ಚಕ್ರವರ್ತಿಯಾಗದ ನಚ್ಚಿ? – ಅವರವರ ಭಾವಕ್ಕೆ…



ನಚ್ಚಿ ಎನ್ನುವುದು ಇನ್ನು ಒಂದು ನೆನಪು ಮಾತ್ರ, ಅವರು ಇಹಲೋಕ ತ್ಯೇಜಿಸಿ ಹನ್ನೊಂದು ತಿಂಗಳಾಗುತ್ತಾ ಬಂದಿದೆ. ಪತ್ರಕರ್ತರ ಬಗ್ಗೆ ಯಾರೂ ಬರೆಯುವುದಿಲ್ಲ,ಅವರ ಕುರಿತಾದ ‘ಚಕ್ರವರ್ತಿಯಾಗದ ನಚ್ಚಿ?’ ಪುಸ್ತಕದ ಕುರಿತು ಮಾಕೋನಹಳ್ಳಿ ವಿನಯ್‌ ಮಾಧವ್ ಅವರು ಬರೆದ ಪುಟ್ಟ ಪರಿಚಯ, ಮುಂದೆ ಓದಿ…

  • ಪುಸ್ತಕದ ಹೆಸರು : ಚಕ್ರವರ್ತಿಯಾಗದ ನಚ್ಚಿ?
  • ಪುಸ್ತಕದ ಬೆಲೆ : 300 ರೂ
  • ಪುಸ್ತಕ ಬೇಕಾದವರು ಸಂಪರ್ಕಿಸಬೇಕಾದ ವಿಳಾಸ:
    91 94482 35553 (Chaarumathi Prakashana)
    Phone pay or Google Pay Rs.300/- to the same number.

ಪತ್ರಕರ್ತರ ಮೇಲೆ ಎಷ್ಟು ಜೋಕ್‌ಗಳು ಇವೆ ಎಂದರೆ, ಅವುಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು. ಹಾಗೆಯೇ, ತಮ್ಮ ಮೂಗಿನ ನೇರಕ್ಕೆ ಸುದ್ದಿ ಪ್ರಕಟಿಸದ ಪತ್ರಕರ್ತರ ಬಗ್ಗೆ ಟ್ರೋಲ್‌ ಮಾಡುವುದನ್ನು ನೋಡಿದರೆ, ಪತ್ರಕರ್ತರು ಎನ್ನುವ ದುಷ್ಟ ಜಂತುಗಳಿಂದಲೇ ಈ ಪ್ರಪಂಚ ಇಷ್ಟೊಂದು ಹಾಳಾಗಿದೆ, ಇಲ್ಲದೇ ಹೋಗಿದ್ದರೆ, ಈ ಟ್ರೋಲ್‌ ಮಾಡುವ ಜನಗಳು ನಂದಗೋಕುಲವನ್ನೇ ಸೃಷ್ಟಿ ಮಾಡಿರುತ್ತಿದ್ದರು ಎನ್ನುವ ಭಾವನೆ ಬರುತ್ತದೆ.

ಪತ್ರಕರ್ತರ ಬಗ್ಗೆ ಈ ರೀತಿ ಧೋರಣೆ ಇಂದಿನದೇನಲ್ಲ ಎನ್ನುವುದು ನನ್ನ ಭಾವನೆ. ಮೊದಲೆಲ್ಲ, ಪತ್ರಕರ್ತ ಎನ್ನುವುದು ಒಂದು ಉದ್ಯೋಗ ಎನ್ನುವುದನ್ನು ಯಾರೂ ಒಪ್ಪುತ್ತಿರಲಿಲ್ಲ. ʻನೀನು ಪತ್ರಕರ್ತ ಎನ್ನುವುದು ಸರಿ ಕಣಯ್ಯ, ಆದರೆ ಹೊಟ್ಟೆ ಪಾಡಿದೆ ಏನು ಮಾಡ್ತಾ ಇದ್ದೀಯ?ʼ ಎಂದು ದಿ ಹಿಂದೂ ಪೇಪರ್‌ನ, ಬೆಂಗಳೂರು ಆವೃತಿಯ ಸಂಪಾದಕರಾಗಿ ನಿವೃತ್ತರಾಗಿರುವ ಪಿ ರಾಮಯ್ಯನವರನ್ನು, ಅವರು ಹೆಣ್ಣು ನೋಡಲು ಹೋದಾಗ ಕೇಳಿದ್ದರಂತೆ. ಇದನ್ನು ಅವರೇ ನನಗೆ ಹೇಳಿದ್ದರು.

ತೊಂಬತ್ತರ ದಶಕದ ಕೊನೆಯಲ್ಲಿ, ಹುಂಬನೊಬ್ಬ ಪತ್ರಿಕಾ ಪ್ರಪಂಚಕ್ಕೆ ಕಾಲಿಡುತ್ತಾನೆ. ಪತ್ರಿಕಾರಂಗದ ಗಂಧ-ಗಾಳಿ ಗೊತ್ತಿಲ್ಲದ ಅವನು, ಎಗ್ಗಿಲ್ಲದೆ ತನ್ನದೇ ರೀತಿಯಲ್ಲಿ ಎಲ್ಲವನ್ನೂ ವಿಶ್ಲೇಷಣೆ ಮಾಡುತ್ತಿರುತ್ತಾನೆ. ಹೀಗಿರುವಾಗ ಒಂದು ದಿನ, ಪತ್ರಿಕೆಯ ಚೀಫ್ ರಿಪೋರ್ಟರ್ ಆ ಹುಂಬನನ್ನು ಕರೆದು, ʻಇಂದು ಸಂಜೆ ಮಂತ್ರಿಯೊಬ್ಬರ ಗುಂಡು ಪಾರ್ಟಿ ಇದೆ. ಸುಮಾರು ಮಂತ್ರಿಗಳು ಬಂದಿರುತ್ತಾರೆ. ಹೋಗಿ ಸುಮ್ಮನೆ ನಿಂತುಕೊಂಡು, ಅಲ್ಲಿ ಯಾರ್ಯಾರು, ಏನೇನು ಮಾತನಾಡುತ್ತಾರೆ ಅಂತ ಕೇಳಿಕೊಂಡು ಬಾ. ಏನಾದರೂ ಸುದ್ದಿ ಇದೆ ಅಂತ ಅನ್ನಿಸಿದರೆ ಕೊಡು. ಇಲ್ಲದೇ ಹೋದರೆ, ನೀನು ಕೇಳಿಕೊಂಡಿರುವುದರಲ್ಲಿ ಏನಾದರೂ ಸುದ್ದಿ ಹುಟ್ಟುತ್ತಾ ನೋಡೋಣ,ʼ ಎಂದರು.

ಸರಿ, ಈ ಹುಂಬ ಪಂಚತಾರಾ ಹೋಟೆಲ್‌ಗೆ ಹೋಗಿ, ಪಾರ್ಟಿಯಲ್ಲಿ ಸೇರಿಕೊಂಡ. ಪತ್ರಿಕಾರಂಗಕ್ಕೆ ಹೊಸಬನಾದ್ದರಿಂದ, ರಾಜಕಾರಣಿಗಳಿಗೆ ಇವನ ಪರಿಚಯ ಅಷ್ಟಾಗಿ ಇರಲಿಲ್ಲ. ಸ್ವಲ್ಪ ತಡವಾಗಿ, ಒಬ್ಬ ಹಿರಿಯ ಪತ್ರಕರ್ತರು ಒಳಗೆ ಬರುವುದು ಕಂಡಿತು. ತಕ್ಷಣವೇ ಹತ್ತಿರದಲ್ಲೇ ಇದ್ದ ಮಂತ್ರಿಯೊಬ್ಬರು, ತಮ್ಮ ಜೊತೆಯಲ್ಲಿದ್ದ ಎಂಎಲ್‌ಎ ಒಬ್ಬರನ್ನು ಕುರಿತು, ʻನೋಡು… ಕೋತಿ ಬರುತ್ತಿದೆ. ಅದಕ್ಕೆ ಹೆಂಡ ಕುಡಿಸಿ ಮಜಾ ತಗೊಳ್ಳೋಣʼ ಎಂದವರೇ, ಹಿರಿಯ ಪತ್ರಕರ್ತರ ಹತ್ತಿರ ಕೈ ಮುಗಿಯುತ್ತಾ ಹೋಗಿ, ʻಏನು ಗುರುಗಳೇ? ನೀವು ಇಷ್ಟು ತಡವಾಗಿ ಬಂದರೆ, ನಮ್ಮ ಕಥೆ ಏನಾಗಬೇಕು?ʼ ಎಂದು ಮಾತನಾಡಿಸಲಾರಂಭಿಸಿದರು.

ಹುಂಬನಿಗೆ ನಖಶಿಖಾಂತ ಉರಿದು ಹೋಯಿತು. ಆದರೆ ಏನೂ ಮಾಡುವಂತಿರಲಿಲ್ಲ. ಮಂತ್ರಿಗಳ ವಿನಯವಂತಿಗೆಗೆ ಉಬ್ಬಿಹೋದ ಹಿರಿಯ ಪತ್ರಕರ್ತರು, ಅವರಿಗೆ ದೊಡ್ಡ ಭಾಷಣವನ್ನೇ ಕೊಡಲು ಆರಂಭಿಸಿದರು. ಒಂದರ್ಧ ಘಂಟೆ ಆಚೀಚೆ ಓಡಾಡಿದ ಹುಂಬ, ತನ್ನ ಕಛೇರಿಗೆ ಮರಳಿದ. ಅಷ್ಟು ಬೇಗ ಬಂದ ಅವನನ್ನು ನೋಡಿದ ಚೀಫ್ ರಿಪೋರ್ಟರ್‌, ʻಏನಾಯ್ತೋ? ಇಷ್ಟು ಬೇಗ ಏಕೆ ಬಂದೆ? ಏನಾದ್ರೂ ಸುದ್ದಿ ಇತ್ತಾ? ಒಳ್ಳೆ ಗುಂಡು ಇಟ್ಟಿರ್ತಾರೆ. ಮೂರ್ನಾಲ್ಕು ಪೆಗ್‌ ಹಾಕಿ ಮನೆಗೆ ಹೋಗೋದಲ್ವಾ?ʼ ಎಂದು ಕೇಳಿದರು.



ʻನಾನು ಕುಡಿಯೋದಿಲ್ಲ. ಯಾಕೋ ಪಾರ್ಟಿ ಇಷ್ಟ ಆಗಲಿಲ್ಲ,ʼ ಎಂದು, ನಡೆದದ್ದನೆಲ್ಲಾ ಹೇಳಿದ ಹುಂಬ.

ಚೀಫ್ ರಿಪೋರ್ಟರ್‌ ಬಿದ್ದು ಬಿದ್ದು ನಗಲು ಶುರು ಮಾಡಿದರು. ʻಅಲ್ವೋ… ಆ ಮಿನಿಸ್ಟರ್‌ ಏನೋ ಹೇಳ್ದ ಅಂತ ಹೇಳಿ, ನೀನು ಬೇಜಾರು ಮಾಡ್ಕೊಂಡಿದ್ದೀಯಲ್ಲ. ನೋಡು… ನೀನು ಇನ್ನೂ ಚಿಕ್ಕವನು. ಈ ಪ್ರಪಂಚ ಹೇಗೆ ಅಂದ್ರೆ, ಅದು ಅವರವರ ಭಾವಕ್ಕೆ ತಕ್ಕ ಹಾಗೆ ಇರುತ್ತೆ. ನಿನ್ನ ಭಾವ, ಎಲ್ಲರ ಭಾವವಾಗಿ ಇರೋಕೆ ಸಾಧ್ಯವಿಲ್ಲ. ಅದನ್ನು ನಿರೀಕ್ಷೆ ಕೂಡ ಮಾಡಬೇಡ. ಆಗ ನೀನು ಎಲ್ಲದಕ್ಕೂ ಪ್ರತಿಕ್ರಿಯೆ ಕೊಡಬೇಕಾಗುತ್ತೆ. ಹಾಗಾಗಿ ನಾವು ಭಾವಗಳನ್ನು ಮೀರಿ ನಿಲ್ಲಬೇಕು. ಆ ಮಂತ್ರಿಯ ಪ್ರಕಾರ, ಯಾರ ಬೆನ್ನಿಗೆ ಬೇಕಾದರೂ ಚೂರಿ ಹಾಕಿ ತಾನು ಮುಂದೆ ಬರಬೇಕು ಅಂತ ಇರುತ್ತೆ. ಹಾಗಾಗಿ, ಇನ್ನೊಬ್ಬರ ಮುಂದೆ ನಯವಾಗಿ ಮಾತಾಡುತ್ತಾನೆ. ಆ ಪತ್ರಕರ್ತ, ತನ್ನನ್ನು ಎಲ್ಲರೂ ಗೌರವಿಸಬೇಕು ಅಂತ ಯೋಚಿಸ್ತಾನೆ ಮತ್ತು ತನ್ನ ಮುಂದೆ ಚೆನ್ನಾಗಿ ಮಾತನಾಡಿದವರ ಪರವಾಗಿ ಬರೆಯುತ್ತಾನೆ. ಆದರೆ, ತನ್ನ ಬೆನ್ನಿಗೆ ಬಿದ್ದಿರುವ ಚೂರಿ ಬಗ್ಗೆ ಅವನಿಗೆ ಏನೂ ಗೊತ್ತಾಗುವುದಿಲ್ಲ. ನಿನ್ನನ್ನು ನೋಡು. ಎಲ್ಲರೂ ನೇರ ಮತ್ತು ನಿಷ್ಠುರವಾಗಿ ಇರಬೇಕು ಮತ್ತೆ ಪತ್ರಿಕೆಯವರನ್ನು ಗೌರವಿಸಬೇಕು ಅಂತ ಯೋಚಿಸುತ್ತೀಯ. ಹಾಗಾಗದೇ ಹೋದಾಗ, ನಿನಗೆ ಸಿಟ್ಟು ಬರುತ್ತದೆ. ಪ್ರಪಂಚದಲ್ಲಿ ಎಲ್ಲಾ ಥರದ ಜನಗಳು ಇರುತ್ತಾರೆ. ಅದನ್ನು ಒಪ್ಪಿಕೊಳ್ಳುವವರೆಗೆ ನೀನು ಒಳ್ಳೆ ಪತ್ರಕರ್ತನಾಗಲೂ ಸಾಧ್ಯವಿಲ್ಲ. ಹಾಗಯೇ, ಜೀವನದಲ್ಲಿ ಒಳ್ಳೆ ಗುಂಡು ಮತ್ತು ಊಟ ಮಿಸ್‌ ಮಾಡ್ಕೋಬೇಡ. ಮುಂದೆ ಸಿಗುತ್ತೋ, ಇಲ್ಲವೋ ಗೊತ್ತಿಲ್ಲ,ʼ ಎಂದು ಹೇಳಿದರು.

ಅಂದು ಅವರ ಮಾತು ಕೇಳಿ ಮುಗುಳ್ನಕ್ಕ ಹುಂಬ ನಾನೇ. ನನ್ನ ಚೀಫ್ ರಿಪೋರ್ಟರ್‌ – #ನಚ್ಚಿ ಅಲಿಯಾಸ್‌ ಎಂ ಎನ್‌ ಚಕ್ರವರ್ತಿ.

ನಚ್ಚಿ ಅಲಿಯಾಸ್‌ ಎಂ ಎನ್‌ ಚಕ್ರವರ್ತಿ (ಫೋಟೋ ಕೃಪೆ : kannada prabha)

ʻನಚ್ಚಿ ಎನ್ನುವುದು ಇನ್ನು ಒಂದು ನೆನಪು ಮಾತ್ರʼ ಎಂದು ಫೇಸ್ಬುಕ್ಕಿನಲ್ಲಿ ಬರೆದು ಹನ್ನೊಂದು ತಿಂಗಳಾಗುತ್ತಾ ಬಂತು. ಏಕೆಂದರೆ, ನಚ್ಚಿಯ ಜೊತೆ ನನ್ನ ಒಡನಾಟ ಬರೋಬ್ಬರಿ ಇಪ್ಪತೈದು ವರ್ಷಗಳು. ಅದೊಂದು ಸುಂದರ ಪಯಣ ಎಂದು ಹೇಳಬಹುದೇ ಹೊರತು, ಬೇರೆ ವ್ಯಾಖ್ಯಾನ ನೀಡುವುದು ಕಷ್ಟ. ಆ ಪಯಣದಲ್ಲಿ ಕಲಿಕೆ, ಫಿಲಾಸಫಿ, ಹಾಸ್ಯ, ಸಂತೋಷ, ಪತ್ರಿಕೋದ್ಯಮ… ಒಟ್ಟಿನಲ್ಲಿ ಒಂದು ಅದ್ಭುತವಾದ ಪ್ರಪಂಚವೇ ಇತ್ತು. ಹೋದ ವರ್ಷ ಮಾರ್ಚ್‌ ಒಂದನೇ ತಾರೀಖು, ಮುಂದೇನು? ಎನ್ನುವ ಪ್ರಶ್ನೆ ಧುತ್ತನೆ ಎದುರಾಯಿತು. ಇಪ್ಪತ್ತೈದು ವರ್ಷಗಳ ಪಯಣದ ಬಳಿಕ, ಕವಲು ದಾರಿಯಲ್ಲಿ ಬೇರೆಯಾದೆವು, ಎಂದುಕೊಂಡೆ ಅಷ್ಟೆ.

ಈ ಪ್ರಶ್ನೆ ಹೆಚ್ಚು ಕಾಲ ನನ್ನ ಮನಸ್ಸಿನಲ್ಲಿ ಉಳಿಯಲಿಲ್ಲ. ನಚ್ಚಿಯ ವೈಕುಂಠ ಸಮಾರಾಧನೆಯ ಕೆಲವೇ ದಿನಗಳಲ್ಲಿ ನನಗೆ ಮೋಹನ್‌ ರಾಂ ಫೋನ್‌ ಮಾಡಿ, ನಚ್ಚಿಯ ಬಗ್ಗೆ ಪುಸ್ತಕವನ್ನು ಹೊರತರಲು ಯೋಚಿಸಿದ್ದೇವೆ ಮತ್ತು ಅದರ ರೂಪು-ರೇಷೆಗಳನ್ನು ಚರ್ಚಿಸಲು ಮಲ್ಲೇಶ್ವರಂನಲ್ಲಿ ಶಂಕರ್‌ ಅವರ ಮನೆಗೆ ಬರಬೇಕೆಂದು ಹೇಳಿದರು. ಅಂದು ವಿಜಯ್‌ ಭಟ್‌, ಹಾ.ಸ.ಕೃ, ಮುರಳಿಧರ ಖಜಾನೆಯವರ ಜೊತೆ ರಾಜಿ ಮೇಡಂ ಮತ್ತು ನಚ್ಚಿಯವರ ಮಗಳು ದಿವ್ಯ ಕೂಡ ಇದ್ದರು. ಅಲ್ಲಿಂದ ಇನ್ನೊಂದು ಪಯಣ ಆರಂಭವಾಯಿತು.

ಅಷ್ಟು ದಿನ, ನಚ್ಚಿಯವರ ಒಡನಾಟದಲ್ಲಿ ನಾನಿದ್ದೆ. ಇನ್ನೆಲ್ಲರೂ ಪಾತ್ರಧಾರಿಗಳಂತೆ ಕಾಣುತ್ತಿದ್ದರು. ಈಗ, ನಚ್ಚಿಯ ಪ್ರಪಂಚದ ವಿಸ್ತಾರದ ಅರಿವು ಮೂಡಲು ಆರಂಭವಾಯಿತು. ಈ ಪ್ರಪಂಚದಲ್ಲಿ ವೈಎನ್ಕೆ, ಲಂಕೇಶ್‌, ತೇಜಸ್ವಿ, ಪ್ರೊ ನಂಜುಂಡಸ್ವಾಮಿ, ಚಿಣ್ಣಪ್ಪ, ಎಚ್‌ ಎನ್‌ ಎ ಪ್ರಸಾದ್‌, ಅಡಗೂರು ವಿಶ್ವನಾಥ್‌, ಸುರೇಶ್‌ ಕುಮಾರ್‌, ಜೋಗಿ ಮತ್ತು ಪತ್ರಿಕಾ ರಂಗದ ಅನೇಕ ದಿಗ್ಗಜರು ಇದ್ದರು. ಇವುಗಳ ಮಧ್ಯೆ ನನ್ನದೂ ಒಂದು ಲೋಕವಿತ್ತು. ಹಾಗೆ ನೋಡಿದರೆ, ಪತ್ರಿಕಾರಂಗದಲ್ಲಿ ನನಗಿಂತ ಹಿರಿಯರು, ಕಿರಿಯರು, ಕನ್ನಡ ಪ್ರಭದ ಅಟೆಂಡರ್‌ ಸತ್ಯ, ಅಲ್ಲಿ ಎಲ್ಲರ ಕೈ ನೋಡಿ ಭವಿಷ್ಯ ಹೇಳುತ್ತಿದ್ದ ಇನ್ನೊಬ್ಬ ಸತ್ಯ, ಪ್ರೆಸ್‌ ಕ್ಲಬ್‌ ಹತ್ತಿರ ಚುರುಮುರಿ ಗಾಡಿಯವನು… ಎಲ್ಲರೂ ನಚ್ಚಿಯ ಜೊತೆ ಒಂದೊಂದು ಲೋಕ ಕಟ್ಟಿಕೊಂಡಿದ್ದರು. ಈ ಎಷ್ಟೋ ಲೋಕಗಳಲ್ಲಿ ನಾನು ಇರಲಿಲ್ಲ. ಇದ್ದ ಲೋಕಗಳಲ್ಲೂ, ನಾನೊಂದು ಪಾತ್ರಧಾರಿಯಾಗಿದ್ದೆ ಅಷ್ಟೆ.

ಇದರ ಮಧ್ಯೆ ರಾಜಿ ಮೇಡಂ ನಚ್ಚಿಯ ಕೆಲವು ಕೈಬರಹದ ಕಾಗದ ಮತ್ತು ಪುಸ್ತಕಗಳನ್ನು ತಂದುಕೊಟ್ಟರು. ಅವರ ಮನೆಯಲ್ಲಿದ್ದ ರಾಶಿ ಕಾಗದಗಳ ಮಧ್ಯೆ ಶೇಕಡಾ ಒಂದರಷ್ಟಿರಬಹುದು. ಅವುಗಳ ಧೂಳು ಕೊಡವಿ ಓದಲು ಆರಂಭವಾದ ತಕ್ಷಣ ನಚ್ಚಿ ನನಗೆ ಹೇಳುತ್ತಿದ್ದ ಮಾತು ನೆನಪಾಯಿತು. ʻನೋಡು ಮಾಕೋನಹಳ್ಳಿ… ಈ ಜರ್ನಲಿಸಂನಲ್ಲಿ ನಿನಗೆ ಎಷ್ಟೋ ವಿಷಯಗಳು ಕಿವಿಗೆ ಬೀಳುತ್ತವೆ. ಎಲ್ಲವನ್ನೂ ಬರೆಯೋಕ್ಕಾಗಲ್ಲ. ಅಂತಹ ವಿಷಯಗಳನ್ನು ಎಲ್ಲಾದರೂ ಬರೆದಿಡು.ʼ

ನಚ್ಚಿ ನನಗೆ ಸಲಹೆಯನ್ನಷ್ಟೇ ನೀಡಿರಲಿಲ್ಲ. ಅದನ್ನು ಪರಿಪಾಲಿಸುತ್ತಿದ್ದರು ಕೂಡ. ಆ ಕಾಗದಗಳನ್ನು ಓದುತ್ತಾ ಹೋದಂತೆ, ನಚ್ಚಿಯ ಇನ್ನೊಂದು ಪ್ರಪಂಚ ತೆರೆದುಕೊಳ್ಳಲು ಆರಂಭಿಸಿತು. ಅದರಲ್ಲಿ ಎಸ್‌ ಆರ್‌ ವಿಜಯಶಂಕರ್‌, ಯು ಆರ್‌ ಅನಂತಮೂರ್ತಿ, ಸತ್ಯಕಾಮ, ಬೇಂದ್ರೆ, ಕಾರಂತರು, ತೇಜಸ್ವಿ… ಇನ್ನೂ ಅನೇಕ ಪ್ರಪಂಚಗಳ ದರ್ಶನವಾಯಿತು. ಇವುಗಳಲ್ಲಿನ ಕೆಲವನ್ನು ಮಾತ್ರ ʻನಚ್ಚಿ ಡೈರಿಯಿಂದ ಹೆಕ್ಕಿದ್ದುʼ ಎಂಬ ಶೀರ್ಷಿಕೆಯ ಅಡಿ, ಪುಸ್ತಕದಲ್ಲಿ ಪ್ರಕಟವಾಗಿದೆ.

ಪುಸ್ತಕದ ಬಿಡುಗಡೆ ಸಮಯದಲ್ಲಿ ಮೋಹನ್‌ ರಾಂ ಒಂದು ಮಾತು ಹೇಳಿದರು. ಪತ್ರಕರ್ತರ ಬಗ್ಗೆ ಯಾರೂ ಬರೆಯುವುದಿಲ್ಲ ಎಂದು. ಹೌದು, ಪತ್ರಕರ್ತರ ಬಗ್ಗೆ ಬರೆಯಲು ಹೊರಗಡೆಯವರಿಗೆ ಅದರ ಅಸ್ಮಿತೆಯ ಅರಿವಿರುವುದಿಲ್ಲ. ನಿಜ ಹೇಳಬೇಕೆಂದರೆ, ನಚ್ಚಿಯ ಜೊತೆ ಪ್ರಯಾಣ ಮಾಡದಿದ್ದಿದ್ದರೆ, ನನಗೂ ಪತ್ರಿಕಾರಂಗದ ಅಸ್ಮಿತೆಯ ಅರಿವಾಗುತ್ತಿರಲಿಲ್ಲ. ಆದರೆ ಈಗ ನಚ್ಚಿಯ ಬಗ್ಗೆ ಬರೆಯಲು ನನಗೆ ಈಗ ಕಷ್ಟವಾಗುತ್ತಿದೆ. ಏಕೆಂದರೆ, ಅವರ ಅನಂತವಾದ ಪ್ರಪಂಚದಲ್ಲಿ ನಾನೊಂದು ಬಿಂದು ಅಷ್ಟೆ.

ಅದನ್ನು ಪುಸ್ತಕದ ಸಂಪಾದಕರಾದ ವಿಜಯ್‌ ಭಟ್‌ ಸಹ ಒಂದು ಕಡೆ ಮುದ್ದಾಗಿ ಬರೆದಿದ್ದಾರೆ. ʻVinay Madhav, the baby of the group, did most of the legwork’ ಅಂತ. ಹೌದು, ಆ ಸಂಪಾದಕೀಯ ಮಂಡಳಿಯ ಅತಿ ಕಿರಿಯ ವಯಸ್ಸಿನ ಸದಸ್ಯ ನಾನೇ.

ಜನವರಿ 26ನೇ ಸಾಯಂಕಾಲ, #ಪುಸ್ತಕ_ಬಿಡುಗಡೆ ಆದಮೇಲೆ, ನನಗೆ ಪುಸ್ತಕದ ಹೆಸರಿನ ಬಗ್ಗೆ ಜಿಜ್ಞಾಸೆ ಶುರುವಾಯಿತು. ಪುಸ್ತಕದ ಹೆಸರು ಏನು ಇಡಬೇಕು? ಎನ್ನುವುದರ ಬಗ್ಗೆ ಮಂಡಳಿಯಲ್ಲಿ ಬಹಳಷ್ಟು ಚರ್ಚೆಯಾಗಿತ್ತು. ಆಗ ಮೂಡದ ಸಂದೇಹ, ಈಗ ಮೂಡಲು ಆರಂಭಿಸಿತು. ʻಚಕ್ರವರ್ತಿಯಾಗದ ನಚ್ಚಿʼ!

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ನಚ್ಚಿ ಒಂದು ಸಾಮ್ರಾಜ್ಯವನ್ನೇ ಕಟ್ಟಿದರು. ಅದರಲ್ಲಿ ಪತ್ರಿಕಾ ರಂಗ, ನಾಟಕ ರಂಗ, ಸಿನೆಮಾ ರಂಗ, ರಾಜಕೀಯ, ಸಾಮಾನ್ಯ, ಅಸಮಾನ್ಯ ಜನಗಳಿಂದ ಕೂಡಿತ್ತು. ಆ ಸಾಮ್ರಾಜ್ಯದಲ್ಲಿ ಕಲಿಕೆ, ಹಾಸ್ಯ, ಸಂತೋಷ, ಸಾಹಿತ್ಯ, ಜೀವನ ಮೌಲ್ಯಗಳಿಂದ ಕೂಡಿದ್ದ ಅಸಂಖ್ಯಾತ ಜನರಿದ್ದರು. ಆ ಪ್ರಪಂಚ ಆರ್ಥಿಕತೆಯ ಮೇಲೆ ಅವಲಂಬಿತವಾಗಿರಲಿಲ್ಲ. `It was built on happiness quotient’. ಈ ಸಾಮ್ರಾಜ್ಯಕ್ಕೆ ನಚ್ಚಿ, ಚಕ್ರವರ್ತಿಯಾಗಿರಲಿಲ್ಲವೇ?… ಅವರವರ ಭಾವಕ್ಕೆ!!!

ಅಂದ ಹಾಗೆ, ನನ್ನ ಹಾಗೂ ನಚ್ಚಿಯ ಸಾಂಗತ್ಯದ ಪಯಣಕ್ಕೆ ಇದು ಇಪ್ಪತ್ತಾರನೇ ವರ್ಷ….


  • ಮಾಕೋನಹಳ್ಳಿ ವಿನಯ್‌ ಮಾಧವ್  (ಪತ್ರಕರ್ತರು,ಲೇಖಕರು) ಬೆಂಗಳೂರು

 

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW