ಆಫ್ರಿಕನ್ ಹಂದಿ ಜ್ವರ ಬರುತ್ತಿದೆ; ಎಚ್ಚರವಿರಲಿ ! – ಡಾ.ಎನ್.ಬಿ.ಶ್ರೀಧರ

ಪಶುವೈದ್ಯ ಡಾ.ಎನ್.ಬಿ.ಶ್ರೀಧರ ಅವರು ಆಫ್ರಿಕನ್ ಹಂದಿ ಜ್ವರದ ಕುರಿತು ಬರೆದ ಲೇಖನದಲ್ಲಿ ಅದಕ್ಕೆ ಕಾರಣ, ಅದು ಹರಡುವ ಬಗೆ, ರೋಗ ಲಕ್ಷಣದ ಬಗೆ ವಿವರವಾಗಿ ಓದುಗರಿಗೆ ತಿಳಿಸಿದ್ದಾರೆ, ತಪ್ಪದೆ ಓದಿ.

ಇತ್ತೀಚೆಗೆ ಹಲವೆಡೆ ಹಂದಿಗಳಲ್ಲಿ ಕಾಣಿಸಿಕೊಂಡ ಕಾಯಿಲೆ ಇದು. ವೈರಾಣು ಮೂಲದ ಅತ್ಯಂತ ಸಾಂಕ್ರಾಮಿಕವಾದ ಈ ಕಾಯಿಲೆ ಹಂದಿಗಳಲ್ಲಿ ತೀವ್ರತರನಾದ ಆಂತರಿಕ ರಕ್ತಸ್ರಾವವನ್ನುಂಟು ಮಾಡಿ ಸಾವು ನೋವನ್ನುಂಟುಮಾಡುತ್ತದೆ. ೧೯೨೧ ರಲ್ಲಿ ಅಫ್ರಿಕಾದ ಕೆನ್ಯಾದಲ್ಲಿ ಕಾಣಿಸಿಕೊಂಡ ಈ ಕಾಯಿಲೆ ಹಂದಿ ಮತ್ತು ಕರಡಿಗಳಲ್ಲಿ ಶೇ ೧೦೦ ರಷ್ಟು ಬಾಧಿಸುವ ಈ ಕಾಯಿಲೆಯಲ್ಲಿ ಮರಣದ ಪ್ರಮಾಣ ಶೇ ೫-೧೦೦. ಈಗ ಭಾರತವೂ ಸೇರಿದಂತೆ ಅನೇಕ ದೇಶದಲ್ಲಿ ಎಲ್ಲಾ ವಯಸ್ಸಿನ ಹಂದಿಗಳಲ್ಲಿ ಹರಡುತ್ತಿದೆ. ಉತ್ತಮ ಲಸಿಕೆಯೂ ಇಲ್ಲದೇ ಈ ಕಾಯಿಲೆಯಿಂದ ಹಂದಿಗಳಲ್ಲಿ ಮರಣ ಮೃದಂಗ ತಾಂಡವವಾಡುತ್ತಿದೆ.

ಏನು ಕಾರಣ?

ಈ ಕಾಯಿಲೆಗೆ ಡಿಎನ್‌ಎ ವರ್ಗಕ್ಕೆ ಸೇರಿದ ಅಸ್ಫಾ ವೈರಾಣು ಕಾರಣ. ಇದು ಕಾಡು ಹಂದಿ, ಸಾಕು ಹಂದಿ ಮತ್ತು ಹಂದಿಯ ಪ್ರಬೇಧದ ಎಲ್ಲಾ ಪ್ರಾಣಿಗಳನ್ನೂ ಸಹ ಬಾಧಿಸುತ್ತದೆ ಜೊತೆ ಕರಡಿಗಳನ್ನೂ ಸಹ ಬಾಧಿಸುತ್ತದೆ. ಈ ವೈರಾಣು ಆಮ್ಲತೆ ಮತ್ತು ಕ್ಷಾರತೆಗೆ ಮತ್ತು ಸಾಮಾನ್ಯ ಕ್ರಿಮಿನಾಶಕಗಳಿಗೆ ಬಗ್ಗುವುದಿಲ್ಲ. ಹಂದಿಯ ಮಾಂಸದಲ್ಲಿಯೂ ಸಹ ಈ ವೈರಾಣು ಕೆಲವು ವಾರದವರೆಗೆ ಬದುಕಬಲ್ಲದು. ಕಾಡುಪ್ರಾಣಿಗಳಲ್ಲಿನ ಆರ್ನಿಥೋಡೋರಸ್ ಮೊಬ್ಯುಟಾ ಎಂಬ ವರ್ಗಕ್ಕೆ ಸೇರಿದ ಮೆತ್ತನೆಯ ಉಣ್ಣೆ ಈ ರೋಗದ ವಾಹಕ. ಆದರೆ ಸಮಾದಾನಕರ ವಿಷಯವೆಂದರೆ ಈ ಕಾಯಿಲೆ ಮನುಷ್ಯರನ್ನು ಬಾಧಿಸದು.

ಫೋಟೋ ಕೃಪೆ : ed.ac.uk/roslin

ರೋಗ ಹರಡುವ ಬಗೆ

ಎರಡು ವಿಧಾನದಿಂದ ಈ ರೋಗ ಹರಡುತ್ತದೆ. ಮೊದಲನೆಯದು ಕಾಡು ಹಂದಿಯಂತ ಪ್ರಾಣಿಗಳಿಂದ ಉಣ್ಣೆಗಳ ಮೂಲಕ ನಾಡ ಹಂದಿಗಳಿಗೆ ಕಾಯಿಲೆ ಬರಬಹುದು. ಒಮ್ಮೆ ನಾದ ಹಂದಿಗಳು ಅಥವಾ ಕರಡಿಗಳ ಮೈ ಸೇರಿದರೆ ಈ ವೈರಾಣು ಅಲ್ಲಿ ಅತ್ಯಂತ ಜಾಸ್ತಿ ಪ್ರಮಾಣದಲ್ಲಿ ಬೆಳೆದು ನಂತರ ನೇರ ಸಂಪರ್ಕದಿ0ದ ಇತರ ಹಂದಿಗಳನ್ನು ಬಾಧಿಸಬಹುದು. ರೋಗಪೀಡಿತ ಹಂದಿಯ ಸಿಂಬಳ, ರಕ್ತ, ಮೂತ್ರ ಇತ್ಯಾದಿಗಳೂ ಸಹ ರೋಗಕಾರಕವಾಗಿ ಕಾರ್ಯನಿರ್ವಹಿಸಬಹುದು. ಹಂದಿಗಳ ಬೆಳವಣಿಗೆ ಬೇಗಬರಲಿ ಎಂದು ಉಪಯೋಗಿಸದೇ ಬಿಸಾಡಿದ ಹಂದಿ ಮಾಂಸ ಮತ್ತು ಮಾಂಸದ ಉತ್ಪನ್ನಗಳನ್ನು ತಿನ್ನಿಸುತ್ತಿದ್ದು ಇವು ಸಹ ರೋಗವಾಹಕವಾಗಿ ಕಾರ್ಯನಿರ್ವಹಿಸುತ್ತವೆ.

ರೋಗಲಕ್ಷಣಗಳು

ಬಾಯಿ ಅಥವಾ ಮೂಗಿನ ಮೂಲಕ ಹಂದಿಗಳ ಶರೀರವನ್ನು ಸೇರುವ ಈ ವೈರಾಣು ೫-೨೧ ದಿನಗಳಲ್ಲಿ ಕಾಯಿಲೆಯನ್ನುಂಟು ಮಾಡುತ್ತದೆ. ಪ್ರಾರಂಭಿಕವಾಗಿ ಅತಿಯಾದ ಜ್ವರ, ಆಹಾರ ಸೇವನೆ ನಿಲ್ಲುವುದು, ನಡೆದಾಡಲು ಸಾಧ್ಯವಿರದೇ ಇರುವುದು ಮತ್ತು ಕುಸಿದು ಕುಳಿತುಕೊಳ್ಳುವುದು ಇದರ ಲಕ್ಷಣ. ಅತ್ಯಂತ ತೀವ್ರವಾದ ಕಾಯಿಲೆಯ ಸ್ವರೂಪದಲ್ಲಿ ಇಡೀ ಶರೀರದಲ್ಲಿ ತೀವ್ರವಾದ ರಕ್ತ ಸ್ರಾವವಾಗಿ ಹಂದಿ ಮರಣವನ್ನಪ್ಪಬಹುದು. ಈ ಕಾಯಿಲೆಯಿಂದ ಬದುಕಿ ಉಳಿದ ಹಂದಿಗಳ ಕಣ್ಣು ಮತ್ತು ಮೂತಿ ಕೆಂಪಗಾಗಬಹುದು ಮತ್ತು ಇದಾದ ನಂತರ ಇಡೀ ದೇಹ ಕೆಂಪಗಾಗಿ ಮೂಗು ಮತ್ತು ಗುದದ್ವಾರಗಳಲ್ಲಿ ರಕ್ತ ಸೋರುವಿಕೆ ಪ್ರಾರಂಭವಾಗಬಹುದು. ತೀವ್ರವಾದ ವಾಂತಿ, ಬೇಧಿ ಮತ್ತು ಗರ್ಭಧರಿಸಿದ ಹಂದಿಗಳಲ್ಲಿ ಗರ್ಭಪಾತ ಕಾಣಿಸಿಕೊಳ್ಳಬಹುದು. ಬದುಕಿ ಉಳಿದ ಹಂದಿಗಳಲ್ಲಿ ನಿಶ್ಯಕ್ತಿ, ಊದಿಕೊಂಡ ಕೀಲುಗಳು ಮತ್ತು ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳಬಹುದು.

ಫೋಟೋ ಕೃಪೆ : healthyagricultur

ಮರಣೋತ್ತರ ಪರೀಕ್ಷೆ ಚಿಹ್ನೆಗಳು

ಇಡೀ ಶರೀರದಲ್ಲಿ ರಕ್ತಸ್ರಾವದ ಚಿಹ್ನೆಗಳು, ಚರ್ಮದಡಿ ರಕ್ತಸ್ರಾವ, ದುಗ್ಧಗೃಂಧಿಗಳ ಊದಿಕೊಳ್ಳುವಿಕೆ, ಅಲ್ಲಲ್ಲಿ ಹೆಪುö್ಪಗಟ್ತದೇ ಇರುವ ರಕ್ತದ ಛಾಯೆಗಳು, ಊದಿಕೊಂಡ ಗುಲ್ಮ, ಉರಿಯೂತಗೊಂಡ ಶ್ವಾಸಕೋಶಗಳು, ರಕ್ತಮಿಶ್ರಿತ ಶರೀರದ್ರವ ಇವೆಲ್ಲಾ ಕಾಣಿಸಿಕೊಳ್ಳಬಹುದು. ಇವು ರೋಗಪತ್ತೆಗೂ ಸಹ ಸಹಕಾರಿ.

ರೋಗಪತ್ತೆ ವಿಧಾನ

ರೋಗದ ವೃತ್ತಾಂತ, ರೋಗಲಕ್ಷಣಗಳು ಮತ್ತು ಮರಣೋತ್ತರ ಪರೀಕ್ಷೆಯ ಅವಗಾಹನೆ ಇವೆಲ್ಲಾ ರೋಗ ಪತ್ತೆ ಹಚ್ಚಲು ಸಹಕಾರಿ. ರೋಗಪೀಡಿತ ಹಂದಿಯ ರಕ್ತ, ಸಿಂಬಳ ಅಥವಾ ಮರಣ ಹೊಂದಿದ ಪಕ್ಷದಲ್ಲಿ ಎಲ್ಲಾ ಅಂಗಗಳ ಮಾದರಿಗಳು ಇವುಗಳನ್ನು ಶೀತಲೀಕೃತ ವ್ಯವಸ್ಥೆಯಲ್ಲಿ ಸೂಕ್ತ ಪ್ರಯೋಗಾಲಯಕ್ಕೆ ಕಳಿಸಬೇಕು. ಎಲಿಸಾ ಮತ್ತು ಪಿ ಸಿ ಆರ್ ಮಾದರಿಯಲ್ಲಿ ಈ ಕಾಯಿಲೆಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿದೆ. ಈ ಕಾಯಿಲೆಯನ್ನು ಪತ್ತೆ ಮಾಡಬೇಕಾದಾಗ ಇದೇ ತರದ ಲಕ್ಷಣವನ್ನುಂಟು ಮಾಡುವ ಇತರ ಕಾಯಿಲೆಗಳಾದ ಸಾಲ್ಮೋನೆಲ್ಲೋಸಿಸ್ ಮತ್ತು ಎರಿಸಿಪಿಲಸ್ ಕಾಯಿಲೆಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

ಫೋಟೋ ಕೃಪೆ : google

ಚಿಕಿತ್ಸೆ

ವೈರಾಣು ಮೂಲದ ಈ ಕಾಯಿಲೆಗೆ ಸೂಕ್ತ ಚಿಕಿತ್ಸೆಯೂ ಇಲ್ಲ ಲಸಿಕೆಯೂ ಇಲ್ಲ. ಈ ಕುರಿತು ಅನೇಕ ದೇಶಗಳಲ್ಲಿ ಸಂಶೋಧನೆ ನಡೆದಿದೆ. ರೋಗಲಕ್ಷಣಕ್ಕೆ ಸಂಬAಧಿಸಿದAತೆ ಜೀವನಿರೋಧಕಗಳು, ರಕ್ತಸ್ರಾವ ತಡೆಯುವ ಔಷಧಿಗಳು ಮತ್ತು ನಂಜುನಿವಾರಕಗಳನ್ನು ನೀಡಬಹುದಾಗಿದೆ.

ತಡೆಗಟ್ಟುವಿಕೆ

ರೋಗವು ಬರದಂತೆ ತಡೆಗಟ್ಟುವುದು ಸದ್ಯಕ್ಕಿರುವ ಉತ್ತಮ ಮಾರ್ಗ. ರೋಗಪೀಡಿತ ಹಂದಿಗಳನ್ನು ಪ್ರತ್ಯೇಕಿಸಿ ಇಡುವುದು, ಕಾಡುಪ್ರಾಣಿಗಳ ಜೊತೆ ಸಂಪರ್ಕ ಬರದಂತೆ ತಡೆಯುವುದು, ಹೊಸದಾಗಿ ಹಂದಿ ಖರೀದಿಸಿದಲ್ಲಿ ಅವುಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಿಡುವುದು,ಹಂದಿ ಮೂಲದ ಯಾವುದೇ ಆಹಾರ ಬಳಸದಿರುವುದು, ಹಂದಿಮನೆಯನ್ನು ಸಂಪೂರ್ಣವಾಗಿ ಸೂಕ್ಷಾಣುನಾಶಕದಿಂದ ಸ್ವಚ್ಚಗೊಳಿಸುವುದು, ಸತ್ತ ಹಂದಿಗಳ ಸರಿಯಾದ ವಿಲೇವಾರಿ, ಕಾಡು ಹಂದಿಗಳ ಬೇಟೆಯಾಡದಿರುವುದು, ಬಾಧಿತ ಹಂದಿಯ ಸುಖ ಮರಣ

ಸಧ್ಯಕ್ಕಿರುವ ಮಾರ್ಗಗಳು.


  • ಡಾ.ಎನ್.ಬಿ.ಶ್ರೀಧರ
    ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
    ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
    ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-೫೭೭೨೦೪

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW