ಗಣಪತಿಗೆ ಕರಿ ಮುಖ ಬಂದ ಕಥೆ ಕುಸುಮ ಷಟ್ಪದಿಯಲ್ಲಿ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅವರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಹರಸತಿಯು ಮಜ್ಜನಕೆ
ತೆರಳೆ ಕಾವಲಿಗಾಗಿ
ಕರದಲ್ಲೆ ಮಾಡಿದಳು ಮಣ್ಣಮೂರ್ತಿ
ಎರೆಯುತ್ತಲಸುವನ್ನು
ಕರೆಕೊಟ್ಟಳಾಗಲೆಯೆ
ಹೊರ ಬಾಗಿಲಲಿ ಕಾಯು ಕಾವಲೆಂದು
ಕಂದ ಕಾಯುತಲಿರಲು
ಬಂದನಾಗಲೆ ಹರನು
ಚಂದದೊಳಗರಸಿಯನ್ನರಸಿ ಬರಲು
ವಂದಿಸದೆ ಶಿವನನ್ನು
ನಿಂದಿಸುತ ಬಾಗಿಲಲೆ
ಬಂಧಿ ಮಾಡಿದನಲ್ಲೆ ಗಿರಿಜೆ ಕಂದ
ಉಕ್ಕಿ ಬಂದಿಹ ಕೋಪ
ಕೆಕ್ಕರಿಸಿ ನೋಡುತ್ತ-
ಲಿಕ್ಕಿದನು ಶೂಲವನು ಸತಿಯ ಪತಿಯು
ಹೊಕ್ಕ ರಭಸಕೆ ಶೂಲ
ಸಿಕ್ಕುತುರಿಯಲಿ ಕರಗೆ
ಬಿಕ್ಕಿಯಳುತಲಿ ಗೌರಿ ಸುತನ ಕಂಡು
ಹರನರಸಿಯಳುತಿರಲು
ಮರುಗುತಾಗಲೆ ಶಿವನು
ಶಿರವೊಂದ ತರಲಾಜ್ಞೆಯನ್ನು ಮಾಡಿ
ಅರಸಿ ಹೊರಟಿಹ ಗಣವು
ಕರಿಮುಖವ ತಂದಿರಲು
ಹರ ಜೀವ ತುಂಬಿದನು ಮುಂಡಕಿಟ್ಟು
ಹರ ಸುತನ ಹರಸಿರಲು
ಕರಿಮುಖನು ಚೆಲುವಿಂದ
ಹರಗೆ ವಂದಿಸಿ ಮುಗಿದ ಬಕುತಿಯಿಂದ
ಹರಸುತನು ತಾನಾಗಿ
ಸುರನರರ ವಿಘ್ನಗಳ
ತೊರೆಯುವನು ಬಕುತಿಯಲಿ ಪೂಜಿದೊಡನೆ
ಗರಿಕೆ ಹೂವಿನ ಹಾರ
ಕರಿಗಡುಬು ಮೋದಕವು
ಕರಿಮುಖಗೆ ಬಲು ಪಿರುತಿ ನೈವೇದ್ಯಕೆ
ಕರೆಕರೆದ ಕಡೆಗೆಲ್ಲ
ಬರುತಾನೆ ಚೌತಿಯಲಿ
ಕರಮುಗಿದು ವರ ಬೇಡೆ ನೀಡುತಾನೆ.
- ಚನ್ನಕೇಶವ ಜಿ ಲಾಳನಕಟ್ಟೆ
