ಅ…ಅ…ಅಮೆರಿಕಾ ನೋಡಾ (ಭಾಗ-೩)

ಸಸ್ಯಾಹಾರಿಗಳಿಗೆ ಬ್ರೆಡ್, ಬಟರ್, ಜಾಮು, ಆಲೂ ಫೈಸ್, ಕಿತ್ತಳೆ, ಹಸಿರು ಸೇಬು ಬಿಸ್ಕೆಟ್, ಕಾಫಿ, ಟೀ ಇತ್ತು. ಬ್ರೆಡ್ ಜಾಮು ತಿಂದು, ಕಾಫಿ, ಸೇಬು ಕೈಗೆತ್ತಿಕೊಂಡು ತದನಂತರ ರೂಮಿನ ಒಂದು ಕೀ ತೆಗೆದುಕೊಂಡು, ಮೆಷಿಗನ್ ಸರೋವರದತ್ತ ಹೆಜ್ಜೆ ಹಾಕಿದೆವು. ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ‘ಅ…ಅ…ಅಮೆರಿಕಾ ನೋಡಾ’ ಸಂಚಿಕೆಯಲ್ಲಿ ತಪ್ಪದೆ ಮುಂದೆ ಓದಿ…

ಎರಡನೆಯ ಭಾಗದಲ್ಲಿ ಶಿಕಾಗೋ ತಲುಪಿ, ಹಿರಿಯ ಮಗ ನಮ್ಮನ್ನು ಕರೆದುಕೊಂಡು ಸೊನೆಸ್ಟಾ ಲೇಕ್ ವ್ಯೂ ಹೋಟೆಲಿನತ್ತ ಸಾಗಿದ್ದನ್ನು ಬರೆದಿದ್ದೆ. ಕ್ಯಾಬಿನಲ್ಲಿ ಕುಳಿತು ದಾರಿಯ ಇಕ್ಕೆಲಗಳಲ್ಲಿ ನೋಡತೊಡಗಿದೆ. ಹೊರ ಹೊಲಯದಲ್ಲಿನ ಮನೆಗಳ ಮುಂದೆ ಹಸಿರು ಹುಲ್ಲಿನ ಸಿರಿ ಮನ ಸೆಳೆಯಿತು. ಮನೆಗಳು ಅಷ್ಟೇನೂ ಎತ್ತರವಿರಲಿಲ್ಲ. ಹೋಟೆಲುಗಳು, ಕಛೇರಿ, ವಾಣಿಜ್ಯ ಹಾಗೂ ಅಪಾರ್ಟ್‌ಮೆಂಟ್‌ಗಳು ಮುಗಿಲು ಮುಟ್ಟುವಂತಿದ್ದರೆ ಸ್ವತಂತ್ರವಾಗಿರುವ ಮನೆಗಳು ಹೆಚ್ಚೆಂದರೆ ಎರಡು ಅಂತಸ್ತು.ಅವುಗಳ ಇಳಿಜಾರು ಛಾವಣಿ ಹಳ್ಳಿಯ ಸೊಬಗನ್ನು ನೆನಪಿಸುವಂತಿದ್ದವು. ಮಗ ಅದನ್ನು ಗ್ರಹಿಸಿ, “ಛಾವಣಿಯ ಮೇಲೆ ಬೀಳುವ ಹಿಮ ಕರಗಲು ನೆರವಾಗುವಂತೆ ಸ್ಲೋಪ್ ಮಾಡಿರುವರು, ಅದು ಇಲ್ಲಿನ ನಿಯಮ ಕೂಡ” ಎಂದ.
ಕೆಲ ದಿನಗಳ ಹಿಂದಷ್ಟೇ ಹೊದ್ದಿದ್ದ ಚಳಿಯ ಹೊದಿಕೆಯನ್ನು ಸರಿಸಿದ ಸಸ್ಯರಾಶಿಯಲ್ಲಿ ಹೊಸದಾಗಿ ಚಿಗುರುತ್ತಿದ್ದ ಹಸಿರೆಲೆಗಳು ವಸಂತನ ಆಗಮನವನ್ನು ಸಾರುತ್ತಿದ್ದವು. ಏಪ್ರಿಲ್ 17ರಂದು ವಾತಾವರಣ ಕೂಡ ಆಹ್ಲಾದಕರವಾಗಿತ್ತು. ನಿಲ್ದಾಣದಿಂದ ಒಂದು ಗಂಟೆಯ ಪ್ರಯಾಣ ಸಾಗಿ ಡೌನ್‌ಟೌನ್‌ನ ಸೊನೆಸ್ಟಾ ತಲುಪಿದ್ದೇ ಅರಿವಿಗೆ ಬರಲಿಲ್ಲ. ಆ ವೇಳೆಗಾಗಲೇ ಸಮಯ ಏಳು ಗಂಟೆಯಾಗಿತ್ತು.

“ಇಲ್ಲಿ ನಮ್ಮ ಲಗೇಜನ್ನು ನಾವೇ ತೆಗೆದುಕೊಂಡು ಹೋಗಬೇಕು” ಎಂದ ಮಗ ಅದನ್ನು ಸಾಗಿಸಲು ಟ್ರಾಲಿಯಲ್ಲಿ ಹಾಕಿಕೊಂಡು ಹೋಟೆಲಿನ ರಿಸೆಪ್ಷನ್ ಕೌಂಟರ್ ಇರುವಲ್ಲಿಗೆ ಸಾಗಿಸಿ, ನಮ್ಮನ್ನು ಕುಳಿತಿರುವಂತೆ ಹೇಳಿದ. ಮಗ ಬುಕ್ ಮಾಡಿದ್ದ ವಿವರ, ಅಡ್ರೆಸ್ ಪ್ರೂಫ್ ,ಐಡಿ ಪ್ರೂಫ್ ನೀಡಿದ ಬಳಿಕ ರೂಮಿನ ಕೀಲಿ ಕೈಗಿತ್ತರು. ನಮ್ಮನ್ನು ಲಗೇಜುಗಳೊಂದಿಗೆ ನಮಗೆ ನಿಗದಿಯಾಗಿದ್ದ ಹದಿನೈದನೇ ಮಹಡಿಯ ಸೂಟ್ಸ್‌ಗೆ ಕರೆದೊಯ್ದು. ವಿಸ್ತಾರವಾದ ಕೋಣೆ, ಅಡಿಗೆ ಮಾಡಲು ಎಲ್ಲ ವ್ಯವಸ್ಥೆ ಕೂಡ ಇತ್ತು. ಮತ್ತೂ ಇಷ್ಟವಾಗಿದ್ದ ಕಿಟಕಿಯ ಮುಂದೆ ನಿಂತರೆ ವಿಶಾಲವಾದ ಮೆಷಿಗನ್ ಸರೋವರದ ವಿಹಂಗಮ ನೋಟ. ಸಮಯ ಸಂಜೆ ಏಳೂವರೆ ಆಗಿದ್ದರೂ ಐದು ಗಂಟೆಯಂತಹ ಬಿಸಿಲು ಕಂಡು ವಿಸ್ಮಯವಾಯಿತು. ” ಅಮ್ಮಾ.. ಇಲ್ಲಿ ಎಂಟು ಗಂಟೆ ಮೇಲೆ sunset ಆಗೋದು. ಎಂಟೂವರೆ ಒಂಬತ್ತಾದರೂ ಬೆಳಕಿರುತ್ತೆ ಎಂದ. Fresh up ಆಗೋದ್ರಲ್ಲಿ ಬಿಸಿ ಬಿಸಿಯಾದ ವೆಜ್ ಫಲಾವ್, ಮೊಸರನ್ನ, ಚಪಾತಿ, ಪಲ್ಯ ತರಿಸಿದ.

“ಇಷ್ಟು ಬೇಗ ಹೇಗೆ ತರಿಸಿದೆ ಮಗನೆ?” ಎಂದು ಮಗನನ್ನು ಕೇಳಿದೆ.

” ಶಿಕಾಗೋ ನನ್ನ ಅಡ್ಡಾ ಅಮ್ಮ. ಇಲ್ಲಿ ಬಹಳಷ್ಟು ಗುಜರಾತಿಯವರು ಮನೆಯಿಂದಲೇ ವೆಜಿಟೇರಿಯನ್‌ಗಳಿಗೆ ಪಾರ್ಸೆಲ್ ಕೊಡ್ತಾರೆ. ವಾರದಲ್ಲಿ ಎರಡರಿಂದ ಮೂರು ಸರಿಯಾದ್ರೂ ಕಾಲೇಜಿನಿಂದ ಹೋಗ್ತಾ ತಗೊಂಡು ಹೋಗ್ತಾ ಇದ್ದೆ” ಎಂದ.

ಸ್ವಾದಿಷ್ಟವಾದ ಊಟ ಹೊಟ್ಟೆಗೆ ಬಿದ್ದು ಸಂತೃಪ್ತಿಯಾಯಿತು. ಕಿಟಕಿಯಿಂದ ಜಗಮಗಿಸುವ ಕಟ್ಟಡಗಳನ್ನು, ವೇಗವಾಗಿ ಚಲಿಸೋ ಕಾರುಗಳನ್ನು ತುಸು ಹೊತ್ತು ನೋಡುತ್ತ ನಿಂತೆ. ಪ್ರಯಾಣದ ಆಯಾಸ, ತುಂಬಿದ ಹೊಟ್ಟೆ ದೇಹ ವಿಶ್ರಾಂತಿ ಬಯಸಿ ನಿದ್ರೆಗೆ ಶರಣಾದೆ.

ಸೂರ್ಯ ತಡವಾಗಿ ಮುಳುಗಿದನೆಂದು ಮರುದಿನ ಉದಯಿಸಲು ತಡಮಾಡಲಿಲ್ಲ. ಏಪ್ರಿಲ್ ಹದಿನೆಂಟರ ಬೆಳಗ್ಗೆ ಕಿಟಕಿ ಪರದೆಯ ಅಂಚಿನಿಂದ ನನ್ನ ಮುಖದ ಮೇಲೆ ಬೆಳಿಕನ ಸಿಂಚವಾಯಿತು. ‘ಓ.. ಅದಾಗಲೇ ಬೆಳಗಾಯ್ತು. ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬೇಕು’ ಎಂದು ಮೊಬೈಲ್ ಹಿಡಿದು ಕಿಟಕಿಯ ಮುಂದೆ ನಿಂತೆ. ಆಹಾ.. ಆ ಸುಂದರ ಕ್ಷಣಗಳು ಕಣ್ಮನಗಳಿಗೆ ಮುದ ನೀಡಿದವು.

ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿವೆ ಹೊನ್ನಿನ ತೇರು

ಮಾಣಿಕ್ಯದಾರತಿ ಉಷೆ ತಂದಿಹಳು.. ಎಂಬ ಎರಡು ಕನಸು ಚಿತ್ರದ ಸಾಲು ಸುಮ್ಮನೆ ರಚಿಸಿಲ್ಲ. ಇಂತಹ ಸುಂದರ ನೋಟವೇ ಪ್ರೇರೇಪಣೆಯಾಗಿದೆ ಎನಿಸಿತು. ಆಗಸ, ಸರೋವರದ ನೀರು ಎಲ್ಲವೂ ಹೊನ್ನಿನಂತೆ ಹೊಳೆಯುತ್ತಿತ್ತು.

” ಸನ್ ರೈಸ್ ಮಿಸ್ ಮಾಡಿಕೋತೀರಿ. ಇಬ್ಬರೂ ಏಳಿ” ಎಂದು ನಮ್ಮವರನ್ನು ಮಗನನ್ನು ಎಬ್ಬಿಸಿದೆ. ಅದಾಗಲೇ ಆರು ಗಂಟೆ ದಾಟಿತ್ತು.

“ಅದಕ್ಕೆ ಲೇಕ್ ವ್ಯೂ ಇರೋ ರೂಮ್ ಮಾಡಿದ್ದು. ಐದು ನಿಮಿಷ ನಡೆದರೆ ಅಲ್ಲೇ ಹೋಗಿ ನೋಡಬಹುದು. ಹೋಗೋಣ್ವಾ? ಆದರೆ ಬೇಗ ವಾಪಾಸು ಬರಬೇಕು. ತಿಂಡಿ ಎಂಟು
ಗಂಟೆವರೆಗೆ ಅಷ್ಟೇ ಇರೋದು” ಎಂದ.

“ನಮ್ಮವರು ಇಲ್ಲೇ ಕಾಣ್ತಾ ಇದೆ. ಆಮೇಲೆ ಅಲ್ಲಿಗೇ ಹೋಗ್ತೀವಲ್ಲ ಬಿಡು” ಎಂದು ನನ್ನ ಆಸೆಗೆ ತಣ್ಣೀರೆರಚಿ ಅಲ್ಲೇ ನಿಂತರು. ಏಳೂವರೆಯ ಹೊತ್ತಿಗೆ ಸಿದ್ಧವಾಗಿ ಬೆಳಗಿನ ಉಪಹಾರಕ್ಕೆ ನೆಲಮಹಡಿಗೆ ಬಂದೆವು. ಸಸ್ಯಾಹಾರಿಗಳಿಗೆ ಬ್ರೆಡ್, ಬಟರ್, ಜಾಮು, ಆಲೂ ಫೈಸ್, ಕಿತ್ತಳೆ, ಹಸಿರು ಸೇಬು ಬಿಸ್ಕೆಟ್, ಕಾಫಿ, ಟೀ ಇತ್ತು. ಬ್ರೆಡ್ ಜಾಮು ತಿಂದು, ಕಾಫಿ, ಸೇಬು ಕೈಗೆತ್ತಿಕೊಂಡು ರೂಮು ಸೇರಿದೆವು. ಅಂದು ಶುಕ್ರವಾರ, ಮಗನಿಗೆ ಎರಡು ಗಂಟೆವರೆಗೆ ಆಫೀಸಿನ ಕೆಲಸವಿತ್ತು. ಮಗ ಮೀಟಿಂಗ್‌ನಲ್ಲಿ ಮಾತಾಡೋದು, ಹಿರಿಯರಿಂದ ಮಾಹಿತಿ ಪಡೆದು, ಇನ್ನೊಂದು ತಂಡದೊಂದಿಗೆ ಸಮನ್ವಯ ಮಾಡೋದು ನೋಡಿ ಖುಷಿಯಾಯ್ತು.

ಸಮಯ ನಿಧಾನವಾಗಿ ಚಲಿಸುತ್ತಿದೆ ಎನಿಸಿತು. ನಿದ್ದೆಯಂತೂ ಬಾರದು, ಎಷ್ಟೆಂದು ಮೂಖರಂತೆ ಮೊಬೈಲ್ ಹಿಡಿದು ಕೂರುವುದು? ಎನಿಸಿತು. ನಮ್ಮನ್ನು ನೋಡಿದ ಮಗ ಒಂದು ಉಪಾಯ ಮಾಡಿದ.

” ನೀವಿಬ್ರೂ ಮೆಷಿಗನ್ ಸರೋವರದ ದಂಡೆ ಮೇಲೆ ಒಂದೆರಡು ಗಂಟೆ ಆರಾಮವಾಗಿ ಓಡಾಡಿ ಬನ್ನಿ. ಬೀಚು, ಅದರ ಪಕ್ಕ ಪಾರ್ಕು ಇದೆ. ಮಧ್ಯಾಹ್ನ ಊಟ ಮುಗಿಸಿ ಇಲ್ಲಿಂದ ಹೊರಗೆ ಹೋಗೋಣ” ಎಂದು ನಮ್ಮವರ ಫೋನ್ ನಂಬರಿಗೆ ಇಂಟರ್ನ್ಯಾಷನಲ್ ಪ್ಯಾಕ್ ಚಾರ್ಜ್ ಮಾಡಿಸಿದ.

ನಮಗೂ ಅದೇ ಸರಿ ಎನಿಸಿತು. ಅದಾಗಲೇ ಹತ್ತೂವರೆ ದಾಟಿತ್ತು, ರೂಮಿನ ಒಂದು ಕೀ ತೆಗೆದುಕೊಂಡು, location ಹಾರಿಸಿಕೊಂಡು ಮೆಷಿಗನ್ ಸರೋವರದತ್ತ ಹೆಜ್ಜೆ ಹಾಕಿದೆವು. ಹೊರಡುವಾಗ, ” ಇಲ್ಲಿ ಗಾಳಿ ಹೆಚ್ಚು. ಇಬ್ಬರೂ ಜೆರ್ಕಿನ್ಸ್ ಹಾಕ್ಕೊಳಿ” ಎಂದು ಅವನು ನಮಗಾಗಿ ತಂದಿದ್ದ ಜರ್ಕಿನ್ಸ್ ಹಾಕಿಸಿದ. ಚಿಕಾಗೋವನ್ನು ವಿಡಿಯೋಗಳಲ್ಲಿ ನೋಡಿದ್ದ ನಾವು ನೇರವಾಗಿ ನೋಡಲು ಅಣಿಯಾದೆವು.

ಇಲಿನೋಯ್ ರಾಜ್ಯದ ಅತಿದೊಡ್ಡ ನಗರ, ಜನಸಂಖ್ಯೆಯಲ್ಲಿ ಅಮೇರಿಕಾದ ದೇಶದ ಮೂರನೆ ಅತಿ ದೊಡ್ಡ ನಗರ ಶಿಕಾಗೋ. ಶಿಕಾಗೋ ನಗರದೊಳಗೆ ಶಿಕಾಗೋ ನದಿ ಹರಿದರೆ ಮತ್ತೊಂದು ಕಡೆ ಮೆಷಿಗನ್ ಸರೋವರ ಇದರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದಕ್ಕೆ ವಿಂಡ್ ಸಿಟಿ, ಶಿ-ಟೌನ್, ಹಾಗ್ ಬುಚರ್ ಫಾರ್ ದ ವರ್ಲ್ಡ್ ಎಂಬ ಹೆಸರುಗಳೂ ಇವೆ. ವಾಣಿಜ್ಯ, ಶಿಕ್ಷಣಕ್ಕೆ ಹೆಸರಾದ ನಗರವಿದು.

ಮೆಷಿಗನ್ ಸರೋವರವನ್ನು ದೂರದಿಂದ ಕಣ್ತುಂಬಿಕೊಳ್ಳುತ್ತ ಸಾಗಿದೆ. ಕಾರ್ ರೂಮಿನಿಂದ ಸರೋವರ ಇನ್ನೂರು ಮೀಟರ್ ದೂರವಷ್ಟೇ ಇತ್ತು. ಪಕ್ಕದಲ್ಲೇ ಹೆದ್ದಾರಿ, ವಾಹನ ಸಂದಣಿಯೂ ಹೆಚ್ಚಿತ್ತು. ಕಾರ್ ಕಾರ್.. ಎಲ್ನೋಡಿ ಕಾರ್.. ಎನ್ನುವ ಹಾಡಿನ ಸಾಲಿನಂತೆ ಕಾರಿನ ಸರಮಾಲೆ ಒಂದರ ಹಿಂದೆ ಮತ್ತೊಂದು. ಕಾರಿನ ಪಥಗಳ ಅಂಚಿನಲ್ಲಿ ಸೈಕಲ್ ಪಥವೂ ಇತ್ತು. ನಿಧಾನವಾಗಿ ನಡೆಯುತ್ತ, ಸಿಗ್ನಲ್‌ನಲ್ಲಿ ರಸ್ತೆ ದಾಟಿ ಸರೋವರದತ್ತ ನಡೆದವು. ಸ್ಥಳೀಯರು ಸರೋವರದುದ್ದಕ್ಕೂ ನಡೆಯುತ್ತ, ಓಡುತ್ತ ವ್ಯಾಯಾಮ ಮಾಡುತ್ತಿದ್ದರು. ಅಲ್ಲಿಯೂ ಬೇಸಿಗೆ ರಜೆಯಾದ್ದರಿಂದ ಮಕ್ಕಳು ವಿಹರಿಸುತ್ತಿದ್ದರು.

ಮೆಷಿಗನ್ ಸರೋವರ ಅಮೇರಿಕಾದ ಅತಿ ದೊಡ್ಡ ಸರೋವರ ಎಂದು ನೋಡಿದರೇ ತಿಳಿಯುತ್ತಿತ್ತು. ಇಲಿನೋಯ್, ಮಿಷಿಗನ್, ವಿಸ್‌ಗಾನ್‌ಸಿನ್ ಮತ್ತು ಇಂಡಿಯಾನ ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ ಎಂಬುದು ವಿಸ್ಮಯವೇ ಸರಿ. ಇಲಿನೊಯ್ ರಾಜ್ಯದ ಶಿಕಾಗೋ ಒಂದರಲ್ಲೇ ಇಪ್ಪತ್ತನಾಲ್ಕು ಬೀಚುಗಳಿರುವ ಮೆಷಿಗನ್ ಸರೋವರ ಬರೋಬ್ಬರಿ ಇಪ್ಪತ್ತಾರು ಮೈಲಿಯಷ್ಟು ಸರೋವರದ ದೃಶ್ಯಗಳನ್ನು, ಉದ್ಯಾನವನಗಳನ್ನು ಹೊಂದಿದೆ.

ನೀರಿರುವ ನಗರ ಸಹಜವಾಗಿ ಜನರಿಗೆ ನೆಲೆ ನೀಡುವುದು, ಆಕರ್ಷಣೀಯವಾಗಿರುವುದು. ಸರೋವರದ ಅಂಚಿನಲ್ಲಿ ಸಾಗುತ್ತ ನಾವು ತಲುಪಿದ್ದು ಜೇನ್ ಆಡಮ್ಸ್ ಮೆಮೋರಿಯಲ್ ಪಾರ್ಕಿಗೆ. ಪಾರ್ಕಿನಲ್ಲಿ ಫೋಟೋ ತೆಗೆದುಕೊಳ್ಳುತ್ತಿದ್ದಲ್ಲಿಗೆ ಹೋಗಿ ನಾವೂ ಒಂದಷ್ಟು ಫೋಟೋ ತೆಗೆದುಕೊಂಡೆವು. ಪಾರ್ಕಿನಲ್ಲಿ ಬೋಳಾದ ಮರಗಳು, ಹಸಿರು ಹುಲ್ಲುಗಾವಲು ಹಳದಿ ಹೂಗಳು ವಿಶೇಷ ಮೆರುಗು ನೀಡಿದ್ದವು. ಗಗನ ಚುಂಬಿ ಕಟ್ಟಡಗಳ ಸಾಲು, ಸರೋವರದ ಅಂಚು ನೋಡಲು ಮನಮೋಹಕವಾಗಿತ್ತು. ಬೊಗಸೆ ಗಾತ್ರದಿಂದ ಮೂರು ಅಡಿ ಎತ್ತರದ ಶ್ವಾನಗಳಿಗೆ ಹಾಕಿ ತಂದಿದ್ದ ಸರಪಳಿ ಹಿಡಿದು ವಯಸ್ಸಿನ ತಾರತಮ್ಯವಿಲ್ಲದೆ ಜನ ಪಾರ್ಕಿನಲ್ಲಿ ಓಡಾಡಿಸುತ್ತಿದ್ದರು. ವಿಶೇಷವೆಂದರೆ ಅಲ್ಲಿದ್ದ ಅಷ್ಟೂ ಅವಧಿಯಲ್ಲಿ ಯಾವ ನಾಯಿಯೂ ‘ ಬೌ..ಬೌ.. ‘ ಎಂದದ್ದು ಕೇಳಿಸಲೇ ಇಲ್ಲ. ಪಾಪ ಅಲ್ಲಿನ ಶ್ವಾನಗಳದು ಮೂಕ ಭಾಷೆ!

ಬಿಸಿಲು ಏರುತ್ತಿದ್ದಂತೆ ಮಗ ಹಾಕಿಸಿದ್ದ ಜರ್ಕಿನ್ ತೆಗೆದು ಸೊಂಟಕ್ಕೆ ಬಿಗಿದೆ. ಆಡಮ್ಸ್ ಮೆಮೋರಿಯಲ್ ಪಾರ್ಕಿನಿಂದ ನಡೆದು children’s amusement park ಎಂದು ಬರೆದಿದ್ದ ತಾಣದವರೆಗೆ ಹೋದೆವು. ಅಲ್ಲಿ ನಾವೇನು ನೋಡುವುದಿದೆ ಎಂದು ಒಳಗೆ ಹೋಗದೆ ಅಲ್ಲಿಂದಲೇ ಫೋಟೋ ಕ್ಲಿಕ್ಕಿಸಿಕೊಂಡು ಹಿಂದಿರುಗಿದೆವು. ಕಾಲು ಇನ್ನು ನಡೆಯಲಾರೆವು ಎಂದು ಮುಷ್ಕರ ಹೂಡಿದಾಗ, ಬೀಚಿನಲ್ಲಿ ಒಂದಷ್ಟು ಹೊತ್ತು ಕುಳಿತು ರೂಮಿನತ್ತ ಹೊರೆಟೆವು. ಮಗ ಆಗಷ್ಟೇ ಕಛೇರಿ ಕೆಲಸ ಮುಗಿಸಿ ನಮ್ಮ ದಾರಿ ಕಾಯುತ್ತಿದ್ದ.

” ಇಷ್ಟು ತಡವಾಯ್ತು ಬಂದದ್ದು. ಎಲ್ಲಿಯವರೆಗೆ ಹೋಗಿದ್ರಮ್ಮಾ?” ಎಂದ. ಕಿಟಕಿಯಿಂದ ಕಾಣುತ್ತಿದ್ದ children’s amusement park ಚಕ್ರವನ್ನು ತೋರಿಸಿದೆ.

ಅವನು ಕಣ್ಣರಳಿಸಿ, “ಅಲ್ಲಿಯವರೆಗೆ ಹೋಗಿದ್ರಾ? ಅದು ನೇವಿ ಪೀರ್ ಅಂತ, ರಾತ್ರಿ ಹೋಗಬೇಕು ಅಂತಿದ್ದೆ. ಅದರಲ್ಲಿ ಮೇಲೆ ಕುಳಿತು ಶಿಕಾಗೋ ಪೂರ್ತಿಯಾಗಿ ನೋಡಬಹುದು” ಎಂದ.

” ಹಾಗಿದ್ರೆ ಈಗ ಹೋಗಿ ಬಂದದ್ದೇ ಒಳ್ಳೆಯದಾಯ್ತು. ಅಷ್ಟೆತ್ತರ.. ಅದರಲ್ಲಂತೂ ನಾನು ಕೂರಲ್ಲ ಬಿಡು” ಎಂದೆ.

ಆ ನೇವಿ ಪೀರ್ 50 ಎಕರೆ ವಿಸ್ತೀರ್ಣವಿದ್ದು, 150 ಅಡಿ ಫೆರಿಸ್ ಚಕ್ರ ಮತ್ತು ಕ್ಯಾರೋಸೆಲ್‌ನ್ನು ಹೊಂದಿದ್ದು ಮಕ್ಕಳ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ. ಶಿಕಾಗೋ ಪ್ರವಾಸೀ ತಾಣಗಳಿಗೆ ಪ್ಯಾಕೇಜ್ ಮೂಲಕ ಮಗ ಮುಂಗಡ ಕಾಯ್ದಿರಿಸಿ ಹಣ ಪಾವತಿಸಿದ್ದ. ಅದರಂತೆ ಮೂರು ತಾಣಗಳನ್ನು ವೀಕ್ಷಣೆ ಮಾಡುವ ಅವಕಾಶವಿತ್ತು. ಮತ್ತೆ ಕೆಲವು ಉಚಿತವಾಗಿದ್ದವು. ವಿನೀತ್ ಮೊದಲು ಕರೆದೊಯ್ದದ್ದು 360 ಜಾನ್ ಹ್ಯಾಂಕಾಂಕ್ ಕಟ್ಟಡದೆಡೆಗೆ. ಅಲ್ಲಿಗೆ ಸೊನೆಸ್ಟಾದಿಂದ ಐದು ನಿಮಿಷದ ನಡಿಗೆಯಷ್ಟೇ.

360 ಶಿಕಾಗೋ ಜಾನ್ ಹ್ಯಾಂಕಾಕ್ ಕಟ್ಟಡದ 94 ನೇ ಮಹಡಿಯಲ್ಲಿ ವೀಕ್ಷಣಾ ವೇದಿಕೆಯೇ ಪ್ರಮುಖ ಆಕರ್ಷಣೆ. ಬರೋಬರಿ 1,000 ಅಡಿ ಎತ್ತರದಲ್ಲಿ ಒಂದು ದೊಡ್ಡ ಗಾಜಿನ ಗೋಡೆಯುಳ್ಳ ವೀಕ್ಷಣಾ ವೇದಿಕೆಯಿದ್ದು ಮಿಚಿಗನ್ ಸರೋವರ, ಚಿಕಾಗೋದ ಸ್ಕೈಲೈನ್ ಮತ್ತು ಸುತ್ತಮುತ್ತಲಿನ ಮೂರು ರಾಜ್ಯಗಳ ಅದ್ಭುತ ನೋಟವನ್ನು ನೋಡಬಹುದು. ಗಾಜಿನ ಗೋಡೆಯ ಬದಿ ವೀಕ್ಷಣೆ ಮಾಡುವವರನ್ನು ನಿಲ್ಲಿಸಿ, ಅದನ್ನು ನಿದಾನವಾಗಿ 30 degree ಓರೆ ಮಾಡುತ್ತಾರೆ. ಗಾಜಿನ ಮೂಲಕ ಹೊರಗಿನ ನೋಟವನ್ನು ಕಣ್ತುಂಬಿಕೊಂಡು ಆನಂದಿಸುತ್ತಾರೆ. ಇದನ್ನು ‘ಡೆಕ್ ಟಿಲ್ಟ್’ ಎಂದು ಕರೆಯುತ್ತಾರೆ. ಶಿಕಾಗೋದ ಅತ್ಯುನ್ನತ ರೋಮಾಂಚಕ ಸವಾರಿ.

ನಾನಂತೂ 94 ನೇ ಮಹಡಿಯವರೆಗೆ ಲಿಫ್ಟ್ ‌ನಲ್ಲಿ ಹೋಗಿದ್ದಷ್ಟೇ. ಕಟ್ಟಡದ ಸುತ್ತ 360 degree ಓಡಾಡಿ ಸ್ಕೈ ಲೇನ್ ಮತ್ತು ಮೆಷಿಗನ್ ಸರೋವರದ ಸೊಬಗನ್ನು ಕಣ್ತುಂಬಿಕೊಂಡೆ. ನಾನಂತೂ ‘ಡೆಕ್ ಟಿಲ್ಟ್’ ಕಡೆ ಕಣ್ಣೆತ್ತಿಯೂ ನೋಡಲ್ಲ ಎಂದು ಮನೆಯವರಿಗೆ ಮಗನಿಗೆ ತಿಳಿಸಿದೆ. ಮನೆಯವರು ಮಗನೊಡನೆ ಹೋಗಿ ನಿಂತು ಗಾಜಿನ ಕಿಟಕಿ ಪಕ್ಕ ನಿಂತು ಫೋಟೋ ತೆಗೆಸಿಕೊಂಡು ಹಿಂದಿರುಗಿದರು.

ಅಲ್ಲಿಂದ ಹೊರಟದ್ದು ನದಿ ತೀರಕ್ಕೆ. ದಾರಿಯುದ್ದಕ್ಕೂ ಕತ್ತೆತ್ತಿ ನೋಡಿದರೂ ಕಟ್ಟಡದ ಮೇಲ್ತುದಿ ಕಾಣದಷ್ಟು ಎತ್ತರದ ಕಟ್ಟಡಗಳ ವಿನ್ಯಾಸ, ಎತ್ತರ ಬೆರಗು ಹುಟ್ಟಿಸಿದವು. ಅಮೇರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಕಟ್ಟಡವೂ ಶಿಕಾಗೋದ ಎತ್ತರದ ಹಾಗೂ ಪ್ರಮುಖ ಕಟ್ಟಡಗಳಲ್ಲಿ ಒಂದು. ಅಲೆಗಳಂತೆ ಇರುವ ಕಟ್ಟಡ ಮನ ಸೆಳೆಯಿತು. ಮಗ ನಾಲ್ಕು ತಿಂಗಳು ಕೆಲಸ ಮಾಡಿದ್ದ ಕಂಪನಿಯನ್ನು ಅಭಿಮಾನದಿಂದ ತೋರಿಸಿ ಖುಷಿ ಪಟ್ಟ. ಶಿಕಾಗೋ ನದಿಗೆ ಸಮಾಂತರವಾಗಿ ಕಟ್ಟಿರುವ ಸೇತುವೆಗಳದೇ ಕಾರುಬಾರು. ಅವುಗಳ ಇಕ್ಕೆಲಗಳಲ್ಲಿ ಕಿಕ್ಕಿರಿದು ಜನ ಶಿಕಾಗೋದ ಪಾರಂಪರಿಕ ಕಟ್ಟಡಗಳನ್ನು ಕಣ್ತುಂಬಿಕೊಳ್ಳುವುದನ್ನು ನೋಡುವುದೇ ಚೆನ್ನ. ಶಿಕಾಗೋ ನದಿ ನೀರು ಹಸಿರುಮಯವಾಗಿದ್ದು ಅದು ಕಲುಷಿತವಾಗಿರುವುದು ಬರಿಗಣ್ಣಿಗೆ ಗೋಚರಿಸುತ್ತಿತ್ತು.

ಶಿಕಾಗೋದಾ ಪಾರಂಪರಿಕ ಕಟ್ಟಡಗಳ ಪರಿಚಯ ವಿಸ್ತಾರವಾಗುವುದು ದೋಣಿ ವಿಹಾರಕ್ಕೆ ಹೋದಾಗ. ನಾನು ಮಗನಿಗೆ ಕಟ್ಟಡಗಳ ಬಗ್ಗೆ ವಿಚಾರಿಸುವಾಗ “ಇನ್ನು ಅರ್ಧ ಗಂಟೆ ಇರಮ್ಮ, 6.30 ಕ್ಕೆ ದೋಣೆಯಲ್ಲಿ ಇದಕ್ಕೆಲ್ಲ ಮಾಹಿತಿ ತಗೋವಂತೆ” ಎಂದ. ನದಿಯುದ್ದಕ್ಕೂ ಓಡಾಡಿ, ದೋಣಿ ಹತ್ತಿ ಕುಳಿತೆವು. ಏನಿಲ್ಲವೆಂದರೂ ನೂರು ಜನರಿದ್ದ ದೊಡ್ಡ ದೋಣಿಯದು.

ದೋಣಿಯ ಇಕ್ಕೆಲಗಳೂ ಕಾಣುವಂತೆ ಮಧ್ಯದಲ್ಲಿ ಕುಳಿತೆವು. ದೋಣಿಯಲ್ಲಿ ಶಿಕಾಗೋ ಪಾರಂಪರಿಕ ಕಟ್ಟಡಗಳ ಹೆಸರು, ಕಟ್ಟಡದ ಇತಿಹಾಸವನ್ನು ಉದ್ಘೋಷಕರೊಬ್ಬರೂ ಸತತ ಒಂದೂಕಾಲು ಗಂಟೆ ವಿವರಿಸುತ್ತ ಹೋದರು. ಪುರಾತನ ಕಟ್ಟಡದಿಂದ ಇತ್ತೀಚಿನ ಕಟ್ಟಡದವರೆಗೆ ಎಲ್ಲವೂ ನಾಲಿಗೆ ತುದಿಯಲ್ಲೇ ಇದ್ದವು. ಆತನ ನಿರರ್ಗಳತೆಗೆ ತಲೆದೂಗದೆ ಇರಲಾಗಲಿಲ್ಲ. ಆತ ಇರದ 1.15 ಗಂಟೆ ದೋಣಿ ವಿಹಾರವನ್ನು ಊಹಿಸಲೂ ಆಗದು.

7 ಗಂಟೆ ದಾಟಿದ ನಂತರ ಕಟ್ಟಡಗಳ ದೀಪ ಒಂದೊಂದಾಗಿ ಹತ್ತತೊಡಗಿದವು. ಆಗಂತೂ ಶಿಕಾಗೋದ ಕಟ್ಟಡಗಳೆಲ್ಲ ನಕ್ಷತ್ರಗಳನ್ನು ಮುಡಿದ ಆಕಾಶವೋ, ದೀಪಗಳನ್ನು ಹಚ್ಚಿ ಜಗಮಗಿಸುವ ಊರೋ ಎನ್ನುವಂತೆ ಭಾಸವಂತಾಯಿತು. ನೀರಿನಲ್ಲಿ ಕಟ್ಟಡಗಳ ಪ್ರತಿಬಿಂಬ ದೀಪದ ಸಾಲುಗಳಂತೆ ಭಾಸವಾದವು. ದೋಣಿಯಲ್ಲಿ ಒಂದೂಕಾಲು ಗಂಟೆ ಉರುಳಿದ್ದೇ ಅರಿವಿಗೆ ಬರಲಿಲ್ಲ. ಶಿಕಾಗೋದಲ್ಲಿ ನದಿಯ ಹರಿವನ್ನು ತಿರುಗಿಸಿ ಸರೋವರ ಸೇರುವಂತೆ ಮಾಡಲಾಗಿದೆ. ದೋಣಿ ಸರೋವರದ ಅಂಚಿನವರೆಗೆ ಹೋಗಿ ಮತ್ತೆ ನದಿಯ ಮೂಲಕ ಹಾದು ಹತ್ತಿದಲ್ಲಿಯೇ ಬಂದು ನಿಂತಿತು. ನದಿ ದಡದಲ್ಲಿ ರೆಸ್ಟೋರೆಂಟುಗಳಿದ್ದು, ವಾರಾಂತ್ಯದಲ್ಲಿ ಸಂಗೀತ ಕಛೇರಿಗಳು ನಡೆಯುತ್ತವೆ.

ದೋಣಿ ವಿಹಾರದ ಬಳಿಕ ಮಗ ಕರೆದುಕೊಂಡು ಹೊರಟದ್ದು ದಕ್ಷಿಣ ಭಾರತೀಯ ಖಾದ್ಯಗಳು ಸಿಗುವ ಹೋಟೆಲೊಂದಕ್ಕೆ. ನಮ್ಮ ತಿಂಡಿಗಳನ್ನು ತಿಂದು ರೂಮಿಗೆ ಹಿಂದಿರುಗಿದೆವು. ಮರುದಿನಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ನಿದ್ರೆಗೆ ಶರಣಾದೆವು.

ಮುಂದುವರೆಯುವುದು..

ಹಿಂದಿನ ಸಂಚಿಕೆಗಳು :


  • ಕಮಲಾಕ್ಷಿ ಸಿ ಆರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW