ನೆಲೆಯಲ್ಲಿ ಹಾಗೆ ಸ್ಪಂದಿಸಿದ ನಿರ್ಮಲ ಮನಸುಗಳಿಗೆ ಪುಟ್ಟ ಕ್ಲಾರಿಫ಼ಿಕೇಷನ್ನಿನ ಜೊತೆಗೆ ನನ್ನ ಈ ಸಬ್‌ಮಿಷನ್ನು..!!
- ಹಿರಿಯೂರು ಪ್ರಕಾಶ್
