ಸ್ವಾತಂತ್ರ ಹೋರಾಟದಲ್ಲಿ ಅಬ್ದುಲ್‌ ಹಬೀಬ್‌ ರ ಪಾತ್ರ



ಸ್ವಾತಂತ್ರ ಹೋರಾಟದಲ್ಲಿ ಅಬ್ದುಲ್‌ ಹಬೀಬ್‌ ಯೂಸುಫ್‌ ಮರ್ಫಾನಿ ಅವರ ಪಾತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಚಂದ್ರಶೇಖರ್ ಮಂಡೆಕೋಲು ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…

ಅಬ್ದುಲ್‌ ಹಬೀಬ್‌ ಯೂಸುಫ್‌ ಮರ್ಫಾನಿ ಗುಜರಾತಿ ಮೂಲದ, ರಂಗೂನ್‌ನಲ್ಲಿ ನೆಲೆಸಿದ್ದ ಕೋಟ್ಯಾಧಿಪತಿ ಉದ್ಯಮಿ.

ನೇತಾಜಿಯವರ ಭಾಷಣಗಳನ್ನು ಕೇಳುತ್ತಾ ಕೇಳುತ್ತಾ ರಾಷ್ಟ್ರೀಯವಾದಿಯಾಗಿ ಬೆಳೆದಿದ್ದರು. ಅವರ ಮೈಮನಗಳಲ್ಲಿದ್ದುದ್ದು ಕೇವಲ ತಾಯ್ನೆಲದ ದಿಗ್ವಿಜಯದ ಗುರಿಯಷ್ಟೇ. ರಂಗೂನ್‌ನಲ್ಲಿ ನಡೆಯುತ್ತಿದ್ದ ನೇತಾಜಿಯವರ ಪ್ರತಿ ಸಾರ್ವಜನಿಕ ಭಾಷಣ ಸಮಾರಂಭದಲ್ಲೂ ಹಬೀಬ್‌ ಹಾಜರಿರುತ್ತಿದ್ದರು. ನೇತಾಜಿಯವರೋ ಇಂಡಿಯಾದ ಬಂಧಮುಕ್ತಿಗಾಗಿ ಎಲ್ಲರ ಬಳಿ ದೇಣಿಗೆ ಯಾಚಿಸುತ್ತಿದ್ದರು. ಹೆಣ್ಮಕ್ಕಳು ಕರಿಮಣಿಯನ್ನೂ ಬಿಡದೆ ನೇತಾಜಿಗೆ ಸಮರ್ಪಿಸುತ್ತಿದ್ದ ಕಾಲ.

ಕೋಟಿಪತಿ ಉದ್ಯಮಿ ಹಬೀಬರು ಸುಮ್ಮನಿರಲಿಲ್ಲ. ಆಜಾದ್‌ ಹಿಂದ್‌ ಪೌಜ್‌ಗೆ ಹಣ ಸುರಿದರು.. ಸುರಿದರು.. ೧೯೪೪ರ ಜುಲೈ ೯ರವರೆಗೆ #ನೇತಾಜಿಯವರ ಪ್ರತಿ ಭಾಷಣ ಮುಗಿದಾಗಲೂ ೨-೩ ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುತ್ತ ಬಂದರು!

ಎಲ್ಲವೂ ಮುಗಿದಾಗ, ಕೊನೆಗೆ ಹಬೀಬರು ತಮ್ಮಲ್ಲಿದ್ದ ಚಿನ್ನಾಭರಣ, ಆಸ್ತಿಯ ದಾಖಲೆಪತ್ರಗಳು ಮತ್ತು ನಗದು ಹಣವಿದ್ದ ಬೆಳ್ಳಿಯ ತಟ್ಟೆಯ ಜೊತೆಗೆ ನೇತಾಜಿ ಬಳಿ ಹೋದರು.. ಅದರ ಅಂದಿನ ಮೌಲ್ಯವೇ ೧ ಕೋಟಿ ರೂಪಾಯಿಗಳಾಗಿತ್ತು!

ತನ್ನದ್ದೆಲ್ಲವನ್ನೂ ಹಿಂದೂಸ್ತಾನಕ್ಕಾಗಿ ಸಮರ್ಪಿಸಿದ ಹಬೀಬರು ಈಗ ಬರಿಗೈಲಿ ನಿಂತಿದ್ದರು. ಭವಿಷ್ಯತ್ತಿಗಾಗಿ ಅವರ ಬಳಿ ನಯಾಪೈಸೆಯೂ ಇರಲಿಲ್ಲ. ಎಲ್ಲವನ್ನೂ ದಾನವಿತ್ತ ಬಳಿಕ, ನೇತಾಜಿ ಬಳಿ, ತನಗಾಗಿ ಆಜಾದ್‌ ಹಿಂದ್‌ ಪೌಜ್‌ನ ಒಂದು ಜೊತೆ ಯೂನಿಫಾರ್ಮ್‌ ನೀಡುವಂತೆ ಕೇಳಿದರಂತೆ. ಸುಭಾಷ್‌ ಬೋಸರು, ಹಬೀಬರಿಗೆ ಆಜಾದ್‌ ಹಿಂದ್‌ ಸರ್ಕಾರದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ತಮ್‌ಘಾ-ಇ-ಸೇವಕ್‌-ಇ- ಹಿಂದ್‌ ನೀಡಿ ಹೀಗೆ ಹೇಳಿದರಂತೆ- ʼಕೆಲವರು, ಹಬೀಬ್‌ ಹುಚ್ಚನಾಗಿದ್ದಾನೆ ಎಂದು ಹೇಳಬಹುದು.

ಹೌದು, ಪ್ರತಿಯೊಬ್ಬ ಭಾರತೀಯನೂ ಹೀಗೆ ಹುಚ್ಚನಾಗಬೇಕು. ನಮ್ಮ ತಾಯ್ನೆಲದ ಸ್ವಾತಂತ್ರ್ಯ ಮತ್ತು ವಿಜಯಕ್ಕಾಗಿ ಇಂತಹ ಮಹನೀಯರು, ಮಹಿಳೆಯರ ಅಗತ್ಯವಿದೆʼ.


  • ಚಂದ್ರಶೇಖರ್ ಮಂಡೆಕೋಲು (ಲೇಖಕರು – ಸಾಹಿತಿಗಳು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading