‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಪರಿಚಯ – ಕೆ. ಎನ್. ಲಾವಣ್ಯ ಪ್ರಭಾ

ಸುಮಿತ್ ಮೇತ್ರಿ ಅವರ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕವನ ಸಂಕಲನ ಕುರಿತು ಕವಿಯತ್ರಿ ಕೆ. ಎನ್. ಲಾವಣ್ಯ ಪ್ರಭಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….

ಪುಸ್ತಕ : ಈ ಕಣ್ಣುಗಳಿಗೆ ಸದಾ ನೀರಡಿಕೆ
ಲೇಖಕರು : ಸುಮಿತ್ ಮೇತ್ರಿ
ಪ್ರಕಾಶಕರು : ಸುಗಮ ಪುಸ್ತಕ ಪ್ರಕಾಶಕನ
ಬೆಲೆ : 125.00

“ಈ ಕಣ್ಣುಗಳಿಗೆ ಸದಾ ನೀರಡಿಕೆ” ಸಂಕಲನದ ಕವಿತೆಗಳನ್ನು ಓದುತ್ತಾ ಹೋದಂತೆ ಅಂತರಂಗದ ಧ್ಯಾನಕ್ಕೆಳೆಸಲು ಬಹಿರಂಗದಾಟಗಳಿಗೆ ಒಡ್ಡಿಕೊಳುವ ಅನಿವಾರ್ಯತೆಯನ್ನು ಹೇಳುತ್ತಲೇ ಬಹಿರಂಗದಲ್ಲೂ ಅಂತರಂದಲ್ಲಿಣುಕಿ ಧ್ಯಾನಿಸುವ, ಆತ್ಮಶೋಧಕ್ಕೆಳೆಸುವ ಮತ್ತೊಂದು ಸ್ತರದಲ್ಲಿ ಕವಿತೆಗಳಿವೆಯೇನೋ ಎನಿಸುತ್ತದೆ. ಸಶಕ್ತ ರೂಪಕಗಳು, ಪ್ರತಿಮೆಗಳು, ಸಮಕಾಲೀನ ಸ್ಪಂದನಗಳು ಮತ್ತು ವಸ್ತು ವೈವಿಧ್ಯತೆಯಿಂದಾಗಿ ಈ ಕವಿತೆಗಳು ಆರೋಗ್ಯಕರ ತೆನೆಯಲ್ಲಿರುವ ಗಟ್ಟಿಕಾಳುಗಳು. ಸವಿದಂತೆಲ್ಲಾ ಸ್ವಾದಿಷ್ಟ ಮತ್ತು ಸತ್ವಯುತ, ಶಕ್ತಿಭರಿತ ತಿನಿಸು.

* -“ಒಂಭತ್ತು ಕದಕೆ
ಕಟ್ಟಿದ ಕರ್ಟನ್ ಹಾರಿ ಹಾರಿ”
“ಆರು ಮೂರರ ಕವಟು”
“ದೇಹದೊಳಗೆ ಈ ಆತ್ಮ ಕಾಲಿಳಿಬಿಟ್ಟು ಕೂತಿರಲು ”
(ಆತ್ಮಭಾವದ ಆಚೆ ಜೀವಭಾವದ ಈಚೆ)
ಕ್ಷಣಿಕ ಬದುಕಿನ ಆಚೆಗಿನ‌ ಬದುಕೊಂದರೆಡೆಗಿನ ದೃಷ್ಟಿಗಮ್ಯ ಇಲ್ಲಿ ಕಾಣುತ್ತದೆ.

* -“ಇಲ್ಲಿ ಈಗ
ಅವನು ನೀರು;
ಗಡಿಗೆ ಅಷ್ಟೇ ನಾನು”
(ನೆಕ್ರೊಫಿಲಿಯಾ)
ಈ ಸಾಲಿನಲ್ಲಿ ನಿತ್ಯ ಅನಿತ್ಯದೆಡೆಗಿನ ಒಂದು ದರ್ಶನವಿದೆ. ಇಂತಹ ಒಂದು ದರ್ಶನವೇ ಅಲಭ್ಯವಾಗಿ ಪೂರಾ ಸಾಮಾಜಿಕವಾಗಿರುವ ಕವಿತೆಗಳ ನಡುವೆ ಲೌಕಿಕದಲ್ಲಿ ನಿಂತೇ ಅಲೌಕಿಕದೆಡೆಗೆ ಕೈಚಾಚುವ ಕೆಲವು ಕವಿತೆಗಳು ಅನುಭಾವಿಕ ನೆಲೆಯಲ್ಲಿ ಮಧುರ ಚೆನ್ನ , ಪು.ತಿ.ನ. ಅವರ ಕವಿತೆಗಳನ್ನು ಮತ್ತು ಅಂತಹ ಕವಿಗಳನ್ನು ಮರೆತವರ ಜಾಣಮರೆವಿನ ನಡುವೆ ಮತ್ತೆ ನೆನಪಿಸುವಂತಿದೆ.

* “ಈ ಭೂಮಿಯ
ಯಾವುದೋ ಒಂದು ಮೂಲೆಯಲ್ಲಿ
ಒಂದಿಷ್ಟು ದನಕರುಗಳನ್ನು ಸಾಕಿಕೊಂಡು
ಹಸಿದ ಮಕ್ಕಳಿಗೆ ಹಾಲು ಹಂಚುತ್ತಾ ಬದುಕಿ ಬಿಡಬೇಕು

ಈ ಗುರಿ;
ನನ್ನ ಪಾಲಿನ ಸ್ವರ್ಗವೇ ಸರಿ”
(ನನ್ನ ಪಾಲಿನ ಸ್ವರ್ಗ)
ನೆಲದ ದನಿಯಾಗಿ, ಲೋಕದ ಕರುಣೆಯಾಗಿ ಬದುಕುವ ಮಾರ್ಗವನ್ನು ಕಾಣಿಸುವ ಕವಿ.

‘ಕಲ್ಲಂಗಡಿ ಹಣ್ಣು ಮತ್ತು ಪುಸ್ತಕದ ಬದನೆಕಾಯಿ’
‘ಒಂದು ಜೋಳದ ತೆನೆ’
ಕವಿತೆಗಳು ವರ್ತಮಾನಕ್ಕೆ ಹಿಡಿದ ಕೈಗನ್ನಡಿಯಾಗಿಸುತ್ತಾರೆ.

* -‘ಈ ಏಕೈಕ ಗ್ರಹ’ ಕವಿತೆಯ
“ಇಡೀ ಭೂಮಂಡಲವೇ
ಈಗೊಂದು ಒದ್ದೆಯಾದ ಸೆರಗು”
ಭೂಮಂಡಲ ಒದ್ದೆಯಾಗಿರುವುದು ಮಳೆಯ ಸಿಂಚನದಿಂದಲ್ಲ ಬದಲಿಗೆ ಯುದ್ಧ ಕದನಗಳು, ಜಾತಿ ಧರ್ಮಗಳ ದಳ್ಳುರಿಯಲ್ಲಿ ರಕ್ತಸಿಕ್ತಗೊಂಡ ಕಾರಣದಿಂದ ಎಂಬ ಆತಂಕ ತಲ್ಲಣಗಳಿಂದ ಹೃದಯ ಆರ್ದ್ರಗೊಳಿಸುತ್ತಾರೆ.

*- ‘ಗಾಳಿದಾರಿ ಮತ್ತು ಕಂಪನ’
ಅತ್ಯಂತ ವಿಶಿಷ್ಟ ಕವಿತೆಯಾಗಿ ಮನ ಸೆಳೆಯುತ್ತದೆ. ಅವಳು ಹೋಗಿಬಿಟ್ಟಿರುವ ಗಾಳಿದಾರಿಯಲ್ಲಿ ಹೃದಯದ ಕಂಪನಗಳನ್ನು ಕಳಿಸಿ ಆ ಮೂಲಕ ಅವಳ ಜಾಡು ಹಿಡಿಯಲು ಪ್ರಯತ್ನಿಸುವ ಕವಿಯ ಸೂಕ್ಷ್ಮಸಂವೇನೆಗಳಿಗೆ ಅಚ್ಚರಿಗೊಂಡಿದ್ದೇನೆ.‌ ‘ಗಾಳಿದಾರಿ’ ಮತ್ತು ‘ಕಂಪನ’ ಎರಡೂ ನಿರಪೇಕ್ಷ ಸಂಗತಿಗಳು. ಅವುಗಳನ್ನು ಹೊರಗಣ್ಣಿನಿಂದ ಹುಡುಕುವುದು ಅಸಾಧ್ಯ.‌ ಇದಕ್ಕೆ ಒಳಗಣ್ಣಿನ ಧ್ಯಾನ ಬೇಕು. ಇಂತಹ ಕಣ್ಣುಗಳ ನೀರಡಿಕೆ ಈ ಕವಿಯದ್ದು! ಈ ನೀರಡಿಕೆ ಎಲ್ಲಾ ಬರಹಗಾರರಿಗೂ ಉಂಟಾಗಲಿ ಎಂದೇ ನನ್ನ ಹಾರೈಕೆ.

ಈ ಕಣ್ಣುಗಳಿಗೆ ಸದಾ ನೀರಡಿಕೆ ಕವನ ಸಂಕಲನ ಕವಿ ಸುಮಿತ್ ಮೇತ್ರಿ

* -‘ಪಾದುಕೆ ಪುಷ್ಪ’
ಕವಿತೆಯಲ್ಲಿ ಆಚರಣೆ ಸಂಪ್ರದಾಯಗಳಿರುವುದು ಬಹಿರಾಡಂಬರಕ್ಕಲ್ಲ, ಒಳಗನ್ನು ಹೊಳೆಸಲು ತಣಿಸಲು ಎಂಬ ಆಶಯವಿದ್ದರೆ.

* -‘ಅಲೆಕ್ಸಾ’
ಮುಂದಿನ ದಿನಗಳಲ್ಲಿ ಕೇವಲ ಯಂತ್ರಗಳು ಮನುಷ್ಯನ ಜಾಗ ಆಕ್ರಮಿಸಿಕೊಳ್ಳಬಹುದಾದ ಆತಂಕ ವ್ಯಕ್ತವಾಗಿ ಭವಿಷ್ಯದಲ್ಲಾಗುವ ಅನಾಹುತದ ಬಗ್ಗೆ ಎಚ್ಚರವನ್ನೂ ಮೂಡಿಸುತ್ತದೆ.

* ‘ಅನಂಗ ಮತ್ತು ಗೋಡೆ ತಬ್ಬಿದ ಕನ್ನಡಿಯೊಳಗಿನ ನಮ್ಮಿಬ್ಬರ ಬಿಂಬ’– ಕವಿತೆಗಳಲ್ಲಿನ ಪ್ರೇಮ‌ ಪರಾಕಾಷ್ಠತೆಗೆ ಮನಸೋಲುತ್ತದೆ.

* ‘ಅವಳನ್ನು ಪದ್ಯ ಮಾಡುವ ಹುಕಿಗೆ ಬಿದ್ದು ಸೋತ ಪೆದ್ದು ಕವಿ’ ಕವಿತೆ – ಪ್ರೇಮದಲ್ಲಿ ಪದಗಳೆಲ್ಲವೂ ಸೋತು ಕವಿಯನ್ನು ನಿಶ್ಚೇಶ್ಚಿತನನ್ನಾಗಿಸುವ ಬ್ಯೂಟಿಫುಲ್ ರೊಮ್ಯಾಂಟಿಕ್ ಕವಿತೆ. ಇವಲ್ಲದೇ ನಮ್ಮ ಬುದ್ಧಿ ಹೃದಯಗಳನ್ನು ತಣಿಸುವ ಇನ್ನೂ ಅನೇಕ ಕವಿತೆಗಳಿಲ್ಲಿವೆ. ಕವಿತೆ ಮತ್ತು ಶೀರ್ಷಿಕೆ ಎರಡೂ ಕೆಲವೊಮ್ಮೆ ಸಶಕ್ತ ರೂಪಕವಾಗಿ, ಪ್ರತಿಮೆಯಾಗಿ ಕಂಡುಬರುವುದು ಕವಿಯ ಕಾವ್ಯಶಕ್ತಿಯೆಂದೇ ಹೇಳಬಹುದು.

ಈ ಸಂಕಲನ ಇತ್ತೀಚಿನ ದಿನಗಳಲ್ಲಿ ನಾನು ಕಂಡ ಅತ್ಯುತ್ತಮ ಕವನ ಸಂಕಲನವೆಂದೇ ಅನಿಸಿತು. ಅನುಭಾವಿ, ಕವಿ ಮಧುರಚೆನ್ನರ ಮಣ್ಣಿನ ಘಮದ ಕವಿ, ಭರವಸೆಯ ಕವಿ ಸುಮಿತ್ ಮೇತ್ರಿಯವರಿಗೆ ಶುಭವಾಗಲಿ .


  • ಕೆ. ಎನ್. ಲಾವಣ್ಯ ಪ್ರಭಾ, ಮೈಸೂರು.
ಸ್ಪರ್ಶ ಶಿಲೆ ಕವಯತ್ರಿ ಕೆ ಎಸ್ ಲಾವಣ್ಯ ಪ್ರಭಾ
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW