ನರಸಿಂಹ ಕೈಯಲ್ಲಿ ಕೊಡಲಿ ಹಿಡಿದು ಬಂದ, ಏನಮ್ಮಿ ಏನ್ ಮಾಡ್ತಿದ್ದೀಯಾ… ಮೊಗ್ಗು ಬಿಡಿಸ್ತಿದೀಯ… ಕೊಡಲಿ ಎತ್ತಿ ಹಾಕ್ಲ ಕಾಲಿಗೆ, ಎಂದು ತಮಾಷೆ ಮಾಡಿದ.ನಾನಿನ್ನು ಚಿಕ್ಕವಳು ಅವನ ಮಾತಿಗೆ ಹೆದರಿ ಅಮ್ಮ… ಎಂದು ಕಿರುಚಿಕೊಂಡೆ ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಓ ಮಲ್ಲಿಗೆ’ ತಪ್ಪದೆ ಮುಂದೆ ಓದಿ…
ಆಹಾ ಮಲ್ಲಿಗೆ …. ಆ ಹೆಸರು ಕೇಳಿದರೇನೇ ಮೈಮನ ಹರ್ಷಿಸುತ್ತದೆ. ಹೂವಾಗಿ, ಹಿತವಾಗಿ ಅರಳುತ್ತದೆ. ಮನವು ಮುದಗೊಂಡು ನಲಿಯುತ್ತದೆ. ಮಲ್ಲಿಗೆ ಹೂವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಅದರಲ್ಲೂ ಹೆಣ್ಣು ಮಕ್ಕಳಿಗೆ ಮಲ್ಲಿಗೆ ಹೂವೆಂದರೆ ಪಂಚಪ್ರಾಣ. ಉದ್ದನೆಯ ಜಡೆಗೆ ಮಲ್ಲಿಗೆ ದಂಡೆಯನ್ನು ಮುಡಿದು ಹೆಣ್ಣು ಮಕ್ಕಳು ನಲಿಯುತ್ತಾರೆ, ಸಂಭ್ರಮಿಸುತ್ತಾರೆ. ಮಲ್ಲಿಗೆ ಮುಡಿದ ನಾರಿ ಎಲ್ಲರ ಗಮನವನ್ನು ಸೆಳೆಯುತ್ತಾ ಸುತ್ತಲಿನ ಪರಿಸರವನ್ನು ಸುಗಂಧ ಮಯಗೊಳಿಸುತ್ತಾಳೆ. ಇನ್ನು ನವ ವಧುವಿಗಂತು ಮಲ್ಲಿಗೆಯ ಮೊಗ್ಗಿನ ಜಡೆಯ ಸಿಂಗಾರ ಆಕರ್ಷಣೀಯ. ಮದುವೆಗೆ ಅದೆಷ್ಟೇ ಬೆಲೆ ಬಾಳುವ ಒಡವೆ ವಸ್ತ್ರಗಳಿಂದ ಸಿಂಗರಿಸಿದ್ದರೂ ಮಲ್ಲಿಗೆಯ ಮೊಗ್ಗಿನ ಜಡೆ ಹಾಕದಿದ್ದರೆ ಆ ಶೃಂಗಾರ ಅಪೂರ್ಣ ವೆನಿಸುತ್ತದೆ. ಎಲ್ಲಾ ಶುಭ ಕಾರ್ಯಗಳಿಗೂ ಸೌಗಂಧ ಸೂಸುವ ಮಲ್ಲಿಗೆ ಹೂವು ಪ್ರಶಸ್ತನೀಯ. ಹೀಗೆ ಮಲ್ಲಿಗೆ ಹೂವು ಮಾನವನ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ.
ಮಲ್ಲಿಗೆಯು ಉಷ್ಣವಲಯದಲ್ಲಿ ಸೊಂಪಾಗಿ ಬೆಳೆಯುವ ಓಲಿಯಾಸಿ ಪೊದೆ ಜಾತಿಯ ಬಳ್ಳಿಯಾಗಿದೆ. ಸುಮಾರು ಎರಡು ನೂರು ಜಾತಿಗಳಿರುವ ಆಲಿವ್ ಕುಟುಂಬದ ಮಲ್ಲಿಗೆಯಲ್ಲಿ ಹಲವು ವಿಧಗಳಿವೆ. ನಮಗೆ ತಿಳಿದಿರುವಂತೆ ಕಾಡು ಮಲ್ಲಿಗೆ, ಸೂಜಿಮಲ್ಲಿಗೆ ,ಜಾಜಿ ಮಲ್ಲಿಗೆ, ದುಂಡು ಮಲ್ಲಿಗೆ, ಮೈಸೂರು ಮಲ್ಲಿಗೆ, ಸಂಜೆ ಮಲ್ಲಿಗೆ, ಮಂಗಳೂರು ಮಲ್ಲಿಗೆ ಮತ್ತು ಏಳು ಸುತ್ತಿನ ಅರಳುಮಲ್ಲಿಗೆ ಹೆಸರಾಗಿವೆ. ಮಲ್ಲಿಗೆ ಇದೊಂದು ದೀರ್ಘಕಾಲೀನ ಪುಷ್ಪ ಬೆಳೆಯಾಗಿದ್ದು, ಒಮ್ಮೆ ನಾಟಿ ಮಾಡಿದರೆ ಕನಿಷ್ಠ 20 ವರ್ಷಗಳವರೆಗೂ ಚಿಗುರಿ ಹೂವು ಬಿಡುತ್ತಲೇ ಇರುತ್ತದೆ.ಗಿಡ ನೆಟ್ಟ ಎರಡು ಮೂರು ವರ್ಷಗಳಲ್ಲಿ ಹೂವು ಪಡೆಯಬಹುದು.

ಫೋಟೋ ಕೃಪೆ : google
ಸಾಮಾನ್ಯವಾಗಿ ಚಳಿಗಾಲದಲ್ಲಿ ಮಲ್ಲಿಗೆ ಹೂ ಬಿಡುವುದಿಲ್ಲ. ಆ ಸಮಯದಲ್ಲಿ ಮಲ್ಲಿಗೆಯ ಗಿಡವನ್ನು ಸ್ವಲ್ಪ ಉದ್ದ ಬಿಟ್ಟು ಕಟಾವು ಮಾಡಬೇಕು. ಆಗಾಗ ಕೆಮ್ಮಣ್ಣು, ಗೊಬ್ಬರ, ನೀರು ಹಾಕುತ್ತಿದ್ದರೆ ಚಳಿಗಾಲದ ನಂತರ ಚಿಗುರೊಡೆಯುತ್ತದೆ. ಬಳಿಕ ಹೂ ಬಿಡಲು ಪ್ರಾರಂಭಿಸುತ್ತದೆ.ತನ್ನ ಗಂಧದ ಘಮಲನ್ನು ಸುತ್ತಲೂ ಪಸರಿಸುತ್ತಾ ದಾರಿಹೋಕರ ಗಮನ ಸೆಳೆಯುತ್ತದೆ. ಹಚ್ಚ ಹಸಿರಿನ ಮಲ್ಲಿಗೆಯ ಗಿಡದಲ್ಲಿ ಹೂಗಳು ಅರಳಿ ನಿಂತು ನಕ್ಷತ್ರಗಳಂತೆ ಹೊಳೆಯುತ್ತವೆ. ತನ್ನದೇ ಆದ ವಿಶಿಷ್ಟ ಸುವಾಸನೆಯನ್ನು ಬೀರುತ್ತಾ ಮಲ್ಲಿಗೆ ಹೂವು ಪುಷ್ಪ ಸಾಮ್ರಾಜ್ಯದ ರಾಣಿಯಾಗಿ ವಿಜೃಂಭಿಸುತ್ತದೆ.
ಓ ಮಲ್ಲಿಗೆ …..
ಅಚ್ಚ ಬಿಳುಪಿನ ಶುಭ್ರ ನಗುವಿನ
ಶ್ವೇತ ಸುಂದರಿ ನೀನು !
ಗಂಧದ ಬಟ್ಟಲ ತನ್ನೊಡಲಲ್ಲಿ ಅಡಗಿಸಿಕೊಂಡು ಮಂದಸ್ಮಿತ ನಗೆ ಬೀರುತ್ತಿರುವ ಸುಹಾಸಿನಿ
ಇತ್ತ ಬಿರು ಬೇಸಿಗೆ ಶುರುವಾಗಿದೆ , ಅತ್ತ ನಿನ್ನ ಸುಮಗಂಧ ಜೋರಾಗಿದೆ, ಪುಷ್ಪ ಸಾಮ್ರಾಜ್ಯದ ಸೌಗಂಧಿಕಾ ಸಾಮ್ರಾಜ್ಞಿ ಚೆಲುವೆಲ್ಲ ನಂದೇ.. ಒಲವೆಲ್ಲ ನಂದೇ ಎಂದು ಹೇಳುತ್ತಿರುವೆ ನೀನು. ನಿನ್ನ ಮುಡಿದ ನಾನು ಚೆಲುವೆ ಎಂದು ಹೇಗೆ ಹೇಳಲಿ ಇನ್ನು!
ನಿನ್ನ ನಯನ ಮನೋಹರ ಚೆಲುವಿನ ಚಿತ್ತಾರದ ಮುಂದೆ ಎನ್ನಯ ಚೆಲುವು ಸರಿಸಾಟಿಯಾಗ ಬಲ್ಲುದೆ ಹೇಳು ಮನೆಯಂಗಳದಲ್ಲಿ ಚಿಗುರಿ ಬಳ್ಳಿಯಾಗಿ ಹಬ್ಬಿ ಸ್ವಾಗತವ ಕೋರುತಿರುವೆ ಒಲವಿನ ಲೋಕಕ್ಕೆ ನೀನೆ ರಾಣಿಯಾಗಿರುವೆ.
ದಾರಿಹೋಕರ ಕಣ್ಮನ ತಣಿಸಿ ತನ್ನೊಡಲ ಗಂಧದ ಘಮಲ ನುಣಿಸಿ ಮುಗುಳ್ನಗೆ ಬೀರುತ್ತಿರುವೆ ನೀ ನಿತ್ಯ ಮಲ್ಲಿಗೆ ನವ ವಧು ವರರ ಪ್ರಣಯದಾಲಿಂಗನಕೆ ಸ್ಪೂರ್ತಿಯಾ ತುಂಬಿ ನಿನ್ನ ಗಂಧದ ಗಂಧರ್ವ ಲೋಕದಲ್ಲಿ ಮೀಯಿಸುತ್ತಿರುವೆ.

ಫೋಟೋ ಕೃಪೆ : google
ನವ ವಧುವಿನ ಮುಡಿಯನೇರಿ ಮೊಗ್ಗಿನ ಜಡೆಯಾಗಿ ಜೊತೆಗೂಡಿ ನವಾನಿಲದ ತಂಗಾಳಿ ತೀಡಿ ಸಾರ್ಥಕ ರಾತ್ರಿಗೆ ಮೋಡಿಯ ಮಾಡಿ ರತಿ ದೇವಿಯ ಗೆಳತಿಯಾಗಿರುವೆ ಓ ಸಂಜೆ ಮಲ್ಲಿಗೆ ನಿನ್ನದೇನು ಲೀಲೆ.
( ನನ್ನ ಕಾವ್ಯ ಕುಸುರಿ ಕವನ ಸಂಕಲನದಿಂದ ಆಯ್ದ ಓ ಮಲ್ಲಿಗೆ ಕವಿತೆ )
ಹೀಗೆ ಮಲ್ಲಿಗೆಯ ಬಗ್ಗೆ ಬರೆಯುತ್ತಾ ಹೋದರೆ ಪದಗಳೇ ಸಾಲವು. ನಾನು ಚಿಕ್ಕವಳಾಗಿದ್ದಾಗ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಒಂದು ಮಲ್ಲಿಗೆಯ ಗಿಡವಿತ್ತು. ಬೇಸಿಗೆ ಕಾಲ ಬಂತೆಂದರೆ ಮಲ್ಲಿಗೆಯ ಘಮಲು ಶುರುವಾಗುತ್ತಿತ್ತು. ಆಗ ದಿನನಿತ್ಯ ನನಗೆ ಮಲ್ಲಿಗೆ ಬಿಡಿಸುವುದೇ ಕೆಲಸ. ಪ್ರತಿನಿತ್ಯ ಸಂಜೆಯೇ ಮನೆಯ ಮುಂದಿನ ಕಾಂಪೌಂಡ್ ಗೋಡೆಯನ್ನು ಹತ್ತಿ, ಮೊಗ್ಗುಗಳನ್ನು ಬಿಡಿಸಿ ಅಮ್ಮನ ಕೈಗೆ ಕೊಡುತ್ತಿದ್ದೆ. ಆ ಮೊಗ್ಗುಗಳನ್ನು ಅಮ್ಮ ಪ್ಲಾಸ್ಟಿಕ್ ಕವರ್ ಇಲ್ಲವೇ ಯಾವುದಾದರೂ ಒಂದು ಬಟ್ಟಲಿನಲ್ಲಿ ಹಾಕುತ್ತಿದ್ದರು. ಮಾರನೇ ದಿನ ಆ ಮೊಗ್ಗುಗಳು ಹೂವಾಗಿ ಅರಳಿ ನಳನಳಿಸುತ್ತಿದ್ದವು. ಒಂದು ವೇಳೆ ಕಣ್ ತಪ್ಪಿಸಿಕೊಂಡ ಮೊಗ್ಗುಗಳು ಗಿಡದಲ್ಲೇ ಉಳಿದರೆ ಅವು ಅಲ್ಲೇ ಅರಳಿ ನಗೆ ಬೀರುತ್ತಿದ್ದವು. ಆಗ ಅರಳಿ ನಿಂತ ಮಲ್ಲಿಗೆ ಹೂಗಳನ್ನು ನೋಡಲು ಎರಡು ಕಣ್ಣುಗಳು ಸಾಲವು.
ಹೀಗೇ ಒಂದು ದಿನ ಸಂಜೆ ಕಾಂಪೌಂಡ್ ಗೋಡೆ ಹತ್ತಿ ಮಲ್ಲಿಗೆ ಮೊಗ್ಗುಗಳನ್ನು ಬಿಡಿಸುತ್ತಿದ್ದೆ. ಆ ಮೊಗ್ಗುಗಳನ್ನು ಬಿಡಿಸುವುದರಲ್ಲೂ ಏನೋ ಒಂದು ರೀತಿಯ ಸಂಭ್ರಮ, ಖುಷಿ ನಮಗೆ. ಅದೇ ವೇಳೆಗೆ ನಮ್ಮ ಮನೆಗೆ ಸೌದೆ ಒಡೆಯಲು ಬರುತ್ತಿದ್ದ ಹೊಲೆಯರ ನರಸಿಂಹ ಕೈಯಲ್ಲಿ ಕೊಡಲಿ ಹಿಡಿದು ಬಂದ. ಯಾರೇ ಕರೆದರೂ ಹೋಗಿ ಸೌದೆ ಒಡೆದು ಕೂಲಿ ಪಡೆದು ಜೀವನ ಸಾಗಿಸುತ್ತಿದ್ದ. ಪ್ರತಿನಿತ್ಯ ಅವನದ್ದು ಅದೇ ಕಾಯಕ.
ಸೀದಾ ಬಂದವನು ಮಲ್ಲಿಗೆ ಗಿಡದ ಬಳಿ ಬಂದು ….. ಏನಮ್ಮಿ ಏನ್ ಮಾಡ್ತಿದ್ದೀಯಾ…….ಮೊಗ್ಗು ಬಿಡಿಸ್ತಿದೀಯ… ಕೊಡಲಿ ಎತ್ತಿ ಹಾಕ್ಲ ಕಾಲಿಗೆ, ಎಂದು ತಮಾಷೆ ಮಾಡಿದ. ನಾನಿನ್ನು ಚಿಕ್ಕವಳು ಅವನ ಮಾತಿಗೆ ಹೆದರಿ ಅಮ್ಮ…… ಎಂದು ಕಿರುಚಿಕೊಂಡೆ. ನನ್ನ ಚೀರಾಟ ಕೇಳಿ ಅಮ್ಮ ಏನಾಯ್ತೋ ಎಂದು ಓಡಿ ಬಂದು ಹೊಲೆಯರ ನರಸಿಂಹನನ್ನು ಕಂಡು……ಇಲ್ಲಿ ನಿನಗೇನೋ ಕೆಲಸ ನರಸಿಂಹ ನಡಿ…. ಸೌದೆ ಒಡಿ ನಡಿ ಎಂದು ಬೈದು ಅವನನ್ನು ಹೊರಗೆ ಕಳಿಸಿದಳು
ಅದೇ ಕನವರಿಕೆಯಲ್ಲಿ ರಾತ್ರಿ ಮಲಗಿದೆ. ಕನಸಿನಲ್ಲಿ ಅದೇ ದೃಶ್ಯ ಪುನರಾವರ್ತನೆ ಆಗಿದೆ. ಮುಂದುವರೆದು ನರಸಿಂಹ ಕೊಡಲಿಯಿಂದ ನನ್ನ ಕಾಲಿಗೆ ಹೊಡೆದಿದ್ದಾನೆ. ಕಾಲಿನಲ್ಲಿ ಗಾಯವಾಗಿ ರಕ್ತ ಸುರಿಯುತ್ತಿದೆ. ನಾನು ಅಮ್ಮಾ…. ಅಮ್ಮಾ ….ಎಂದು ಕಿರುಚುತ್ತಾ ಎದ್ದಿದ್ದೇನೆ. ಪಕ್ಕದಲ್ಲೇ ಮಲಗಿದ್ದ ಅಮ್ಮ ಗಾಬರಿಯಿಂದ “ಏನಾಯ್ತು ಪುಟ್ಟಿ ಏನಾಯ್ತಮ್ಮ” ಎಂದಾಗ ನರಸಿಂಹ ನನ್ನ ಕಾಲಿಗೆ ಕೊಡಲಿಯಿಂದ ಹೊಡೆದಿದ್ದಾನೆ ನೋಡು ಎಂದು ಅಳುತ್ತ ಹೇಳಿದ್ದೆ.
ಮಗುವಿಗೆ ಎಲ್ಲೋ ಕನಸು ಬಿದ್ದಿರಬೇಕು,ಅದಕ್ಕೆ ಹೀಗೆ ಅಳುತ್ತಿದ್ದಾಳೆ ಎಂದು ಊಹಿಸಿದ ಅಮ್ಮ ” ಇಲ್ಲ ಸುಮ್ನಿರು ಏನೂ ಆಗಿಲ್ಲ ಅಳಬ್ಯಾಡ ” ಎಂದು ಸಮಾಧಾನಿಸಿದರು.
ಹೀಗೆ ಮಲ್ಲಿಗೆ ಗಿಡದೊಂದಿಗಿನ ನನ್ನ ನಂಟು ಇಂದು ನೆನ್ನೆಯದಲ್ಲ. ಬೇಸಿಗೆ ರಜೆ ಬಂತೆಂದರೆ ನನ್ನ ಉದ್ದದ ಜಡೆಗೆ ಮಲ್ಲಿಗೆ ಹೂವಿನ ಮೊಗ್ಗಿನ ಜಡೆ ಹಾಕಿಸಿಕೊಳ್ಳುವುದು, ಉದ್ದ ಕೂದಲಿನಿಂದ ಒಪ್ಪವಾಗಿ ಗಂಟು ಹಾಕಿಸಿಕೊಂಡು ಮಲ್ಲಿಗೆ ದಂಡೆ ಮುಡಿಸಿಕೊಂಡು ಸಂಭ್ರಮಿಸುವುದು. ಪಕ್ಕದ ಊರಾದ ಮಧುಗಿರಿಗೆ ಅಪ್ಪನ ಜೊತೆ ಹೋಗಿ ಮೊಗ್ಗಿನ ಜಡೆಯ ಫೋಟೋ ತೆಗೆಸಿಕೊಳ್ಳುವುದು. ಹೀಗೆ ಬಾಲ್ಯಕಾಲದ ನೆನಪುಗಳು ಇಂದಿಗೂ ಮಲ್ಲಿಗೆಯಷ್ಟೇ ಸುಮಧುರ.

ಫೋಟೋ ಕೃಪೆ : google
ಮುಂದೆ ದೊಡ್ಡವಳಾಗಿ ಮದುವೆಯಾಗಿ ಹತ್ತಾರು ವರ್ಷಗಳ ನಂತರ ನನ್ನದೇ ಸ್ವಂತ ಸೂರೊಂದನ್ನು ನಿರ್ಮಿಸಿದಾಗ ನಮ್ಮ ಮನೆಯ ಅಂಗಳದಲ್ಲೂ ಮಲ್ಲಿಗೆ ಗಿಡ ವೊಂದನ್ನು ನೆಟ್ಟಿದ್ದೆ. ಕೆಮ್ಮಣ್ಣು, ಗೊಬ್ಬರ, ನೀರಿನ ಆರೈಕೆಯಿಂದ ಮಲ್ಲಿಗೆ ಬಳ್ಳಿ ಸೊಂಪಾಗಿ ಹಬ್ಬಿತ್ತು. ಪುಟ್ಟ ಬಳ್ಳಿ ನೋಡು ನೋಡುತ್ತಲೇ ಬೆಳೆದು ದೊಡ್ಡ ಪೊದೆಯಾಯಿತು. ನನ್ನ ಪ್ರೀತಿಯ ಆರೈಕೆಯೂ ಜೊತೆಯಿತ್ತು.
ಮಲ್ಲಿಗೆ ಹೂ ಅರಳಿ ನಗಲು ಬೇಸಿಗೆ ಪ್ರಶಸ್ತ ಕಾಲ. ಬೇಸಿಗೆಯ ಬಿಸಿ ಏರುತ್ತಿದ್ದಂತೆ ಗಿಡದ ತುಂಬಾ ಮಲ್ಲಿಗೆ ಮೊಗ್ಗು ಹೂಗಳು ತುಂಬಿರುತ್ತಿದ್ದವು. ಒಂದಲ್ಲ ಎರಡಲ್ಲ ಬರೋಬರಿ ನಾಲ್ಕೈದು ಮೊಳ ಆಗುವಷ್ಟು ಹೂಗಳು ಬಿಡುತ್ತಿದ್ದವು. ಪ್ರತಿದಿನ ನಾನು ಮುಡಿಯುವುದಲ್ಲದೆ ದೇವರ ಪಟಗಳಿಗೂ ಹಾಕಿ ಅಕ್ಕ ಪಕ್ಕದ ಮನೆಯ ಹೆಂಗಳೆಯರಿಗೂ ಹಂಚುತ್ತಿದ್ದೆ. ಹೂವು ಯಾರು ಮುಡಿದರೇನು? ಸಂಜೆಯ ವೇಳೆಗೆ ಎಲ್ಲವೂ ಬಾಡುತ್ತವೆ ಅವುಗಳ ಆಯುಷ್ಯವೇ ಅಷ್ಟಲ್ಲವೇ…. ಅಲ್ಪಾಯುಷಿಗಳಾದರೂ ಅರಳಿ ನಗುವ ಅತ್ಯಲ್ಪ ಕಾಲದಲ್ಲೇ ಸೌಗಂಧ ಬೀರಿ ದೇವರ ಗುಡಿ ಸೇರಿ ನೀರೆಯ ಮುಡಿಯೇರಿ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳುತ್ತವೆ. ಈ ಹೂವಿನ ಸೊಬಗಿಗೆ ಸುಗಂಧಕ್ಕೆ ಮಾರುಹೋಗದವರೇ ಇಲ್ಲವೇನೋ…..ಹಾಗಾಗಿಯೇ ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂವಿಗೆ ಭಾರಿ ಬೇಡಿಕೆ. ಹಬ್ಬ ಹರಿದಿನಗಳಲ್ಲಂತೂ ಮಲ್ಲಿಗೆ ಹೂವು ಒಂದು ಮೊಳಕ್ಕೆ ನೂರು ರೂಗಳನ್ನು ಕೊಡಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಒಂದು ಮೊಳ ಮಲ್ಲಿಗೆಗೆ 20 ರಿಂದ 30 ರೂಪಾಯಿ ಕೊಡಬೇಕಾಗುತ್ತದೆ. ಹಾಗಾಗಿ ಮಲ್ಲಿಗೆ ಹೂವು ಬೆಳೆಯುವುದರಿಂದ ರೈತರಿಗೂ ಲಾಭವಾಗುತ್ತದೆ.
ಹೀಗೆ ಮಲ್ಲಿಗೆ ಹೂವು ಪ್ರಮುಖ ವಾಣಿಜ್ಯ ಬೆಳೆಯೂ ಆಗಿದೆ ಹಾಗೂ ಹೆಂಗಳೆಯರ ಮನ ಸೆಳೆಯುವ ಬಹು ಬೇಡಿಕೆಯ ಸುಗಂಧ ಪುಷ್ಪವೂ ಆಗಿದೆ. ಇನ್ನು ಮಲ್ಲಿಗೆ ಹೂವಿನ ಔಷಧೀಯ ಗುಣಗಳ ಬಗ್ಗೆ ಹೇಳುವುದಾದರೆ ಕಿವಿ ಮತ್ತು ಮೂಗಿನ ರೋಗಗಳಲ್ಲಿ ಮಲ್ಲಿಗೆಯಿಂದ ತಯಾರಿಸಿದ ತೈಲವನ್ನು ಉಪಯೋಗಿಸಲಾಗುತ್ತದೆ.
ಮಲ್ಲಿಗೆಯ ಬೇರು, ಹೂವು ಮತ್ತು ಎಲೆಗಳು ಎದೆ ಹಾಲಿನ ಉತ್ಪತ್ತಿಯನ್ನು ತಗ್ಗಿಸುತ್ತವೆ. ಸ್ವತಃ ಈ ವಿಷಯದಲ್ಲಿ ನನಗೂ ಕೂಡ ಅನುಭವ ಆಗಿದೆ. ನನ್ನ ಚಿಕ್ಕ ಮಗಳು ಒಂದು ವರ್ಷದವಳಿದ್ದಾಗ ಅವಳಿಗೆ ಹಾಲು ಬಿಡಿಸಲು ಒದ್ದಾಡುತ್ತಿದ್ದೆ, ಆಗ ಹಿರಿಯ ಶಿಕ್ಷಕಿಯೊಬ್ಬರು ಮಲ್ಲಿಗೆ ಹೂವಿನ ಬಳಕೆಯನ್ನು ಹೇಳಿಕೊಟ್ಟರು. ಎದೆ ಹಾಲಿನ ಉತ್ಪತ್ತಿ ಕಡಿಮೆ ಆಯಿತು.

ಫೋಟೋ ಕೃಪೆ : google
ಚೀನ ದೇಶದಲ್ಲಿ ಚಹಾದಲ್ಲಿ ಸುಗಂಧ ಬರಿಸಲು ಮಲ್ಲಿಗೆ ಹೂವನ್ನು ಬಳಸುತ್ತಾರಂತೆ. ದೃಷ್ಟಿ ದೋಷದ ತೊಂದರೆ ಇರುವವರು ಮಲ್ಲಿಗೆ ಎಲೆಯ ರಸದಿಂದ ತಯಾರಿಸಿದ ತೈಲ ಉಪಯೋಗಿಸಬಹುದು.
ಕಾಡು ಮಲ್ಲಿಗೆಯ ಬೇರನ್ನು ಹುಳುಕಡ್ಡಿ ಮುಂತಾದ ಚರ್ಮರೋಗಗಳಿಗೆ ಔಷಧಿಯಾಗಿ ಬಳಸುತ್ತಾರೆ.
ಹೀಗೆ ಬಹೂಪಯೋಗಿ ಮಲ್ಲಿಗೆಯು ಮಾನಿನಿಯ ಮನಕ್ಕೆ ತೀರ ಹತ್ತಿರವಾದದ್ದು. ಪುರಾತನ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಸೊಬಗಿನಿಂದ ಹಾಗೂ ಸೌಗಂಧದಿಂದ ಮಲ್ಲಿಗೆಯು ಚಿತ್ತಾಕರ್ಷಕವಾಗಿದೆ. ಮಲ್ಲಿಗೆಯ ಸುಗಂಧವೇ ಒಂದು ರೀತಿಯ ಅನನ್ಯ ಅನುಭವ ನೀಡುವಂತದ್ದು.
ಅಂಕಣದ ಹಿಂದಿನ ಸಂಚಿಕೆಗಳು :
- ‘ಚೌಚೌ ಬಾತ್’ ಅಂಕಣ (ಭಾಗ-೧)
- ‘ಚೌಚೌ ಬಾತ್’ ಅಂಕಣ (ಭಾಗ – ೨)
- ‘ಚೌಚೌ ಬಾತ್’ ಅಂಕಣ (ಭಾಗ – ೩)
- ‘ಚೌಚೌ ಬಾತ್’ ಅಂಕಣ (ಭಾಗ – ೪)
- ‘ಚೌಚೌ ಬಾತ್’ ಅಂಕಣ (ಭಾಗ – ೫) – ಕ್ಯಾಂಡಲ್ ಫೋಟೋ ಹವಾ
- ‘ಚೌಚೌ ಬಾತ್’ ಅಂಕಣ (ಭಾಗ – ೬) -ಶ್ರೀಮಂತ ಭಿಕ್ಷುಕ
- ‘ಚೌಚೌ ಬಾತ್’ ಅಂಕಣ (ಭಾಗ – ೭) – ಬೆರಕೆ ಸೊಪ್ಪು
- ‘ಚೌಚೌ ಬಾತ್’ ಅಂಕಣ (ಭಾಗ –೮) – ಪಾಸ್ ಪ್ರಸಂಗ
- ‘ಚೌಚೌ ಬಾತ್’ ಅಂಕಣ (ಭಾಗ – ೯) – ಸುಲಭವೇನೇ ಗೆಳತಿ
- ‘ಚೌಚೌ ಬಾತ್’ ಅಂಕಣ (ಭಾಗ –೧೦) – ಆತ್ಮಹತ್ಯೆ ಎಂಬ ದುಷ್ಕೃತ್ಯ
- ‘ಚೌಚೌ ಬಾತ್’ ಅಂಕಣ (ಭಾಗ – ೧೧) – ಬುಸ್ ಬುಸ್ ನಾಗಪ್ಪ
- ಸರ್ವಮಂಗಳ ಜಯರಾಮ್ – ಶಿಕ್ಷಕಿ, ಗೌರಿಬಿದನೂರು.
