ಕಾದಂಬರಿಗಾರ್ತಿ ಪ್ರೇಮಾ ಭಟ್ ಅವರ ಮನೆಯಲ್ಲಿ ಬಡತನವಿದ್ದರೂ ಗೆಳತಿಯರ ಹತ್ತಿರ ಪುಸ್ತಕಗಳನ್ನು ಎರವಲು ತಂದು ಓದುತ್ತಿದ್ದರಂತೆ. ಆಗೆಲ್ಲ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ಇರಲಿಲ್ಲ, ಓದುವುದೂ ಕೂಡ ಕಷ್ಟವಾಗಿದ್ದ ದಿನಗಳು. ಇಂತಹ ವಾತಾವರಣದಲ್ಲಿ ಪ್ರೇಮಾ ಭಟ್ ಅವರು ಕಾದಂಬರಿಗಾರ್ತಿಯಾದ ಜೀವನದ ಪಯಣದ ಬಗ್ಗೆ ವಸಂತ ಗಣೇಶ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪ್ರೇಮಾ ಭಟ್ ಕನ್ನಡದ ಕಾದಂಬರಿಗಾರ್ತಿ ಹಾಗೂ ಕಥೆಗಾರ್ತಿಯಾಗಿ ಪ್ರಸಿದ್ಧರು. ಇವರು ಹುಟ್ಟಿದ ಸಮಯದಲ್ಲಿಯೇ ಇವರ ಜಾತಕವನ್ನು ಪರಿಶೀಲಿಸಿ ಇವರ ಅಜ್ಜನವರು ಈ ಮಗು ಕಲೆಯಲ್ಲಿ ಹೆಸರು ಮಾಡುತ್ತದೆ ಎಂದಿದ್ದರಂತೆ. ಪ್ರೇಮಾ ಭಟ್ ಅವರು ಹುಟ್ಟಿದ್ದು 1941ರ ಸೆಪ್ಟಂಬರ್ 22ರಂದು ಉಡುಪಿ ಜಿಲ್ಲೆಯ ಹೆರ್ಗ ಎಂಬಲ್ಲಿ. ತಂದೆ ಜನಾರ್ದನ ಭಟ್, ಅಡಿಗೆ ಕೆಲಸ ಮಾಡುತ್ತಿದ್ದರು, ತಾಯಿ ವನಜಾಕ್ಷಿ. ತುಂಬು ಕುಟುಂಬದಲ್ಲಿ ಹುಟ್ಟಿ ಬೆಳೆದವರು ಇವರು. ಇವರ ಮನೆಯಲ್ಲಿ ದೊಡ್ಡಪ್ಪ ,ದೊಡ್ಡಮ್ಮ, ಅಜ್ಜಿ ಎಲ್ಲರೂ ಒಟ್ಟಾಗಿದ್ದ ಸಂಸಾರ.
ಇವರ ಮಾತುಗಳಲ್ಲಿ ದೊಡ್ಡಮ್ಮ, ತಾಯಿ ಅಜ್ಜಿ ಮೂವರಿಂದಲೂ ಪ್ರಭಾವಿತರಾಗಿರುವುದು ತಿಳಿದು ಬರುತ್ತದೆ. ಸ್ವಾಭಿಮಾನಿ ಆದ ಇವರ ತಾಯಿ ಶಾಲೆಯಲ್ಲಿ ಕಲಿಯದೇ ಹೋದರೂ ದಾಸರ ಪದಗಳನ್ನು ದಿನವಿಡೀ ಸುಶ್ರಾವ್ಯವಾಗಿ ಹಾಡುತ್ತಿದ್ದರಂತೆ, ಅದೂ ಇಂದು ಹಾಡಿದ್ದು ನಾಳೆ ಹಾಡದಂತೆ ಪ್ರತಿ ದಿನವೂ ಹೊಸ ಹೊಸದಾಗಿ ಹಾಡುತ್ತಿದ್ದರು ಎಂದು ತಾಯಿಯ ಜ್ಞಾಪಕ ಶಕ್ತಿಯನ್ನು ನೆನೆಯುತ್ತಾರೆ. ಅಜ್ಜಿ ಕೂಡಾ ಸಂಪ್ರದಾಯದ ಹಾಡುಗಳನ್ನು ಸೊಗಸಾಗಿ ಹೇಳುತ್ತಿದ್ದರಂತೆ, ಅಷ್ಟೇ ಅಲ್ಲ ಅವರೇ ಹಾಡನ್ನು ಕಟ್ಟಿ ಹಾಡುತ್ತಿದ್ದರಂತೆ. ಅಜ್ಜಿಯನ್ನು ಮದುವೆ, ಮುಂಜಿ ಮುಂತಾದ ಶುಭ ಸಮಾರಂಭಗಳಲ್ಲಿ ಹಾಡು ಹೇಳಲು ಕರೆದುಕೊಂಡು ಹೋಗುತ್ತಿದ್ದರಂತೆ.

ಮನೆಯಲ್ಲಿ ಬಡತನವಿದ್ದರೂ ಇವರ ತಂದೆಗೆ ಓದಿನ ಹವ್ಯಾಸವಿತ್ತು, ಅವರು ಪುಸ್ತಕಗಳನ್ನು ಓದಿ ಇವರಿಗೂ ಓದಲು ಹೇಳುತ್ತಿದ್ದರಂತೆ. ಗೆಳತಿಯರ ಹತ್ತಿರ ಪುಸ್ತಕಗಳನ್ನು ಎರವಲು ತಂದು ಓದುತ್ತಿದ್ದುದು, ಒಬ್ಬ ಗೆಳತಿಯ ತಂದೆಯವರದು ಹೋಟೆಲ್ ಇದ್ದು, ಆ ಗೆಳತಿ ವಾರಕ್ಕೊಮ್ಮೆ ಅಲ್ಲಿಗೆ ಕರೆದುಕೊಂಡು ಹೋಗಿ ಊಟ ಕೊಡಿಸುತ್ತಾ ಇದ್ದುದ್ದು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ.
ಆಗೆಲ್ಲ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ಇರಲಿಲ್ಲ, ಓದುವುದೂ ಕೂಡ ಕಷ್ಟವಾಗಿದ್ದ ದಿನಗಳು. ಅಂತಹ ಸಮಯದಲ್ಲಿ ಇವರ ತಾಯಿ ಕದ್ದು ಮುಚ್ಚಿ ಸರ್ಕಾರಿ ಶಾಲೆಗೆ ಇವರನ್ನು ಕಳುಹಿಸುತ್ತಾ ಇದ್ದರಂತೆ. ಇದೆಲ್ಲ ಕಷ್ಟದ ದಿನಗಳು ನೆನಪಿನಲ್ಲಿ ಉಳಿದು ಮುಂದೆ ನನ್ನ ಸಾಹಿತ್ಯ ರಚನೆಗೆ ಸಹಾಯವಾಯಿತು ಎನ್ನುತ್ತಾರೆ. ಹಾಗೆಯೇ ಹುಟ್ಟಿದೂರಿನ ಸುತ್ತಲಿನ ಚೆಲುವು, ಹಸಿರು ತುಂಬಿದ ವನಸಿರಿ, ಇದಕ್ಕೆ ವಿರುದ್ಧವಾಗಿ ಅದೇ ಹಳ್ಳಿಯಲ್ಲಿ ಕಾಣಸಿಗುತ್ತಿದ್ದ ಹಳ್ಳಿಗರ ಕಠಿಣ ಶ್ರಮದ ಜೀವನ, ಅಲ್ಲಿ ನಡೆಯುತ್ತಿದ್ದ ಶೋಷಣೆ, ಬವಣೆಗಳನ್ನು ಕಂಡಿದ್ದ ಇವರಿಗೆ, ಮುಂದೆ ಇವೆಲ್ಲವೂ ಕಥೆಗಳಿಗೆ ಮೂಲ ದ್ರವ್ಯಗಳಾಗಿ ಕಥಾರೂಪ, ಕಾದಂಬರಿಯ ರೂಪ ಪಡೆದುಕೊಂಡವು ಎನ್ನುತ್ತಾರೆ.
ಮುಂದೆ ಇವರ ತಂದೆ ತಾಯಿಯರು ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುತ್ತಾರೆ. ಆಗ ಇವರು ಮತ್ತು ತಂಗಿ ಇಬ್ಬರೂ ಓದಿದ್ದು ಶೇಷಾದ್ರಿಪುರಂ ಶಾಲೆಯಲ್ಲಿ, ಎಸ್.ಎಸ್.ಎಲ್.ಸಿ.ವರೆಗೆ. ತಾಯಿ ತಂದೆಯರಿಬ್ಬರೂ ದುಡಿದರೂ ಎರಡು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುವಲ್ಲಿ ಪರದಾಟವಾಗುತ್ತಿತ್ತು.
ಹಿರಿಯ ಮಗಳಾದುದರಿಂದ ಸಂಸಾರದ ಭಾರ ಹೊರಲು ದೂರದ ಗುಲ್ಬರ್ಗದ ಮಾಧ್ಯಮಿಕ ಶಾಲೆಯೊಂದರಲ್ಲಿ ಕೆಲಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ನಂತರ 1962ರಲ್ಲಿ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಿಯಾಗಿ ಸೇರಿದರು. ಕಾರ್ಯನಿರ್ವಹಿಸುತ್ತಲೇ ಎಂ.ಎ.ವರೆಗೆ ಓದಿದರು. ವಿವಿಧ ಹುದ್ದೆಗಳನ್ನು ನಿರ್ವಹಿಸಿ ಶಾಖಾಧಿಕಾರಿಯವರೆಗೆ ಮೇಲೇರಿ ನಂತರ ಸ್ವಇಚ್ಛೆಯಿಂದ ನಿವೃತ್ತಿ ಪಡೆದರು.

ಇವರ ತಂದೆಯವರು ತಮ್ಮ ಕಷ್ಟದ ದಿನಗಳಲ್ಲಿಯೂ ಮನೆಗೆ ತರುತ್ತಿದ್ದ ದಿನಪತ್ರಿಕೆ, ವಾರಪತ್ರಿಕೆಗಳು, ಕಥೆಪುಸ್ತಕಗಳನ್ನೆಲ್ಲಾ ಓದುತ್ತಾ ಬಂದ ಇವರ ಮನಸ್ಸಿನಲ್ಲಿಯೂ ಕಥೆ ಬರೆಯುವ ಆಸೆ ಹುಟ್ಟಿ ಬರೆದ ಮೊದಲ ಕಥೆ #ಗಾಜಿನ_ಬಳೆ. ಇದು ಜನಪ್ರಗತಿ ಪತ್ರಿಕೆಯಲ್ಲಿ 1970ರಲ್ಲಿ ಪ್ರಕಟಗೊಂಡಿತು. ಬಾಲವಿಧವೆಯರಾಗಿ ತೌರಿಗೆ ಹಿಂದಿರುಗಿದ ಬಾಲೆಯರು ಹೂಬತ್ತಿ ಹೊಸೆಯುತ್ತಲೇ ಬದುಕನ್ನು ಕಳೆಯುತ್ತಿದ್ದ ಕಥೆ ಇದಾಗಿದ್ದು ಓದುಗರಲ್ಲಿ ಸಂಚಲನವನ್ನುಂಟುಮಾಡಿತ್ತು ಎನ್ನುತ್ತಾರೆ. ಆಗ ಬಹಳ ಜನ ಈ ಕಥೆಯನ್ನು ವಿರೋಧಿಸಿದ್ದರು. ಧೃತಿಗೆಡದ ಪ್ರೇಮಾಭಟ್ ಅವರು ಮುಂದೆಯೂ ಸಹ ಹಲವಾರು ಕತೆಗಳನ್ನು ಬರೆಯತೊಡಗಿದರು. #ಅವಳ_ಬಾಳು ಎನ್ನುವುದು ಇವರು ಬರೆದ ಮೊದಲ ಕಾದಂಬರಿ
ವಿವಾಹನಂತರ ಇವರ ಪತಿ ಶ್ರೀನಿವಾಸಭಟ್ಟರು ಸಾಕಷ್ಟು ಪ್ರೋತ್ಸಾಹ ನೀಡುತ್ತಾರೆ. ಪ್ರೇಮಾರವರ ಹಲವಾರು ಕತೆ, ಕಾದಂಬರಿಗಳು ಪ್ರಕಟವಾಗುತ್ತವೆ. ಪತಿಯೇ ಪ್ರಕಾಶಕರಾಗಿ ಇವರ ಕೃತಿಗಳನ್ನಲ್ಲದೆ ಇತರ ಲೇಖಕರ ಹಲವಾರು ಕೃತಿಗಳನ್ನೂ ಪ್ರಕಟಿಸುತ್ತಾರೆ. ಇವರ ಪತಿಯವರ ಅಣ್ಣ ಎ.ಎಸ್. ರಾಮಕೃಷ್ಣ (ರಾಮಿ) ಹಾಗೂ ದೊಡ್ಡಪ್ಪನ ಮಗ ಕು.ಗೋ (ಎಚ್.ಗೋಪಾಲಭಟ್) ಕೂಡಾ ಸಾಹಿತ್ಯದಲ್ಲಿ ಹೆಸರು ಮಾಡಿದವರು.
ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರು ಬರೆದ ಕಥೆಗಳು, ಸುಮಾರು 12 ಕಥಾ ಸಂಕಲನಗಳಲ್ಲಿ ಅಚ್ಚಾಗಿವೆ. 108 ಕಥೆಗಳ ‘ಅಕ್ಷತೆ’, ಪಂಚಾಮೃತ, ಪ್ರೇಮಾಭಟ್ 108 ಕಥೆಗಳು ಮತ್ತು 2007ರಲ್ಲಿ 365 ಕಥೆಗಳ ಬೃಹತ್ ಕಥಾ ಸಂಕಲನ ‘ಕಥಾವರ್ಷ’ ಪ್ರಕಟಗೊಂಡಿವೆ. ಹಲವಾರು ಕಥೆಗಳು ಟಿವಿ ಧಾರಾವಾಹಿಯಾಗಿಯೂ, ಎರಡು ಕಥೆಗಳು ಇಂಗ್ಲಿಷ್ ಭಾಷೆಗೂ, ಕೆಲವು ಮರಾಠಿ ಭಾಷೆಗೂ ಭಾಷಾಂತರವಾಗಿದೆ. ಸರ್ಕಾರದ ಪಠ್ಯ ಪುಸ್ತಕಗಳಲ್ಲಿ, ಕನ್ನಡ ಭಾರತಿ ಸಂಕಲನದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯಗಳಲ್ಲಿ ಇವರ ಕಥೆಗಳು ಸೇರಿವೆ.
ಸುಮಾರು ಐವತ್ತೈದಕ್ಕೂಕ್ಕೂ ಹೆಚ್ಚು ಕಾದಂಬರಿಗಳನ್ನೂ ಇವರು ರಚಿಸಿದ್ದು ಅವುಗಳಲ್ಲಿ ನಲವತ್ತಕ್ಕೂ ಹೆಚ್ಚು ಕಾದಂಬರಿಗಳು ಗೋಕುಲ, ಪ್ರಜಾಮತ, ಕರ್ಮವೀರ, ಸಂಯುಕ್ತ ಕರ್ನಾಟಕ, ಮಂಗಳ, ತರಂಗ, ಪ್ರಿಯಾಂಕ, ಸೌಂದರ್ಯ ಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಗಳಾಗಿ ಪ್ರಕಟಗೊಂಡಿವೆ. ‘ಒಲಿದು ಬಂದವನು’ ಕಾದಂಬರಿಯು ‘ಆಡಿಬಾ ಅರಗಿಣಿಯೇ’ ಎಂಬ ಹೆಸರಿನಿಂದ ಮತ್ತು ‘ಸುಜಾತ’ ಕಾದಂಬರಿಯು ‘ಬೆಕ್ಕಿನ ಕಣ್ಣು’ ಹೆಸರಿನಿಂದ ಚಲನಚಿತ್ರವಾಗಿ ಜನಮನ ಸೆಳೆದಿವೆ. ನಂದಿನಿ ಕಾದಂಬರಿಯು ಇಂಗ್ಲಿಷ್ ಭಾಷೆಗೂ, ಆಯ್ದಕ್ಕಿ ಮಾರಯ್ಯ, ಕೊಟ್ಟೂರು ಬಸವೇಶ್ವರ, ಹೆಳವನ ಕಟ್ಟೆ ಗಿರಿಯಮ್ಮ ಕೃತಿಗಳು ಇತರ ಭಾಷೆಗಳಿಗೆ ಅನುವಾಗೊಂಡಿವೆ.

ಇವರ ಬರಹಗಳು ಕಥೆ, ಕಾದಂಬರಿಗಳಿಗಷ್ಟೇ ಮೀಸಲಾಗದೆ ವಿಚಾರ ಚಿಂತನೆಯ “ಗೃಹಿಣಿ” ವ್ಯಕ್ತಿಚಿತ್ರಣ, ಬದುಕು-ಬರಹಗಳ ಕೃತಿಗಳಾದ ಕಯ್ಯಾರ ಕಿಞ್ಙಣ್ಣರೈ, ದೊಡ್ಡರಂಗೇಗೌಡ 2 ವ್ಯಕ್ತಿ ಚಿತ್ರಗಳು, ಮನೆ, ಮದುಮಗಳು, ಹೆರ್ಗದ ದುರ್ಗಾಮಾತೆ, ಪೂರ್ಣಕುಂಭ ಮೊದಲಾದ 8 ಕವನ ಸಂಕಲನಗಳು ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬರೆದಿದ್ದಾರೆ.
ಇವರು ಬರೆಯಲು ಬೇಕಾದ ಅನುಭವಕ್ಕಾಗಿ ದೇಶ ಸುತ್ತುವ ಹವ್ಯಾಸವಿದ್ದು ಪತಿಯೊಡನೆ ಭಾರತ, ನೇಪಾಳ, ಕಾಶ್ಮೀರದ ವರೆಗೂ ಸುತ್ತಿದ್ದಾರೆ. ಲಂಡನ್‌ನಿಂದ ದುಬೈವರೆಗೆ ಸುತ್ತಿ ಬರೆದ ಪ್ರವಾಸಾನುಭವದ ಸಾಹಿತ್ಯ ಕೃತಿಗಳು “ಪೂರ್ವಾಂಚಲದಲ್ಲಿ ಕೆಲವು ದಿನಗಳು” ಹಾಗೂ “ಲಂಡನ್‌ನಿಂದ ದುಬೈವರೆಗೆ” ಮುಂತಾದವು. ದಿಬ್ಬಣ, ದಾಸಯ್ಯನ ಬಸ್ಸು, ಸುಬ್ಬತ್ತೆಯ ಪರಿವಾರ ಇವರ ಪ್ರಮುಖ ನಗೆಬರಹಗಳ ಸಂಕಲನಗಳು.
ಇವರು ಕರ್ನಾಟಕ ಸರ್ಕಾರದ ಚಲನಚಿತ್ರ ಆಯ್ಕೆ ಸಮಿತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಆಯ್ಕೆ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಮುಂತಾದವುಗಳಲ್ಲಿ ಸದಸ್ಯರಾಗಿ ಸಹಾ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ಸಮ್ಮೇಳನಗಳಲ್ಲಿ ಉಪನ್ಯಾಸ, ಕವನವಾಚನ, ಪ್ರಬಂಧ ಮಂಡನೆ, ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ ಮುಂತಾದವುಗಳ ಜವಾಬ್ದಾರಿಗಳನ್ನೂ ನಿರ್ವಹಿಸಿದ್ದಾರೆ. ಪತ್ರಿಕೆಗಳು ಏರ್ಪಡಿಸುವ ಕಥಾಸ್ಪರ್ಧೆಗಳಲ್ಲಿ ಹಲವಾರು ಬಾರಿ ಬಹುಮಾನಿತರಾಗಿದ್ದಾರೆ. “ಮಿಣುಕು ಹುಳು” ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, “ಗೊಂದಲ” ಕಾದಂಬರಿಗೆ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಕ.ಸಾ.ಪ), ‘ಕಾಡುಕಡಿದು ಊರು ಮಾಡಿದರು” ಕಾದಂಬರಿಗೆ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ, “ಗಾದಿ” ಕಾದಂಬರಿಗೆ ರಾಮಕ್ಕ ಪದ್ಮಕ್ಕ ಟ್ರಸ್ಟ್ ಪ್ರಶಸ್ತಿ, “ಪ್ರೇಮಾಭಟ್ 108 ಕಥೆಗಳು” ಕಥಾ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, “ಭೂಮಿಕಾ’ ಕೃತಿಗೆ ಅಳಸಿಂಗ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ದತ್ತಿ ಪ್ರಶಸ್ತಿಗಳಲ್ಲದೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಇವರ ಸ್ನೇಹಿತರು ಅಭಿಮಾನಿಗಳು ಇವರ 70ನೆಯ ವಯಸ್ಸಿನಲ್ಲಿ 2011ರಲ್ಲಿ “ಸಂಸ್ಕೃತಿ” ಅಭಿನಂದನ ಗ್ರಂಥವನ್ನು ಹೊರತಂದಿದ್ದಾರೆ.
ಸಾ.ಶಿ. ಮರುಳಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದ ಸಾಹಿತ್ಯ ದಿಗ್ಗಜರ ಒಡನಾಟ ಇವರಿಗೆ ದೊರಕಿತ್ತಂತೆ. ಇಷ್ಟೆಲ್ಲ ಬರೆದಿರುವ ಇವರಿಗೆ ಸಣ್ಣ ಕಥೆಗಳು ತುಂಬಾ ಇಷ್ಟವಾಗುತ್ತವೆ ಎನ್ನುತ್ತಾರೆ.
- ವಸಂತ ಗಣೇಶ್
