ಆ ಕಣ್ವ ಮಹರ್ಷಿಗಳ ಸಾಕು ಮಗಳು ಈ ಶಕುಂತಲೆ? ಹಾಗಾದ್ರೆ ಆಕೆಯ ನಿಜವಾದ ತಂದೆ – ತಾಯಿ ಯಾರು ? ಸಗ್ಗದ ಸೀಮೆಯ ದೇವ ಕನ್ಯೆ ಮೇನಕೆ ಮತ್ತು ಮಹಾಕೋಪಿಷ್ಠ ವಿಶ್ವಾಮಿತ್ರರ ಪ್ರೇಮಾಲಪದಿಂದ ಫಲಿಸಿದ ಫಲವದು. ಡಾ. ಯಲ್ಲಮ್ಮ ಕೆ ಅವರ ಶಕುಂತಲೆ ಕುರಿತಾದ ಒಂದು ಚಿಂತನ ಬರಹವನ್ನು ತಪ್ಪದೆ ಮುಂದೆ ಓದಿ…
ಹಾದಿಮನಿ ಹನುಮಮ್ಮನಿಂದ್ಹಿಡಿದು ಪಕ್ಕದ್ಮನೆ ಪದ್ದಮ್ಮನವರೆಗೂ ಎಲ್ಲರೂ ಬಂದು ಅಮ್ಮನ ಹತ್ತಿರ ಪಿರ್ಯಾದಿ ಹೇಳೋರೆ. ಏನಂತ ಹಡದ್ಬಿಟ್ಟಿಯ ನಿನ್ ಮಗಳ್ನ? ಕುಂತಲಿ ಕುಂದ್ರಂಗಿಲ್ಲ ನಿಂತಲ್ಲಿ ನಿಂದ್ರಂಗಿಲ್ಲ ಹಾದಿಲಿ ಹೋಗೋರನ ಬಡದ ಮಾತಾಡ್ಸತ್ತಾಳೆ! ಚೋಟುದ್ದ ಇಲ್ಲ ಏಟ್ ಮಾತಾಡ್ತಾಳೆ! ಅಂತ ರಾಗ ಎಳೆಯೋರು. ಊರಲ್ಲಿ , ಇಲ್ಲ ಓಣಿಯಲ್ಲಿ ಯಾರಾದರೂ ಸತ್ತರ, ಕೆಟ್ಟರ ನಮ್ಮನೆ ಜಗ್ಲಿ ಮ್ಯಾಲಿನ ಬೀರಪ್ಪಗೆ ಒಂದಿನ ಹೂವು ತಪ್ತಿತ್ತೇನೋ, ಆದರೆ ನನಗೆ ಮಾತ್ರ ತಪ್ತಿರಲಿಲ್ಲ ಅಮ್ಮನ ಬೈಗುಳ! ನೀನು ಇನ್ನೂ ಚಿಕ್ಕವಳೇನೇ? ಇದನ್ನೆಲ್ಲ ಬಿಟ್ಟು ಚಂದಾಗಿ ಓದಿ, ದೊಡ್ಡ ಹುದ್ದೆ ಹಿಡಿದು ದೇಶಕ್ಕೆ ಒಳ್ಳೆಯ ಹೆಸರು ತರಬೇಕು ನೀನು, ಯಾಕಮ್ಮಾ ಈಗಿರುವ ಹೆಸರು ಚೆಂದಾಗಿಲ್ವಾ? ತರ್ಲೆ ಮುಂಡೆದೆ ಚೆಂದಾಗಿದೆ ಅಂತ ಯಾರು ಹೇಳಿದರು ನಿನಗೆ? ನಮ್ಮಜ್ಜಿ ನನಗೆ ಒಂದು ಕಥೆ ಹೇಳಿದ್ಲು ಅದನ್ ಹೇಳ್ತೀನಿ ಕೇಳು ಆಮೇಲೆ ಒಳ್ಳೆಯದ ಕೆಟ್ಟದ್ದಾ ಅಂತ ಹೇಳು.
ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅದ್ಯಾವ ಸೀಮೆ ರಾಜ? ಹಸ್ತಿನಾಪುರದ ದೊರೆ, ದುಷ್ಯಂತ ಮಹಾರಾಜ. ರಾಜನ ಆಳ್ವಿಕೆಗೆ ಒಳಪಟ್ಟಿದ್ದ ಸೀಮೆಯಲ್ಲಿ [ವ್ಯಾಪ್ತಿ ಪ್ರದೇಶದೀ] ಒಂದು ದಟ್ಟವಾದ ಕಾಡು, ಆ ಕಾಡಿನ ಅಂಚಿನ ಮಾಲಿನೀ ನದಿ ದಡದಲ್ಲಿ ಒಂದು ಆಶ್ರಮವಿತ್ತು. ಯಾರದ್ದು ಅದು ಆಶ್ರಮ? ಕಣ್ವ ಮಹರ್ಷಿಗಳದ್ದು. ಹೋ… ಅವರು ಯಾರು? ಮಹಾಮೇಧಾವಿ, ಸಪ್ತರ್ಷಿಗಳಲ್ಲಿ ಒಬ್ಬರು ಅಂತ ಹೇಳ್ತಾರೆ. ಅಲ್ಲಿ ಬ್ರಾಹ್ಮಣ್ರ ಮಕ್ಕಳಿಗೆ ಸಾಲಿ ಕಲಸ್ತಾ ಇದ್ದರು, ಆ ಕಣ್ವ ಮಹರ್ಷಿಗಳ ಸಾಕು ಮಗಳು ಈ ಶಾಕುನ್ತಲೆ, ಹೊ, ಸಾಕು ಮಗಳಾ? ಹಾಗಾದ್ರೆ ಆಕಿ ನಿಜವಾದ ತಂದೆ – ತಾಯಿ ಯಾರು ? ಸಗ್ಗದ ಸೀಮೆಯ ದೇವ ಕನ್ಯೆ ಮೇನಕೆ ಮತ್ತು ಮಹಾಕೋಪಿಷ್ಠ ವಿಶ್ವಾಮಿತ್ರರ ಪ್ರೇಮಾಲಪದಿಂದ ಫಲಿಸಿದ ಫಲವದು. ಅದನ್ನು ಕಡಿದು ಕಾಡಿನ ಮಧ್ಯೆ ಬಿಸುಟಿ ಹೋಗಿಬಿಟ್ಟರು; ಅಯ್ಯೋ ಪಾಪ! ನಮ್ಮೂರ ಹೊರ ಬಯಲಿನಲ್ಲಿ ಮಗು ಸಿಕ್ತಂತೆ. ಅದನ್ನು ಯಾವುದೋ ಶಿಶು ಕೇಂದ್ರದವರು ಬಂದು ತಗೊಂಡು ಹೋದರು ಅಂತ ಪದ್ದಮ್ಮ ಮಾತಾಡತಿದ್ಲು. ಅದೇ ತರನಾ ಇದು? ಊರ ಉಸಾಬರಿಯೆಲ್ಲ ತಗೊಂಡು ನೀನ್ಯಾಕೆ ತಲೆಯಲ್ಲಿ ಹಾಕೋತೀಯಾ? ಸರಿ ಕಥಿ ಹೇಳಲೋ ಬೇಡ್ವೋ?. ಇಲ್ಲ ಹೇಳು ಹೇಳು; ನೀನು ನಡನಡುವೆ ಬಾಯ್ಹಾಕಿ ಅದು ಇದು ಅಂತ ಪ್ರಶ್ನೆ ಕೇಳಿದರೆ ನಾನು ಹೇಳೋದಾದರೂ ಹೇಗೆ?. ಇಲ್ಲಿಲ್ಲ ಸುಮ್ಮನೆ ಕೇಳ್ತಿನಿ ಹೇಳು.

ಫೋಟೋ ಕೃಪೆ : google
ನಾನೆಲ್ಲಿಗೆ ಬಿಟ್ಟಿದ್ದೆ? ಅದೇ ಮಗುನಾ ಕಾಡಿನಲ್ಲಿ ಬಿಟ್ಟು ಹೋಗಿದ್ದರು ಅಂದೆಲ್ಲ ಅಲ್ಲಿಗೆ, ಸರಿ ಸರಿ ಅದೇ ದಾರಿಗುಂಟ ಬರ್ತಾ ಇದ್ದ ಕಣ್ವಮಹರ್ಷಿಗಳ ಕಣ್ಣಿಗೆ ಬಿದ್ದು ಆ ಮಗುವನ್ನು ಎತ್ತಿಕೊಂಡು ಬಂದು ಶಾಕುನ್ತಲೆ ಅಂತ ಹೆಸರಿಟ್ಟು ಮುದ್ದಿನಿಂದ ಸಾಕಿ-ಸಲುಹಿ ಬೆಳೆಸಿದರು. ಹೋ, ಹೌದಾ… ಶಾಕುನ್ತಲೆ ಅಂತ ಹೆಸರು ಯಾಕಿಟ್ಟರು?. ಅಯ್ಯೋ, ಮಾರಾಯತಿ ನಿನಗೆ ಎಲ್ಲ ಹೇಳಬೇಕು – ಶಕುಂತ ಪಕ್ಷಿಗಳ ಹಿಂಡಿನಲ್ಲಿ – ಅವುಗಳ ಆರೈಕೆಯಲ್ಲಿ ಇದ್ದ ಮಗುವನ್ನು ಕಂಡು ಆಕೆಗೆ ಶಾಕುನ್ತಲಾ ಅಂತ ಹೆಸರಿಟ್ಟರಂತೆ ಕಣಮ್ಮ!. ಸರಿ ಸರಿ… ಮುಂದೆ… ಅವಳು ಬೆಳೆದು ದೊಡ್ಡವಳಾಗಿ ಪ್ರಾಯಕ್ಕೆ ಬರ್ತಾಳೆ. ಆ ಒಂದು ದಿನ ಮಹರ್ಷಿಗಳು ಲೋಕ ಸಂಚಾರಕ್ಕೆ ಹೋಗಿದ್ದಾಗ ಅದೇ ಕಾಡಿನಲ್ಲಿ ಬೇಟೆಗೆಂದು ಬಂದ ದುಷ್ಯಂತ ಮಹಾರಾಜ ಆಯಾಸ ಕಳೆಯಲೆಂದು ಆಶ್ರಮದ ಹತ್ತಿರ ಬರ್ತಾನೆ. ಅಲ್ಲಿ ಶಾಕುನ್ತಲೆಯನ್ನು ಕಂಡು ಮೋಹಿತನಾಗಿ ಇಬ್ಬರೂ ಒಂದಾಗಿ ಗಾಂಧರ್ವ ವಿವಾಹ ಪದ್ಧತಿಯಲ್ಲಿ ಮದುವೆಯಾಗ್ತಾರೆ. ಗಾಂಧರ್ವ ವಿವಾಹ ಅಂದರೆ ಹೇಗೆ? ಅದೇ ಒಬ್ಬರಿಗೊಬ್ಬರು ಒಪ್ಪಿ ಪ್ರೀತಿಸಿ ಮದುವೆಯಾಗೋದು. ಹೋ ಹಾಗಾ! ಅದಕ್ಕೆ ಲವ್ ಮ್ಯಾರೇಜ್ ಅಂತಾರೆ ಕಣಮ್ಮಾ! ಅದೇ ಮೂಲಿಮನೆ ಮಹಾದೇವಪ್ಪನ ಮಗಳು ಮುಸುಲರ ಸಲೀಂ ಜೊತೆ ಓಡಿಹೋಗಿ ಮದುವೆಯಾದ್ಲಂತಲ್ಲಾ ಹಂಗಾ? ಹೂಂ, ಹಂಗೆಯಾ!
ಮುಂದೆ… ನಾಲ್ಕಾರು ದಿನ ಆಶ್ರಮದಲ್ಲೆ ಕಳದು ಅರಮನೆಗೆ ಹೋಗುವಾಗ ನೆಪ್ಪಿಗಂತ ತನ್ನ ಕೈಯಾಗಿದ್ದ ಉಂಗುರವನ್ನು ಕೊಟ್ಟು ಮಹರ್ಷಿಗಳು ಬಂದಮೇಲೆ ಮುಂದಿನ ಮಾತುಕತೆ ಆಡೋಣ ಅಂತ್ಹೇಳಿ ಹೊರಟು ಹೋದನಂತೆ. ಹಲವು ದಿನಕಳೆದರೂ ಆತನ ಸುಳಿವೇ ಇಲ್ಲ. ಕೆಮ್ಮನ್ನು ಬಸಿರನ್ನು ಮುಚ್ಚಿಡಲಾದೀತೇ? ಅದೊಂದಿನ ಗುಟ್ಟು ರಟ್ಟಾಯಿತು. ಮಹರ್ಷಿಗಳು ತಪೋಬಲದಿಂದ ಎಲ್ಲವನ್ನೂ ಅರಿತು, ರಾಜಾ ಪ್ರತ್ಯಕ್ಷ ದೇವತಾಃ ಎಂದು ತಿಳಿದು ತನ್ನ ಸಿಸುಮಕ್ಕಳೊಂದಿಗೆ ಸಾಕುಮಗಳನ್ನು ರಾಜನಲ್ಲಿಗೆ ಕಳುಹಿಸಿಕೊಟ್ಟರು. ಅರಮನೆಯಲ್ಲಿ ನಡೆದದ್ದೇ ಬೇರೆ! ನೀನು ಯಾರು? ನಿನ್ನ ಪರಿಚಯವೇ ನನಗಿಲ್ಲ ಎಂದು ಹೇಳಲು ತನ್ನ ನೆಪ್ಪಿಗೆಂದು ನೀಡಿದ್ದ ಉಂಗುರವನ್ನು ತೋರಹೋಗಲು ಅದು ಕೂಡ ಕೈಯಲ್ಲಿರಲಿಲ್ಲ. ಅವಳಿಗೆ ದಿಕ್ಕೇ ತೋಚದಾಯ್ತು… ಏನಾಯ್ತು, ಎಲ್ಲಿ ಹೋಯ್ತು ಆ ಉಂಗುರು?

ಫೋಟೋ ಕೃಪೆ : google
ಅದೊಂದು ದೊಡ್ಡಕಥೆ. ಅವಳು ಆಶ್ರಮದಿಂದ ಮಾಲಿನೀ ನದಿಯನ್ನು ದಾಟಿಕೊಂಡು ಬರುವಾಗ ಇನಿಯನ ನೆಪ್ಪಿನಲ್ಲಿ ತೆಪ್ಪದಲ್ಲಿ ತೆಪ್ಪಗೆ ಕೂಡದೆ ನೀರಿನಲ್ಲಿ ಕೈ-ಅಲುಗಾಡಿಸುತ್ತಾ ಆಟವಾಡಿಕೊಂಡು ಬರುವಾಗ ಕೈ ಬೆರಳಿನಿಂದ ಉಂಗುರ ಜಾರಿ ನೀರೊಳಗೆ ಬಿತ್ತಂತೆ. ಇದು ಶಾಕುಂತಲೆ ಗಮನಕ್ಕೆ ಬರಲಿಲ್ಲ. ಆ ಉಂಗರನಾ ಮೀನೊಂದು ನುಂಗಿಬಿಟ್ತಂತೆ ಆ ಮೀನು ಬೆಸ್ತನ ಬಲೆಗೆ ಸಿಕ್ಕಿಬಿದ್ದು ಅವನು ರುಚಿ ರುಚಿಯಾಗಿ ಅಡುಗೆ ಮಾಡಿಕೊಂಡು ಮಾಡ್ಕೊಂಡು ತಿನ್ನಬೇಕು ಎಂದು ಅದರ ಹೊಟ್ಟೆ ಬಗೆದಾಗ ಉಂಗುರ ಸಿಕ್ತಂತೆ. ಫಿಶ್ ಫ್ರೈ ಮಾಡಿಕೊಂಡು ತಿದ್ನಾ?. ಹೂ… ಏನೋ ಒಂದು ಮಾಡಿಕೋಂಡು ತಿಂದ. ಆ ಉಂಗುರದ ಮೇಲಿನ ರಾಜಮುದ್ರೆ ಕಂಡು ತಮ್ಮ ರಾಜನದ್ದೆ ಎಂದು ತಿಳಿದು ತಂದು ರಾಜನಿಗೆ ಮುಟ್ಟಿಸಿದ್ನಂತೆ. ಅದನ್ನು ನೋಡಿದ ಕೂಡಲೇ ಹಳೆಯ ಮಧುರಾತಿ ಮಧುರ ನೆನಪುಗಳು ಸುರುಳಿ ಸರುಳಿಯಾಗಿ ಬಿಚ್ಚತೊಡಗಿದಂತೆ; ಶಾಕುನ್ತಲೆಯನ್ನು ಭೇಟಿಯಾದದ್ದು, ಮೊದಲ ನೋಟದಲ್ಲೇ ಮನ್ಸೋತದ್ದು, ಗಾಂಧರ್ವ ವಿವಾಹವಾದದ್ದು ಗೆಪ್ತಿಗೆ ಬಂದ್ವಂತೆ.
ಹೌದು, ಯಾಕ್ಕಣಮ್ಮ ಮರತ್ಹೋಗಿತ್ತು?. ಅಯ್ಯೋ, ಅದೊಂದು ದೊಡ್ಡ ರಾಮಾಯಣ! ದುಷ್ಯಂತ ಮಹಾರಾಜ ಉಂಗುರ ಕೊಟ್ಟು ಬಂದಮೇಲೆ ಎಷ್ಟೋ ದಿನ ಕಳೆದರೂ ಆತ ಆಶ್ರಮದ ಕಡೆ ಸುಳಿಲಿಲ್ಲ. ಒಂದಿನ ಇತ್ತ ಶಾಕುನ್ತಲೆ ಆತನ ನೆಪ್ಪಿಲೇ ಮೈ ಮರೆತು ಕೂತಾಗ ದೂರ್ವಾಸ ಮುನಿಗಳು ಆಶ್ರಮಕ್ಕೆ ಬಂದಿದ್ದರಂತೆ, ಮುನಿಗಳಿಗೆ ಅತಿಥಿ ಸತ್ಕಾರ ಮಾಡದೆ ತನ್ನ ಲೋಕದಲ್ಲಿ ತಾನಿದ್ದಳಂತೆ ಅದ್ಯಾವ ಲೋಕವಮ್ಮಾ?. ಪ್ರೇಮಲೋಕನಾ?… ಹೂ ಕಣೇ. ಯಾವುದೋ ಒಂದು ಲೋಕ, ಕಥೆ ಹೇಳಲೋ ಬೇಡ್ವೋ ನಿಂಗೆ? ಇಲ್ಲ ಇಲ್ಲ, ಹೇಳು ಹೇಳು. ಇದನ್ನು ಕಂಡು ಮುನಿಗಳು ಸಿಟ್ಟಾಗಿ ಶಪಿಸಿದ್ರಂತೆ!
ಏನಂತ ಶಪಿಸಿದರಮ್ಮಾ?. ಆ… ನೀನು ಯಾವಾನ ನೆಪ್ಪಿಲೆ ಮೈ-ಮರೆತು ಕುಂತಿಯೋ ಅವನು ನಿನ್ನ ಮರತ್ಹೋಗಲಿ ಅಂತ. ಅಲ್ಲಮ್ಮಾ… ʼಈ ಮರುವು ಅನ್ನೋದು ಈ ಮನುಷ್ಯನಿಗೆ ದೇವರು ಕೊಟ್ಟ ವರ. ಅದಿಲ್ಲದಿದ್ದರೆ ಮನುಷ್ಯ ಹುಚ್ಚ ಆಗಿಬಿಡ್ತಾಯಿದ್ದ ಅಂತ ತಿಳಿದವರು ಹೇಳ್ಯಾರ ಅಂತ ನೀನೇ ಹೇಳಿದ್ದಿ! ಈಗ ನೋಡಿದ್ರೆ ಮರವು ಅಂದ್ರೇ ಶಾಪ ಅಂತೀಯ. ಅಯ್ಯೋ, ಮಾರಾಯ್ತಿ ನಿಂಗೆ ಹ್ಯಾಂಗೆ ಹೇಳೋದು, ʼಮರೆತಿದ್ದರಿಂದ ಒಳ್ಳೆಯದಾದರೆ ಅದು ವರ, ಕೆಟ್ಟದಾದರೆ ಅದು ಶಾಪ. ಅದೇ ಸಮಯಕ್ಕೆ ನೀರು ತರಲು ಪೂಜೆಗೆ ಹೂವು ಬಿಡಿಸಿ ತರಲು ಹೋದ ಆಕೆಯ ಸಖಿಯರು ಬಂದು ನಡೆದ್ದೆಲ್ಲವ ಕಂಡು ಗೆಳತಿಯನ್ನು ಎಚ್ಚರಿಸಿ, ಮುನಿಗಳಿಂದ ಶಾ[ಪಾ]ಪ ವಿಮೋಚನೆ ಬೇಡಲು, ಆತನು ನಿನಗೆ ನೀಡಿದ ಪ್ರೇಮದುಂಗುರ ನೋಡಿದ ಕೂಡಲೇ ನಿನ್ನ ನೆಪ್ಪಾಗುತ್ತೆ ಅಂತ ಪರಿಹಾರ ನೀಡಿ, ಉಂಗುರ ಜೋಪಾನ ಅಂತ ಕಿವಿಮಾತು ಹೇಳಿ ಹೋದರಂತೆ.

ಫೋಟೋ ಕೃಪೆ : google
ಹೌದು.., ರಾಜ ನಿನ್ನಯ ಗುರುತು ಪರಿಚಯವೇ ನನಗಿಲ್ಲ ಅಂತ್ಹೇಳಿ ಹೊರದಬ್ಬಿದ ಮ್ಯಾಲೆ ಆಕೆಯ ಗತಿ ಏನಾಯ್ತು? ಇನ್ನೇನಾಗುತ್ತೆ! ಆಕೆಯನ್ನು ಕರೆತಂದ ಸಿಸುಮಕ್ಕಳು ನಮ್ಮ ಗುರುಗಳು ಹೇಳಿದಂತೆ ನಿನ್ನನ್ನು ರಾಜನಲ್ಲಿಗೆ ತಂದು ಬಿಟ್ಟಿದ್ದೇವೆ, ಇನ್ನೂ ನೀನು ಬಲ, ನಿಮ್ಮ ರಾಜ ಬಲ, ನಮಗ ಅದರ ಸಂಬಂಧಯಿಲ್ಲ ಅಂತ್ಹೇಳಿ ಅವರು ಆಶ್ರಮಕ್ಕೆ ಹೊರಟಬಿಟ್ರಂತೆ! ಇತ್ತ ‘ಅಗಸರ ಕತ್ತಿ ಇತ್ತ ಹಳ್ಳಾನೂ ಸೇರಲಿಲ್ಲ, ಮನಿನೂ ಸೇರಲಿಲ್ಲ’ ಎನ್ನುವ ಹಾಗೆ, ‘ಅತ್ತ ದರಿ, ಇತ್ತಪುಲಿ’ ಎಂಬಂತಾಯಿತು ಅವಳ ಸ್ಥಿತಿ, ಮೂರು ತಿಂಗಳ ಗರ್ಭಿಣಿ ಬೇರೆ ಅಡಅಡವಿ ತಿರುಗಿಕೊಂಡು ಹೋದ್ಲು ಪಾಪ! ಆಮೇಲೆ? ದಟ್ಟಡವಿಯಲ್ಲಿ ಗರ್ಭಿಣಿ ಹೆಂಗಸು ಮಳೆಗಾಲ ಬೇರೆ, ಮೃಗ-ಖಗಗಳ ಭಯದಲ್ಲೇ ಕಾಡು-ಮೇಡು ಅಂಡಲೆದು ಸುಸ್ತಾಗಿ ಗ್ಯಾನ ತಪ್ಪಿಬಿದ್ದಿದ್ದಳು, ಆಕೆಯ ಅದೃಷ್ಟಕ್ಕೆ ಮಾರೀಚ ಮುನಿಗಳ ಕಣ್ಣಿಗೆ ಬಿದ್ದು, ಆಕೆಯನ್ನು ತಮ್ಮ ಆಶ್ರಮಕ್ಕೆ ಕರೆದೋಯ್ದು ಉಪಚರಿಸಿ, ನೀರು-ನೇರಳು ನೀಡಿದರು, ಅಲ್ಲಿಯೇ ಆಕೆ ಗಂಡುಮಗುವೊಂದನ್ನು ಹಡೆದಳು, ಮಗುವು ಮುದ್ದುಮುದ್ದಾಗಿ ಆಡಿಕೊಂಡು ಬೆಳೆಯಿತು, ಗುರುಗಳೆ ಆ ಮಗುವಿಗೆ ಭರತನೆಂದು ನಾಮಕರಣವ ಮಾಡಿ ಅಕ್ಷರಭ್ಯಾಸವ ಮಾಡಿಸ ತೊಡಗಿದರು, ಅಪ್ಪನಿಲ್ಲ ಎಂಬ ಕೊರಗು ಆ ಮಗುವಿಗಿಲ್ಲವಾದರೂ, ಅಪಮಾನಕ್ಕೊಳಗಾದ ಆಕೆಗೆ ಗಂಡನಿಲ್ಲ ಎಂಬ ಕೊರಗು, ಅದರ ಜೊತೆಜೊತೆಗೆ ಮಗನ ಭವಿತವ್ಯದ ಚಿಂತೆಯು ಒಳೊಳಗೆ ಸುಡುತಲಿತ್ತು.
ದಿನಗಳೆದು ನೋಡುನೋಡುತ್ತಲೇ ಹನ್ನೆರಡು ವರುಷಗಳು ಕಣ್ಮುಂದೆಯೇ ಉರುಳಿ ಹೋದವು, ಆದರೆ ಆಕೆಯ ಪಾಲಿಗದು ಒಂದು ಯುಗವೇ ಕಳೆದಂತಾಗಿತ್ತು, ಆದರೂ ಗಂಡನ ನಿರೀಕ್ಷೆಯಲ್ಲಿ ದಾರಿ ಕಾಯುತ್ತಿದ್ದಳು, ಇಂದಲ್ಲ ನಾಳೆ ಬಂದೇ ಬರ್ತಾನೆ, ಎಂಬ ತುಂಬು ಭರವಸೆಯೊಂದಿಗೆ ಜೀವನ ಸಾಗಿಸ್ತಾಯಿದ್ಲು.., ಮುಂದೇನಾಯ್ತು? ಆ ಉಂಗುರು ನೋಡಿದ್ಮೇಲೆ ಶಾಪ ವಿಮೋಚನೆಗೊಂಡು ಆಕೆಯ ನೆನಪು ಬಂದು, ಹೆಂಡತಿಯ ಮೇಲೆ ಪ್ರೀತಿ ಉಕ್ಕಿಬಂದು, ಹಾಗೆಯೇ ಅವಳನ್ನು ತ್ಯಜಿಸಲು ಕಾರಣವಾದ ಮರುವುನ್ನು ಶಪಿಸುತ್ತಾ, ಆಕೆಯನ್ನು ಹುಡುಕಲು ಕಾಡು-ಮೇಡು ಅಲೆಯುತ್ತಿರಬೇಕಾದರೆ ಕಾಡಿನ ಮಧ್ಯದಿ ಒಂದು ಆಶ್ರಮ ಹತ್ತಿರದಲ್ಲೇ – ಹುಲಿಯೊಂದಿಗೆ ಆಟವಾಡುತ್ತಿರುವ ಮುದ್ದಾದ ಮಗುವನ್ನು ಕಂಡು ಹತ್ತಿರ ಹೋಗಿ ಪೀತಿಯಿಂದ ಎತ್ತಿಕೊಂಡು ಮುದ್ದಾಡುತ್ತಿರುವದನ್ನು ನೋಡಿದ ಸಖಿಯರು ಗೆಳತಿಗೆ ನಿಮ್ಮ ರಾಜರು ಬಂದಿದ್ದಾರೆ ಎಂದು ಖುಷಿಯಿಂದ ಹೇಳಲು ಆಶ್ರಮದೊಳಗೋಡಿದರು.
ಆ ಸಖಿಯರಿಗೆ ಹ್ಯಾಗೆ ಗೊತ್ತಾಯಿತು ಬಂದದ್ದು. ಆತನೇ ದುಷ್ಯಂತ ಮಹಾರಾಜ ಅಂತ? ಅದೋ… ಮಾರೀಚ ಮುನಿಗಳು ರಕ್ಷಣೆಗೆಂದು ಮಗುವಿನ ಬಲಗೈಗೆ ನಾಮಕರಣ ಸಂದರ್ಭದಿ ಒಂದು ಬಳ್ಳಿಯನ್ನು ಕಟ್ಟಿದ್ದರಂತೆ. ಆತನ ತಂದೆಯ ವಿನಃ ಮತ್ತಾರಾದರೂ ಆಗುಂತಕರು ಆ ಮಗುವನ್ನು ಮುಟ್ಟಿದರೇ ಆ ಬಳ್ಳಿ ಹಾವಾಗಿ ಅವರನ್ನು ಕಚ್ಚಿ ಸಾಯಿಸುತ್ತದಂತೆ ಎಂದು ಹೇಳಿದ್ದು ನೆನಪಾಗಿ ಬಂದಾತ ಆ ಮಗುವನ್ನು ಎತ್ತಿಕೊಂಡರೂ ಏನೂ ಆಗಲಿಲ್ಲವೆಂದ ಮೇಲೆ ಆತ ನಿಜವಾಗಿಯೂ ತಂದೆಯೇ – ದುಷ್ಯಂತ ಮಹಾರಾಜನೇ ಆಗಿರುತ್ತಾನೆ ಇದರಲ್ಲಿ ಸಂಶಯವಿಲ್ಲ ಎಂದು ತಿಳಿದೇ ಓಡಿಹೋಗಿ ಈ ಸುದ್ದಿಯನ್ನು ಮುಟ್ಟಿಸಿದರು.
ಆಮೇಲೆ…
ಆಮೇಲೆ, ಮುನಿಗಳೂ ಬಂದರು. ನಡೆದದ್ದೆಲ್ಲ ವೃತ್ತಾಂತವನ್ನು ತಪೋಬಲದಿಂದ ತಿಳಿದ ಮಾರೀಚ ಮುನಿಗಳು ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ. ದೂರ್ವಾಸಮುನಿಗಳ ಶಾಪದಿಂದಾಗಿ ನಿಮಗೆ ಮರುವು ಉಂಟಾಗಿತ್ತು. ಈಗ ಶಾಪಮುಕ್ತರಾಗಿ ನೀವು ಇಲ್ಲಿಗೆ ಬಂದಿದ್ದೀರಿ ಆದದ್ದೆಲ್ಲವೂ ಒಳ್ಳೆಯದಕ್ಕೇ ಎಂದುಕೊಳ್ಳೊಣ. ಮಗನ ಶ್ರೇಯೋಭಿವೃದ್ಧಿಗಾಗಿ ಪರಿತಪಿಸುವ ನಿನ್ನ ತಪಸ್ಸು ಇಂದಿಗೆ ಫಲಿಸಿದೆ. ಹೋಗಿ ಬಾ ಮಗಳೇ! ಎಂದು ಹರಸಿ ರಾಜನೊಂದಿಗೆ ಬೀಳ್ಕೊಟ್ಟರು. ಮುಂದೆ ಆ ಮಗುವೇ… ಈ ಭರತನೇ ಈ ನಾಡನ್ನು ಆಳಿದ್ದರಿಂದ ಭಾರತವೆಂಬ ಹೆಸರು ಬಂತು ಎಂಬ ಮಾತಿದೆ. ಈಗ ಹೇಳು ದೇಶಕ್ಕೆ ಇದೇ ಹೆಸರು ಸಾಕಾ? ಒಳ್ಳೆ ಹೆಸರು ಬೇಕಾ ಅಂತ ?
ಮಗಳು ತಲೆಕೆರೆದುಕೊಳ್ಳುತ್ತಾ, ಒಂದು ಅರ್ಥ ಆಗ್ತಾಯಿಲ್ಲ ಅಮ್ಮಾ. ನನಗೆ ಕೋಪಿಷ್ಠ – ತಪೋನಿಷ್ಠ ವಿಶ್ವಾಮಿತ್ರರು ಮತ್ತು ಸಗ್ಗಲೋಕದ ಗಂಧರ್ವ ಕನ್ಯೆ ಮೇನಕೆ ಇವರುಗಳ ಕೂಡುವಿಕೆಯಿಂದ ಹುಟ್ಟಿದವಳೇ ಈ ಶಾಕುನ್ತಲ. ಮೇನಕೆ ಲೋಕದ ಮಾನಾಪಮಾನಕ್ಕೆ ಹೆದರಿ, ಸಗ್ಗಲೋಕದಿ ಹುಲುಮಾನವರಿಗೆ ಪ್ರವೇಶ ಸಾಧ್ಯವಿಲ್ಲವೆಂದು ಬಗೆದು? ಎಂದು ಕಾಡಿನಲ್ಲಿ ಬಿಸುಟಿದ್ದು ತಪ್ಪಲ್ಲವೇ? ಇದು ಆಚಾರವೇ? ಅನಾಚಾರವೇ?, ಋಷಿಮುನಿಗಳ ಆಶ್ರಮದಿ ಸಾತ್ವಿಕ ಪರಿಸರದ ಬೆಳೆದವಳು ಶಾಕುನ್ತಲ. ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿ ಕಾಮಾತುರದಿ ಗಾಂಧರ್ವ ರೀತಿಯಲ್ಲಿ ಯಾವನನ್ನೋ ಮದುವೆಯಾದದ್ದು ತಪ್ಪಲ್ಲವೇ?. ಅಷ್ಟೊಂದು ಮುದ್ದಿನಿಂದ ಸಲುಹಿದ ಸಾಕು ತಂದೆಯ ಮಾನಾಪಮಾನದ ಪ್ರಶ್ನೆಯ ಕುರಿತಾಗಿ ಕಿಂಚಿತ್ತೂ ಯೋಚಿಸಲಿಲ್ಲವೇ ಆಕೆ? ಹೋಗಲಿ ಒಮ್ಮೆ ಅಪ್ರಜ್ಞಾಪೂರ್ವಕವಾಗಿ ಮೈ-ಮರೆತು ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಭರದಿ ಮತ್ತೆ ಮುನಿಗಳ ಕೋಪ-ತಾಪಕ್ಕೆ ಗುರಿಯಾದದ್ದು, ಶಾ[ಪಾ]ಪ ವಿಮೋಚನೆಯ ದಾರಿಯಿತ್ತಾದ ಮೇಲೂ ಉಂಗುರವನ್ನು ಕಳೆದುಕೊಂಡಿದ್ದು ತಪ್ಪಲ್ಲವೇ?. ಮರ್ಯಾದ ಹತ್ಯೆಯಂತಹ ಪರಿಕಲ್ಪನೆ ಆಗಿನ ಕಾಲದಲ್ಲಿಲ್ಲವಾದ್ದರಿಂದ ಶಾಕುನ್ತಲಾ ಬದುಕಿ-ಬಾಳಿದಳು ಎನ್ನಬಹುದೇ?
ರಾಜಾ ಪ್ರತ್ಯಕ್ಷ ದೇವತಾಃ ಎಂಬ ಮಾತಿನಂತೆ ಆತನದ್ದು ಏನೂ ತಪ್ಪಿಲ್ಲ ಬಿಡಿ, ಮುನಿಗಳ ಶಾಪದ ಬಲದಿಂದ ಆತನಿಗೆ ಮರುವು ಆಗಿತ್ತು ಅಷ್ಟೇ! ಇಂದ್ರಸಭೆಯ ಒಡ್ಡೋಲಗದಲ್ಲಿ ದೇವಕನ್ಯೆರೆನಿಸಿದ ರಂಭೆ, ಊರ್ವಸಿ, ಮೇನಕೆ, ತಿಲೋತ್ತಮೆಯರನ್ನು ತಮ್ಮ ಅಧಿಕಾರದ ದಾಹಕ್ಕಾಗಿ ಪಗಡೆಯಾಟದಿ ದಾಳವಾಗಿ ಉರುಳಿಸಿ, ಚದುರಂಗದಾಟದಿ ಕಾಲ್ದಳಗಳಂತೆ ಮುನ್ನಡೆಸಿ, ತಮ್ಮ ತಾಳಕ್ಕೆ ತಕ್ಕಂತೆ ಥಾಥೈ, ಥಾ, ಥಕ, ಥೈ ಎಂದು ಕುಣಿಸಿದ್ದು ಸರಿಯೇ? ಮುನಿಗಳು ಸರ್ವಸಂಗ ಪರಿತ್ಯಾಗಿಗಳು, ಇಂದ್ರೀಯಗಳನ್ನು ನಿಗ್ರಹಿಸಿದವರು, ಏನೋ ಅರಿಯದೆ ಮಾಡಿದ ತಪ್ಪಿಗೆ – ತಮ್ಮನ್ನು ಸತ್ಕರಿಸಲಿಲ್ಲ ಎಂಬುದನ್ನೇ ನೆಪಮಾಡಿಕೊಂಡು ಅಂತಹ ಘನಘೋರ ಶಾಪವನ್ನು ನೀಡಬೇಕಿತ್ತೆ? ಕ್ಷಮಾಮಾಡಿ ದಯಾಮೂರ್ತಿಗಳು ಎನಿಸಬಹುದಿತ್ತಲ್ಲವೇ? ಇಲ್ಲಿ ಗಮನಿಸಬಹುದಾದ ಎರಡು ಅಂಶಗಳೆಂದರೆ – ಒಂದು ಮೇನಕೆಗೆ ಹೆಣ್ಣುಮಗುವನ್ನು ದಯಪಾಲಿಸಿದ ವಿಶ್ವಾಮಿತ್ರರ ಮನೋಗತ ಮತ್ತು ಅಬಲೆಯಾದ ಶಾಕುನ್ತಲೆಯನ್ನು ಶಪಿಸಿದ ದೂರ್ವಾಸ ಮುನಿಗಳ ಮನೋಗತವನ್ನು; ಹಸುಗೂಸನ್ನು ಸಾಕಿ-ಸಲುಹಿದ ಕಣ್ವ ಮಹರ್ಷಿಗಳು ಹಾಗೂ ತುಂಬು ಬಸುರಿ ಶಾಕುನ್ತಲಾ ಮತ್ತು ಆಕೆಯ ಮಗುವನ್ನು ಲಾಲನೆ – ಪಾಲನೆ ಮಾಡಿ ಸಂರಕ್ಷಣೆಗೈದ ಮಾರೀಚ ಮುನಿಗಳ ಮನೋಗತವನ್ನು ಅನುಸಂಧಾನ ಗೊಳಿಸಿ ನೋಡಬಹುದು. ಈ ಎಲ್ಲ ಸಂದರ್ಭಗಳಲ್ಲಿಯೂ ಹೆಣ್ಣಿನ ಮತ್ತು ಗಂಡಿನ ವಿಷಯದಲ್ಲಿ ತೋರುವ ಪುರುಷ ಮನೋಧೋರಣೆಗಳನ್ನು ನಾವು ವಿಶ್ಲೇಷಿಸಿ ನೋಡಬೇಕಿದೆ.
ಶಾಕುನ್ತಲೆಯ ಮಗ ಭರತನೇ ಈ ನಾಡನ್ನು ಆಳಿದ್ದರಿಂದ ಭಾರತವೆಂಬ ಹೆಸರು ಬಂದಿದ್ದು ಉಚಿತವೇ ಆಗಿದೆ. ಆದರೆ ಸಂಕುಚಿತ ಭಾವನೆ ಎಂಬುದು ನಮ್ಮ ಮನದಾಳಲ್ಲಿ ನೆಲೆಯೂರಿರುವಾಗ ಆ ಹೆಸರು ಒಳ್ಳೆಯದೆ ಕೆಟ್ಟದ್ದೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಅಮ್ಮನಿಂದ ಕೇಳಿದ ಈ ಕತೆಯು ಎದೆ ನೆಲದಲ್ಲಿ ಇನ್ನೂ ಹಸಿಯಾಗಿರುವಾಗಲೇ ಮೈಸೂರು ಭಾಗದಲ್ಲಿ ಪ್ರಚಲಿತದಲ್ಲಿರುವ ಧರೆಗೆ ದೊಡ್ಡವರು – ಮಂಟೇಸ್ವಾಮಿ ಸಾರಿದನೆಂದು ಹೇಳಲಾಗುವ ಕಾಲಜ್ಞಾನ ಗೀತೆಯು ನೆಪ್ಪಿಗೆ ಬಂತು;
ಆಡಿದವರ ಮನವಾ ಬಲ್ಲೆ
ನೀಡಿದವರ ನಿಜವಾ ಬಲ್ಲೆ
ಮುಂದುವರೆದು
ನಾಳೆ ಕಲಿಯುಗದಲ್ಲಿ
ಹಾದರಗಿತ್ತಿಯ ಮಕ್ಕಳು
ಅರಸರಾಗಿ ಬಾಳಬೇಕು
ಪತಿವ್ರತೆಯ ಮಕ್ಕಳು
ಮರಗಟ್ಟಿ ಸಾಯಬೇಕು
ಹುಟ್ಟುಗೌಡನ ಮಕ್ಕಳು
ಹಟ್ಟಿಯ ಕಾಯಬೇಕು
ಬೀದಿಗೆ ಬಿದ್ದ ಮಕ್ಕಳು
ಗದ್ದುಗೆಯಾ ಏರಬೇಕು
ಅಯ್ಯಾ
ಅತ್ತೆಗೆ ನೋಡು
ಹರಕಲು ಚಾಪೆ
ಸೋಸೆಗೆ ನೋಡು
ಮುಕ್ಕಾಲು ಮಂಚ!
ಈ ಕಾಲಜ್ಞಾನ ಗೀತೆ ಎಂದರೆ ಹಿಂದೆ ನಡೆದದ್ದನ್ನು ಹೇಳುತ್ತಿದೆಯಾ, ಇಲ್ಲವೇ ಮುಂದೆ ಅಂದರೆ ಇಂದು ಕಲಿಯುಗದಲ್ಲಿ ನಡೆಯುತ್ತಿರುವುದನ್ನು ಹೇಳುತ್ತಿದೆಯಾ? ಆಲೋಚಿಸಬೇಕಿದೆ.
- ಡಾ. ಯಲ್ಲಮ್ಮ ಕೆ – ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ಜಿ.ವಿ.ಪಿ.ಪಿ. ಸ.ಪ್ರ.ದ.ಕಾಲೇಜು, ರಾಮನಗರ, ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲೆ.
