ಶಿಕ್ಷಕರು, ಲೇಖಕರು ಆದ ಶಿವದೇವಿ ಅವನೀಶಚಂದ್ರ ಅವರ ರಚನೆಯ ಗಣೇಶನ ವರದಹಸ್ತ ಎಲ್ಲರನ್ನೂ ಹರಸಲಿ ಎಂದು ಪ್ರಾರ್ಥಿಸುತ್ತಾ ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು…
ಗಣಪ ನಮ್ಮ ಮೊದಲ ದೈವ
ಆದಿಪೂಜಿತ
ಎಣಿಸದೆ ತರತಮವ ಬಳಿಗೆ
ತಾನೇ ಬರುವ ವಿಘ್ನವಿನಾಶಕ
ಅಮ್ಮ ಗಿರಿಜೆಯೊಡಗೂಡಿ
ಪೂಜೆಗೊಂಡು ಭಕ್ತಿಯಲಿ
ನೀಡಿರುವುದನು ಸ್ವೀಕರಿಸುವ
ಭಕ್ತೋದ್ಧಾರಕ
ಬೀದಿ ಬೀದಿಯಲ್ಲಿ ಪೂಜೆ
ಸ್ತೋತ್ರ ಅರ್ಚನೆ ನಡೆಯಲು
ಗುಡಿಯ ತೊರೆದು
ಹೊರಗೆ ಬರುವನಿವ
ಬೇಡ ಬೇರೆ ಪ್ರಾರ್ಥನೆ
ಗರಿಕೆಯೊಂದೇ ಸಾಕು ಇವಗೆ
ವರವ ನೀಡಲು
ಆನೆ ಕಿವಿಯು ಇರುವುದಲ್ಲ
ಭಕ್ತರ ಮೊರೆ ಕೇಳಲು
ಕೊಟ್ಟುದನ್ನು ಒಲ್ಲೆನೆನದೆ
ಸ್ವೀಕರಿಸುವನು
ಕಿರಿದು ಕಣ್ಣಿನಲ್ಲಿ ಜಗದ ಬವಣೆ
ಕಂಡು ಬಿಡುವನು
ಅಂಕುಶವಿದೆ ಕೋರೆಯಾಗಿ
ಆಸೆಗಳ ಜಯಿಸಿ ಬಿಡುವನು
ಗುಡಾಣದಂಥ ಹೊಟ್ಟೆಯಿದೆ
ಭಕ್ತಿಯಿಂದ ನೀಡುವ ನೈವೇದ್ಯಗಳ
ಸ್ವೀಕರಿಸಿಬಿಡುವನು
ಅಪ್ಪಿಕೊಳ್ಳಲು ಸೊಂಡಿಲಿದೆ
ಪ್ರೀತಿಯಿಂದ ಬಂಧಿಸಿ ಬಿಡುವನು
ಅರಿವಿನ ತೈಲವನೆರೆದು ಅಜ್ಞಾನವ
ತೊಲಗಿಸಿಬಿಡುವನು
ಶಿವ ಪಾರ್ವತಿಯರ ಮುದ್ದು ಕುವರ
ಕೇಳಬಾರದಿವನ ಪ್ರವರ
ನಮಿಸಬೇಕು ಭಕ್ತಿಯಲಿ
ಕಾಯುವ ಕೊನೆವರೆಗೂ ಜತನದಲಿ
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಲೇಖಕರು, ಕೊಡಗು
