“ಇದು ವಿವಾಹಿತ ಗಂಡುಗಳು ವಿಧಿಯಿಲ್ಲದೆ, ಆಚರಿಸಲೇ ಬೇಕಾದ ಹಬ್ಬದ ಕವಿತೆಯಿದು. ಬಡಪಾಯಿ ಗಂಡಂದಿರ ಮನೆ-ಮನದ ವಾರ್ಷಿಕ ಭಾವಗೀತೆಯಿದು. ಪೂರ್ತಿ ಕವಿತೆ ಓದಿ, ಯಾವ ಹಬ್ಬವೆಂದು ನಿಮಗೇ ತಿಳಿಯುತ್ತದೆ. ಅಂತೆಯೇ ನಿಮ್ಮ ಮನೆಯಲ್ಲಿ ಈ ಹಬ್ಬದ ದಿನವನ್ನು ಮರೆಯದೇ ನೆನಪಿಟ್ಟು ಆಚರಿಸಿದರೆ ನಿಮ್ಮ ವರ್ಷವೆಲ್ಲಾ ಉಜ್ವಲ, ಇಲ್ಲದಿರೆ ಅನುದಿನವೂ ನೀವು ವಿಲವಿಲ.. ಇಂದು ನಮ್ಮ ಮನೆಯಲ್ಲಿ ಈ ಹಬ್ಬವನ್ನು ಆಚರಿಸುತ್ತಿದ್ದೇವೆ. ನಿಮ್ಮದೊಂದು ಹಾರೈಕೆಯಿರಲಿ.. “ – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಕ್ಯಾಲೇಂಡರು ವ್ಯಕ್ತಿಸದ ಹಬ್ಬವಿದು
ಪಂಚಾಂಗ ತೋರಿಸದ ಹಬ್ಬವಿದು
ಊರವರು ಆಚರಿಸದ ಹಬ್ಬವಿದು
ಅಕ್ಕಪಕ್ಕದವರು ನೆನಪಿಸದ ಹಬ್ಬವಿದು.!
ಯುಗಾದಿಗಿಂತ ಹಿರಿದಾದ ಹಬ್ಬವಿದು
ಮರೆತರೆ ಆ ವರ್ಷವೆಲ್ಲಾ ಕಹಿಯದು
ದೀಪಾವಳಿಗಿಂತ ಜೋರು ಹಬ್ಬವಿದು
ಮೈಮರೆತರೆ ಮನೆಯೆಲ್ಲ ಬೆಳಕಿರದು.!
ಎಲ್ಲಿದ್ದರೂ ಗೈರಾಗಲಾಗದ ಹಬ್ಬವಿದು
ತಪ್ಪದೇ ಹಾಜರಾಗಬೇಕಾದ ಹಬ್ಬವಿದು
ಅಸಡ್ಡೆ ಮಾಡಲಾಗದ ಮುಖ್ಯಹಬ್ಬವಿದು
ನೆಪವಿಟ್ಟು ತಪ್ಪಿಸದ ಕಡ್ಡಾಯಹಬ್ಬವಿದು.!
ಮಡಿಗಿಂತ ಪ್ರೀತಿ ನಲ್ನುಡಿಯ ಹಬ್ಬವಿದು
ಸಂಸ್ಕಾರಕ್ಕಿಂತ ಸವಿಸಾರದ ಹಬ್ಬವಿದು
ಸಂಸ್ಕೃತಿಗಿಂತ ಒಲವವ್ಯಕ್ತಿಸುವ ಹಬ್ಬವಿದು
ಸಂಪ್ರದಾಯಕಿಂತ ಸಂಪ್ರೀತಿಯ ಹಬ್ಬವಿದು.!
ಮರೆತ ಗಂಡಗೆ ಗಂಡಾಂತರದ ಹಬ್ಬವಿದು
ತಪ್ಪಿದ ಪತಿಗೆ ಪರದಾಡಿಸುವ ಹಬ್ಬವಿದು
ಆಚರಣೆಗಿಂತ ಸ್ಮರಣೆ ಪ್ರಾಧಾನ್ಯ ಹಬ್ಬವಿದು
ಕೃತಿಗಿಂತ ಸ್ತುತಿ ಆದ್ಯತೆಯ ಹಬ್ಬವಿದು.!
ಗೊತ್ತಾಗಲಿಲ್ಲವೇ ಯಾವುದೀ ಹಬ್ಬವೆಂದು.?
ಸ್ವಾಮೀ ನಿಮ್ಮ ಪತ್ನಿಯಾ ಹುಟ್ಟುಹಬ್ಬವದು
ನಿಮ್ಮ ಜುಟ್ಟು ಜನಿವಾರ ಹಿಡಿದು ಆಡಿಸುವ
ನಿಮ್ಮ ಮನೆಯೊಡತಿಯ ಮಹಾಹಬ್ಬವದು.!
ಮರೆಯದೇ ಮುಂಜಾನೆಯೇ ಮೋದದಿ..
“ಹ್ಯಾಪಿ ಹುಟ್ದಬ್ಬ ಹೆಂಡತಿ” ಎಂದರೆ ಅಂದು
ನಿಮ್ಮ ಸತಿಯ ಕೃಪಾ ಕಟಾಕ್ಷಗಳ ಒಲವು
ಇಲ್ಲದಿರೆ ವರ್ಷವೆಲ್ಲಾ ಸಿಡಿಮಿಡಿ ಘೇರಾವು
ದೇವರೂ ಮಾಡಲಾರ ನಿಮ್ಮನ್ನು ಬಚಾವು.!
- ಎ.ಎನ್.ರಮೇಶ್. ಗುಬ್ಬಿ