ಡಾಕ್ಟರ್ ಶ್ರೀಪಾದ ಭಟ್ ಅವರು ೧೫೦ ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಿಕ್ಷಣ ಹಾಗೂ ರಂಗಭೂಮಿಯ ಹಲವು ಪ್ರಶಸ್ತಿಗಳು ಇವರನ್ನು ಪುರಸ್ಕರಿಸಿವೆ.ಅವರ ಸಾಧನೆಯ ಕುರಿತು ಬಿ. ಎಸ್. ಶಿವಕುಮಾರ್ ಅವರು ಬರೆದಿರುವ ಕಿರುಪರಿಚಯವನ್ನು ತಪ್ಪದೆ ಓದಿ…
ಬಹುಮುಖಿ ವ್ಯಕ್ತಿತ್ವದ ಡಾಕ್ಟರ್ ಶ್ರೀಪಾದ ಭಟ್ ಉತ್ತರ ಕನ್ನಡ ಜಿಲ್ಲೆಯ ಧಾರೇಶ್ವರದವರು. ತಾವು ಎಲ್ಲಿ ಕೆಲಸ ನಿರ್ವಹಿಸುತ್ತಾರೋ ಆ ಊರಿನವರೇ ಆಗಿ ಹೋಗುವ ಭಟ್ಟರು ಹಾವೇರಿಯವರೆಂದೂ, ಮಂಡ್ಯದವರೆಂದೂ, ಶಿವಮೊಗ್ಗದವರೆಂದೂ, ಉಡುಪಿಯವರೆಂದೂ ಹಲವು ಪ್ರತೀತಿ ಇದೆ. ಆಯಾ ತಾಣದೊಂದಿಗೆ ಆಧ್ಯಾತ್ಮ್ಯ ಹೊಂದಿ ಕೆಲಸ ಮಾಡುವುದು ಅವರ ಗುಣ. ಇತ್ತೀಚೆಗೆ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿ ಪೂರ್ಣಾವಧಿ ರಂಗಭೂಮಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತರ ಕನ್ನಡದ ರಂಗಭೂಮಿಯ ಕುರಿತು ಮೌಲಿಕವಾದ ಸಂಶೋಧನೆ ಮಾಡಿದ್ದಾರೆ. ಸಾಹಿತ್ಯ, ಶಿಕ್ಷಣ, ರಂಗಭೂಮಿ, ಜನಪದ ಅಧ್ಯಯನ, ಸಂಗೀತ, ಸಂಘಟನೆ – ಹೀಗೆ ಹಲವು ರಂಗಗಳ ಅರಿವು ಇವರದು. ರಂಗಭೂಮಿಯ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಎರಡೂ ರಂಗಗಳಲ್ಲಿ ಸಿದ್ಧಹಸ್ತರು. ಬಾಲ್ಯದಲ್ಲಿ ತಂದೆಯ ಸಂಸ್ಕಾರದಿಂದ ಒದಗಿದ ಯಕ್ಷಗಾನ ರಂಗಭೂಮಿಯ ಪ್ರಜ್ಞೆ, ಸಾಹಿತ್ಯ ಅಧ್ಯಯನದಿಂದ ಒದಗಿದ ಭೂಮಿಪ್ರಜ್ಞೆ, ಹಲವು ಸಾಮಾಜಿಕ ಚಳವಳಿಗಳ ಸಂಪರ್ಕದಿಂದೊದಗಿದ ಸಾಮಾಜಿಕ ಬದ್ಧತೆ, ಇವೆಲ್ಲ ಹುರಿಗೊಂಡು ಶ್ರೀಪಾದ ಭಟ್ಟರ ರಂಗಭೂಮಿ ಮೈತಾಳುತ್ತದೆ. ಹೀಗಾಗಿ ಇವರು ಶಿಕ್ಷಣವನ್ನು ರಂಗಭೂಮಿಯ ಜೊತೆಗೆ ಸುಲಭವಾಗಿ ಸಮಾಸಗೊಳಿಸಿದ್ದಾರೆ.
ಮಕ್ಕಳ ರಂಗಭೂಮಿಯಲ್ಲಿಯೂ ಅಪರೂಪದ ಪ್ರಯೋಗ ಮಾಡಿದ್ದಾರೆ. ಜನಪದ ಮತ್ತು ಆಧುನಿಕ ರಂಗಭೂಮಿಯ ಅನ್ವಯದಲ್ಲಿ ರಸಗಂಧಿಯಾದ ರಂಗರೂಪ ಕಟ್ಟಿದ್ದಾರೆ. ಪ್ರಖರವಾದ ರಾಜಕೀಯ ಪ್ರಜ್ಞೆಯ ಕಲಾತ್ಮಕ ಬೀದಿ ನಾಟಕ ನಿರ್ದೇಶಿಸಿದ್ದಾರೆ. ನಾಡಿನ ಹಲವು ಸಾಮೂಹಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡೇ ಇವರು ಸುಮಾರು ೧೫೦ ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಶಿಕ್ಷಣ ಹಾಗೂ ರಂಗಭೂಮಿಯ ಹಲವು ಪ್ರಶಸ್ತಿಗಳು ಇವರನ್ನು ಪುರಸ್ಕರಿಸಿವೆ. ಇವರ ರಂಗಬರಹಗಳ ಸಂಕಲನ, ಬಹುಭೂಮಿಕೆ, ನಟನೆಯ ಕೈಪಿಡಿ, ಉತ್ತರ ಕನ್ನಡದ ಜನಪದ ರಂಗಭೂಮಿ, ಯಕ್ಷಗಾನ, ನಾಟಕ ಪ್ರಜ್ಞೆ ಪುಸ್ತಕಗಳು ಪ್ರಕಟಗೊಂಡಿವೆ. ಇವರು ನಿರ್ದೇಶಿಸಿದ ನಾಟಕಗಳು ಕರ್ನಾಟಕದೆಲ್ಲೆಡೆ ಮಾತ್ರವಲ್ಲದೆ ಮುಂಬೈ, ಹೈದರಾಬಾದ್, ದೆಹಲಿಗಳಲ್ಲಿ ಪ್ರದರ್ಶನ ಕಂಡಿವೆ. ಕರ್ನಾಟಕದ ಬಹುತೇಕ ಕಡೆ ಶಿಕ್ಷಕರಿಗಾಗಿ, ವಿದ್ಯಾರ್ಥಿಗಳಿಗಾಗಿ, ಕಾರ್ಮಿಕರಿಗಾಗಿ, ಕೃಷಿಕರಿಗಾಗಿ ನೂರಾರು ರಂಗ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಗಾಂಧಿ-೧೫೦ರ ಸಂದರ್ಭದಲ್ಲಿ ಇವರು ನಿರ್ದೇಶಿಸಿದ ಪಾಪು-ಬಾಪು ನಾಟಕವು ೨೦೦೦ ಪ್ರಯೋಗಗಳನ್ನು ಕಂಡಿದೆ. ಸಮುದಾಯ ರಂಗ ತಂಡಗಳಿಗಾಗಿ ನಿರ್ದೇಶಿಸಿದ ಕಾವ್ಯರಂಗ ನಾಟಕಗಳು ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಪ್ರಯೋಗ ನಡೆಸಿವೆ. ಮಹಿಳಾ ಅಸ್ಮಿತೆಯ ೭ ಏಕವ್ಯಕ್ತಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಹಂಪಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ರಂಗಭೂಮಿ ಡಿಪ್ಲೊಮಾ ತರಗತಿ ನಡೆಸಿದ್ದಾರೆ.
- ಬಿ. ಎಸ್. ಶಿವಕುಮಾರ್