ಉಯ್ಯಾಲೆಯಲ್ಲಿ ಕುಳಿತುಕೊಳ್ಳೋಣ ಬಾ ಎಂದ ಮಗ ವಿನೀತ್. ನನ್ನನ್ನು ಕೂರಿಸಿ ಜೀಕತೊಡಗಿದ. “ನೀನು ಕೂತ್ಕೋಬಾ… ನಾನು ಜೀಕ್ತೀನಿ” ಎಂದೆ. “ನೀನು ನಮ್ಮನ್ನು ಕೂರಿಸಿ ಆಡಿಸಿಲ್ವಾ? ಈಗ ನಾನು ಜೀಕುವೆ” ಎಂದ ಮಗ ನಗುತ್ತ. ಯಾಕೋ ಕಣ್ತುಂಬಿತು. ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…
ಟೆನಿಸಿ ರಾಜ್ಯದ ರಾಜಧಾನಿ ನಾಶ್ವೆಲ್. ಇಪ್ಪತ್ತೈದು ದಿನಗಳ ಕಾಲ ನಗರದ ಒಂದಿಲ್ಲೊಂದು ಕಡೆ ಮಗ ಸುತ್ತಾಡಿಸಿದ್ದ. ದಿನಕ್ಕೊಂದು ಪಾರ್ಕು, ಶಾಪಿಂಗ್ ಮಾಲ್ ಇಲ್ಲವೇ ಅಲ್ಲಿನ ರಸ್ತೆಗಳು. ನಾಶ್ವೆಲ್‌ನಲ್ಲಿ ಮೊದಲು ಹೋದ ಪ್ರೇಕ್ಷಣೀಯ ತಾಣ ಗಣಪತಿ ದೇವಸ್ಥಾನ.
ಸಂಜೀತ್ ( ಚಿಕ್ಕಮಗ) ಬಂದ ಮರುದಿನವೇ ಗಣೇಶ ದೇವಸ್ಥಾನಕ್ಕೆ ಹೋಗುವಾ ಎಂದು ಹೊರಟೆವು. ಮನೆಯಿಂದ ಹೊರಟು ಐದು ನಿಮಿಷವಾಗಿತ್ತು, ಅದೆಲ್ಲಿ ಅಡಗಿತ್ತೋ ಆ ರಣ ಮಳೆ! ದಿಢೀರನೆ ಬಿರುಸಾಗಿ ಸುರಿಯತೊಡಗಿತು. ಮಳೆಯ ಜೊತೆ ಮಿಂಚು, ಗುಡುಗಿನ ಆರ್ಭಟಗಳೂ ಜೊತೆಯಾದವು. ಒಂದೆರಡು ನಿಮಿಷಗಳಲ್ಲಿ ರಸ್ತೆಯ ಮೇಲೆ ಮಳೆ ನೀರು ನದಿಯಂತೆ ಹರಿಯತೊಡಗಿತು. ಹೊರಗಿನ ದಾರಿ ಕಾಣದಷ್ಟು ರಭಸವಾಗಿದ್ದರಿಂದ ಮುಂದೆ ಹೋಗುವುದು ಬೇಡ, ಕಾರನ್ನು ಮನೆಯ ಕಡೆ ತಿರುಗಿಸು ಎಂದೆವು. ಅಂದು ಗಣೇಶನೇಕೋ ದರ್ಶನ ಭಾಗ್ಯ ನೀಡಲು ಅನುಮತಿಸಲಿಲ್ಲ.

ಮರು ದಿನ ಸಂಜೆ ಬೇಗನೆ ದೇವಸ್ಥಾನಕ್ಕೆ ಹೊರಟೆವು. ಮಾರ್ಗ ಮಧ್ಯೆ ಸಣ್ಣ ಸಣ್ಣ ಬೆಟ್ಟಗಳು, ಋತು ರಾಜನ ಆಗಮನವನ್ನು ಸಾರುವ ಹಸಿರು ಕಣ್ಮನ ತಣಿಸಿತು. ನಾಶ್ವೆಲ್‌ನಲ್ಲಿ ಮೊದಲ ದಿನ ನನ್ನ ಚಿಕ್ಕಮಗಳೂರನ್ನು ನೆನಪಿಸಿತು. ಪ್ರಕೃತಿ ಸೌಂದರ್ಯ ಸವಿಯುತ್ತ, ಮಕ್ಕಳೊಡನೆ ಮಾತನಾಡುತ್ತ ದೇವಸ್ಥಾನವನ್ನು ಇಷ್ಟು ಬೇಗ ತಲುಪಿದೆವಲ್ಲ ಎನಿಸಿತು.
ದೇವಸ್ಥಾನದ ಆವರಣ ಪ್ರವೇಶಿಸುತ್ತಿದ್ದಂತೆ, ಶ್ವೇತ ಪ್ರಭೆಯಿಂದ ಹೊಳೆಯುತ್ತಿದ್ದ ಬಿಳಿಯ ಗ್ರಾನೈಟ್‌ನಿಂದ ಕಟ್ಟಿರುವ ದೇವಸ್ಥಾನದ ವಾಸ್ತುಶಿಲ್ಪ ಸೆಳೆಯಿತು. ಪ್ರಶಾಂತ ವಾತಾವರಣ, ತಂಪಾದ ಗಾಳಿ ಮನದಲ್ಲಿ ಶ್ರದ್ಧಾ ಭಕ್ತಿಯನ್ನು ತುಂಬಿತು.
ದೇವಸ್ಥಾನದ ಒಳಗೆ ದೊಡ್ಡ ಸಭಾಂಗಣ. ದೇವಸ್ಥಾನದ ಪ್ರಧಾನ ದೈವ ಗಣೇಶ. ಎಡಬದಿಯಲ್ಲಿ ಈಶ್ವರ, ಬಲ ಬದಿಯಲ್ಲಿ ದೇವಿಯ ಗರ್ಭಗುಡಿಗಳಿವೆ. ಮುಂಭಾಗದಲ್ಲಿ ರಾಧಾ ಕೃಷ್ಣ, ಜಗದೀಶ, ಆಂಜನೇಯ, ಷಣ್ಮುಖ ಹಾಗೂ ವೆಂಕಟೇಶ್ವರ ವಿಗ್ರಹಗಳನ್ನು ನೋಡಿ ಸಂತೃಪ್ತ ಭಾವ ಮೂಡಿತು.

ಸಂಜೆಯ ಮಹಾಮಂಗಳಾರತಿಯ ಸಮಯ. ಮೆದುವಾಗಿ ಹಾಕಿದ್ದ ಶ್ಲೋಕಗಳು ಭಕ್ತರನ್ನು ದೇವರಲ್ಲಿ ಶ್ರದ್ಧೆಯಿಂದ ಕೆಂದ್ರೀಕರಿಸಲು ಸಾಧ್ಯವಾಗುವಂತೆ ಮಾಡಿತ್ತು. ಅರ್ಚಕರು ದಕ್ಷಿಣ ಭಾರತದವರು. ಅರ್ಚನೆ ಮಾಡಿಸಿಕೊಂಡು, ತೀರ್ಥ ಪ್ರಸಾದ ತೆಗೆದುಕೊಂಡು ದೇವಸ್ಥಾನದಿಂದ ಹೊರಬಂದೆವು. ದೇವಸ್ಥಾನದ ಒಳಗೆ ಫೋಟೋ ತೆಗೆದುಕೊಳ್ಳಲು ಅನುಮತಿ ಇಲ್ಲವಾದ್ದರಿಂದ ಹೊರಗೆ ಪೋಟೋ ತೆಗೆದುಕೊಳ್ಳಲು ಮುಂದಾದೆವು.
ಮುಸ್ಸಂಜೆ ಸೂರ್ಯನ ಬಂಗಾರದ ಬಿಸಿಲು, ತಂಗಾಳಿಗೆ ಅಲ್ಲಿಯೇ ಸ್ವಲ್ಪ ಸಮಯ ಇರಬೇಕೆನಿಸಿತು. “ಅಮ್ಮಾ, ಹೊರಡೋಣ ನಡೀರಿ. ಬಂದಿರುವ ಜನ ಆಗಲೇ ಹೋಗಾಯ್ತು. ಮಿಡ್ ವೀಕಲ್ಲಿ ಹೆಚ್ಚು ಜನ ಓಡಾಡಲ್ಲ” ಎಂದು ವಿನೀತ್ ಅವಸರಿಸಿದ. ಒಂದಷ್ಟು ಫೋಟೋ, ವಿಡಿಯೋ ತೆಗೆದುಕೊಂಡು ಅಲ್ಲಿಂದ ಹೊರಟೆವು.

ಮನೆಗೆ ಹಿಂದಿರುಗುವಾಗ ಮ್ಯಾಕ್ ಡೋನಾಲ್ಡ್ಸ್‌ಗೆ ಕರೆದುಕೊಂಡು ಹೋದರು. ಅಲ್ಲಿ ಕಾಫಿ ಆರ್ಡರ್ ಮಾಡಿದರೆ ಅರ್ಧ ಲೀಟರ್ ಕೊಟ್ಟರು. ಬೇಕಾದರೆ ಸಕ್ಕರೆ, ವೈಟ್ನರ್ ( ಹಾಲು) ಪ್ರತ್ಯೇಕವಾಗಿ ನಾವೇ ಹಾಕಿಕೊಳ್ಳಬೇಕು. ಜೊತೆಗೆ ಆಲೂ ಫ್ರೆಂಚ್ ಫ್ರೈಸ್ ಆರ್ಡರ್ ಮಾಡಿದ್ರು. “ನಾನಂತೂ ತಿನ್ನಲ್ಲ, ಯಾವ ಎಣ್ಣೆಯಲ್ಲಿ ಕರಿತಾರೋ” ಎಂದೆ. ಮಗ ಕಿಚನ್ ಬಳಿ ಕರೆದೊಯ್ದು, ಫ್ರೆಂಚ್ ಫ್ರೈಸ್‌ಗೆ ಅಂತಾನೆ ಬೇರೆ ಬಾಣಲಿ ಇರುತ್ತೆ. ಅದನ್ನು ಹೆಚ್ಚಾಗಿ ಆರ್ಡರ್ ಮಾಡ್ತಾರೆ. ನಾನ್ ವೆಜ್ ಮಿಕ್ಸ್ ಮಾಡಲ್ಲ ಎಂದು ಅಲ್ಲಿರುವವರೊಡನೆ ಮಾತನಾಡಿಸಿದ. ಖಾತ್ರಿ ಪಡಿಸಿಕೊಂಡು ತಿನ್ನಿಸುವವರೆಗೆ ಮಕ್ಕಳು ಬಿಡಲಿಲ್ಲ.

ಮರು ದಿನ ಸಂಜೆ ಆಫೀಸಿನಿಂದ ಬಂದ ಮಗ, ಕರೆದೊಯ್ದದ್ದು ನಾಶ್ವೆಲ್‌ನ ಪ್ರವಾಸಿ ತಾಣ ಸೆಂಟಿನಿಯಲ್ ಪಾರ್ಕ್. ಮನೆಯಿಂದ ನಡೆದು ಹೋದರೆ ಆರೇಳು ನಿಮಿಷವಷ್ಟೇ. ಹೊರಗಿನಿಂದ ಅಷ್ಟು ದೊಡ್ಡ ಪಾರ್ಕಿದೆ ಎಂದು ತಿಳಿಯಲ್ಲ. ಪಾರ್ಕಿನ ಒಳಗಿರುವ ಕೃತಕವಾದ ಕೊಳ ಇದರ ಮುಖ್ಯ ಆಕರ್ಷಣೆ. ಆ ಕೊಳದಲ್ಲಿರುವ ಬಾತು ಕೋಳಿಗಳನ್ನು ನಿಂತು ನೋಡದವರೆ ಇಲ್ಲ ಎನ್ನಬಹುದು.

ಉದ್ಯಾನದಲ್ಲಿ ನೇತು ಬಿಟ್ಟಿರುವ ಹಲವು ಉಯ್ಯಾಲೆಗಳಲ್ಲಿ ಮಕ್ಕಳು, ಹಿರಿಯರೆನ್ನದೆ ಕುಳಿತು ಸಂಜೆಯ ಸೊಬಗನ್ನು ಆಹ್ವಾದಿಸುತ್ತಿದ್ದರು.
ಓಡುವ, ನಡಿಗೆಗೆ ಬಂದವರು ಸಾಮಾನ್ಯವಾಗಿದ್ದರು. ಮಕ್ಕಳನ್ನು ಆಡಿಸುವವರು, ತಮ್ಮ ಸಾಕು ನಾಯಿಗಳನ್ನು ಆಡಿಸುವವರು ಮತ್ತಷ್ಟು ಜನ. ಅಲ್ಲಿನ ನಾಯಿಗಳನ್ನು ಮಕ್ಕಳಂತೆ ಪೋಷಣೆ ಮಾಡುವುದು, ಆಡಿಸುವರು. ಅಲ್ಲಿನ ನಾಯಿಗಳು ಬೌ ಬೌ ಎಂದದ್ದೂ ಒಮ್ಮೆಯೂ ಕೇಳಿಸಲಿಲ್ಲ! ಇಲ್ಲಿನ ನಾಯಿಗಳು ಮೂಕ ಪ್ರಾಣಿಗಳೇ ಎನಿಸದೆ ಇರಲಿಲ್ಲ. ಅಲ್ಲಿ ನಾಯಿಗಳಿಗೆ ಹಾಗೇ ಟ್ರೈನ್ ಮಾಡಿರುತ್ತಾರೆ ಎಂದ ಮಗರಾಯ.
ಈ ಸೆಂಟಿನೀಯಲ್ ಪಾರ್ಕನ್ನು 1903ರಲ್ಲಿ ತೆರೆಯಲಾಯಿತಂತೆ. ಇಲ್ಲಿನ ಪಾರ್ಥೆನನ್ ಕಟ್ಟಡ ಪ್ರವಾಸೀ ತಾಣ. ಜ್ಞಾನದ ಹಾಗೂ ಯುದ್ಧದ ಅಧಿದೇವತೆ ಎಂದು ಆರಾಧಿಸುವ ಅಥೆನ್ಸ್ ಮೂರ್ತಿಯಿದೆ. 42 ಅಡಿ ಎತ್ತರದ ಪ್ರತಿಮೆಯನ್ನು ನಾಶ್ವೆಲ್‌ನ ಅಲನ್ ಲಿಖರ್ ವಿನ್ಯಾಸಗೊಳಿಸಿದ್ದು, ಚಿನ್ನದ ಲೇಪನ ಹೊಂದಿದ್ದು ಬಂಗಾರ ವರ್ಣದಿಂದ ಹೊಳೆಯುತ್ತದೆ. ಪಾರ್ಥೆನಾನ್ ಅನ್ನು ವಿಲಿಯಂ ಕ್ರೌಫೋರ್ಡ್ ಸ್ಮಿತ್ ವಿನ್ಯಾಸಗೊಳಿಸಿದ್ದಾಗಿದೆ.
ಮೂರ್ನಾಲ್ಕು ಸುತ್ತು ಹಾಕಿ, ಕೊಳದ ಬಳಿ ಕುಳಿತೆ. ಅದೂ ಸಾಕೆನಿಸಿದಾಗ ಉಯ್ಯಾಲೆಯಲ್ಲಿ ಕುಳಿತುಕೊಳ್ಳೋಣ ಬಾ ಎಂದ ವಿನೀತ್. ನನ್ನನ್ನು ಕೂರಿಸಿ ಜೀಕತೊಡಗಿದ. “ಬೇಡಮ್ಮಾ..ನೀನು ಕೂತ್ಕೋಬಾ.. ನಾನು ಜೀಕ್ತೀನಿ” ಎಂದೆ. “ನೀನು ನಮ್ಮನ್ನು ಕೂರಿಸಿ ಆಡಿಸಿಲ್ವಾ? ಈಗ ನಾನು ಜೀಕುವೆ” ಎಂದ ನಗುತ್ತ. ಯಾಕೋ ಕಣ್ತುಂಬಿತು. ಅವನಿಗೆ ಸಾಕೆನಿಸುವಷ್ಟು ಜೀಕಿದ.. ಅಷ್ಟರಲ್ಲಿ ನಮ್ಮವರು ವಾಕ್ ಮುಗಿಸಿ ಬಂದು ಮಗನನ್ನು ರೇಗಿಸಿದರು. ” ಯಾವುದೋ ಸಣ್ಣ ಮಗೂನ ತೂಗ್ತಾ ಇದ್ದೀಯ” ಅಂತ. ” ನೀವು ಕೂತ್ಕೋಳಿ ಪಪ್ಪಾ.. ತೂಗುವೆ” ಎಂದ. ” ನನಗೆ ಬೇಡಪ್ಪ.. ” ಎಂದು ಕೈಗೆ ಸಿಗದಂತೆ ಒಂದು ಬೆಂಚಿನಲ್ಲಿ ಕುಳಿತರು. ಮೂರು ದಿನ ಸೆಂಟಿನಿಯಲ್ ಪಾರ್ಕಿಗೆ ಹೋಗಿ ಬಂದೆವು.
ಸೆಂಟಿನಿಯಲ್ ಪಾರ್ಕ್ ಬಳಿಕ ನಾಶ್ವಲ್‌ನ ಮತ್ತೊಂದು ಪ್ರವಾಸೀ ತಾಣ ಕ್ಯುಂಬರ್ ಲ್ಯಾಂಡ್ ನದಿ ಹಾಗೂ ಅದರ ಮೇಲಿನ ಸೇತುವೆ. ಅಲ್ಲೇನು ನೋಡೋದಿದೆ ಬಿಡೋ ಎಂದಾಗ ಮಗ ಬಿಡದೆ ಕರೆದೊಯ್ದಿದ್ದ. ನದಿ ತೀರದ ಪಾರ್ಕ್ ಹಾಗೂ ಸೇತುವೆ ಮೇಲಿನಿಂದ ನಗರದ ಸೌಂದರ್ಯವನ್ನು ನೋಡುತ್ತ ಕಳೆದುಹೋದೆ. ಒಂದು ಸೇತುವೆಯನ್ನು ಪ್ರವಾಸಿಗಳಿಗಾಗಿ ನಿಗದಿಗೊಳಿಸಲಾಗಿದೆ. ನದಿ ನೀರಿನ ಕಲರವ ಜೊತೆಗೆ ಜಗಮಗಿಸುವ ನಗರದ ಕಟ್ಟಡಗಳನ್ನು ಕಣ್ತುಂಬಿಕೊಳ್ಳುವುದೇ ಸೊಗಸು. ಅಲ್ಲಿ ಓಡಾಡುವಷ್ಟು ಹೊತ್ತು ಫೋಟೋಗಳು ನಮ್ಮ ಮೊಬೈಲ್ ತುಂಬಿಕೊಳ್ಳುತ್ತಲೇ ಇದ್ದವು.
ಮುಂದುವರೆಯುವುದು…
ಹಿಂದಿನ ಸಂಚಿಕೆಗಳು :
- ಅ…ಅ…ಅಮೆರಿಕಾ ನೋಡಾ (ಭಾಗ-೧)
- ಅ…ಅ…ಅಮೆರಿಕಾ ನೋಡಾ (ಭಾಗ-೨)
- ಅ…ಅ…ಅಮೆರಿಕಾ ನೋಡಾ (ಭಾಗ-೩)
- ಅ…ಅ…ಅಮೆರಿಕಾ ನೋಡಾ (ಭಾಗ-೪)
- ಅ…ಅ…ಅಮೆರಿಕಾ ನೋಡಾ (ಭಾಗ-೫)
- ಕಮಲಾಕ್ಷಿ ಸಿ ಆರ್







