ನೂರಾ ಐವತ್ತು ವರ್ಷಗಳ ಹಿಂದೆ ಏಕಾಂಗಿಯಾಗಿ ವಿದೇಶಕ್ಕೆ ಪ್ರಯಾಣ ಮಾಡಿ,ಅಮೆರಿಕದ ಮೆಡಿಕಲ್ ಕಾಲೇಜಿನಲ್ಲಿ ಓದಿ ಭಾರತದ ಮೊದಲ ಮಹಿಳಾ ವೈದ್ಯೆಯಾದ ಆನಂದಿ ಗೋಪಾಲ್ ರಾವ್ ಜೋಶಿಯವರ ಕುರಿತಾದ ಚಂದ್ರಶೇಖರ್ ಮಂಡೆಕೋಲು ಅವರು ಬರೆದಿರುವ ‘ಅಗ್ನಿದಿವ್ಯದ ಹುಡುಗಿ’ ಪುಸ್ತಕದ ಕುರಿತು ಡಾ. ವೈಶಾಲಿ ನಾಯಕ್ ಅವರು ಬರೆದಿರುವ ಲೇಖನವಿದು, ಪುಸ್ತಕವನ್ನು ಕೊಂಡು ಓದಿ…
ಕೆಲವು ಸಮಯದ ಮೊದಲು,ಸಮೀರ್ ವಿದ್ವಾನರ #ಆನಂದಿ_ಗೋಪಾಲ್ ಮರಾಠಿ ಚಲನಚಿತ್ರದ ಚೆಲುವನ್ನು ಆಸ್ವಾದಿಸು ತ್ತಿರುವಾಗ ಚಲನಚಿತ್ರದ ಪ್ರಬುದ್ಧತೆಗೆ, ಕಲಾತ್ಮತೆಗೆ, ಗ್ರಾಮೀಣ ಮರಾಠಿ ಭಾಷೆಯ ಸೊಗಡಿಗೆ ಮನದೂಗಿದ್ದೆ. ಆದರೂ ಉತ್ತರಾರ್ಧದ ಆನಂದಿಯ ಜೀವನದ ಅಪೂರ್ಣವಾಗಿಯೇ ಉಳಿದ ಜೀವನದ ಕೆಲವು ಘಟ್ಟಗಳು,ಸಂಘರ್ಷಗಳ ಬದುಕು ಗೊಂದಲಗಳಾಗಿ ಕಾಡಿ ಪ್ರಶ್ನೆಯಾಗಿ ಉಳಿದಾಗ ಉತ್ತರ ಸಿಕ್ಕಿದ್ದು ‘ಅಗ್ನಿದಿವ್ಯದ ಹುಡುಗಿ’ ಪುಸ್ತಕದಲ್ಲಿ….

‘ ಅಗ್ನಿದಿವ್ಯದ ಹುಡುಗಿ’ ಪುಸ್ತಕ ಕೃತಿ ಬರಹಗಾರರು ಚಂದ್ರಶೇಖರ್ ಮಂಡೆಕೋಲು
ಸಂಪ್ರದಾಯದ ಎಲ್ಲಾ ಕಟ್ಟುಪಾಡುಗಳನ್ನು ಮೀರಿ,ನೂರಾ ಐವತ್ತು ವರ್ಷಗಳ ಹಿಂದೆ ಏಕಾಂಗಿಯಾಗಿ ವಿದೇಶಕ್ಕೆ ಪ್ರಯಾಣ ಮಾಡಿ, ಅಲ್ಲಿನ ಅಮೆರಿಕದ ಮೆಡಿಕಲ್ ಕಾಲೇಜಿನಲ್ಲಿ ತನ್ನ ಸ್ವಂತ ಪ್ರತಿಭೆ,ಪರಿಶ್ರಮದ ಓದಿನಿಂದ ಪ್ರವೇಶ ಪಡೆದು,ಉನ್ನತ ಶ್ರೇಣಿಯ ಪದವಿ ಪಡೆದು,ಸನ್ಮಾನ ಗೌರವಕ್ಕೆ ಪಾತ್ರಳಾಗಿ ಅಪೂರ್ವ ದಾಖಲೆಯಾಗಿ ಉಳಿದು ನೆನಪಿನಂಗಳದಲ್ಲಿ ಅಚ್ಚಾದ ಭಾರತದ ಮೊದಲ ಮಹಿಳಾ ವೈದ್ಯೆ #ಆನಂದಿ_ಗೋಪಾಲ್_ರಾವ್_ಜೋಶಿ.

ಜ್ಞಾನದ ಸದುಪಯೋಗದಿಂದಲೇ ದೇಶವನ್ನು ಬದಲಿಸಲು ಸಾಧ್ಯ ಇದು ಪುಟ್ಟ ಆನಂದಿಯೊಳಗಿನ ಪರಮ ಆದರ್ಶ.ಆಗಿನ ಕಾಲದಲ್ಲಿ ಹೆಣ್ಣೊಬ್ಬಳು #ವೈದ್ಯ_ವೃತ್ತಿಯನ್ನು ಕಲಿಯಲೇಬೇಕಾದ ಅನಿವಾರ್ಯ ಘಟನೆಗಳು, ಸಂಪ್ರದಾಯಸ್ಥ ಮರಾಠಿ ಬ್ರಾಹ್ಮಣ ಮನೆತನದ ಒಳಗಿನ ಹೆಣ್ಣುಗಳ ಮನದ ತುಮುಲಗಳನ್ನು ಬರಹ ಅನಾವರಣಗೊಳಿಸುತ್ತದೆ.
ಕಲಿಯುವ ಗಮ್ಯವನ್ನು ತಲುಪುವಲ್ಲಿ ಆನಂದಿಯ ಹೋರಾಟದ ಬದುಕು,ಎಳೆವಯಸ್ಸಿನಲ್ಲೇ ಅಭ್ಯಾಸದ ವಿಷಯದಲ್ಲಿ ಗಂಡನಿಂದ ಅನುಭವಿಸಿದ ದೈಹಿಕ ಹಿಂಸೆಗಳು, ಮನಸ್ಸಿಗೂ ಶರೀರಕ್ಕೂ ಮಾಡಿದ ಮಾಗದ ಗಾಯಗಳ ನಡುವೆಯೂ ಕೈಹಿಡಿದಾತನ ಅದಮ್ಯ ಪ್ರೋತ್ಸಾಹದಿಂದಾಗಿ ,ಒಬ್ಬಂಟಿಯಾಗಿ ವಿದೇಶಕ್ಕೆ ಹೋಗಿ, ಪದವಿ ಪಡೆದು, ತಾಯ್ನೆಲಕ್ಕೆ ಹಿಂದಿರುಗಿ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿಯೇ ಕ್ಷಯರೋಗಕ್ಕೆ ತುತ್ತಾಗಿ ,ಹುಟ್ಟಿಬೆಳೆದ ಮನೆಯಲ್ಲೇ ಸಾವನ್ನಪ್ಪಿದ ದಾರುಣ ವ್ಯಕ್ತಿಚಿತ್ರವೊಂದು ಮಾರ್ಮಿಕವಾಗಿ ಕಟ್ಟಲ್ಪಟ್ಟಿದೆ.
ಪುಸ್ತಕದುದ್ದಕ್ಕೂ ರೊಸೆಲ್ಲೆಯಲ್ಲಿ ಧರ್ಮದ ಅಫೀಮು ಹತ್ತಿಸಿಕೊಳ್ಳದ ,ದೇಶ,ಭಾಷೆ,ಅಂತಸ್ತುಗಳನ್ನು ಮೀರಿ,ಆತ್ಮೀಯತೆಯ ಸೆಲೆಯಲ್ಲಿ ಬಂಧಿಯಾದ ಥಿಯೋಡಿಸಿಯಳ ಮಾತೃ ಪ್ರೇಮದ ಸವಿ, ಅಲ್ಲಿಯ ಜನರಿಗೆ ಆನಂದಿಯ ಕೈಯಡುಗೆ, ಆನಂದಿ ಗೋಪಾಲರ ಭಾವನಾತ್ಮಕ ಸಂಬಂಧ, ಪ್ರೀತಿ, ಭರವಸೆ, ಆತ್ಮೀಯ ಗದರಿಕೆ,ಅಮೆರಿಕದ ಭಾವಪೂರ್ಣ ವಿದಾಯ,ತವರುನಾಡಿನಲ್ಲಿ ಹೂಮಳೆಯ ಸ್ವಾಗತ ಶೀರ್ಷಿಕೆಗಳು ಮನಸ್ಸನ್ನು ಆರ್ದ್ರವಾಗಿಸುತ್ತವೆ.

ಆನಂದಿ ಬಾಯಿ ಅವರ ಹಸ್ತಾಕ್ಷರ ( ಫೋಟೋ ಕೃಪೆ : wikimedia)
ಕೊನೆಯಲ್ಲಿ ಆನಂದಿಯ ಕ್ಷೀಣ ದೇಹ ಹಾಗೂ ವಜ್ರದಂತಹ ಆತ್ಮದ ನಡುವಿನ ಅದಮ್ಯ ಸಂಘರ್ಷ, ಅವಳ ಅಸಾಧ್ಯ ಮೌನದಲ್ಲಿ ಹೊಮ್ಮಿದ ಸಾವಿರ ಭಾವಗಳು ಕಣ್ಣಪಸೆ ಯೊಳಗೆ ಮಸುಕಾದವು.ನೋವಿನಲ್ಲಿ ಅರಳಿ, ಬದುಕಿನ ಸಂಕೀರ್ಣತೆಯನ್ನು ಬಯಲಾಗಿಸಿದ ಆನಂದಿಯ ಬದುಕು ನಿಜಕ್ಕೂ ಸ್ಪೂರ್ತಿಗಾಥೆ.
- ಡಾ. ವೈಶಾಲಿ ನಾಯಕ್ (ಆಯುರ್ವೇದ ವೈದ್ಯರು, ಲೇಖಕರು), ಮುಂಬೈ
