ಆ ಪಾಳುಬಿದ್ದ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ, ಹಾಗಾಗಿ ಆ ಶಾಲೆಯನ್ನು ಮುಚ್ಚಲಾಗಿತ್ತು. ಅಲ್ಲಿ ಧೃವ ಹಾಗೂ ಅವನ ಸ್ನೇಹಿತ ಆ ನಿರ್ಜನ ಪ್ರದೇಶದಲ್ಲಿ ಏನು ಮಾತಾಡಿದರು. ಮುಂದೇನಾಯಿತು ಅನ್ನೋದನ್ನು ವಿಕಾಸ್. ಫ್. ಮಡಿವಾಳರ ಅವರ ಆ ರಾತ್ರಿಯನ್ನು ತಪ್ಪದೆ ಓದಿ…
ಅದು ಗುರುವಾರದ ಸಂಜೆ. ಧೃವ ತನ್ನ ಕೆಲಸ ಮುಗಿಸಿ ಮನೆಗೆ ಬಂದು, ಹಾಸಿಗೆಗೆ ಮೈಯ್ಯೋಡ್ಡಿದ್ದ. ನಾಳೆ ಏನು ಮಾಡಬೇಕು ಯಾವ ಕೆಲಸ ಬಾಕಿ ಉಳಿದಿದೆ ಎಂಬ ಆಲೋಚನೆಗಳು ತಲೆಯನ್ನು ತಿನ್ನುತ್ತಿದ್ದವು. ನಿದ್ದೆ ಬರದೆ ಅತ್ತಿತ್ತ ಹೊರಳಾಡುತ್ತಿರುವಾಗಲೇ ಆತನ ಫೋನಿಗೆ ಕರೆ ಬಂತು. ನೋಡಿದರೆ ಅಪರಿಚಿತ ಸಂಖ್ಯೆ. ಫೋನ್ ಎತ್ತಿ ಹಲೋ ಎಂದಾಗ 2 ಸೆಕೆಂಡಿನವರೆಗೆ ಯಾರು ಉತ್ತರಿಸಲಿಲ್ಲ. ಆಮೇಲೆ ಒಬ್ಬ ಗಡುಸಾದ ವ್ಯಕ್ತಿ ” ನೀವು ಹುಡುಕುತ್ತಿರೋ ಇನ್ಫಾರ್ಮಶನ್ನನ್ನ ಹತ್ರ ಇದೆ. ನಿಮಗೆ ಬೇಕಂದ್ರೆ ಅಂಜನಾದ್ರಿಗೆ ಬನ್ನಿ ” ಎಂದು ಹೇಳಿದ. ” ಅಂಜನಾದ್ರಿಗೆ ಯಾಕೆ ಬರ್ಬೇಕು, ನೀವು ಯಾರು, ಯಾವ ಇನ್ಫಾರ್ಮಶನ್ ಬಗ್ಗೆ ಮಾತಾಡ್ತಾ ಇದ್ದೀರಾ ” ಅಂತ ಧೃವ ಮರಳಿ ಕೇಳಿದ. ಅದಕ್ಕೆ ಆತ “ಎಲ್ಲಾನು ಫೋನಿನಲ್ಲಿ ಹೇಳೋಕೆ ಆಗಲ್ಲ. ಒಂದು ಕೆಲಸ ಮಾಡಿ, ನೀವು ಶನಿವಾರ ಅಂಜನಾದ್ರಿಗೆ ಬನ್ನಿ ಆಮೇಲೆ ಎಲ್ಲವನು ತಿಳಿಸ್ತೇನಿ. ನಾನು ಹೇಳ್ತಾ ಇರೋದು ನಿಮ್ಮ ಒಳ್ಳೆಯದಕ್ಕೆ ” ಅಂತ ಹೇಳಿ ಕಾಲ್ ಕಟ್ ಮಾಡಿದ. ಮರಳಿ ಕರೆ ಮಾಡಿದರೆ ಸ್ವಿಚ್ ಆಫ್ ಬಂತು.
ಫೋಟೋ ಕೃಪೆ : google
ಧೃವನ ತಲೆಯಲ್ಲಿ ನೂರಾರು ಪ್ರಶ್ನೆಗಳು ಉದ್ಭವವಾದವು. ಇವನ್ಯಾರು, ಇವನಿಗೆ ನನ್ನ ಬಗ್ಗೆ ಏನು ಗೊತ್ತು, ಯಾವ ಇನ್ಫಾರ್ಮಶನ್ ಬಗ್ಗೆ ಹೇಳ್ತಾ ಇದ್ದಾನೆ. ಶನಿವಾರ ಅಂಜನಾದ್ರಿಗೆ ನಾನ್ ಯಾಕ್ ಹೋಗ್ಬೇಕು ಅನ್ನೊ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕುಳಿತ.
ಶುಕ್ರವಾರ ರಾತ್ರಿ ಮತ್ತೆ ಅದೆ ನಂಬರಿನಿಂದ ದೃವನಿಗೆ ಕರೆ ಬಂತು. ಕೆಲ ಹೊತ್ತು ಮಾತಾಡಿದ ಬಳಿಕ “ಆಯ್ತು ನಾಳೆ ಹುಬ್ಬಳ್ಳಿಗೆ ಬರ್ತೇನಿ” ಅಂತ ಹೇಳಿ ಕಾಲ್ ಕಟ್ ಮಾಡಿದ.
ಧೃವ ಹುಬ್ಬಳಿಗೆ ಹೊರಡಲು ನಿರ್ಧರಿಸಿದ. ಒಬ್ಬನೆ ಬರಬೇಕೆಂದು ತಾಕಿತಾಗಿತ್ತು. ಯಾರಿಗಾದರು ತಿಳಿಸಿ ಹೋಗೋಣವೆಂದರೆ, ಎಲ್ಲಿ ವಿಷಯ ಲೀಕ್ ಆಗಿ, ತಾನೆಂದುಕೊಂಡ ಕೆಲಸ ಕೆಡುತ್ತೆ ಎಂಬ ಗೊಂದಲ ಶುರುವಾಯಿತು. ಸರಿ ಒಬ್ಬನೇ ಹೋದರಾಯಿತು, ಹೋಗೊ ಮುನ್ನ ಪಚ್ಚುಗೆ ಒಂದು ಮಾತು ತಿಳಿಸಿ ಬಿಡೋಣ. ಅಂತೂ ಮಿಕ್ಕಿ ಕುತ್ತಿಗೆಗೆ ಬಂದ್ರೆ ಪಚ್ಚು ನೋಡಿಕೊಳ್ತಾನೆ. ಹೆಂಗು ಶುಭಂ ಹುಬ್ಬಳಿಯಲ್ಲೇ ಇದ್ದಾನೆ. ಒಂದು ಕರೆ ಮಾಡಿದರೆ ಸಾಕು ಅದ್ಯಾವ ಕಷ್ಟ ಬಂದರು ಜೊತೆಗೆ ನಿಲ್ಲುತ್ತನೆ. ಕೂಡಲೆ ಪಚ್ಚುಗೆ ಕಾಲ್ ಮಾಡಿ ರಾತ್ರಿ ಅಡ್ಡಾಕೆ ಬಾ ಎಂದು ಹೇಳಿದ.
ರಾತ್ರಿ 11.30 ಆಗಿತ್ತು. ಪಚ್ಚು ಹೇಳಿದ ಜಾಗಕ್ಕೆ ಬಂದಿದ್ದ. ಅದೊಂದು ಪಾಳು ಬಿದ್ದ ಶಾಲೆ. ನಾಲ್ಕು ವರ್ಷದ ಹಿಂದೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರಣ ಆ ಶಾಲೆಯನ್ನು ಮುಚ್ಚಲಾಗಿತ್ತು. ಶಾಲೆಯಿಂದ ಸ್ವಲ್ಪ ದೂರದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರುತ್ತಿದ್ದರು. ಕಳ್ಳಕಾಕರರ ಹಾವಳಿ ಇದ್ದ ಕಾರಣ ಯಾರು ಆ ಶಾಲೆಯ ಹತ್ತಿರ ಹೋಗುತ್ತಿರಲಿಲ್ಲ. ರಾತ್ರಿ ಶಾಲೆಯ ಕಟ್ಟೆಯ ಮೇಲೆ ಇಬ್ಬರು ಕೂತು ಮಾತಾಡಿದರು. ಕೊನೆಗೆ ಪಚ್ಚು “ಅವರು ಬಂದ್ಮೇಲೆ ನನಗೆ ತಿಳಿಸು. ಸದ್ಯಕ್ಕೆ ಇದನ್ನ ಇಟ್ಕೊಂಡಿರು ಬೇಕಾಗುತ್ತೆ ” ಅಂತ ಹೇಳಿ ಒಂದು ಬಟನ್ ಚಾಕು ಕೊಟ್ಟು ಹೊರಟು ಹೋದ. ಧೃವ ಸ್ವಲ್ಪ ಹೊತ್ತು ಅಲ್ಲೆ ಇದ್ದು ಮನೆಗೆ ಹಿಂತಿರುಗಿದ.
ಫೋಟೋ ಕೃಪೆ : google
ಬೆಳಗ್ಗೆ ಮನೆಯಲ್ಲಿ ಶಿರಸಿಗೆ ಹೋಗಿ ಬರ್ತೇನಿ ಅಂತ ಹೇಳಿ ಧೃವ ತನ್ನ ಆರ್. ಎಕ್ಸ್ ಬೈಕಿನ ಎಕ್ಸಲೆಟರ್ ಹಿಡಿದ. ಸಮಯ ಏಳು ಗಂಟೆಯಾಗಿತ್ತು. ಮೊದಲು ಶಿರಸಿಗೆ ಹೋಗಿ ತನ್ನ ಕೆಲಸಗಳನ್ನ ಮುಗಿಸಿ ಹುಬ್ಬಳ್ಳಿಗೆ ತಿರುಗಿದರೆ ಯಾರಿಗೂ ಸಂಶಯ ಬರುವುದಿಲ್ಲವೆಂದು ಯೋಚಿಸಿದ್ದ. ಜೊತೆಗೆ ಯಾವದಕ್ಕೂ ಇರಲಿ ಅಂತ ಪಚ್ಚು ಕೊಟ್ಟಿದ್ದ ಬಟನ್ ಚಾಕುನಾ ಪ್ಯಾಂಟಿನ ಸೀಕ್ರೆಟ್ ಜೇಬಲ್ಲಿ ಇಟ್ಟುಕೊಂಡ. ಶಿರಸಿಗೆ ಹೋಗಿ ಬಾಕಿ ಉಳಿದಿದ್ದ ಕೆಲಸವನ್ನು ಮಾಡಿ ಹುಬ್ಬಳ್ಳಿ ಕಡೆ ಪ್ರಯಾಣ ಬೆಳೆಸಿದ. ದಾರಿ ಸಾಗುತ್ತಿದ್ದಂತೆಯೆ ತಲೆಯಲ್ಲಿ ಹಳೆ ನೆನಪುಗಳ ಜಾಡೊಂದು ಕಾಡತೋಡಗಿತ್ತು.
ಹುಬ್ಬಳ್ಳಿಯ ಜಗದೀಶ್ ಢಾಬಾ ಬಂತು. ಒಳಗಡೆ ಹೋದಕೂಡಲೆ ಮುಂದೇನಾಗುತ್ತದೆ ಎಂಬ ಕಲರವ ಕಾಡಿತು. ನಾನು ಮಾಡುತ್ತಾ ಇರೋದು ಒಳ್ಳೆ ಕೆಲಸಾನ ಇಲ್ವಾ, ಆ ಕೆಲಸ ಆಗುತ್ತಾ ಇಲ್ವಾ ಅಂತ ಯೋಚಿಸುತ್ತ ಇದ್ದ. ವೇಟರ್ ಗೆ ತನಗೆನು ಬೇಕು ಅದನ್ನ ಆರ್ಡರ್ ಮಾಡಿ ಕಣ್ಣು ಮುಚ್ಚಿ ತನ್ನ ಹಳೆಯ ದಿನಗಳನ್ನು ನೆನೆಸಿಕೊಳ್ಳುತ್ತಿರುವಾಗಲೇ ಒಂದು ಶಬ್ದವಾಯಿತು. ಕಣ್ಣು ತಗೆದು ನೋಡಿದರೆ ದೃಢಕಾಯದ ಆಕೃತಿಯೊಂದು ಆತನ ಹಿಂದೆ ನಿಂತಿತ್ತು. ಕೂಡಲೆ ದೃವ ತನ್ನ ಜೇಬಲ್ಲಿದ್ದ ಚಾಕುವಿಗೆ ಕೈ ಹಾಕಿದ.
ಮುಂದುವರೆಯುವುದು.
- ವಿಕಾಸ್. ಫ್. ಮಡಿವಾಳರ