ಅಜ್ಜನ ಒಡನಾಟ ಮಧುರ. ಅವನಿಲ್ಲದ ಮನೆ, ಓಡಾಡುವ ಜಾಗ, ಅಜ್ಜನ ನೆನಪು ಕಾಡುವ ಭಾವಪೂರ್ವಕ ಕವನ. ಕವಿಯತ್ರಿ ವೈಶಾಲಿ ನಾಯಕ ಅವರು ಬರೆದಿದ್ದಾರೆ. ಓದುವಾಗ ಅಜ್ಜನ ನೆನಪಾಗುವುದಂತೂ ಗ್ಯಾರಂಟಿ. ಮುಂದೆ ಓದಿ…
#ಅಜ್ಜನಿಲ್ಲದ ಮನೆಯ,
ಮಾವಿನ ತೋಪಿನಡಿ ಅವನದೇ ನೆರಳು
ಇಂದೂ ಹಸಿ ಹಸಿ ನೆನಪುಗಳ ಬುಟ್ಟಿ
ಮನೆಯಂಗಳದ ಕರಿಗೇಟಿನ ಸದ್ದಿಗೆ,
ಅಂದೂ ಕಾದ ಕಣ್ಣುಗಳು….
ಇಂದೂ ಇರಬಹುದೇ ಗಾಳಿಯಲರಿನಲ್ಲಿ,
ಅವನ ಹೆಜ್ಜೆಗಳ ಸದ್ದು??
ನಿನ್ನಲ್ಲರಳಿದ ಕಥೆಗಳ ಸ್ಪರ್ಶದ ಬೇರಿಗೆ,
ಎಂದೂ ಸಾವಿಲ್ಲದಂತೆ ನಿರಂತರ ಚಿಗುರು…
ನೀನಿತ್ತ ರಸಬಾಳೆಯ ಸವಿ ಒಸರು,
ಇಂದೂ ನೆನಪುಗಳ ಜಾಲರಿಯಿಂದ ಹನಿಯುತ್ತಾ,
ನನ್ನೊಳಗೊಂದು #ಕವಿತೆ_ಹೂವು…
ಬೆದರಿ,ಬೆವರಿ ನಿಂತಾಗ,
ನಿನ್ನಿಂದಲೇ ದಕ್ಕಿದ ನಿರಾಳತೆ
ಬೇಲಿ ಕಟ್ಟದ, ನೆನಪುಗಳ ಹಂದರ,
ಬಿಡಿಸುತ್ತಾ ಹೋದಂತೆಲ್ಲಾ,
ರಚ್ಚೆ ಹಿಡಿದ ಮನಸ್ಸಿನ,ಮುಗಿಯದ ಶತಪಥ…
ನಿನ್ನುಸಿರ ಕೊನೆಯ ಸ್ವಗತಗಳು,
ಎಂದೂ ಸವಕಲಾಗದ ಆತ್ಮದ ಸೆಳೆಯಾಗಿ
ಬೆನ್ನು ಬಿಡದೇಕೆ?
ಅಜ್ಜನಿಲ್ಲದ ಮನೆಯಲ್ಲಿಂದು,
ಕಿರ್ರನೆ ಸದ್ದು ಮಾಡುವ ಕರಿಗೇಟಿಲ್ಲ…
ಕೇದಗೆಯ ಕಂಪು,ಪಾರಿಜಾತದ ಘಮಲಿಲ್ಲ
ಮನದ ಮುಸುಕು ಸರಿಯದೆ,
ಸಂಬಂಧಗಳು ಬೆಸೆಯದೆ,
ಬರಿಯ ನೆಪಮಾತ್ರದ ಬಡಿತಗಳು…
ನೀನಿಲ್ಲದೆ ಮೊದಲಿನಂತೆ ಏನೂ ಇಲ್ಲ
ಮಂಜುಗಟ್ಟಿದ ಚಿತ್ತ ಮಬ್ಬಾಗುತ್ತಾ,
ಮತ್ತದೇ ಮಾವಿನತೋಪು ದಾಟುವಾಗ,
ನಿನ್ನಿರುವಿಕೆಯ ಅರಿವು ಗಾಢವಾಗಿ,
ಹಠ ಕಟ್ಟಿದ ಅಂಗಳದೆದೆ,
ಈ ಘಳಿಗೆ ಭಾರವಾಗುತ್ತಿತ್ತು…
- ವೈಶಾಲಿ ನಾಯಕ (ಕವಿಯತ್ರಿ, ಬರಹಗಾರ್ತಿ)
