‘ಆಪ್ತರಕ್ಷಕರು’ ಸಣ್ಣಕತೆ – ಶಾಲಿನಿ ಹೂಲಿ ಪ್ರದೀಪ

ದೇವರು ಕಣ್ಣಿಗೆ ಕಾಣೋಲ್ಲ ಅನ್ನೋದು ಸತ್ಯ…ಆದರೆ ಕಾಣದ ದೇವರು ಕಷ್ಟದ ಪರಿಸ್ಥಿತಿಯಲ್ಲಿ ಮನುಷ್ಯನ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ ಎನ್ನುವುದಕ್ಕೆ ಈ ಸತ್ಯಘಟನೆ. ಕತೆಗಾಗಿ ಸನ್ನಿವೇಶಗಳನ್ನು ಅಲ್ಲಲ್ಲಿ ಬದಲಾಯಿಸಲಾಗಿದೆ – ಶಾಲಿನಿ ಹೂಲಿ ಪ್ರದೀಪ, ತಪ್ಪದೆ ಮುಂದೆ ಓದಿ…

ರಾಘು ಮನೆ ಕಂಟ್ರಾಕ್ಟರ್ ಆಗಿದ್ದ. ತೀರ್ಥಹಳ್ಳಿ ಸುತ್ತ ಮುತ್ತಲು ದೊಡ್ಡ ದೊಡ್ಡ ಮನೆ ಕಟ್ಟುವ ಕೆಲಸ ಸಿಕ್ಕಮೇಲೆ ದಿನ ಬೆಳಿಗ್ಗೆ ಎಂಟು ಗಂಟೆ ಮನೆ ಬಿಟ್ಟರೆ ಕೆಲಸ ಮುಗಿಸಿ ವಾಪಾಸ್ ಆಗುತ್ತಿದ್ದದ್ದು ರಾತ್ರಿ ಕತ್ತಲಾದ ಮೇಲೆ. ಅಂದು ಮಗ ಪುಟ್ಟಣ್ಣನ ಹುಟ್ಟುಹಬ್ಬ, ರಾಘು ಬೇಗ ಬೇಗನೇ ಕೆಲಸವನ್ನೆಲ್ಲ ಮುಗಿಸಿ ಪುಟ್ಟಣ್ಣನ ಹುಟ್ಟಿದ ಹಬ್ಬಕ್ಕೆಆದಷ್ಟು ಬೇಗ ಹೋಗಬೇಕೆಂದುಕೊಂಡರು ಅವತ್ತು ಕೂಡಾ ತಡವಾಗಿ ಹೋಯ್ತು. ಸಣ್ಣ ಪುಟ್ಟ ಕೆಲಸವನ್ನೆಲ್ಲ ಕಾರ್ಮಿಕರಿಗೆ ಹಂಚಿ ತನ್ನ ಸ್ಕೋಡಾ ಕಾರಿನಲ್ಲಿ ಹೊರಟಾಗ ರಾತ್ರಿ ಏಳು ಗಂಟೆ.

ತೀರ್ಥಹಳ್ಳಿ ದಟ್ಟ ಕಾಡಿನ ಬೆಟ್ಟ ಗುಡ್ಡದ ನಡುವೆ ರಾಘುವಿನ ಒಂಟಿ ಕಾರ್ ಹೊರಟಿತು. ರಾಘುವಿಗೆ ಅಲ್ಲಿಯ ಬೆಟ್ಟ -ಗುಡ್ಡ, ಕಾಡು ಹೊಸತೇನು ಆಗಿರಲಿಲ್ಲ. ಬಾಲ್ಯದಿಂದಲೂ ಆ ದಟ್ಟ ಹಸಿರಿನ ಮಧ್ಯೆ ಬೆಳೆದ ಅವನಿಗೆ ಕತ್ತಲ ದಾರಿ ಖುಷಿ ಕೊಡುತ್ತಿತ್ತು.

ರಾಘು ಕಾಡು ದಾರಿಯನ್ನು ಸವೆಸಲು ಕಾರ್ ನಲ್ಲಿ ಸಣ್ಣಗೆ ಹಾಡು ಹಾಕಿಕೊಂಡ. ಅದರ ಜೊತೆಗೆ ತನ್ನ ಕರ್ಕಶ ಧ್ವನಿಯನ್ನು ಆಗಾಗ ಸೇರಿಸುತ್ತಿದ್ದ. ಕಾರಿಗೆ ಆಗಾಗ ಎದುರಾಗುತ್ತಿದ್ದ ಹೈ ಬಿಮ್ ಗಾಡಿಗಳಿಗೆ ಬೈದು ತನ್ನ ಸಿಟ್ಟನ್ನು ಹೊರಗೆ ಹಾಕುತ್ತಿದ್ದ. ಹೀಗೆ ಕಾರ್ ರಸ್ತೆಯುದ್ಧಕ್ಕೂ ಸಾಗಿತು. ಕಾರು ಒಂಟಿಕೊಪ್ಪ ದಾಟಿರಲಿಲ್ಲ, ರಸ್ತೆ ಮಧ್ಯೆ ಏಕಾಏಕಿಯಾಗಿ ಒಬ್ಬ ವ್ಯಕ್ತಿ ಕಾರಿಗೆ ಅಡ್ಡಲಾಗಿ ಬಂದ. ರಾಘು ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದನಾದರೂ ಆ ವ್ಯಕ್ತಿಯ ಮಂಡೆಗೆ ನಾಲ್ಕು ಕೊಟ್ಟು ಮುಂದೆ ಹೋದರೆ ಸೈ ಎಂದು ಕಾರ್ ನಿಂದ ಇಳಿದು “ನಿನ್ನ ಮಂಡೆ ಟೆಸ್ಟ್ ಮಾಡ್ಕೋಕೆ ನನ್ನ ಕಾರೇ ಬೇಕಿತ್ತಾ?”… ಎಂದು ಸಿಟ್ಟಲ್ಲಿ ಬೈಯಲು ಶುರು ಮಾಡಿದ. ಆತನ ಮುಖದಲ್ಲಿ ಗಾಬರಿ ಇತ್ತು. “ನಾನು ಬಿಕೆ ಭಂಡಾರಿ ಅಂತ, ಬ್ರಹ್ಮಾವರದವನು. ನಾನು ಬೈಕ್ ಲ್ಲಿ ಹೋಗ್ಬೇಕಾದ್ರೆ ನನ್ನ ಕಣ್ಣ ಮುಂದೆ ಒಂದು ಆಕ್ಸಿಡೆಂಟ್ ಆಯ್ತು. ಬೈಕ್ ನಿಂದ ಇಳಿದು ನೋಡಿದ್ರೆ ಆಟೋ ಡ್ರೈವರ್ ನಿಂತ ಟ್ರಕ್ ಗೆ ಹೋಗಿ ಗುದ್ದಿದ್ದಾನೆ. ಸದ್ಯ ಆಟೋದಲ್ಲಿ ಯಾರು ಪ್ರಯಾಣಿಕರು ಇರಲಿಲ್ಲ… ಅವನ  ಬುರಡೇಯಿಂದ ರಕ್ತ ಬೇರೆ ಹರಿತುoಟು. ಹೇಗಾದ್ರು ಮಾಡಿ ಆಸ್ಪತ್ರೆಗೆ ಸೇರಸೋಣ, ದಯವಿಟ್ಟು ಬನ್ನಿ” ಎಂದು ಗೋಗರೆದ. ರಾಘುವಿಗೂ ಮೊದಲೇ ಹೆಂಗರಳು. ಹಿಂದೆ ಮುಂದೆ ನೋಡದೆ ಬಿಕೆ ಭಂಡಾರಿ ಮಾತು ಕೇಳಿ ಆಕ್ಸಿಡೆಂಟ್ ಆದ ಸ್ಥಳಕ್ಕೆ ಓಡೋಡಿ ಹೋದ. ಆಟೋ ಡ್ರೈವರ್ ಕುಡಿದ ಅಮಲಿನಲ್ಲಿ ನಿಂತ ಟ್ರಕ್ ಗೆ ಹೋಗಿ ಗುದ್ದಿದ್ದ. ಹೊಡೆತದ ರಬ್ಬಸಕ್ಕೆ ಅವನ ಬುರುಡೆಯಿಂದ ರಕ್ತ ಚಿಮ್ಮುತ್ತಿತ್ತು. ಆ ವ್ಯಕ್ತಿಗೆ ಪ್ರಜ್ಞೆಯೇ ಇರಲಿಲ್ಲ. ಅವನ ಪರಿಸ್ಥಿತಿಗೆ ಅವನೇ ಕಾರಣ, ಇಂತಹ ಕುಡುಕರಿಗೆ ಸಹಾಯ ಮಾಡಲೇ ಬಾರದು ಅನ್ನುವಷ್ಟು ಕೋಪ ರಾಘುವಿಗೆ ಬಂದಿತ್ತಾದರೂ ಅವನ ಕುಟುಂಬದ ಪರಿಸ್ಥಿತಿ ನೆನೆದು ಸಹಾಯ ಮಾಡಲು ಮುಂದಾದ. ತನ್ನನ್ನು ಕರೆ ತಂದಿದ್ದ ಆ ಬಿ ಕೆ ಭಂಡಾರಿಗೆ ‘ನಾನು ಹೋಗಿ ನನ್ನ ಕಾರ್ ತರುವೆ, ಬೇಗ ಆಸ್ಪತ್ರೆಗೆ ಒಯ್ಯೋಣ’ ಎಂದು ದೂರದಲ್ಲಿ ನಿಂತಿದ್ದ ಕಾರ್ ನತ್ತ ಓಡಿದ. ಡ್ರೈವರ್ ನನ್ನು ಕಾರ್ ನಲ್ಲಿ ಹಾಕಿಕೊಂಡು ಇಬ್ಬರು ಆಸ್ಪತ್ರೆಯತ್ತ ನಡೆದರು. ಕಾರ್ ಓಡಿಸುವಾಗ ರಾಘುವಿನ ಮನೆಯಿಂದ ಎಷ್ಟೇ ಕರೆಗಳು ಬಂದರೂ ಎತ್ತಲಿಲ್ಲ, ಮಗ ಪುಟ್ಟಣ್ಣನ ಹುಟ್ಟುಹಬ್ಬಕ್ಕಿಂತ ಆ ಆಟೋ ಡ್ರೈವರ್ ಜೀವ ಉಳಿಸುವುದು ರಾಘುವಿಗೆ ಮುಖ್ಯವಾಗಿತ್ತು. ಡ್ರೈವರ್ ಉಳಿದರೇ ಸಾಕು ಎಂದು ಇಬ್ಬರೂ ಕಾರಲ್ಲಿಯೇ ಕೂತು ದೇವರಲ್ಲಿ ಪ್ರಾರ್ಥಿಸುತ್ತಿದ್ದರು.

(ಆಟೋ ಡ್ರೈವರ್ ಜೀವ ಉಳಿಸಿದ ಕತೆಯ ನಿಜವಾದ ಪಾತ್ರಧಾರಿಗಳು ರಾಘವೇಂದ್ರ ಮತ್ತು ಬಿ ಕೆ ಭಂಡಾರಿ)

ತೀರ್ಥಹಳ್ಳಿಯಲ್ಲಿ ನರ್ಸಿಂಗ್ ಹೋಮ್ ನಲ್ಲಿ ಆಕ್ಸಿಡೆಂಟ್ ಕೇಸ್ ಎಂದಾಗ ಚಿಕಿತ್ಸೆ ಕೊಡಲು ಮೊದಲು ಹಿಂದೇಟು ಹಾಕಿದರು. ಆದರೆ ರಾಘು ಮತ್ತು ಭಂಡಾರಿ ‘ಮೊದಲು ಜೀವ ಉಳಿಸಿ. ಹಣದ ಬಗ್ಗೆ ಚಿಂತಿಸಬೇಡಿ. ನಾವು ಅದರ ಜವಾಬ್ದಾರಿ ತಗೆದುಕೊಳ್ಳುತ್ತೇವೆ’ ಎಂದರು. ಆ ಧೈರ್ಯದ ಮೇಲೆ ಆಸ್ಪತ್ರೆಯವರು ಚಿಕಿತ್ಸೆ ಕೊಡಲು ಮುಂದಾದರು.

ನರ್ಸ್ ಒಬ್ಬಳು ಬಂದು

“ಸರ್, ಇದು ಪೇಷಂಟ್ ಜೇಬಿನಲ್ಲಿ ಇತ್ತು”… ಎಂದು ಆಟೋ ಡ್ರೈವರ್ ನ ಮೊಬೈಲ್ ನ್ನು ರಾಘುವಿನ ಕೈಗೆ ಕೊಟ್ಟಳು.

ಕೈಗೆ ಆಟೋ ಡ್ರೈವರ್ ಮೊಬೈಲ್ ಸಿಗುತ್ತಿದ್ದಂತೆ ಅವನ ಕಾಂಟಾಕ್ಟ್ ಲಿಸ್ಟ್ ಲ್ಲಿ ಹೆಚ್ಚಾಗಿ ಕರೆ ಮಾಡಿದ್ದ ಅಮ್ಮು ಎನ್ನುವ ನಂಬರ್ ಗೆ ಕರೆ ಮಾಡಿದ. ಆ ಕಡೆಯಿಂದ ಹೆಣ್ಣಿನ ಧ್ವನಿ ಕೇಳಿಸಿತು. ರಾಘು ವಿಷಯ ಮುಟ್ಟಿಸಿದ. ಅರ್ಧ ಗಂಟೆಯಲ್ಲಿ 35 ವರ್ಷದ ಹೆಣ್ಣು ಮಗಳು ಮತ್ತು ತನ್ನ ಎರಡು ಸಣ್ಣ ಮಕ್ಕಳೊಂದಿಗೆ ಆಸ್ಪತ್ರೆಗೆ ಧೌಡಾಯಿಸಿಕೊಂಡು ಬಂದಳು.

ಭಂಡಾರಿಯ ಬಳಿ ಹೋಗಿ

“ನನ್ನ ಗಂಡನ ಮೊಬೈಲ್ ನಿಂದ ಕರೆ ಬಂದಿತ್ತು. ಎಲ್ಲಿ ನನ್ನ ಗಂಡ “… ಎಂದಳು. ರಾಘು ಅಳುವ ಧ್ವನಿ ಕೇಳಿ ಡ್ರೈವರ್ ನ ಹೆಂಡ್ತಿ ಎಂದು ಭಾವಿಸಿ ಅವಳತ್ತ ಬಂದ. ಆಕೆಯ ಸೊಂಟದಲ್ಲಿದ್ದ  2 ವರ್ಷದ ಹೆಣ್ಣು ಮಗು, ಅವಳ ಬೆರಳು ಹಿಡಿದು ನಿಂತಿದ್ದ 6 ವರ್ಷದ ಹೆಣ್ಣು ಮಗುವನ್ನು ನೋಡಿ ಅವನ ಮನಸ್ಸು ಕರಗಿತು.

ರಾಘು ಮತ್ತು ಭಂಡಾರಿ ಅಪರಿಚಿತ ವ್ಯಕ್ತಿಗಳಾದರೂ ಮಾನವೀಯತೆಯನ್ನು ಮರೆಯಲಿಲ್ಲ. ಆಕ್ಸಿಡೆಂಟ್ ಆದಾಗ ಹಿಂದೆ ಸರಿಯದೆ ಆ ವ್ಯಕ್ತಿಯನ್ನು ಆಸ್ಪತ್ರೆಗೆ ತಂದು ಜೀವ ಉಳಿಸುವ ಪ್ರಯತ್ನ ಮಾಡಿದ್ದರು. ಆದರೆ ಸಂಸಾರದ ಜವಾಬ್ದಾರಿ ಹೊತ್ತ ಆಟೋ ಡ್ರೈವರ್ ತನ್ನ ಬೇಜವಾಬ್ದಾರಿತನದಿಂದ ಹಾಸಿಗೆ ಮೇಲೆ ಬದುಕು ಸಾವಿನ ಮಧ್ಯೆ ಹೋರಾಟ ನಡೆಸಿದ್ದ. ಅವನ ಮೇಲೆ ನಂಬಿಕೆ ಇಟ್ಟಿದ್ದ ಹೆಂಡತಿ, ಮಕ್ಕಳ ಕಣ್ಣಲ್ಲಿ ನೀರು ತುಂಬಿದ್ದವು.

ಅವರ ಗೋಳಾಟ ನೋಡಲಾಗದೆ ರಾಘು ಮತ್ತು ಭಂಡಾರಿ ಆ ಹೆಣ್ಣುಮಗಳ ಕೈಯಲ್ಲಿ ಖರ್ಚಿಗೆ ಸ್ವಲ್ಪ ಹಣ ನೀಡಿ, ಆಟೋ ಡ್ರೈವರ್ ಚಿಕಿತ್ಸೆ ಖರ್ಚು ತಾವೇ ಬರಿಸುವುದಾಗಿ ಹೇಳಿ ಅಲ್ಲಿಂದ ದುಃಖದಲ್ಲಿ ಹೊರಟರು.

(ರಸ್ತೆಯಲ್ಲಿ ಅಪಘಾತವಾದರೆ ಮೊಬೈಲ್ ತಗೆದು ವಿಡಿಯೋ ಮಾಡುವ ಜನರ ಮಧ್ಯೆ ರಾಘು ಹಾಗೂ ಬಿ ಕೆ ಭಂಡಾರಿಯವರಂತವರು ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಪಘಾತವಾದಾಗ ಮೊಬೈಲ್ ವಿಡಿಯೋ ಮಾಡುವುದನ್ನು ಬಿಟ್ಟು ಮೊದಲು ಗಾಯಾಳುಗೆ ಚಿಕಿತ್ಸೆ ಕೊಡಿಸುವುದರ ಮೂಲಕ ಮತ್ತೊಬ್ಬ ರಾಘು, ಭಂಡಾರಿ ನೀವಾಗಿ )


  • ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಮುಖ್ಯ ಸಂಪಾದಕಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading