ಎಲ್ಲರ ಮನೆಯ ದೋಸೇನೂ ತೂತೇ…ಇದಕ್ಕೆ ಐಶ್ವರ್ಯಾ ರೈ ಕೂಡ ಹೊರತಾಗಿಲ್ಲ. ಮನುಷ್ಯ ಅಂದ್ಮೇಲೆ ನೋವು, ನಲಿವು, ಕಷ್ಟ ಸುಖ ಎಲ್ಲರಿಗೂ ಇದ್ದಿದ್ದೇ, ಬಡವರು, ಶ್ರೀಮಂತರು ಅಂತ ಬೇಧ ಭಾವ ಇಲ್ಲ. ಡಾ. ಎನ್ ಬಿ.ಶ್ರೀಧರ ಅವರ ಈ ಪುಟ್ಟ ಬರಹವನ್ನು ತಪ್ಪದೆ ಮುಂದೆ ಓದಿ…
ಖ್ಯಾತನಾಮರ ವೈಯಕ್ತಿಕ ವಿಷಯಗಳ ಬಗ್ಗೆ ನಮ್ಮಂತ ಜನ ಸಾಮಾನ್ಯರಿಗೆ ಅತ್ಯಂತ ಕುತೂಹಲ. ಖ್ಯಾತ ನಟಿ, ಭುವನಸುಂದರಿ ಐಶ್ವರ್ಯಾ ರೈ ಬಚ್ಚನ್ ಯಾರಿಗೆ ಗೊತ್ತಿಲ್ಲ ಹೇಳಿ? ಅದರಲ್ಲೂ ಬಿಗ್ ಬೀ, ಬಾಲಿವುಡ್ ದೊರೆ ಅಮಿತಾಬ್ ಸೊಸೆ. ಅವರಿಗೆ ಕಪಿಲ್ ಶರ್ಮರ ಕಾರ್ಯಕ್ರಮವೊಂದರಲ್ಲಿ ಸಾಮಾನ್ಯ ಗೃಹಿಣಿಯೊಬ್ಬರು ಒಂದಿಷ್ಟು ತರಹೆವಾರಿ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲಿ ಒಂದೆರಡು ಉದಾಹರಣೆ ಇಲ್ಲಿವೆ.
ಗೃಹಿಣಿ ನಿಮ್ಮ ಟಿವಿ ರಿಮೋಟ್ ಕೆಟ್ಟಾಗ “ಪಟ್ ಪಟ್ ” ಅಂತ ನಮ್ಮಂತೆ ತಟ್ತೀರಾ ಎಂದಾಗ ಆಶ್ಚರ್ಯಗೊಂಡ ಐಶ್ವರ್ಯಾ ” ಅಯ್ಯೋ ಹೌದಲ್ಲ. ನಮಗೂ ಇದೇ ಸಮಸ್ಯೆ. ನಾನೂ ಅನೇಕ ಸಲ ರಿಮೋಟ್ ತಟ್ಟಿದ್ದಿದೆ” ಅಂತಾರೆ. ನಮ್ಮ ಮನೆಯ ಗಂಡಸರ ಹಾಗೆ ನಿಮ್ಮ ಗಂಡ ಅಭಿಷೇಕ್ ಸಹ ನೀಟಾಗಿರುವುದಿಲ್ವಾ? ಎಂದು ಮತ್ತು ನಮ್ಮನೆ ಗಂಡಸರಂತೆ ಅಭಿಷೇಕ್ ಸಹ ಶರ್ಟು ಪ್ಯಾಂಟುಗಳನ್ನು ಹ್ಯಾಂಗರಿನಲ್ಲಿ ನೇತು ಹಾಕದೇ ಟೀಪಾಯಿ ಮತ್ತು ಟೇಬಲ್ ಮೇಲೆ ಬಿಸಾಡ್ತಾರಾ? ಎಂದಾಗ ಐಶ್ವರ್ಯ ” ಹೌದಲ್ಲ !! ಆತ ಎಷ್ಟು ಎಷ್ಟು ಹೇಳಿದರೂ ಸಹ ಕೇಳಲ್ಲ. ಭಟ್ಟೆಗಳನ್ನು ಎಂದೂ ನೀಟಾಗಿ ಇಡಲ್ಲ. ಓದಿದ ಸುದ್ಧಿ ಪತ್ರಿಕೆಗಳನ್ನು ಟೀಪಾಯ್ ಮೇಲೆ ಹ್ಯಾಗೆ ಬೇಕಾದರೆ ಹಾಗೆ ಹರಡಿ ಇಡ್ತಾರೆ. ಶೂಗಳನ್ನು ಅವುಗಳ ಸ್ಟಾಂಡ್ ಮೇಲೆಯೇ ಇಡಲ್ಲ. ಮಗಳು ಆರಾಧ್ಯಳಿಗೆ ಜಾಸ್ತಿ ಸಮಯಾನೆ ಕೊಡಲ್ಲ…..” ಎಂದು ಆರೋಪಗಳ ಸುರಿಮಳೆಗಳನ್ನೇ ಸುರಿಸುತ್ತಾರೆ. ಇನ್ನೂ ಮುಂದುವರೆದು ನಿಮ್ಮ ಮನೆಯ ಸ್ನಾನ ಗೃಹದಲ್ಲಿನ “ಸೋಪು” ಇಡುವ ಅಟ್ಟಣಿಗೆಯ ರಂದ್ರಗಳು ಸೋಪಿನ ಅವಶೇಷಗಳಿಂದ ಮುಚ್ಚಿಕೊಳ್ಳುತ್ತವೆಯೇ ಎಂದು ಕೇಳಿದಾಗಲೂ “ಹೌದಲ್ಲ, ನಮ್ಮ ಮನೆಯಲ್ಲೂ ಹೀಗೇ ಆಗುತ್ತೆ, ಕೆಲಸದವರು ಸರಿಪಡಿಸುವುದೇ ಇಲ್ಲ” ಅಂತಾರೆ.
ಫೋಟೋ ಕೃಪೆ : google
ಧೋಬಿ ಭಟ್ಟೆ ತೊಳೆಯಲು ನೀಡುವಾಗ ನೀವು ಲೆಕ್ಕ ಮಾಡಿ ಮಾಡಿ ಕೊಡ್ತೀರಾ ಎಂದು ಕೇಳಿದಾಗ ಭುವನ ಸುಂದರಿ ” ಖಂಡಿತಾ. ಇದರ ಜೊತೆ ಒಂದು ಚೆಕ್ ಲಿಸ್ಟ್ ಸಹಾ ಸಿದ್ಧ ಪಡಿಸಿಕೊಂಡು ವಾಪಸ್ ಆತ ನೀಡುವಾಗ ಎಣಿಸಿಯೇ ವಾಪಸ್ ತೆಗೆದುಕೊಳ್ಳುತ್ತೇನೆ” ಎನ್ನುತ್ತಾರೆ. “ಅಭಿಷೇಕ್ ಮತ್ತು ನಿಮ್ಮ ಮಧ್ಯೆ ಜಗಳ ಪ್ರಾರಂಭವಾದಾಗ ಯಾರು ಮೊದಲು ಸಾರಿ ಕೇಳುತ್ತಾರೆ ? ಎಂದು ಕೇಳಿದಾಗ ಅತಿಲೋಕ ಸುಂದರಿ ” ನಾಳೆ ಸಾರಿ ಕೇಳಿ ಜಗಳ ಮುಗಿಸಿ ಬಿಡುತ್ತೇನೆ” ಎಂದು ಅಪ್ಪಟ ಗೃಹಿಣಿಯ ತರ ಉತ್ತರ ನೀಡುತ್ತಾರೆ.
ಅಂದರೆ ಎಲ್ಲರೂ ಸಾಮಾನ್ಯ ಮನುಷ್ಯ ಮನುಷ್ಯರೇ.. ಎಲ್ಲರ ಮನೆಯ ದೋಸೇನೂ ತೂತೇ… ಅವರೇ ಹಾಗಿದ್ದಾಗ ನಮ್ದೇನು ಮಹಾ… ಅಲ್ವೇ?.
- ಡಾ. ಎನ್ ಬಿ.ಶ್ರೀಧರ