ಗೋಕರ್ಣದಲ್ಲಿನ ಬೀಚ್, ದೇವಸ್ಥಾನ, ರೆಸಾರ್ಟ್, ಅಲ್ಲಿಯ ಜನರ ನಡುವಿನ ಅನುಭವವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ, ತಪ್ಪದೆ ಮುಂದೆ ಓದಿ…
ದೇವ ಭಕ್ತರಿಗೆ ಗೋಕರ್ಣ ಐತಿಹಾಸಿಕ ಸ್ಥಳವಾದರೆ, ಅದೇ ಗೋಕರ್ಣ ಗುಂಡು ತುಂಡು ಪ್ರಿಯರಿಗೆ ಮೋಜು ಮಸ್ತಿಯ ತಾಣ.
ಪದ್ದಣ್ಣ ಪ್ರವಾಸಕ್ಕೆ ಗೋಕರ್ಣ ಹೋಗೋಣ ಅಂದಾಗ ತುಂಡು ಉಡುಗೆಯ ವಿದೇಶಿ, ಸ್ವದೇಶಿ ಮಹಿಳೆಯರು ನನ್ನ ತಲೆಗೆ ಬಂದಿದ್ದು ಸುಳ್ಳಲ್ಲ. ಕೇರಳದಲ್ಲಿ ಕುಟ್ಟಿಯರ ಹವಾ ಇದ್ದರೇ, ಗೋಕರ್ಣದಲ್ಲಿ ಕೆಂಪು ಮೂತಿಯ ಆಂಗ್ಲ ಮಹಿಳೆಯರ ಹವಾ. ಪದ್ದಣ್ಣ ಏಕ ಪತ್ನಿ ವೃತಸ್ಥ ನಾ?… ನನ್ನ ಮೇಲೆ ಪ್ರೀತಿಯ ಆಳ ಎಷ್ಟಿರಬಹುದು ತಿಳಿಯಲು ಇದೊಂದು ನನಗೆ ಸುವರ್ಣ ಅವಕಾಶ ಅಂತ ಹಿಂದು ಮುಂದು ಯೋಚಿಸದೆ ಹುo ನಡಿ ಅಂದೆ.
ನಮ್ಮ ಪ್ರಯಾಣ ಈಗ ಗೋಕರ್ಣದತ್ತ ಸಾಗಿತು. ಗೋಕರ್ಣದಲ್ಲಿ ‘ನಮಸ್ತೆ ಯೋಗ’ ರೆಸಾರ್ಟ್ ನಲ್ಲಿ ಪದ್ದಣ್ಣ ಮೊದಲೇ ರೂಮ್ ಬುಕ್ ಮಾಡಿದ್ದ. ರೆಸಾರ್ಟನ ಸುತ್ತ ಗಿಡ ಮರವಿದ್ದದ್ದರಿಂದ AC ವ್ಯವಸ್ಥೆ ಇರಲಿಲ್ಲ. ರೂಮ್ ನಲ್ಲಿ ಫ್ಯಾನ್ ಅಷ್ಟೇ ನೋಡಿ ಈ ಕಡಲ ಬಿಸಿಲಿಗೆ ನಾವೆಲ್ಲ ಹಪ್ಪಳವಾಗುವುದಂತೂ ಗ್ಯಾರಂಟಿ ಅಂದುಕೊಂಡೆ. ಆದರೆ ಪುಣ್ಯಕ್ಕೆ ಅಲ್ಲಿಯ ಮರ ಗಿಡಗಳು ಬಿಸಿಲನ್ನು ರೂಮ್ ನ ಒಳಕ್ಕೆ ಬಾರದಂತೆ ತಡೆ ಹಿಡಿದಿತ್ತು.
ಸಮುದ್ರದ ದಡದಲ್ಲಿ ಇದ್ದೇವೆ ಅಂದ್ರೆ ಮಕ್ಕಳಿಗೆ ಅದೇ ಸ್ವರ್ಗ. ಮಕ್ಕಳಿಗೆ ನೀರಲ್ಲಿ ಇಳಿಬೇಕು, ಈಜಬೇಕು, ಅಲೆಗಳ ಜೊತೆ ಆಡಬೇಕು ಅನ್ನುವ ಕಾತುರ. ಅದು ಸಹಜವೂ ಕೂಡ. ಕಾಂಕ್ರಿಟ್ ನಡುವೆ ಬೆಳೆದ ಬೆಂಗಳೂರಿನ ಮಕ್ಕಳಿಗೆ ಸಮುದ್ರದಲ್ಲಿ ಆಡುವುದೆಂದರೆ ಹೊಸ ಅನುಭವ. ಆ ಕಾರಣಕ್ಕೆ ರೂಮ್ ನಲ್ಲಿ ನಮಗೆ ನಿಲ್ಲಲು ಬಿಡದೆ ಈಗ್ಲೇ ಸಮುದ್ರಕ್ಕೆ ಹೋಗೋಣ ಅಂತ ಥಕ ಥಕ ಕುಣಿಯಲು ಶುರು ಮಾಡಿದರು “ನೋಡ್ರಪ್ಪಾ… ಮಧ್ಯಾಹ್ನದ ಬಿಸಿಲು ಜೋರಾಗಿದೆ. ನಾಲ್ಕು ಗಂಟೆ ನಂತರ ಹೋಗೋಣ. ಈಗ ಹೋದ್ರೆ… ನಮ್ಮ ಮೂರು ಜನದ ಗೋಧಿ ಬಣ್ಣ, ರಾಗಿ ಬಣ್ಣಕ್ಕೆ ತಿರುಗುತ್ತೆ…” ನಾಚಿಕೆ ಇಲ್ದೆ ಪದ್ದಣ್ಣನ ಮುಂದೆ ಹೇಳಿದೆ. ಪದ್ದಣ್ಣ ನನ್ನ ಮಾತು ಕೇಳಿ ಕಿಸಕ್ಕನೆ ನಕ್ಕ, ಯಾಕೆಂದರೆ ಅತ್ತಿ ಹಣ್ಣಿನ ಬಣ್ಣ ನಮ್ಮ ಪದ್ದಣ್ಣ. ನೋಡಲು ಬಲು ಕೆಂಪು… ಮುಂದಿನದು ಬೇಡಾ ಬಿಡಿ. ಒಳ್ಳೆ ಹುಡುಗ.
**
ಆಂಗ್ಲ ಮಹಿಳೆಯರ ಮುಂದೆ ಜಾಸ್ತಿ ಅಲ್ಲದಿದ್ದರೂ ತುಸು ಓಕೆ ಆದ್ರೂ ಕಾಣಬೇಕು ಅಂದುಕೊಂಡು ಮುಖಕ್ಕೆ ಸ್ವಲ್ಪವೇ… ಪೌಡರ್, ಸ್ವಲ್ಪವೇ…ತುಟಿಗೆ ಲಿಪ್ ಸ್ಟಿಕ್, ಸ್ವಲ್ಪವೇ… ಕಣ್ಣಿಗೆ ಕಾಜಲ್, ಹಣೆಗೆ ಚಿಕ್ಕ ಕುಂಕುಮ ಇಡ್ಕೊಂಡೇ. ಬೀಚ್ ಬಂದ್ಮೇಲೆ ಸೀರೆ ಉಟ್ರೆ ಚೆನ್ನಾಗಿ ಕಾಣ್ಣೋಲ್ಲ ನೋಡಿ, ತುಂಡು ಬಟ್ಟೆಯಲ್ಲಿ ವಿದೇಶಿಯರನ್ನು ಮೀರಸೋಕೆ ಆಗದಿದ್ರೂ, ಬೀಚ್ ವಾತಾವರಣದ ಸೃಷ್ಠಿಗಾಗಿ ಮಂಡಿಗಿಂತ ಉದ್ದದ ಫ್ರಾಕ್ ಹಾಕೊಂಡೆ. ಪದ್ದಣ್ಣ ನನ್ನ ನೋಡಿ “ಏನೇ ದೇವಿ ಇದು …ಹೀಗೆ”…ಎಂದು ಬಾಯಿ ತೆರೆದು ನೋಡಿದ. ಅದನ್ನು ನೋಡಿ ನನ್ನ ಒಳಮನಸ್ಸು ಒಳಗೊಳಗೇ ಅಂತೂ ಕುರಿ ಹಳ್ಳಕ್ಕೆ ಬಿತ್ತು ಅಂತ ಖುಷಿ ಪಡ್ತು , ಆದರೆ ಅದನ್ನು ಪದಣ್ಣನ ಮುಂದೆ ತೋರ್ಪಡಿಸದೆ “ಬೀಚ್ ಅಲ್ವಾ ದೇವ್ರು… ತುಂಬಾ ಸೆಕೆ”…ಅಂತ ಹಲ್ಲು ಕಿರಿದು, ಬೇಗ ನಡಿ ಹೊರಡೋಣ” ಅಂತ ನನ್ನ ಫೆವರೇಟ್ ಕೂಲಿಂಗ್ ಗ್ಲಾಸ್, ಕ್ಯಾಪ್ ಹಾಕೊಂಡು ಮುಂದೆ ನಡೆದೇ… ಪದ್ದಣ್ಣ ತನ್ನ ಹೆಂಡತಿ ಅವತಾರ ನೋಡಿ ಜೀರ್ಣಿಸ್ಕೊಳಕ್ಕೆ ಕಷ್ಟ ಆದ್ರೂ ಬೀಚ್ ಮಹಿಮೆ ಅಂತ ಸುಮ್ನಾದ.
ಕೂಡ್ಲೆ ಬೀಚ್ ನ ವಿಶೇಷತೆ ಏನೆಂದರೆ ಅಲೆಗಳ ಅಬ್ಬರವಿರಲಿಲ್ಲ, ರೌದ್ರ ನರ್ತನವಿರಲಿಲ್ಲ. ತಿಳಿಯಾದ ಸಮುದ್ರದ ನೀರು ಕಾಲಿಗೆ ಬಂದು ಬಡಿಯುವಾಗ ಮನಸ್ಸಿಗೆ ರೋಮಾಂಚನವಾಗುತ್ತಿತ್ತು. ನಾನು ನೀರಿನಿಂದ ಯಾವಾಗಲೂ ದೂರ. ಹಾಗಾಗಿ ಸ್ವಲ್ಪ ಹೊತ್ತು ಕಾಲನ್ನು ಅಲೆಯಲ್ಲಿ ಅದ್ದಿ, ಎಲ್ಲರ ಚಪ್ಪಲ್ ನ್ನು ಕಾಯಲು ದೂರದಲ್ಲಿ ಕೂತೆ. ಪದ್ದಣ್ಣ, ಮಕ್ಕಳು ಸಂತೋಷವಾಗಿ ಸಮುದ್ರದ ಅಲೆಯಲ್ಲಿ ಆಡುವುದನ್ನು ದೂರದಿಂದ ನೋಡಿಯೇ ಸಂತೋಷ ಪಟ್ಟೆ. ಹೊತ್ತು ಕಳೆಯಲು ಆಗೊಮ್ಮೆ ಈಗೊಮ್ಮೆ ಸೆಲ್ಫಿ, ಫೇಸ್ಬುಕ್ ತಿರುವಿ ನೋಡುತ್ತಿದ್ದೆ. ಅಷ್ಟೋತ್ತಿಗೆ “ಪ್ಲೀಸ್… ತಪ್ಪು ತಿಳಿದು ಕೊಳ್ಳಬೇಡಿ, ನಮ್ಮ ಚಪ್ಪಲಿ ಇಲ್ಲಿ ಬಿಡ್ತೀವಿ… ಸ್ವಲ್ಪ ಹೊತ್ತು ನೋಡ್ತೀರಾ… ಸಮುದ್ರದ ನೀರು ಮುಟ್ಟಿ ಬರತೀನಿ, ಜಾಸ್ತಿ ಸಮಯ ತಗೆದುಕೊಳ್ಳೋದಿಲ್ಲ, ಪ್ಲೀಸ್… ಪ್ಲೀಸ್”… ಅಂತ ಬೀಚ್ ಗೆ ಬಂದಿದ್ದ ಹುಡುಗ ಹುಡುಗಿ ಬೇಡಿಕೊಂಡರು. ನೀರಿನ ಭಯ ಇರೋರಿಗೆ ಚಪ್ಪಲ್ ಕಾಯೋದು ತಪ್ಪಿದ್ದಲ್ಲ. ರಾಜ ಸತ್ಯ ಹರಿಚ್ಚಂದ್ರ ಸ್ಮಶಾನವನ್ನೇ ಕಾಯದಿದ್ದಾನೆ ಇನ್ನೂ ನಾನು ಸಾಮಾನ್ಯ ಮನುಷ್ಯಳು ಚಪ್ಪಲಿ ಯಾಕೋದ್ರಲ್ಲಿ ತಪ್ಪೇನು ಇಲ್ಲ ಅಂದುಕೊಂಡು ಒಲ್ಲದ ಮನಸ್ಸಿನಿಂದ ಹುo ಅಂದೆ. ಹುಡುಗ ಹುಡುಗಿ ಎಂಜಾಯ್ ಮಾಡಲು ಅಪ್ಪ ಅಮ್ಮನಿಗೆ ಹೇಳದೆ ಬೀಚ್ ಗೆ ಬಂದಂತೆ ನನ್ನ ಮೂರನೇ ಕಣ್ಣು ತೆರೆದು ನೋಡಿತು. ಏನ್ ಮಾಡೋದು ವಯಸ್ಸಿನ ಮಹಿಮೆ, ಜಾಗದ ಮಹಿಮೆ…ಏನಾದ್ರೂ ಮಾಡ್ಕೊಳ್ಳಿ ಅಂತ ಕೂಡ್ಲೆ ಬೀಚ್ ನಲ್ಲಿ ಇಷ್ಟಾನೋ .. ಕಷ್ಟಾನೋ ಚಪ್ಪಲಿಯನ್ನ ಶ್ರದ್ದೆಯಿಂದ ಕಾಯ್ದೆ. ಆ ಹುಡುಗ ಹುಡುಗಿ ಸಮುದ್ರದಲ್ಲಿ ಸೆಲ್ಫಿಗಾಗಿ ಅಲ್ಲಿ ಇಲ್ಲಿ ಕೂತು, ಕೊನೆಗೆ ವಾಪಾಸ್ ಬಂದು ನಗುತ್ತ ನಂಗೆ ಒಂದು ಥ್ಯಾಂಕ್ಸ್ ಹೇಳಿ ಹೋದರು. ಅಲ್ಲಿಗೆ ನನ್ನ ಚಪ್ಪಲಿ ಕಾಯಕ ಮುಗಿತು.
****
ಬಂಡೆಗಲ್ಲಿನ ಮೇಲೆ ಕೂತಾಗ ಏಡಿ ಒಂದು ನನ್ನತ್ತ ದೌಡಾಯಿಸಿಕೊಂಡು ಬಂತು. ಆಗ ನನಗೆ ನೆನಪಾಗಿದ್ದು ‘ಮುಂಗಾರು ಮಳೆ’ಸಿನಿಮಾ ಖ್ಯಾತಿಯ ಜಯಂತ್ ಕಾಯ್ಕಿಣಿಯವರು. ತಮ್ಮ ಸಂದರ್ಶನವೊಂದರಲ್ಲಿ ಅವರ ತಾಯಿ ಅದೇ ಸಮುದ್ರ ತೀರದಲ್ಲಿ ಏಡಿಗಳನ್ನು ಹುಡುಕಿ ತಂದು ಆಹಾರ ಖಾದ್ಯವನ್ನು ತಯಾರಿಸುತ್ತಿದ್ದರಂತೆ. ಅದನ್ನೇ ತಿಂದು ಗೌರೀಶ್ ಕಾಯ್ಕಿಣಿಯವರು ಮತ್ತು ಅವರ ಮಗ ಜಯಂತ್ ಕಾಯ್ಕಿಣಿಯವರು ಅಷ್ಟು ಚುರುಕಾಗಿರಲು ಬಹುಶಃ ಅದು ಒಂದು ಕಾರಣವಿರಬಹುದು ಅಂದುಕೊಂಡೆ .
ನಾವು ಕೂಡಾ ಚುರುಕಾಗಿ ಇರೋಣ ಅಂತ ಬಲವಂತವಾಗಿ ಏಡಿ ತಿನ್ನೋಕೆ ಹೋದ್ರೆ ಸಸ್ಯಾಹಾರಿಗಳಿಗೆ ಆಗದ ಮಾತು. ಅದಕ್ಕಾಗಿಯೇ ಮೀನಿನ ಮಾತ್ರೆ, ಅದು ಇದು ಮಾತ್ರೆಗಳು ಹುಟ್ಟಿಕೊಂಡಿರಬೇಕು. ಅವರವರ ಆಹಾರ ಅವರವರಿಗೆ ಪ್ರಿಯ.
**
ಪದ್ದಣ್ಣ, ಮಕ್ಕಳು ಬೀಚ್ ನಲ್ಲಿ ಕುಣಿದು,ಕುಪ್ಪಳಿಸಿ ಮೈಯೆಲ್ಲಾ ಮರಳು ಮಾಡಿಕೊಂಡು ನನ್ನ ಮುಂದೆ ಹಲ್ಲು ಕಿರಿಯುತ್ತಾ ನಿಂತರು.’ ನೋಡಿ, ನಿಮ್ಮ ಬಟ್ಟೆಯನ್ನೆಲ್ಲ ನಾನು ವಾಶ್ ಮಾಡೋಲ್ಲ. ನೀವೇ ತೊಳ್ಕೊಬೇಕು ಅಂದೆ. ಅಪ್ಪ ಮಕ್ಕಳು ಹುo ಅಂದಿದ್ದಷ್ಟೇ..ಜೊತೆಗೆ ವಾಷಿಂಗ್ ಮೆಷಿನ್ ಅಂತ ನಾನಿದ್ದಾಗ ಅವರು ಬಟ್ಟೆ ವಾಶ್ ಮಾಡ್ತಾರಾ?… ಮೂರು ಜನ ರೂಮ್ ಗೆ ಬಂದು ಅಲ್ಲೊಂದು ಇಲ್ಲೋದು ಬಟ್ಟೆ ಬಿಸಾಕಿ ಸ್ನಾನ ಮಾಡಿ ಕೂತರು.
ನಿಮ್ಮ ಪ್ರೀತಿಯ
ಶಾಲೂ
- ಶಾಲಿನಿ ಹೂಲಿ ಪ್ರದೀಪ್