ಮೌಂಟ್‌ಗೋಮೆರಿ ಬೆಲ್ ಸ್ಟೇಟ್ ಪಾರ್ಕ್ ( Mounthgomery bell park) ಅಂತ ಉದ್ಯಾನವನಗಳಲ್ಲಿ ವಿಹಾರಕ್ಕೆ ಮಗ ಹೋಗೋಣವೆಂದ. ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…
ಸ್ಮೋಕಿ ಮೌಂಟೆನ್ಸ್ ನೋಡಿ ಬಳಿಕ ಎರಡು ದಿನ ಹೊರಗೆ ಹೋಗದೆ ಮನೆಯಲ್ಲಿ ಮಕ್ಕಳು ಕೇಳಿದ ಭಕ್ಷಗಳನ್ನು ಮಾಡಿಕೊಟ್ಟು ಖುಷಿಪಟ್ಟೆ. ನನಗೆ ಅಡುಗೆ ಮನೆಯೆಂದರೆ ಸ್ವರ್ಗ ಸಿಕ್ಕ ಹಾಗೆ. ನಮ್ಮವರಿಗಂತೂ ಒಂದೂವರೆಗಂಟೆ ಜಿಮ್ಮು, ಬಳಿಕ ಒಂದಷ್ಟು ಹೊತ್ತು ಅಲ್ಲಿನ ಮ್ಯಾನೇಜರ್ ಜೊತೆ ಹರಟೆ ಹೊಡೆದು ಬರುತ್ತಿದ್ದರು. ದಿನ ಉರುಳುವುದೇ ಅರಿವಿಗೆ ಬರುತ್ತಿರಲಿಲ್ಲ.
ಮಗನಿಗೆ ನಮ್ಮನ್ನು ಎಲ್ಲಿಯಾದರೂ ಹೊರಗೆ ಕರೆದೊಯ್ದು ಸುತ್ತಾಡಿಸಬೇಕೆಂಬ ಆಸೆ. ಬುಧವಾರ ಬೆಳಗ್ಗೆ ಆಫೀಸಿಗೆ ಹೋಗುವಾಗ ” ಇಬ್ಬರೂ ಸಂಜೆ ರೆಡಿಯಾಗಿರಿ. ಹೊರಗಡೆ ಹೋಗೋಣ” ಎಂದು ಹೇಳಿದ್ದ. ಅದರಂತೆ ಸಂಜೆ ಬಂದವನು ಅವಲಕ್ಕಿ ತಿಂದು ನಡೀರಿ ಎಂದ. ಮೌಂಟ್‌ಗೋಮೆರಿ ಬೆಲ್ ಸ್ಟೇಟ್ ಪಾರ್ಕ್( Mounthgomery bell park) ಅಂತ, ಮೂವತ್ತೈದರಿಂದ ನಲವತ್ತು ನಿಮಿಷ ಅಷ್ಟೇ..ಅಲ್ಲಿಗೆ ಹೋಗೋಣ ಎಂದ.
“ಅಯ್ಯೋ ಇಲ್ಲೇ ಸೆಂಟಿನಿಯಮ್ ಪಾರ್ಕ್ ಇದೆಯಲ್ಲ ಅಷ್ಟು ದೂರದ ಪಾರ್ಕ್ ಯಾಕಪ್ಪ” ಎಂದೆ.
” ಅಮ್ಮಾ.. ಆ ಪಾರ್ಕೇ ಬೇರೆ ತರ. ನೋಡಿದ್ರೆ ಖುಷಿ ಪಡ್ತೀರಿ. ಹೋಗೋಣಮ್ಮ ” ಎಂದವನೇ ಕರೆದುಕೊಂಡು ಹೊರಟ.

ಸಂಜೆ ಅದಾಗಲೇ ಐದೂಕಾಲುಗಂಟೆ. ನಾಶ್ವೆಲ್ಲಿನಿಂದ ಇಪ್ಪತ್ತು ನಿಮಿಷ ಹೆಚ್ಚು ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ಚಲಿಸಿ ನಂತರ ಸ್ವಲ್ಪ ಚಿಕ್ಕ ರಸ್ತೆ ಪ್ರವೇಶವಾಯಿತು. ಮನೆಗಳು, ವಾಹನಗಳ ಸಂಚಾರ ವಿರಳವಾದವು. ನನಗೋ ವಾರದ ಮಧ್ಯ ಜನ ಹೆಚ್ಚು ಇರದ ತಾಣ.. ಹೋಗುವುದು ಬೇಡವೇನೊ ಎನಿಸಿತು. ಮಗನಿಗೆ ಬೇಸರವಾದೀತೆಂದು, ಹೊರಗಿನ ಹಸಿರು, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯತೊಡಗಿದೆ. ಇನ್ನೂ ಹತ್ತು ನಿಮಿಷದ ಬಳಿಕ ದಾರಿ ಮತ್ತೊಂದು ಕವಲು ತೆಗೆದುಕೊಂಡಿತು. ಇಲ್ಲಿಂದು ರಸ್ತೆ ಇನ್ನಷ್ಟು ಕಿರಿದು ಎನಿಸಿತು.. ಮಗ ಅಲ್ಲಿ ಹಾಕಿದ್ದ ಬೋರ್ಡು ತೋರಿಸುತ್ತ, ಏಳೆಂಟು ನಿಮಿಷ ಅಷ್ಟೇ ಅಮ್ಮ” ಎಂದ.
ಅದೆಲ್ಲ ಸಂರಕ್ಷಿತ ಅರಣ್ಯವಲಯ ಎಂಬ ಫಲಕಗಳಿದ್ದವು. ಯಾವುದಾದರೂ ಕಾಡು ಪ್ರಾಣಿ ಬಂದರೆ ಎಂಬ ಅವ್ಯಕ್ತ ಭಯವೂ ಆಯಿತು. ಮಗ ಹೇಳಿದ ಏಳೆಂಟು ನಿಮಿಷವಾದರೂ ಸಣ್ಣ ತೊರೆ ಇರುವ ಸುಳಿವೇ ಕಾಣಲಿಲ್ಲ..ಕಾಡಿನ ನಡುವೆ ಸಿಲುಕಿದೆವೆನೋ ಎನಿಸಿ, ಬಂದ ದಾರಿಯಲ್ಲಿ ಹಿಂದಿರುಗಿ ಹೋಗೋಣ ವಿನು.. ದಾರಿ ತಪ್ಪಿದ್ರೆ ವಿಳಾಸ ಕೇಳೋಕು ಜನರೂ ಕಾಣಿಸ್ತಾ ಇಲ್ಲ ನೋಡಪ್ಪ. ಬಹುಶಃ ನೆಟ್ ಕೂಡ ಸಿಗಲಾರದು” ಎಂದೆ ಆತಂಕದಿಂದ. ಮನೆಯವರು, ವ ಅವನು ಬಂದಿದ್ದಾನಂತಲ್ಲ, ಗೊತ್ತಿರುತ್ತೆ ಸುಮ್ಮನಿರು. ಅಡ್ಡ ಬಾಯಿ ಹಾಕಬೇಡ” ಎಂದು ನನ್ನನ್ನು ಸುಮ್ಮನಾಗಿಸಿದರು. ಸ್ವಲ್ಪ ಹಿಂದಿರುಗಿ ಬಂದವನು ಪಕ್ಕದ ತಿರುವು ತೆಗೆದುಕೊಂಡು ಹೋದ.. ಅಲ್ಲಿ ಕಾರುಗಳನ್ನು ಪಾರ್ಕ್ ಮಾಡಿದ್ದರು, ಜನ ಕೂಡ ಅಲ್ಲಿ ಕುಟುಂಬ ಸಮೇತ ಬಂದದ್ದು ಕಾಣಿಸಿತು. ಆಗ ಮುಖದಲ್ಲಿ ಭಯದ ಬದಲು, ನಸುನಗು ಮೂಡಿತು.

ಸುತ್ತ ಎತ್ತರದ ಮರಗಳು, ನಡುವೆ ಸಣ್ಣದೊಂದು ಕೃತಕವಾಗಿ ನಿರ್ಮಿಸಿದ ತೊರೆ ಅದಕ್ಕೆ ಹೊಂದಿಕೊಂಡಂತಿರುವ ಪುಟ್ಟ ಜಲಪಾತ. ಪ್ರಕೃತಿ ಸೌಂದರ್ಯದ ಮುಂದೆ ಮನುಷ್ಯ ಎಲ್ಲವನ್ನು ಮರೆತು ಮಂತ್ರಮುಗ್ಧನಾಗುತ್ತಾನೆ ಎಂಬುದು ಅದೆಷ್ಟು ಸತ್ಯ ಎನಿಸಿತು. ನಾಶ್ವೆಲ್‌ನಲ್ಲಿ ರಾತ್ರಿ ಎಂಟಾದರೂ ಕತ್ತಲಾಗದು.. ಹಾಗಾಗಿ ಒಂದು ಗಂಟೆ ಆರಾಮವಾಗಿ ಓಡಾಡಿದೆವು, ಫೋಟೋಗಳನ್ನು ತೆಗೆದುಕೊಂಡೆವು. “ಸುಮ್ಮನೆ ಕರೆದುಕೊಂಡು ಬರ್ತೀನಾಮ್ಮ.. ಇಷ್ಟ ಆಯ್ತು ತಾನೆ” ಎಂದಾಗ, ಉಲ್ಲಸಿತವಾಗಿ ಹೌದೆಂದು ತಲೆಯಾಡಿಸಿದ್ದೇ ಉತ್ತರವಾಗಿತ್ತು. ಚಿಕ್ಕ ಮಗ ಒಂದಷ್ಟು ಓದುವುದಿದೆ, ನೀವುಗಳೆ ಹೋಗಿಬನ್ನಿ ಎಂದು ಮನೆಯಲ್ಲೇ ಉಳಿದಿದ್ದ. ಅವನೂ ಬಂದಿದ್ರೆ ಚೆನ್ನಾಗಿರೋದು..ಖುಷಿ ಪಡ್ತಿದ್ದ ಎನಿಸಿತು.
ನಾಶ್ವೆಲ್‌ನಿಂದ 60 ಕಿ.ಮೀ ದೂರದಲ್ಲಿರುವ ಈ ಪಾರ್ಕನ್ನು ನಲವತ್ತು ನಿಮಿಷದಲ್ಲಿ ತಲುಪಿದ್ದೆವು. 3,789 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಮೌಂಟ್‌ಗೋಮೆರಿ ಸ್ಟೇಟ್ ಪಾರ್ಕ್‌ನಲ್ಲಿ ದೋಣಿ ವಿಹಾಸ, ಟ್ರಕ್ಕಿಂಗ್, ಮೀನು ಹಿಡಿಯಲು, ಗೋಲ್ಫ್ ಕ್ರೀಡೆಗೆ ಹೆಸರವಾಸಿಯಾಗಿದೆ. ವಿಹಾರ ಬಂದವರಿಗೆ ಅಲ್ಲಲ್ಲಿ ಛಾವಣಿ ಹಾಕಿ ಅಡುಗೆ ಮಾಡಕೊಳ್ಳಲು ಒಲೆಗಳನ್ನು ನಿರ್ಮಿಸಲಾಗಿದೆ. ಉಕ್ಕಿನ ಉದ್ದಿಮೆದಾರ ಮೌಂಟ್‌ಗೋಮೆರಿ ಹೆಸರಲ್ಲಿ ಮನರಂಜನಾ ತಾಣವಾಗಿ ಮಾರ್ಪಡಿಸಲಾಗಿದೆ. ಅಲ್ಲಿನ ಹಸರು, ತೊರೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಬೈಸೆಂಟಿನಿಯಲ್ ಸ್ಟೇಟ್ ಪಾರ್ಕ್ ಟೆನಿಸಿ ರಾಜ್ಯದ ರಾಜಧಾನಿ ನಾಶ್ವೆಲ್‌ನ ಡೌನ್‌ಟೌನ್‌ನ ಆಡಳಿತ ಸೌಧದ ಮುಂದೆ ಇರುವ ಉದ್ಯಾನವನ. ಮಗ ಸಂಜೆಯ ವಿಹಾರಕ್ಕೆ ಕರೆದುಕೊಂಡು ಹೋಗಿದ್ದು ಈ ಪಾರ್ಕಿಗೆ. ಇದು ಟೆನಿಸಿ ರಾಜ್ಯದ ಉಗಮ, ಅದಕ್ಕಾಗಿ ಹೋರಾಡಿದವರು, ತ್ಯಾಗ ಮಾಡಿದವರು ಹಾಗೂ ಇತಿಹಾಸವನ್ನು ತಿಳಿಸುವ ಸ್ಮಾರಕಗಳು ಸುಂದರ ಪರಿಕಲ್ಪನೆಯನ್ನು ಕಟ್ಟಿಕೊಡುತ್ತದೆ. ‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’ ಎನ್ನುವಂತೆ, ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು, ದೇಶಾಭಿಮಾನ ಮೂಡಿಸಲು ಇದು ಅವಕಾಶ ಮಾಡಿಕೊಡುತ್ತದೆ.
ಎಲ್ಲೆಡೆ ಹಸಿರು ಹುಲ್ಲು ಅಲ್ಲಲ್ಲಿ ಇತಿಹಾಸದ ವಿವರಣೆ ನೀಡುವ ಸ್ತಂಭಗಳಿದ್ದು ಆಕರ್ಷಕವಾಗಿದೆ. ಒಳ ಹೋದಂತೆ ಮನ ಸೆಳೆದದ್ದು ನಿರಂತರ ಬುಗುರಿಯಂತೆ ತಿರುಗುವ ಫೈಬರಿನ ಒಂದು ಗ್ಲೋಬ್. ಪ್ರಪಂಚದ ನಕ್ಷೆಯನ್ನು ಹೊಂದಿರುವ ಈ ಗ್ಲೋಬನ್ನು ನಿರಂತರ ಹರಿಯುವ ನೀರಿನ ಸಹಾಯದಿಂದ ತಿರುಗುವಂತೆ ಮಾಡಿರುವ ತಂತ್ರಜ್ಞಾನ ಮರುಳುಮಾಡಿತು. ನಾನು ಭಾರತ ನಕ್ಷೆ ಬರುವ ಸಮಯಕ್ಕೆ ಸರಿಯಾಗುವಂತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದೆ. ಒಳಹೋದರೆ ವೃತ್ತಾಕಾರದಲ್ಲಿ ನಿಲ್ಲಿಸಿರುವ ಸ್ತಂಭಗಳು, ಕೆಂಪು ನೆಲಹಾಸಿನ ಕಲ್ಲುಗಳು,ನಡುವೆ ನಕ್ಷತ್ರಗಳು ಪಾರ್ಕಿಗೆ ವಿಶಿಷ್ಟವಾದ ಮೆರುಗು ನೀಡಿದ್ದವು.

ಪಾರ್ಕಿಗೆ ಹೊಂದಿಕೊಂಡಂತೆ ಟೆನಿಸಿ ರಾಜ್ಯದ ಆಡಳಿತ ಕಟ್ಟಡ ವಿಹಂಗಮವಾಗಿದೆ. ಸುತ್ತ ಹಸಿರು ಹುಲ್ಲು, ಇಕ್ಕೆಲಗಳಲ್ಲಿ ಮೆಟ್ಟಿಲುಗಳಿದ್ದು ಕಟ್ಟಡ ಪುರಾತನವಾಗಿದ್ದು ಎತ್ತರದ ಸ್ಥಾನದಲ್ಲಿದೆ.
ಈ ಪಾರ್ಕಿನೊಳಗೆ ವಿಶಾಲವಾದ ರಾಜ್ಯದ ಗ್ರಂಥಾಲಯವೂ ಇದೆ.. ಒಳಗೆ ಹೋಗದೆ ಹಾಗೆಯೇ ಹೊರಗೆ ಸುತ್ತಾಡಿ ಬಂದೆ. ಅಲ್ಲೇ ಒಂದೆಡೆ ಅಸ್ಥಿ ಪಂಜರವನ್ನು ಪಿಯಾನೋ ನುಡಿಸಲು ಕೂರಿಸಿದ್ದರು. ಅದು ನನ್ನನ್ನು ನೋಡಿ ನಕ್ಕಂತೆ ಭಾಸವಾಯಿತು.
ಪಾರ್ಕ್ ಎಂದಮೇಲೆ ಅಲ್ಲಿನ ಜನ ಚಕ್ರದ ಗಾಡಿಯಲ್ಲಿ ಮಕ್ಕಳನ್ನು ಇಲ್ಲವೆ ನಾಯಿ ಕುತ್ತಿಗೆ ಸರಪಳಿ ಬಿಗಿದು ನಾಯಿಯನ್ನು ಕರೆದುಕೊಂಡು ಬರುವುದು ಇಲ್ಲಿ ಸಾಮಾನ್ಯ. ಒಬ್ಬಳಂತು ಕಡ್ಡಿಯಂತೆ ಇರುವವಳು ಎರಡು ಎತ್ತರದ ನಾಯಿಗಳನ್ನು ಹಿಡಿದುಕೊಂಡು ಬಂದಿದ್ದು ಕಂಡು ಮಗ ಹೌಹಾರಿದ. ” ಅಮ್ಮಾ.. ಮನೆಗೆ ಹೋಗೋಣ್ವಾ?” ಎಂದ. ನಮ್ಮವರಿಗೆ ” ಓ ನಾಯಿ ಪ್ರಿಯ, ಪಾರ್ಕನ್ನ ಆ ಎರಡು ನಾಯಿಗಳಿಗೆ ಬಿಟ್ಟು ಹೋಗೋಣ ಅಂತಿದ್ದಾನೆ. ನಡಿ,ನಡಿ” ಎಂದು ಮಗನ ಕಾಲೆಳೆದರು. “ಅವೆರಡನ್ನು ಬ್ಯಾಲೆನ್ಸ್ ಮಾಡಕ್ಕಾಗುತ್ತಾ ಆಕೆಗೆ.. ಕೈ ಬಿಡಿಸಿಕೊಂಡು ಓಡಾಡಿದ್ರೆ, ನಮ್ಮ ಹತ್ರ ಬಂದ್ರ? ಏನು ಮಾಡೋದು? ರಿಸ್ಕ್ ಯಾಕೆ..ಅಂತ” ಎಂದು ತನ್ನ ಭಯವನ್ನು ಹೊರಹಾಕಿದ.
ನಾಲ್ಕು ಕಿ.ಮೀ ಗೂ ದಾಟಿ ಓಡಾಡಿದೆವೆಂದು ವಾಚು ತೋರಿಸುತ್ತಿತ್ತು. ಬೆಳಕು ಮಬ್ಬಾಗುತ್ತಿದ್ದಂತೆ ಅಲ್ಲಿನ ಸ್ಮಾರಕಗಳ ನೋಟ ಮತ್ತಷ್ಟು ಸೊಬಗೆನಿಸಿತು. ಮತ್ತೊಂದು ಸುತ್ತು ಹಾಕಿ ಹೊರಟೆವು. ಮಗ ತನ್ನ ಆಫೀಸಿನ ಸಮೀಪದ ರೆಸ್ಟೋರೆಂಟಿಗೆ ಕರೆದೊಯ್ದ. ಮಗನ ಒತ್ತಾಯಕ್ಕೆ ಮಣಿದು ಚಾಕೋಬೆಲ್ ತಿಂದು, ಕಿತ್ತಳೆ ಹಣ್ಣಿನ ರಸ ಸೇವಿಸಿ ಮನೆಯ ದಾರಿ ಹಿಡಿದೆವು.
ಮುಂದುವರೆಯುವುದು…
ಹಿಂದಿನ ಸಂಚಿಕೆಗಳು :
- ಅ…ಅ…ಅಮೆರಿಕಾ ನೋಡಾ (ಭಾಗ-೧)
- ಅ…ಅ…ಅಮೆರಿಕಾ ನೋಡಾ (ಭಾಗ-೨)
- ಅ…ಅ…ಅಮೆರಿಕಾ ನೋಡಾ (ಭಾಗ-೩)
- ಅ…ಅ…ಅಮೆರಿಕಾ ನೋಡಾ (ಭಾಗ-೪)
- ಅ…ಅ…ಅಮೆರಿಕಾ ನೋಡಾ (ಭಾಗ-೫)
- ಅ…ಅ…ಅಮೆರಿಕಾ ನೋಡಾ (ಭಾಗ-೬)
- ಅ…ಅ…ಅಮೆರಿಕಾ ನೋಡಾ (ಭಾಗ-೭)
- ಕಮಲಾಕ್ಷಿ ಸಿ ಆರ್
