ಪಚ್ಚುವಿಗೆ ರಮೇಶ್ ನೀರಲಗಿ ಹೆಸ್ರು ಕೇಳಿದಾಕ್ಷಣ ಖುಷಿಯಾಯಿತು. ಬಾಡಿದ್ದ ಮುಖ ಮತ್ತೆ ಚಿಗುರೊಡೆಯಿತು. ಆದರ್ಶನ ಸಾವಿಗೂ ಕಲ್ಲಿನ ಗಾಣಿಗರೀಕೆಗೂ ಏನಾದ್ರು ಸಂಬಂಧವಿದೆಯಾ ಎಂದು ಯೋಚಿಸ ತೊಡಗಿದ. ಮುಂದೇನಾಯಿತು ವಿಕಾಸ್. ಫ್. ಮಡಿವಾಳರ ಅವರ ಕುತೂಹಲಕಾರಿ ಕತೆ ಆ ರಾತ್ರಿ ತಪ್ಪದೆ ಮುಂದೆ ಓದಿ…
ಧೃವನ ಮಾತು ಕೇಳಿದ ಪಚ್ಚು ತಾನೆ ಖುದ್ದಾಗಿ ದುಂಡಸಿಗೆ ಹೋಗಿ ಬರುವುದಾಗಿ ಹೇಳಿದ. ಆದರೆ ಧೃವ ನಿರಾಕರಿಸಿದ. ಪಚ್ಚುವಿಗೆ ಮಾಹಿತಿ ಕಲೆ ಹಾಕುವ ಬುದ್ದಿ ಇಲ್ಲ. ಸುಮ್ಮನೆ ಹೋದರೆ ಏನು ಪ್ರಯೋಜನವಿಲ್ಲ, ಅದಕ್ಕಾಗಿ ತಾನೆ ಹೋಗುವುದಾಗಿ ಧೃವ ನಿರ್ಧರಿಸಿದ. ಆದರೆ ಡಾಕ್ಟರ್ ಇನ್ನೂ ಎರಡು ದಿನ ಬೆಡ್ ರೆಸ್ಟ್ ಹೇಳಿದ್ದರು. ಪಚ್ಚು ತನ್ನ ಹಠವನ್ನು ಬಿಡಲಿಲ್ಲ. ಅವನ ಹಠಕ್ಕೆ ಸೋತ ಧೃವ ಅವನ ಕಿವಿಯಲ್ಲಿ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ಹೇಳಿ ಅಲ್ಲಿಗೆ ಹೋಗಿ ಏನೇನು ಮಾಡಬೇಕೆಂದು ವಿವರಿಸಿದ.
ಸಂಜೆ ಹೊತ್ತಿಗೆ ಪಚ್ಚು ತನ್ನ ಬಲೆರೊ ಗಾಡಿಯಲ್ಲಿ ಕಿಮ್ಸ್ ಆಸ್ಪತ್ರೆಯಿಂದ ದುಂಡಸಿ ಕಡೆಗೆ ಹೊರಟ. ಏನ್ ಎಚ್ 4 ಹೈವೇಯಲ್ಲಿ ಗಬ್ಬುರು, ಅದರಗುಂಚಿ, ವರೂರು, ತಿರುಮಲಕೊಪ್ಪ ದಾಟಿ ಸ್ವಲ್ಪ ಮುಂದೆ ಹೋದರೆ ತಡಸ ಕ್ರಾಸ್ ಬರುತ್ತದೆ. ಬಲಕ್ಕೆ ತಿರುಗಿಸಿ ತಡಸಕ್ಕೆ ಹೋದರೆ ಅಲ್ಲಿಂದ ದುಂಡಶಿ ಕೇವಲ 14 ಕಿಮೀ ದೂರದಲ್ಲಿದೆ. ದಾರಿ ಮದ್ಯೆ ಕಮಲನಗರ, ಅಗಡಿ, ಕನೂರು ಗ್ರಾಮಗಳು ಹತ್ತುತ್ತದೆ. ಪಚ್ಚು ದುಂಡಶಿಗೆ ಬಂದಾಗ ಸಂಜೆ 5.30 ಆಗಿತ್ತು.
ಒಂದು ಸಾರಿ ಇಡಿ ಊರನ್ನು ಸುತ್ತಿದ ಪಚ್ಚು ಕೊನೆಗೆ ಗ್ರಾಮ ಪಂಚಾಯತಿ ಆಫೀಸ್ ಕಡೆ ಕಾಲು ಬೆಳೆಸಿದ. ಆಫೀಸಿನಲ್ಲಿ ಐದಾರು ಹಿರಿಯರು ಹರಟೆ ಹೊಡೆಯುತ್ತಿದ್ದರು. ಅವರ ಮುಂದೆ ನಿಂತ ಪಚ್ಚು ಎಲ್ಲರಿಗೂ ನಮಸ್ಕರಿಸಿದ. ಹಿರಿಯರಲೊಬ್ಬ ಪಚ್ಚುನನ್ನು ನೋಡಿ ಯಾರೆಂದು ಕೇಳಿದ.
“ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಆಕಾಶ್ ಅಂತ. ಅರ್ಕಿಯೋಲಜಿ ಡಿಪಾರ್ಟ್ಮೆಂಟ್ ಇಂದ ಬಂದಿದೆನಿ. ಈ ಊರಿನಲ್ಲಿರೊ ಗುಡಿ ಗೋಪುರ ಶಾಸನಗಳ ಬಗ್ಗೆ ಮಾಹಿತಿ ಪಡೆಯಿರಿ ಅಂತ ಮೇಲಧಿಕಾರಿಗಳು ಹೇಳಿದ್ದಾರೆ. ಅದಕ್ಕಾಗಿ ಊರಿನ ಬಗ್ಗೆ ತಿಳ್ಕೊಳೋಕೆ ಬಂದಿದೆನಿ ” ಅಂತ ಪಚ್ಚು ಸುಳ್ಳು ಹೇಳಿದ.
ಅವನ ಮಾತನ್ನು ನಂಬಿದ ಊರ ಹಿರಿಯರು
” ಬನ್ನಿ ಸಾಹೇಬ್ರ ಕೂತ್ಕೋಬರ್ರಿ. ಕುಡಿಯಾಕ ಚಾ ತರಿಸ್ಲೆನ್ರಿ, ಹೇಳ್ರಿ ನಮ್ಮಿಂದ ಏನು ಆಗ್ಬೇಕಿತ್ತು ” ಅಂತ ಹೇಳಿದರು.
“ಏನಿಲ್ಲ ನನಗೆ ನಿಮ್ಮ ಊರಿನ ಬಗ್ಗೆ ಸ್ವಲ್ಪ ಮಾಹಿತಿ ಮತ್ತೆ ಊರಿನ ನಕಾಶೆ ಬೇಕಾಗಿತ್ತು ” ಪಚ್ಚು ಹೇಳಿದ.
ಊರಿನ ಹಿರಿಯರು ತಮಗೆ ತಿಳಿದಿದ್ದ ಎಲ್ಲಾ ವಿಷಯಗಳನ್ನು ಪಚ್ಚುವಿಗೆ ಹೇಳಿದರು. ಆದರೆ ಆತನಿಗೆ ಬೇಕಾಗಿದ್ದ ಮಾಹಿತಿ ಸಿಗಲೆ ಇಲ್ಲ. ಕೊನೆಗೆ ಎಲ್ಲರಿಗೂ ನಮಸ್ಕರಿಸಿ ತಾನಿನ್ನು ಮತ್ತೆ ಬರುವುದಾಗಿ ಹೇಳಿ ಪಂಚಾಯತಿ ಆಫೀಸಿನಿಂದ ಹೊರಗಡೆ ಬಂದಾಗ ರಾತ್ರಿ 8 ಗಂಟೆ ಆಗಿತ್ತು.
ದುಂಡಶಿ ಊರಿನ ಹೊರಗೆ ಇದ್ದ ಟಿ ಅಂಗಡಿಗೆ ಹೋದ ಪಚ್ಚು ಒಂದು ಕಪ್ ಟಿ ಹಾಗು ಬನ್ ತಗೆದುಕೊಂಡ. ಆತನ ಮುಖದಲ್ಲಿ ನಿರಾಶೆಯಿತ್ತು. ಎಷ್ಟು ಸಿಗರೇಟು ಸೇದಿದರೂ ತೃಪ್ತಿಯಾಗಲಿಲ್ಲ. ಹೋದ ಕೆಲಸ ಆಗಲಿಲ್ಲ, ದೃವ ಹೇಳಿದ್ದು ನಿಜ ತನ್ನ ಕೈ ಇಂದ ಏನು ಆಗುವುದಿಲ್ಲ ಅಂತ ತನ್ನನ್ನೆ ತಾನು ದೋಷಿಸತೊಡಗಿದ. ಅಷ್ಟರಲ್ಲೆ ಆತನ ಕಣ್ಣು ರೋಡಿನಲ್ಲಿ ಹೋಗುತ್ತಿದ್ದ ಲಾರಿಗಳ ಮೇಲೆ ಬಿದ್ದವು. ಸುಮಾರು ಐದಾರು ಲಾರಿಗಳು ಕಲ್ಲಿನ ರಾಶಿಗಳನ್ನು ಹೊತ್ತುಕೊಂಡು ತಡಸ ಮಾರ್ಗದಲ್ಲಿ ಹೋಗುತ್ತಿದ್ದವು.

ಫೋಟೋ ಕೃಪೆ : GOOGLE
ಪಚ್ಚು ಟಿ ಅಂಗಡಿ ಮಾಲೀಕನಿಗೆ “ಅಜ್ಜ ಈ ಲಾರಿಗಳು ಎಲ್ಲಿಗೆ ಹೋಗ್ತಾ ಇದಾವೆ ” ಅಂತ ಕೇಳಿದ.
“ಊರಿಗೆ ಹೊಸಬರೆನ್ರಿ ” ಅಜ್ಜ ಕೇಳಿದ.
“ಹೌದು ” ಪಚ್ಚು ಉತ್ತರಿಸಿದ.
“ಇವೆಲ್ಲ ಕಲ್ಲಿನ ಕೊರಿಯ ಲಾರಿಗಳು. ದುಂಡಶಿ ಗುಡ್ಡದಲ್ಲಿ ಗಣಿಗಾರಿಕೆ ನಡಿಯುತ್ತಿದೆ. ರಾತ್ರಿ ಹೊತ್ತಿನಲ್ಲಿ ಅಕ್ರಮವಾಗಿ ಹುಬ್ಬಳ್ಳಿ ಪುಣೆಗೆ ಕಲ್ಲುಗಳನ್ನ ಸಾಗಿಸುತ್ತಾರೆ. ” ಅಂತ ಹೇಳಿದ.
“ಹೌದು ಈ ಗಣಿಗಾರಿಕೆ ಯಜಮಾನರು ಯಾರು ” ಪಚ್ಚು ಕೇಳಿದ
“ಅವ್ರ್ ಹೆಸ್ರು ರಮೇಶ್ ನೀರಲಗಿ ಅಂತ ”
ಪಚ್ಚುವಿಗೆ ರಮೇಶ್ ನೀರಲಗಿ ಹೆಸ್ರು ಕೇಳಿ ಖುಷಿಯಾಯಿತು. ಬಾಡಿದ್ದ ಮುಖ ಮತ್ತೆ ಚಿಗುರೊಡೆಯಿತು. ಆದರ್ಶನ ಸಾವಿಗೂ ಕಲ್ಲಿನ ಗಾಣಿಗರೀಕೆಗೂ ಏನಾದ್ರು ಸಂಬಂಧವಿದೆಯಾ ಎಂದು ಯೋಚಿಸ ತೊಡಗಿದ. ಇದಕ್ಕೆಲ್ಲ ಉತ್ತರ ಸಿಗಬೇಕೆಂದರೆ ದುಂಡಶಿ ಗುಡ್ಡಕ್ಕೆ ಹೋಗಬೇಕು, ರಮೇಶ್ ನೀರಲಗಿ ಬಗ್ಗೆ ಮಾಹಿತಿ ತಗೋಬೇಕೆಂದುಕೊಂಡು ಟಿ ಅಂಗಡಿ ಮಾಲೀಕನ ಹತ್ತಿರ ದುಂಡಶಿ ಗುಡ್ಡದ ದಾರಿ ಹಾಗೂ ರಮೇಶ್ ನೀರಲಗಿ ಬಗ್ಗೆ ತಿಳಿದುಕೊಂಡು ಬೊಲೆರೋ ಗಾಡಿಯಲ್ಲಿ ದುಂಡಶಿ ಗುಡ್ಡದ ಕಡೆ ಹೊರಟ.

ಫೋಟೋ ಕೃಪೆ : GOOGLE
“ದುಂಡಶಿ ಊರಿನಿಂದ ಬಲಕ್ಕೆ ಸ್ವಲ್ಪ ಮುಂದೆ ಹೋದರೆ ಒಂದು ಗುಡ್ಡ ಸಿಗುತ್ತೆ. ಅಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದಾರೆ. ಅದರ ಯಜಮಾನ ರಮೇಶ್ ನೀರಲಗಿ. ಬೊಮ್ಮನಹಳ್ಳಿ ಹತ್ತಿರದ ಅಂದಲಗಿ ಗ್ರಾಮದವನು. ಮೊದಮೊದಲು ಎಮ್ಮೆ ಕಾಯುತ್ತಿದ್ದವನು, ಹತ್ತು ವರ್ಷದಲ್ಲಿ ಗಣಿಧನಿ ಆಗಿಬಿಟ್ಟ. ಇದರ ಹಿಂದೆ ಮಂತ್ರಿ ಶ್ರೀನಿವಾಸ್ ರವರ ಕೈವಾಡವಿದೆಯಂತೆ. ಅವರು ಗಣಿ ಮಂತ್ರಿಗಳಾದಾಗ ಇವನು ದುಂಡಶಿಗೆ ಬಂದು ಅಕ್ರಮ ಗಣಿಗಾರಿಕೆ ಶುರುಮಾಡಿದ. ನನಗನಿಸುತ್ತೆ ಆದರ್ಶನ ಸಾವಿಗೂ ಈ ಗಣಿಗಾರಿಕೆಗೂ ಏನೊ ಸಂಬಂಧವಿರಬೇಕು. ” ಪಚ್ಚು ದೃವನಿಗೆ ಕರೆ ಮಾಡಿ ತನಗೆ ಸಿಕ್ಕ ಮಾಹಿತಿಯನ್ನು ಹೇಳಿದ. ಹೇಳು
” ಸರಿ ನೀನು ಅಲ್ಲಿ ಇದ್ರೆ ಅಪಾಯ. ನೀನು ಸೀದಾ ಊರಿಗೆ ಹೋಗು ” ದೃವ ಹೇಳಿದ.
“ನಾನು ಹೋದರೆ ನಿನ್ನ ಯಾರು ನೋಡ್ಕೊಳೋದು ” ಪಚ್ಚು ಕೇಳಿದ.
“ವೈಭವಿ ಬಂದಿದ್ದಾಳೆ ” ದೃವ ಹೇಳಿದ
” ಸರಿ ಸರಿ ಅವಳು ಬಂದರೆ ನೀನು ಆರಾಮಾಗಿ ಇರ್ತೀಯಾ ಬಿಡು. ನಾನು ಊರಿಗೆ ಹೋಗ್ತೇನಿ ಏನಾದ್ರು ಆದ್ರೆ ಕಾಲ್ ಮಾಡು. ನಿನ್ನ ಹೊಸ ಸಿಮ್ ನಾಳೆ ಸಿಗುತ್ತೆ. ಹುಡುಗರ ಹತ್ತಿರ ಕೊಟ್ಟು ಕಳಿಸ್ತೇನಿ ” ಪಚ್ಚು ಹೇಳಿದ.
“ಹೌದು ನಿನಗೆ ಯಾರು ಹೇಳಿದ್ದು ನಾನು ಇಲ್ಲಿ ಇದೇನಿ ಅಂತ ” ದೃವ ವೈಭವಿಗೆ ಕೇಳಿದ.
” ಯೋಗೇಶ್ ಹೇಳಿದ. ನಿನ್ ಫೋನ್ ಸ್ವಿಚ್ ಆಫ್ ಇತ್ತು. ಅದ್ಕೆ ಭಯ ಆಗಿ ಸಾಕ್ಷಿ ಹತ್ರ ದುಡ್ಡು ಇಸ್ಕೊಂಡು ಬಂದೆ ” ವೈಭವಿ ಹೇಳಿದ್ಲು.
” ಮನೇಲಿ ಏನು ಹೇಳಿ ಬಂದಿದಿಯಾ ” ಧೃವ ಕೇಳಿದ
” ಸಾಕ್ಷಿ ಮನೆಯಲ್ಲಿ ಉಳ್ಕೊತೆನಿ ಅಂತ ಸುಳ್ಳು ಹೇಳಿದೆನಿ. ಸಾಕ್ಷಿ ಎಲ್ಲಾ ನೋಡ್ಕೋತಾಳೆ. ಮೊದ್ಲು ನಿನ್ನ ನೋಡು ಹೀಗಾಗಿದಿಯ, ಆ ಕೊರಚ್ಚಲು ಗಡ್ಡ, ಉದ್ದ ಕೂದಲು, ನಿನ್ನ ಅವಸ್ಥೆ ನೀಡೋಕೆ ಆಗ್ತಾ ಇಲ್ಲ ನಂಗೆ ” ವೈಭವಿ ಉತ್ತರಿಸಿದಳು.
ಅವಳ ಕಣ್ಣಲ್ಲಿ ನೀರು ಬಂದಿತ್ತು. ಕೂಡಲೆ ಧೃವ ಆಕೆಯನ್ನು ತಬ್ಬಿಕೊಂಡು ಸಮಾಧಾನಪಡಿಸಿದ. ಸ್ವಲ್ಪ ಹೊತ್ತು ಆದಮೇಲೆ ವೈಭವಿ ದೃವನಿಗೆ ಕೈತುತ್ತು ಕೊಟ್ಟಳು. ದ್ರುವನನ್ನು ತೊಡೆಯ ಮೇಲೆ ಮಲಗಿಸಿ ಲಾಲಿ ಹಾಡಿದಳು. ಆದರೆ ದೃವನಿಗೆ ನಿದ್ದೆ ಬರಲಿಲ್ಲ. ಆದರ್ಶನ ಸಾವಿನ ರಹಸ್ಯ ಆತನ ತಲೆ ಕೆಡಿಸುತ್ತಿತ್ತು.
” ಗಣಿಗಾರೀಕೆಗೂ ಆದರ್ಶನಿಗೂ ಏನು ಸಂಬಂಧ. ಮಂತ್ರಿ ಶ್ರೀನಿವಾಸನವರು ವಿರೋಧ ಪಕ್ಷದವರು. ಅವರಿಗೂ ಕಾಸ್ಸಾಪ್ಪನವರಿಗೂ ಯಾವ ನಂಟು ಇತ್ತು. ಎಮ್ಮೆ ಕಾಯುತ್ತಿದ್ದ ರಮೇಶ ಅದು ಹೇಗೆ ಗಣಿಧನಿಯಾದ? ” ಈ ಗೊಂದಲದಲ್ಲಿ ಧೃವ ಕಣ್ಣುಮುಚ್ಚಿದ್ದ. ಕಣ್ಣು ತಗೆದು ನೋಡಿದಾಗ ಬೆಳಗಾಗಿತ್ತು. ವೈಭವಿ ದ್ರುವನ ಎದೆಯ ಮೇಲೆ ತಬ್ಬಿಕೊಂಡು ಮಲಗಿದ್ದಳು.
ಹಿಂದಿನ ಸಂಚಿಕೆಗಳು :
- ‘ಆ ರಾತ್ರಿ’ ಕತೆ – ಭಾಗ ೧
- ‘ಆ ರಾತ್ರಿ’ ಕತೆ – ಭಾಗ ೨
- ‘ಆ ರಾತ್ರಿ’ ಕತೆ – ಭಾಗ ೩
- ‘ಆ ರಾತ್ರಿ’ ಕತೆ – ಭಾಗ ೪
- ‘ಆ ರಾತ್ರಿ’ ಕತೆ – ಭಾಗ ೫
- ವಿಕಾಸ್. ಫ್. ಮಡಿವಾಳರ
