‘ನೀ ಬರುವೆ ಎಂದಾಗ’ ಕವನ –  ಶಿವದೇವಿ ಅವನೀಶಚಂದ್ರ

‘ನೀನಿರಲು ಒಡನೆ ಸಾಯುವುದೇ ಸ್ವರ್ಗ… ಬದುಕಿ ಬಂದರೂ ಹೊಸ ಅವ್ಯಕ್ತದೆಡೆಗೆ ಸೆಳೆತ’…ನಿವೃತ್ತ ಶಿಕ್ಷಕಿ  ಶಿವದೇವಿ ಅವನೀಶಚಂದ್ರ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವಿತೆ, ತಪ್ಪದೆ ಮುಂದೆ ಓದಿ….

ನೀ ಬರುವೆ ಎಂದಾಗ
ಕಡಲುಕ್ಕಿ ಬಂದಂತೆ
ದಡಮೀರಿ ಧಾವಿಸುವುದು
ಪ್ರೀತಿಯಲೆ ಮುತ್ತಿಕ್ಕಲು

ಕಡಲೊಳಗಿನ‌ ಮುತ್ತುಗಳ
ಅಲ್ಲೇ ಇರಗೊಟ್ಟು
ಧಾವಿಸುವೆ ನಿನ್ನ ಚರಣವ ಮುತ್ತಿ
ಪುಳಕಿಸಲು

ನೀ ಬರುವೆ ಎಂದಾಗ
ಎದೆಯ ಮಹಡಿಯಲಿ
ಚಂದ್ರ ಮೂಡಿ
ನನ್ನ ನೈದಿಲೆ ಮೊಗದಲಿ
ಭ್ರಮರಗೀತ

ನಿನ್ನ ಪಾದವ ಸವರಿ
ಮತ್ತೋಡಿ ಮಗದೋಡಿ
ಎದ್ದೆದ್ದು ಬೃಹತ್ತಾಗಿ
ನಿನ್ನ ಸೆಳೆದೊಯ್ಯುವೆ
ನಾ ಪ್ರೇಮ ಶರಧಿಗೆ
ಹಾಡಿ ಪ್ರಣಯಗೀತ

ತೆರೆಯೆದ್ದು ತೆರೆಬಿದ್ದು
ಕಾಯದ ಹಾಯಿದೋಣಿಯಲಿ
ತೇಲಿ‌ಮುಳುಗುವ
ಆಟವೇನು ಚೆಂದ

ಬಿಟ್ಟೆಯಲ್ಲ ನೀನೀಗ ಭಯವ
ನೀರೊಳಗಿಳಿಯದವನು
ಎಂತು ಹೊಕ್ಕಿತೊ ಕಾಣೆ
ನಿರ್ಭಯತೆಯ ರಕ್ಕಸ

ಒಲಿದ ಜೀವದ ಜೊತೆಗೆ
ಹೊಸ ದಿಸೆಗೆ ಸಾಗುತ್ತ
ಅವ್ಯಕ್ತದೆಡೆಗೆ ಸಾಗುವುದೆ‌ ಚೆಂದ
ಅದು ಚೆಲುವ ಅನುಬಂಧ

ನಾ ನಿನಗೆ ಕನ್ನಡಿ
ನೀನೆನಗೆ ಮುನ್ನುಡಿ
ಮುಳುಗಾಯ್ತು ಭೀತಿಯನೆ ಭೀತಗೊಳಿಸಿ

ಭರವಸೆಯ ಕೈಬಿಡದೆ
ತೇಲಿದರು ಮುಳುಗಿದರು
ಅಪರಿಚಿತ ಅನುಭವಕೆ
ತೆರೆದುಕೊಂಡಿದ್ದು ಸುಳ್ಳೆ

ನೀನಿರಲು ಒಡನೆ
ಸಾಯುವುದೇ ಸ್ವರ್ಗ
ಬದುಕಿ ಬಂದರೂ
ಹೊಸ ಅವ್ಯಕ್ತದೆಡೆಗೆ
ಸೆಳೆತ ನಿತ್ಯಸತ್ಯ

ಬಾಳಿನಲಿ ಕ್ಷಣಕ್ಷಣವೂ
ಸವಾಲಿಗೆ ಎದೆಯೊಡ್ಡಿ
ಕಣ್ಣೀರು ಕರೆಯುತ್ತಾ
ಕುಳಿತಿರುವ ಬದಲು

ಧುಮುಕೋಣ ಸವಾಲುಗಳ
ಸಾಗರಕ್ಕೆ
ನಾ ನಿನಗೆ ನೀನೆನಗೆ ತೆಪ್ಪವಾಗಿ
ಬಾಳಹಂದರಕೆ ಹಬ್ಬಿರುವ
ಬೀಳು ಮಲ್ಲಿಗೆಯಾಗಿ
ಖುಷಿಯ ಪರಿಮಳಿಸಿ


  •  ಶಿವದೇವಿ ಅವನೀಶಚಂದ್ರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading