ಅ…ಅ…ಅಮೆರಿಕಾ ನೋಡಾ (ಭಾಗ-೯)

ಅಮೆರಿಕನ್ ಯುವಕನೊಬ್ಬ ನಾವು ಕನ್ನಡಿಗರು ಎಂದರಿವಾಗಿ ತಾನೆ ಪರಿಚಯ ಮಾಡಿಕೊಂಡ. ” ನೀವು ಕನ್ನಡದವರಾ? ಬೆಂಗಳೂರಿನಲ್ಲಿ ನಾನು ನಾಲ್ಕು ವರ್ಷವಿದ್ದೆ. ನೀವು ಮಾತಾಡುವಾಗ ನೋಡಿ ಖುಷಿಯಾಯ್ತು. ಬೆಂಗಳೂರು ಜನ ತುಂಬಾ ಉದಾರಿಗಳು, ಸೌಜನ್ಯವಂತರು” ಎಂದ. ಕಮಲಾಕ್ಷಿ ಸಿ ಆರ್ ಅವರ ಅಮೇರಿಕಾದ ಪ್ರವಾಸ ಕಥನವನ್ನು ತಪ್ಪದೆ ಮುಂದೆ ಓದಿ…

ಸಂಗೀತವನ್ನೇ ಉಸಿರಾಡುವ ನಗರ- ನಾಶ್ವೆಲ್

ವಿಶ್ವ ಸಂಗೀತ ದಿನ. ಅಮೆರಾಕದಲ್ಲಿ ಸಂಗೀತ ನಗರವೆಂದು ಕರಡಯಲ್ಪಡುವ, ಸಂಗೀತ ಪ್ರಿಯರು ವೀಕ್ಷಿಸಲು ಇಷ್ಟಪಡುವ ನಗರದಲ್ಲಿ ಮೂರುವಾರಗಳಿಗೂ ಹೆಚ್ಚು ದಿನವಿದ್ದೆ.

ಒಂದು ವಾರಾಂತ್ಯ ವಿಪರೀತ ಮಳೆ, ಹೊರಗೆ ಹೋಗುವುದು ಬೇಡ ಎಂದುಕೊಂಡೆವು. ಸಂಜೆಯ ಮೇಲೆ ಮಳೆ ವಿರಾಮ ಕೊಟ್ಟಿತು. ಮಕ್ಕಳು ‘ಹಾನೆಸ್ಟ್’ ಎಂಬ ಭಾರತೀಯ ಸಸ್ಯಾಹಾರಿ ರೆಸ್ಟೋರೆಂಟಿಗೆ ಹೋಗೋಣ ಆಮೇಲೆ ಡೌನ್‌ಟೌನ್‌ಗೆ ಹೋಗಿ ಬರೋಣ, ಇವತ್ತು ಪ್ಯಾಂಟಿನಲ್ಲೇ ಬರಬೇಕಮ್ಮ ಎಂದು ಹಠಹಿಡಿದಾಗ ಒಪ್ಪಲೇಬೇಕಾಯೊತು.

ಪ್ರಶಾಂತವಾದ ವಾತಾವರಣ, ಹಿತವಾದ ಭಾರತೀಯ ಸಂಗೀತ, ವಿಶಾಲವಾದ ರೆಸ್ಟೋರೆಂಟ್ ಪ್ರವೇಶಿಸುತ್ತಿದ್ದಂತೆ ನಮ್ಮ ಊರಿನಲ್ಲಿ ಇದ್ದೇವೆ ಎಂಬ ಭಾವ ಮೂಡಿಸಿತು. 1975ರಲ್ಲಿ ಅಹ್ಮದಾಬಾದ್ ಮೂಲದವರು ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಪ್ರಾರಂಭಿಸಿದ ಈ ರೆಸ್ಟೋರೆಂಟ್ ಪ್ರಸ್ತುತ ಅಮೆರಿಕಾ, ಥೈಲ್ಯಾಂಡ್, ಆಸ್ಟ್ರೇಲಿಯಾ, ಕೆನಡಾ ದೇಶಗಳಲ್ಲಿ ತನ್ನ ಫ್ರಾಂಚೈಸಿಗಳನ್ನು ಹೊಂದಿದೆಯಂತೆ.

ಹಿಂದಿಯಲ್ಲಿ ಸೌಜನ್ಯಯುತವಾಗಿ ಮಾತಾಡಿಸಿ, ಆರ್ಡರ್ ಪಡೆದರು. ಮೊದಲು ತಂದಿತ್ತ ಮ್ಯಾಂಚೋಸ್ ಸೂಪ್ ಬಾಯಿಗಿಡುತ್ತಿದ್ದಂತೆ, ನಾಲಿಗೆಯಲ್ಲಿದ್ದ ರುಚಿಯ ಗ್ರಂಥಿಗಳು ಭುಗಿಲೆದೆದ್ದವು. ಸ್ಟಾರ್ಟರ್ಸ್, ರೋಟಿ, ಕರ್ರಿಗಳು, ಫ್ರೈಡ್‌ರೈಸ್ ಎಲ್ಲವೂ ಸ್ವಾದಿಷ್ಟವಾಗಿದ್ದವು. ಅಪ್ಪಟ ದೇಶೀ ರುಚಿ ಹಾಗೂ ಶುಚಿಯಾದ ಊಟ ಮಾಡಿ ಮನಸ್ಸು ಉಲ್ಲಸಿತವಾಯಿತು.
ಅಲ್ಲಿಂದ ಹೊರಟಿದ್ದೇ ಡೌನ್‌ಟೌನ್ ಕಡೆಗೆ. ನಾಶ್ವೆಲ್ ಪ್ರಕ್ಷಣೀಯ ಸ್ಥಳಗಳು ಎಂದು ಅರಸಿದರೆ ಮೊದಲು ತೋರಿಸುವ ತಾಣ ಡೌನ್ ಟೌನ್,ಅದರಲ್ಲೂ ವಾರಂತ್ಯಗಳಲ್ಲಿ ವೀಕ್ಷಿಸಿ ಎಂದು. ಉಳಿದಂತೆ ಕಛೇರಿ, ಶಾಪಿಂಗ್ ಹೊರತು ಪಡಿಸಿ ಅಷ್ಟೇನೂ ವಿಶೇಷ ಎನಿಸಿದ ನಾಶ್ವೆಲ್ಲಿನ ಡೌನ್‌ಟೌನ್, ವಾರಂತ್ಯದ ದಿನಗಳಲ್ಲಿ ರಂಗು ತಳೆದು ಜಗಮಗಿಸುತ್ತದೆ. ಡೌನ್‌ಟೌನ್ ಸುತ್ತಲಿನ ರಸ್ತೆಗಳು, ರೆಸ್ಟೋರೆಂಟುಗಳು, ಸಂಗೀತ, ನೃತ್ಯಗಳಿಂದ ಕಳೆಕಟ್ಟುತ್ತದೆ. ಸಣ್ಣ, ದೊಡ್ಡ ಎಂಬ ಭೇದವಿಲ್ಲದೆ ಎಲ್ಲಡೆ ಸಂಗೀತ ಝೆಂಕರಿಸುತ್ತದೆ.

ರಾತ್ರಿ ಎಂಟರ ಗಂಟೆಯ ನಂತರವೇ ಈ ತಾಣ ಕಳೆಕಟ್ಟುತ್ತದೆ. ಎತ್ತರದ ಹಾಗೂ ಮೊಣಕಾಲಿನವರೆಗಿನ ಬೂಟು, ತಲೆಗೆ ಹ್ಯಾಟು ಹಾಕಿಕೊಂಡು ಯಾವುದೋ ಸಮಾರಂಭಕ್ಕೆ ಸಿದ್ಧವಾಗುವಂತೆ ಸಿದ್ಧರಾಗಿರುತ್ತಾರೆ. ದೂರದಲ್ಲೆಲ್ಲೋ ಕಾರು ನಿಲ್ಲಿಸಿ ರಸ್ತೆಗಳಲ್ಲಿ ನಡೆದು ರೆಸ್ಟೋರೆಂಟಿಗೆ ಹೋಗುವವರನ್ನು ಕಂಡು ಬೆರಗಾಗುವಂತೆ ಮಾಡಿತು. ಆ ಎರಡು ದಿನಗಳಲ್ಲಿ ಲೈವ್ ಕಛೇರಿ ನಡೆಸುವವರ ಸಂಖ್ಯೆಯೇ ಅದೆಷ್ಟು ಸಾವಿರ ಆಗುವುದೋ ಎನಿಸಿತು. ರಸ್ತೆಯನ್ನು ಸಂಪೂರ್ಣವಾಗಿ ಇದಕ್ಕಾಗಿ ಮೀಸಲಿಟ್ಟು ವಾಹನಗಳು ವಾರಂತ್ಯ ಬರದಂತೆ ನಿಷೇಧ ಹಾಕಲಾಗಿರುತ್ತದೆ.

ಒಂದೊಂದು ಕಟ್ಟಡದಲ್ಲಿಯೂ ಹಲವಾರು ಸಂಗೀತ ಕಾರ್ಯಕ್ರಮಗಳು. ಅದನ್ನು ಕೇಳುತ್ತ, ಲಘುವಾಗಿ ಮದಿರೆಯ ಲೋಟವನ್ನು ಕೈಯಲ್ಲಿ ಹಿಡಿದು ನರ್ತಿಸಲು ಮುಗಿಬೀಳುವರು. ಈ ಪಬ್ಬು, ಬಾರ್, ರೆಸ್ಟೋರೆಂಟ್‌ಗಳಿಗೆ ಪ್ರವೇಶ ಉಚಿತವೇ.. ಹಾಗೆಂದು ಎಲ್ಲರನ್ನೂ ಬಿಡುವುದಿಲ್ಲ. ಹದಿನೆಂಟು ವರ್ಷ ದಾಟಿದ್ದು, ತಮ್ಮ ಅಧಿಕೃತ ಪರಿಚಯವನ್ನು ತೋರಿಸಿದವರಿಗೆ ಮಾತ್ರ ಪ್ರವೇಶ. ಮಕ್ಕಳು ಅಲ್ಲಿ ಪಡೆದಿದ್ದ ಪರಿಚಯವನ್ನು ತೋರಿಸಿ, ಪೋಷಕರಿಗೆ ತೋರಿಸಿಕೊಂಡು ಹೋಗಲು ಬಂದಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟಾಗ, ರೆಸ್ಟೋರೆಂಟಿಗೆ ಪ್ರವೇಶಿಸಲು ಅನುಮತಿಸಿದರು.

ಅಬ್ಬಾ… ಸಂಗೀತ ಕಛೇರಿಯನ್ನು ಆಸ್ವಾದಿಸಲು ಸುತ್ತಮುತ್ತಿನ ರಾಜ್ಯದ ಸಂಗೀತಪ್ರಿಯರು ಅಲ್ಲಿಗೆ ಬಂದಿದ್ದರು. ಸಿನಿಮಾದಲ್ಲಷ್ಟೇ ಮಬ್ಬು ಬೆಳಕಿನಲ್ಲಿ ಆ ದೃಶ್ಯಗಳನ್ನು ನೋಡಿದ್ದೆ.. ಅಂದು ಕಣ್ಣಾರೆ ಕಂಡಂತಾಯಿತು. ಅದರಲ್ಲೊಬ್ಬ ಅಮೆರಿಕನ್ ಯುವಕ, ನಾವು ಕನ್ನಡಿಗರು ಎಂದರಿವಾಗಿ ತಾನೆ ಪರಿಚಯ ಮಾಡಿಕೊಂಡ. ” ನೀವು ಕನ್ನಡದವರಾ? ಬೆಂಗಳೂರಿನಲ್ಲಿ ನಾನು ನಾಲ್ಕು ವರ್ಷವಿದ್ದೆ. ನೀವು ಮಾತಾಡುವಾಗ ನೋಡಿ ಖುಷಿಯಾಯ್ತು. ಬೆಂಗಳೂರು ಜನ ತುಂಬಾ ಉದಾರಿಗಳು, ಸೌಜನ್ಯವಂತರು” ಎಂದ. ನಮ್ಮೂರಿನ ಬಗೆಗಿನ ಮಾತುಗಳು ಖುಷಿನೀಡಿದವು. ದೊಡ್ಡ ಮಗನೊಡನೆ ಹರಟಿ, ತನ್ನ ಫೋನ್ ನಂಬರ್ ಕೊಟ್ಟು ಅವನ ನಂಬರ್ ಪಡೆದ. ಅಲ್ಲಿಂದ ಹೊರಬಂದು ರಸ್ತೆಯುದ್ದಕ್ಕೂ ಓಡಾಡಿದೆವು.

ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ ಎನ್ನುವಂತಿತ್ತು. ನಾಶ್ವೆಲ್‌ನ್ನು ಜಾನಪದ ಸಂಗೀತದ ಹೃದಯ ಎಂದೂ ಹೇಳುವುದು ಅತಿಶಯೋಕ್ತಿಯಲ್ಲ ಎನಿಸಿತು.1700, 1800ಕ್ಕೂ ಮೊದಲೇ ಸ್ಕಾಟಿಶ್ ಹಾಗೂ ಐರಿಶ್ ಜಾನಪದ ಸಂಗೀತದಿಂದ ಪ್ರಭಾವಿತವಾಗಿದ್ದಂತೆ. ಅಲ್ಲಿ ಸಂಗೀತಕ್ಕೆ ಸಂಬಂಧಿಸಿದ ಮ್ಯೂಸಿಯಂಗಳಿವೆ, ಸಭಾಂಗಣಗಳಿವೆ. ಗಾಯಕರು ಹಾಗೂ ವಾದ್ಯ ನುಡಿಸುವವರು ಅಲ್ಲಿ ಪ್ರದರ್ಶನ ನೀಡಲು ಅವಕಾಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರಂತೆ. ಈ ರಾಜ್ಯಕ್ಕೆ ಸಾಂಸ್ಕೃತಿಕ ಹಾಗೂ ಆರ್ಥಿಕ ಹೆಗ್ಗುರುತಾಗಿರುವುದು ಸಂಗೀತವೇ.

ಚಕ್ರಗಳ ಮೇಲೆ ಸಂಗೀತ( music on wheels) ಆಸ್ವಾದಿಸುವವರು ನಗರ ಸಂಚಾರ ಮಾಡುತ್ತ ತಮ್ಮದೇ ಗುಂಪು ಮಾಡಿಕೊಂಡು ವಾಹನ ಮುಂಗಡ ಬುಕ್ಕಿಂಗ್ ಮಾಡಿಕೊಂಡಿರುತ್ತಾರೆ. ಸಂಗೀತ ಕೇಳುತ್ತ, ನರ್ತಿಸುತ್ತ ದಾರಿಯಲ್ಲಿ ಸಿಕ್ಕವರಿಗೆ ಕೈ ಬೀಸುತ್ತ ಪರಿಚಿತರಂತೆ ನಕ್ಕು ಮನಸೆಳೆಯುತ್ತಾರೆ. ಅವಿವಾಹಿತರ ಪಾರ್ಟಿ ಮಾಡುವವರು ತಮ್ಮ ಸ್ನೇಹಿತರಿಗಾಗಿ ತೆರೆದ ವಾಹನಗಳಲ್ಲಿ ಪಾರ್ಟಿ ಮಾಡುವರು. Pedal bar ಎನ್ನುವ ವಾಹನದಲ್ಲಿ ಪೆಡಲ್ ಮಾಡುತ್ತ ನಗರ ಸಂಚಾರ ಮಾಡುವ ವ್ಯವಸ್ಥೆಯೂ ಇದೆ.

ಜಗಮಗಿಸುವ ಡೌನ್‌ಟೌನ್‌, ಅಲ್ಲಿನ ಸಂಗೀತಜ್ಞಾರು ಮತ್ತು ಅದನ್ನು ಆಸ್ವಾದಿಸುವವರು ಎಲ್ಲವೂ ವಿಶೇಷವೇ ಎನಿಸಿತು. ಒಬ್ಬರಿಗೊಬ್ಬರು ಪೂರಕ, ಪ್ರೇರಕ. ಸಮಗ್ರ ಚಿತ್ರಣಗಳೇ ನಾಶ್ವೆಲ್ ಎನಿಸುವಷ್ಟು ಮಿಳಿತವಾಗಿವೆ. ರಸ್ತೆಯಲ್ಲಿ ಒಡಾಡಿ, ಕೊನೆಯಲ್ಲಿ ಐಸ್ ಕ್ರೀಂ ತಿಂದು ಮನೆಗೆ ಹಿಂದಿರುಗಿದೆವು.

ಮುಂದುವರೆಯುವುದು…

ಹಿಂದಿನ ಸಂಚಿಕೆಗಳು :


  • ಕಮಲಾಕ್ಷಿ ಸಿ ಆರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW