‘ಅವಳ ಮುಡಿಯಲಿಹ ಮಾರು ಮಲ್ಲಿಗೆಯು ಮನಕೆ ಸವಿ ಕಂಪನುಣಿಸುತಿದೆ’…ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಮೊರೆವ ಕಡಲೊಳಗೆ ಬರುವ ಅಲೆಗಳಿವೆ
ತಟವ ಕೊರೆಯುತಲಿ ಮೆರೆಯುತಿವೆ
ಸರಸ ವಿರಸದೊಳು ಅವಳ ನೆನಪಿನೊಳು
ಮನಸು ವಿರಹದೊಳು ಮಿಡಿಯುತಿದೆ
ಅಂತರಂಗದೊಳು ರಂಗವಲ್ಲಿಯೊಳು
ಬಿಡಿಸಿ ಬರೆದಿರುವ ಚಿತ್ರವಿದೆ
ಚಿಂತೆಕಂತೆಗಳ ಸಂತೆಗೆಸೆದಿಹೆನು
ಕಾಂತೆ ಜೊತೆಗಿರಲು ಸೌಖ್ಯವಿದೆ
ಎಲ್ಲಿ ಬಂದಿಹಳು ಬಂದು ನಿಂತಿಹಳು
ತೆರೆದು ಹೃದಯದರಮನೆಯೊಳಗೆ
ನಲ್ಲೆ ಬಂದಿಹಳು ಮೆಲ್ಲ ಕರೆದಿಹಳು
ನಿದಿರೆ ಮಂದಿರದ ಮಹಲೊಳಗೆ
ಅವಳ ಹೆಜ್ಜೆಯೊಳು ಗೆಜ್ಜೆ ನಾದದೊಳು
ಇನಿತು ಕಿವಿಗಿಂಪನುಣಿಸುತಿದೆ
ಅವಳ ಮುಡಿಯಲಿಹ ಮಾರು ಮಲ್ಲಿಗೆಯು
ಮನಕೆ ಸವಿ ಕಂಪನುಣಿಸುತಿದೆ.
- ಚನ್ನಕೇಶವ ಜಿ ಲಾಳನಕಟ್ಟೆ – (ಕವಿಗಳು, ಲೇಖಕರು) ಬೆಂಗಳೂರು
