ಅಂಗವೈಕಲ್ಯ ಮನಸ್ಸಿಗೆ ಹೊರತು ದೇಹಕ್ಕಲ್ಲ – ಅರುಣಿಮಾ ಸಿನ್ಹಾ

ಎರಡು ಕಾಲುಗಳು ಗಟ್ಟಿಯಿದ್ದಾಗಲೂ ಮೌಂಟ್ ಎವರೆಸ್ಟ್ ನತ್ತ ನೋಡಲು ಧೈರ್ಯ ಮಾಡುವುದಿಲ್ಲ. ಇನ್ನು ಒಂದೇ ಕಾಲು ಇದ್ದರಂತೂ ಮೌಂಟ್ ಎವರೆಸ್ಟ್ ನತ್ತ ನೋಡುವುದಿರಲಿ ಅದರ ಬಗ್ಗೆ ಆಲೋಚನೆಯೂ ಕೂಡ ಮಾಡುವುದಿಲ್ಲ. ಆದರೆ ಆಕೆ ಎಲ್ಲರಿಗಿಂತ ಭಿನ್ನವಾಗಿದ್ದಳು.. ಆಕೆಯ ಯೋಚನೆಗಳು ಎಲ್ಲರಿಗಿಂತ ವಿಭಿನ್ನವಾಗಿತ್ತು. ಆಕೆಯ ಸಾಧನೆಯ ಯಶೋಗಾಥೆಯನ್ನು ಕೇಳುವಾಗ ಮೈ ರೋಮಾಚನಗೊಳ್ಳುತ್ತದೆ. ಆಕೆ ಎಂದರೆ ಯಾರು? ಅವಳ ಕತೆ ಏನು? ಎಂಬುದನ್ನು ನಾನು ಹೇಳುತ್ತೇನೆ.

ಏಪ್ರಿಲ್  ೧೦, ೨೦೧೧ ಅವಳ ಬದುಕಿನ ಚಿತ್ರಣವನ್ನೇ ಪಲ್ಲಟ ಮಾಡಿದಂತಹ ಘಳಿಗೆಯದು. ಆಕೆ ಲಕ್ನೋಯಿಂದ ದೆಹಲಿಗೆ ರೈಲಿನಲ್ಲಿ ಸಾಮಾನ್ಯರ ಬೋಗಿಯಲ್ಲಿ ಹೊರಟಿದ್ದಳು. ಕಿಕ್ಕಿರಿದ ಜನರಿದ್ದ ಬೋಗಿಯದು. ಆ ಜನರ ಮಧ್ಯೆ ಆಕೆಯು ಒಬ್ಬಳಾಗಿದ್ದಳು. ಸುಂದರ ದಿನಗಳು ಆಕೆಗಾಗಿ ಕಾದಿದ್ದವು. ತಾನೊಂದು ಬಗೆದರೆ, ದೇವನೊಂದು ಬಗೆಯುವನು ಎನ್ನುವಂತೆ  ವಿಧಿಯಾಟವೇ ಬೇರೆಯಾಗಿತ್ತು. ಹಠಾತ್ತಾಗಿ ದರೋಡೆಕೋರರು ಆಕೆ ಕೂತಿದ್ದ ಬೋಗಿಯೊಳಗೆ ನುಗ್ಗಿ ಕೈಗೆ ಸಿಕ್ಕದ್ದನ್ನು ಎಲ್ಲರಿಂದ ಕಿತ್ತುಕೊಂಡು ಆಕೆಯ ಕೊರಳಿನಲ್ಲಿದ್ದ ಬಂಗಾರದ ಚೈನ್ ಗೆ ಕೈ ಹಾಕಿದರು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಆಕೆ ತನ್ನ ಕತ್ತಿನಲ್ಲಿದ್ದ ಬಂಗಾರದ ಚೈನ್ ನ್ನು ಅಷ್ಟು ಸುಲಭವಾಗಿ ಆ ದರೋಡೆಕೋರರ ಪಾಲಾಗಲು ಬಿಡಲಿಲ್ಲ. ಬದಲಾಗಿ ಆಕೆ ಅವರೊಡನೆ ಸೆಣಸಾಟಕ್ಕೆ ನಿಂತಳು. ಆ ದರೋಡೆಕೋರರು ಒಬ್ಬರೇ ಆಗಿದ್ದರೆ ಬಹುಶಃ ಆಕೆ ಅವನನ್ನು ಸದೆಬಡಿಯುತ್ತಿದ್ದಳೇನೋ, ಆದರೆ ಆ ದರೋಡೆಕೋರರು ನಾಲ್ಕು ಮಂದಿಯಾಗಿದ್ದರು. ಯಾವಾಗ ಆಕೆ ಚೈನ್ ಗಾಗಿ ತೀವ್ರ ವಿರೋಧ ಪಡಿಸಿದಳೋ ಆ ನಾಲ್ಕು ಜನ ದರೋಡೆಕೋರರು ಸೇರಿ ಆಕೆಯ ಚೈನ್ ನ್ನು ಕಿತ್ತುಕೊಂಡು ಆಕೆಯನ್ನು ೮೦ಕಿ.ಮೀ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಎತ್ತಿ ಬಿಸಾಕಿದರು. ಈ ಘಟನೆ ನಡೆಯುವಾಗ ಬೋಗಿಯಲ್ಲಿದ್ದ ಜನ ಮೂಕಸಾಕ್ಷಿಯಾಗಿ ನಿಂತು ನೋಡಿದರೆ ವಿನಃ ಆಕೆಯ ಸಹಾಯಕ್ಕೆ ಒಬ್ಬರೂ ಬರಲಿಲ್ಲ. ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಬಿದ್ದ ಪರಿಣಾಮ ಆಕೆಯ ಬಲಗಾಲಿನ ಮೂಳೆಗಳು ಮುರಿದು ಹೋದವು. ಆ ನೋವನ್ನು ಆಕೆ ಲೆಕ್ಕಿಸದೆ ಎದ್ದು ನಿಲ್ಲವ ಪ್ರಯತ್ನಿಸುತ್ತಿರುವಾಗಲೇ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಇನ್ನೊಂದು ರೈಲು ಆಕೆಯ ಎಡಗಾಲಿನ ಮೇಲೆ ಹರಿದು ಹೋಯಿತು. ಎಡಗಾಲು ತಾನು ಧರಿಸಿದ ಜೀನ್ಸ್ ಪ್ಯಾಂಟ್ ನೊಳಗೆ ತುಂಡಾಗಿ ನೇತಾಡುತ್ತಿತ್ತು. ಮತ್ತು ರಕ್ತ ಚಿಮ್ಮಿ ಚಿಮ್ಮಿ ಹರಿಯ ತೊಡಗಿತು. ಆ ಸಮಯದಲ್ಲಿ ಅವಳ ಸುತ್ತಲೂ ಕತ್ತಲು,ರೈಲಿನ ಕಂಬಿಗಳು ಬಿಟ್ಟರೆ ಆಕೆಯ ಬಳಿ ಯಾರೂ ಇರಲಿಲ್ಲ. ಆ ಇಡೀ ರಾತ್ರಿ ರಕ್ತದ ಮಡುವಿನಲ್ಲಿ ನರಳುತ್ತ ಬಿದ್ದಿದ್ದಳು. ಬೆಳಗ್ಗೆ ಐದು ಗಂಟೆಯ ಸುಮಾರಿಗೆ ದಾರಿ ಹೋಕನೊಬ್ಬ ಆಕೆಯ ಹೃದಯ ವಿಧ್ರವಾಕ ಸ್ಥಿತಿಯನ್ನು ನೋಡಿ ಭಯದಿಂದ ಜನರನ್ನು ಸೇರಿಸಿ ಅವಳನ್ನು ಅಲ್ಲಿಂದ ಆಸ್ಪತ್ರೆಗೆ ಸೇರಿಸಿದ.

arunima5

ಆಕೆ ಇಡೀ ರಾತ್ರಿ ಅನುಭವಿಸಿದ ನರಕಯಾತನೆ ಊಹೆಗೆ ಮೀರಿದ್ದಾಗಿತ್ತು

ಅವಳ ಸ್ಥಿತಿಯನ್ನು ಕಣ್ಣಾರೆ ಕಂಡವರ ಕಣ್ಣುಗಳಲ್ಲಿ ನೀರಿನ ಕೋಡಿಯೇ ಹರಿಯಿತು.ಆಕೆಯ ಎಡಗಾಲು ಸಂಪೂರ್ಣವಾಗಿ ಕತ್ತರಿಸಿ ಹೋಗಿತ್ತು. ಬಲಗಾಲಿಗೆ ರಾಡ್ ಜೋಡಿಸಲಾಯಿತು. ಬೆನ್ನುಹುರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಹೀಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಧ್ಯೆ ನಾಲ್ಕು ತಿಂಗಳು ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸಿದಳು. ಹುಟ್ಟುತ್ತಲೇ ಅಂಗವಿಕಲತೆ ಬಾಧಿಸಿದರೆ ಜೀವನಕ್ಕೆ ಹೇಗೋ ಒಗ್ಗಿಕೊಳ್ಳಬಹುದು. ಆದರೆ ಚೆನ್ನಾಗಿ ಸಾಗುತ್ತಿದ್ದ ಬಾಳಿನಲ್ಲಿ ಹೀಗೊಂದು ದುರ್ಘಟನೆ ಸಂಭವಿಸಿದಾಗ ಅದಕ್ಕೆ ಒಗ್ಗಿಕೊಳ್ಳುವುದು ಬಲು ಕಷ್ಟ ಮತ್ತು ಅದು ದೊಡ್ಡ ಸವಾಲು ಕೂಡಾ. ಆಕೆಗೂ ಅದೇ ಆಯಿತು. ಆಸ್ಪತ್ರೆಯಿಂದ ಹೊರಕ್ಕೆ ಬಂದಾಗ ಆಕೆ ಕಣ್ಣ ಮುಂದಿದ್ದದ್ದು ಗಾಲಿ ಖುರ್ಚಿ, ಅವಳ ಸುತ್ತಲಿನ ಜನರ ಅನುಕಂಪದ ಮಾತುಗಳು. ಆದರೆ ಒಂದು ಬಂಗಾರದ ಚೈನ್ ಗಾಗಿ ತನ್ನ ಜೀವದ ಹಂಗು ತೊರೆದು ಹೋರಾಡಿದ ಆಕೆ, ಗಾಲಿ ಖುರ್ಚಿಯಲ್ಲಿ ಒಂದೇ ಕಡೆ ಕೂಡುವ ಹೆಣ್ಣಾಗಿರಲಿಲ್ಲ. ಬದಲಾಗಿ ಕೃತಕ ಕಾಲುಗಳ ಮೇಲೆ ಧೈರ್ಯವಾಗಿ ಮತ್ತೆ ಎದ್ದು ನಿಂತಳು. ಆ ದಿಟ್ಟ ಮಹಿಳೆಯ ಹೆಸರೇ ಅರುಣಿಮಾ ಸಿನ್ಹಾ.

arunima1

ಭಾರತದ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿ

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಕೆ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕಿದ್ದ ವಾಲಿಬಾಲ್ ನ ಧೃವತಾರೆಯಾಗಿದ್ದಳು. ಇನ್ನು ಕಾಲುಗಳೇ ಹೋದ ಮೇಲೆ ಆಕೆ ವಾಲಿ ಬಾಲ್ ಆಡುವುದು ದೂರದ ಮಾತು. ಭವಿಷ್ಯತ್ತಿನಲ್ಲಿ ತನ್ನ ಜೀವನವನ್ನು ಹೇಗೆ ಸಂಭಾಳಿಸುತ್ತಾಳೆ ಎನ್ನುವ ಚಿಂತೆ ಮನೆಯರ ನಿದ್ದೆಗೆಡಿಸಿತ್ತು. ಆದರೆ ಅರುಣಿಮಾ ಮಾತ್ರ ತನ್ನ ಮುಂದಿನ ಗುರಿಯ ಬಗ್ಗೆ ಸ್ಪಷ್ಠವಾಗಿದ್ದಳು. ಆಕೆ ಅದೃಷ್ಟವನ್ನಾಗಲಿ ಅಥವಾ ದುರಾದೃಷ್ಠವನ್ನಾಗಲಿ ಎಂದು ಕೂಡ ನಂಬಿದವಳಲ್ಲ. ಬದಲಾಗಿ ನಂಬಿದ್ದು ತನ್ನ ಮುಂದಿದ್ದ ಗುರಿ ಮತ್ತು ಅದಕ್ಕೆ ಬೇಕಾಗುವ ಕಠಿಣ ಪರಿಶ್ರಮ. ಹೀಗೆ ಗುರಿಯನ್ನು ಬೇಟೆಯಾಡುತ್ತ ಹೊರಟ ಆಕೆಯಲ್ಲಿ ಮೊಳಕೆಯೊಡೆದದ್ದು ಪರ್ವತಾರೋಹಿಯಾಗಬೇಕೆನ್ನುವ ಹಂಬಲ. ಅದರಲ್ಲೂ ಮೌಂಟ್ ಎವರೆಸ್ಟ್ ಶಿಖರವನ್ನು ತಾನು ಹತ್ತಬೇಕು. ಮತ್ತು ನನ್ನ ದೇಶದ ಧ್ವಜವನ್ನು ಎಲ್ಲರಗಿಂತ ಎತ್ತರದಲ್ಲಿ ತಾನು ಹಾರಿಸಬೇಕು ಎನ್ನುವ ಬೃಹತ ಆಸೆ ಆಕೆಯಲ್ಲಿ ಹುಟ್ಟಿಕೊಂಡಿತು.

ಅರುಣಿಮಾ ತನ್ನ ಆಸೆಯನ್ನು ತನ್ನ ಸುತ್ತಮುತ್ತಲಿನ ಜನರ ಮುಂದೆ ಮೊದಲು ಹೇಳಿಕೊಂಡಾಗ ಅವಳ ಕಾಲುಗಳ ಜೊತೆ ಆಕೆಯ ಬುದ್ದಿಯು ಹೋಗಿದೆ ಎಂದು ಅಪಹಾಸ್ಯ ಮಾಡಿದರು. ಆದರೆ ಅವುಗಳಿಗೆ ಕ್ಯಾರೇ ಅನ್ನದೆ ಆಕೆ ತನ್ನ ಆಸೆಗಳ ಬೆನ್ನಟ್ಟಿ ಹೊರಟಳು. ಉತ್ತರಕಾಶಿಯಲ್ಲಿನ ಟಾಟಾ ನೆಹರು ಮೌಂಟ್ ಟ್ರೈನಿಂಗ್ ಇನ್ಸ್ಟೂಟ್ ನಲ್ಲಿ ನಾಲ್ಕು ತಿಂಗಳು ತರಬೇತಿಯನ್ನು ಪಡೆದಳು. ಗುರಿ ನಮ್ಮ ಮುಂದೆ ಇರಬೇಕು, ಬೆನ್ನ ಹಿಂದೆ ಗುರುವಿರಬೇಕು ಆಗಲೇ ಸಾಧನೆಯ ಹಾದಿ ಇನ್ನಷ್ಟು ಬಲಿಷ್ಠವಾಗುವುದು. ಹಾಗೆಯೇ ಅರುಣಿಮಾ ಅವರ ಬೆನ್ನ ಹಿಂದೆ ಗುರುವಾಗಿ ನಿಂತದ್ದು, ಮೌಂಟ್ ಎವೆರೆಸ್ಟ್ ನ್ನು ಏರಿದ ಭಾರತೀಯ ಪ್ರಪ್ರಥಮ ಮಹಿಳೆಯಾದ ಬಂಚೇಂದ್ರಿ ಪಾಲ್. ಅವರ ಮಾರ್ಗದರ್ಶನದಲ್ಲಿ ಅರುಣಿಮಾ ಇನ್ನಷ್ಟು ತರಬೇತಿಯನ್ನು ಪಡೆದು ಮೌಂಟ್ ಎವೆರೆಸ್ಟ್ ಶಿಖರವನ್ನು ಏರಲು ಮಾನಸಿಕವಾಗಿ, ದೈಹಿಕವಾಗಿ ಇನ್ನಷ್ಟು ಬಲಗೊಂಡಳು.

arunima2

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಗಾಧೆ ಮಾತು ಸುಳ್ಳಲ್ಲ

ಮೌಂಟ್ ಎವರೆಸ್ಟ್ ದೂರದಿಂದ ನೋಡಲು ಎಷ್ಟು ಸುಂದರವಾಗಿ ಕಾಣುತ್ತದೆಯೋ, ಅದನ್ನು ಹತ್ತುವಾಗ ಅಷ್ಟೇ ಕಠಿಣಕಾರಿಯಾಗಿತ್ತು ಎಂದು ಅರುಣಿಮಾ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಡುತ್ತಾರೆ. ಮೌಂಟ್ ಎವರೆಸ್ಟ್ ನ್ನು ಏರುವಾಗ ಮೇಲೆ ಮೇಲೆ ಹೋದಂತೆ ಆಮ್ಲಜನಕದ ಕೊರತೆ, ಕೊರೆಯುವ ಚಳಿ, ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದ ವಾತಾವರಣ ಮತ್ತು ಇವುಗಳ ನಡುವೆ ಅವಶ್ಯಕತೆಗೆ ಬೇಕಾದ ವಸ್ತುಗಳ ೩೦ ಕೆಜಿ ಬ್ಯಾಗ್ ನ್ನು ಬೆನ್ನ ಮೇಲೆ ಹಾಕಿಕೊಂಡು ಮೌಂಟ್ ಎವರೆಸ್ಟ್ ಏರುವುದು ಅಷ್ಟು ಸುಲಭವಾಗಿರಲಿಲ್ಲ. ಆ ಸವಾಲುಗಳನ್ನು ಎದುರಿಸಿ ಮೌಂಟ್ ಎವರೆಸ್ಟ್ ನ ತುತ್ತ ತುದಿಗೆ ತಲುಪಿದಾಗ ಅವರ ಬಳಿಯಿದ್ದ ಸಿಲಿಂಡರ್ ನಲ್ಲಿ ಆಮ್ಲಜನಕ ಸ್ವಲ್ಪವೇ ಉಳಿದಿತ್ತು. ಅದನ್ಯಾವುದನ್ನು ಲೆಕ್ಕಿಸದೆ ಭಾರತದ ಧ್ವಜವನ್ನು ಮೌಂಟ್ ಎವರೆಸ್ಟ್ ಶಿಖರದ ಮೇಲೆ ಹಾರಿಸಿಯೇ ಬಿಟ್ಟರು. ಮೌಂಟ್ ಎವರೆಸ್ಟ್ ಶಿಖರದ ಮೇಲೆ ಭಾರತದ ಧ್ವಜವನ್ನು ಹಾರಿಸಿದ ಸಂಭ್ರಮ ಒಂದು ಕಡೆಯಾದರೆ, ಸಿಲಿಂಡರ್ ನಲ್ಲಿದ್ದ ಆಮ್ಲಜನಕ ಯಾವ ಸಮಯದಲ್ಲಾದರೂ ಖಾಲಿಯಾಗುವ ಭಯ ಇನ್ನೊಂದು ಕಡೆಯಾಗಿತ್ತು. ಆದರೆ ಧೃತಿಗೆಡದೆ ಶೆರ್ಪಾ ಹಿಂದೆ ನಡೆದರು. ಮಧ್ಯೆ ಮಧ್ಯೆದಲ್ಲಿ ಮಂಜುಗಡ್ಡೆಯೊಳಗೆ ಮುಖವನ್ನಿಟ್ಟು ಆಮ್ಲಜನಕಕ್ಕಾಗಿ ತಡಕಾಡಿದರು. ಎಲ್ಲಿಯೂ ಸಿಗಲಿಲ್ಲ. ನನ್ನ ಪ್ರಯಾಣ ಇಲ್ಲಿಗೆ ಮುಗಿತು ಎಂದು ಕೈಚೆಲ್ಲಿ ನಿಂತಾಗ ಮಾರ್ಗದ ಮಧ್ಯೆ ಬ್ರಿಟಿಷ್ ಪರ್ವತಾರೋಹಿಯಿಂದ ಆಮ್ಲಜನಕ ಸಿಲಿಂಡರವೊಂದು ಸಿಕ್ಕಿತು. ಮರುಭೂಮಿಯಲ್ಲಿ ನೀರು ಸಿಕ್ಕಷ್ಟೇ ಸಂತೋಷ, ಇನ್ನೇನ್ನು ಎಲ್ಲವೂ ಸರಿ ಹೋಯಿತು ಎಂದು ಮುನ್ನುಗ್ಗುವಾಗ ಮತ್ತೊಂದು ಸಮಸ್ಯೆ ಎದುರಾಯಿತು.

ಆ ಕೊರೆಯುವ ಚಳಿಗೆ ಆಕೆಯ ಕೈಬೆರಳುಗಳು ಸೆಟೆದು ನಿಂತವು ಮತ್ತು ಆಕೆಯ ಕೃತಕ ಕಾಲು ಬಿಚ್ಚತೊಡಗಿತು

ಮಾರ್ಗದ ಮಧ್ಯೆದಲ್ಲಿ ಸತ್ತು ಬಿದ್ದಿದ್ದ ಪರ್ವತಾರೋಹಿಗಳ ಶವಗಳನ್ನು ನೋಡಿ  ಒಂದು ಕ್ಷಣ ಭಯಕ್ಕೆ ಅರುಣಿಮಾಳ ಕಣ್ಣಲ್ಲಿ ಕಣ್ಣೀರು ಉಕ್ಕಿ ಹರಿಯಿತು. ಆದರೆ ಅದು ಅಳುತ್ತ ನಿಲ್ಲುವ ಸಮಯವಾಗಿರಲಿಲ್ಲ. ದಾರಿ ತೋರಿಸುತ್ತಿದ್ದ ಶೆರ್ಪಾ ಒಂದು ವೇಳೆ ಬಿಟ್ಟು ಹೋದರೆ ತನಗೆ ದಾರಿ ತಪ್ಪಿಹೋಗಬಹುದು ಎನ್ನುವ ಆತಂಕ  ಮತ್ತು ನನ್ನ ಸಾಧನೆ ಸಾವಿನಲ್ಲಿ ಮುಚ್ಚಿ ಹೋಗಬಾರದು ಎನ್ನುವ ಹಠ ಆಕೆಯನ್ನು ಆವರಿಸಿದಾಗ ಹರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಂಡಳು. ಸೆಟೆದು ನಿಂತಿದ್ದ ಆ ಕೈಬೆರಳುಗಳನ್ನು ಇನ್ನೊಂದು ಕೈಯಿಂದ ಬಗ್ಗಿಸಿ ಹಗ್ಗವನ್ನು ಹಿಡಿದು ಶೆರ್ಪಾ ಹಿಂದೆ ಧೈರ್ಯವಾಗಿ ಮುನ್ನಡೆದರು ಅರುಣಿಮಾ ಸಿನ್ಹಾ.

arunima4

೨೧ ಮೇ ೨೦೧೩ರಲ್ಲಿ ಬೆಳಗ್ಗೆ ೧೦ಗಂಟೆ ೫೦ ನಿಮಿಷಕ್ಕೆ ನೇಪಾಳ ಸರ್ಕಾರದ ಪರ್ವತ ವಿಭಾಗವು ಅರುಣಿಮಾ ಸಿನ್ಹಾ ಅವರು ಮೌಂಟ್ ಎವರೆಸ್ಟ್  ಶಿಖರವನ್ನು ಪರ್ವತಾರೋಹಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿತು. ಇಂದು ಮೌಂಟ್ ಎವರೆಸ್ಟ್ ಶಿಖರವನ್ನು ಪರ್ವತಾರೋಹಣ ಮಾಡಿದ ಪ್ರಪಂಚದ ಮೊದಲ ಅಂಗವಿಕಲ ಮಹಿಳೆ ಅರುಣಿಮಾ ಸಿನ್ಹಾ.

ಕೈಯಲ್ಲಿ ಆಗದು ಎಂದು ಅರುಣಿಮಾ ಸಿನ್ಹಾ ಕೈ ಕಟ್ಟಿ ಕುಳಿತ್ತಿದ್ದರೇ ಇಂದು ಅವರ ಹೆಸರು ಜಗತ್ತಿನ ಇತಿಹಾಸದ ಪುಟದಲ್ಲಿ ಸೇರುತ್ತಿರಲಿಲ್ಲ. ಅವರು ಮೌಂಟ್ ಎವರೆಸ್ಟ್ ಪರ್ವತಾರೋಹಣ ಮುಗಿದ ಬಳಿಕ ಅವರ ಸಾಧನೆ ಅಷ್ಟಕ್ಕೇ ನಿಲ್ಲಲಿಲ್ಲ. ಜಗತ್ತಿನ ಏಳು ಖಂಡಗಳಲ್ಲಿ ಎತ್ತರದ ಶಿಖರಗಳನ್ನು ಪರ್ವತಾರೋಹಣ ಮಾಡಬೇಕು ಎನ್ನುವುದು ಅವರ ಮುಂದಿನ ಗುರಿಯಾಗಿತ್ತು. ಅದರಂತೆ ಈಗಾಗಲೇ ಅವರು ಆಫ್ರಿಕಾದ ಕಿಲಿಮ್ಯಾಂಜರೋ, ಇರೋಪಿನ್ ಎಲ್ಬರ್ಸ್, ಆಸ್ಟ್ರೇಲಿಯಾದ ಕೊಶ್ಚಿಉಸ್ಕೊ, ಸೌತ್ ಅಮೇರಿಕಾದ ಅಕ್ಯಾಂಕಾಗುವಾ ಗಳಲ್ಲಿ ಸೇರಿದಂತೆ ಆರು ಖಂಡಗಳಲ್ಲಿನ ಎತ್ತರದ ಶಿಖರವನ್ನು ಪರ್ವತಾರೋಹಣ ಮಾಡಿ ಯಶಸ್ವಿಯಾಗಿದ್ದಾರೆ.ಇನ್ನು ಉಳಿದದ್ದು ಆರ್ಟಾಟಿಕ ಖಂಡದ ಶಿಖರ. ಅದನ್ನು ಆದಷ್ಟು ಬೇಗ ಜಗತ್ತಿನ ಏಳು ಖಂಡಗಳಲ್ಲಿನ ಎತ್ತರದ ಶಿಖರವನ್ನು ಪರ್ವತಾರೋಹಣ ಮಾಡುವ ಮೂಲಕ ಮತ್ತೊಂದು ಇತಿಹಾಸವನ್ನು ಬರೆಯಲು ಅರುಣಿಮಾ ಸಿನ್ಹಾ ಛಲ ತೊಟ್ಟಿದ್ದಾರೆ.   

Award ceremony at Rashtrapati BhavanArunima-Sinha5ಅವರು ಅತಿ ಹೆಚ್ಚು ಓದಿದವರಲ್ಲ. ಆದರೆ ಇಂದು ದೇಶದ ಅತ್ತ್ಯುನ್ನತ  ಇನ್ಸ್ಟಿಟ್ಯೂಷನ್ ಗಳಲ್ಲಿ ಒಂದಾದ ಐಐಟಿ, ಐಐಎಂಗಳಲ್ಲಿ ತಮ್ಮ ಉಪನ್ಯಾಸವನ್ನು ನೀಡಿದ್ದಾರೆ. ಅಂಗವಿಕಲ ಚೇತನರಿಗಾಗಿ ಕ್ರೀಡಾ ಸಂಸ್ಥೆಯೊಂದನ್ನು ಸ್ಥಾಪಿಸಿ, ಅವರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತಿದ್ದಾರೆ.

ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪುರಸ್ತಾರ, ಉತ್ತರಪ್ರದೇಶ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ, ಪರ್ವತಾರೋಹಿಗಳಿಗೆ ನೀಡುವ ಅತಿ ಶ್ರೇಷ್ಠವಾದ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮುಡಿಸೇರಿವೆ.

ಅರುಣಿಮಾ ಸಿನ್ಹಾ ನಮ್ಮ ದೇಶದ ಹೆಮ್ಮೆಯ ಮಗಳು. ಅವರ ಸಾಧನೆಯನ್ನು ನನ್ನ ಪುಟ್ಟ ಲೇಖನದಲ್ಲಿ ಹಿಡಿದಿಡುವುದು ಕಷ್ಟ. ಅವರ ಸಾಧನೆ ಹೀಗೆ ಮುಂದೊರೆಯಲಿ. ಅವರ ಸಾಧನೆಗೆ ಆಕೃತಿ ಕನ್ನಡದಿಂದ ದೊಡ್ಡ ಸಲಾಂ.

ಶಾಲಿನಿ ಹೂಲಿ ಪ್ರದೀಪ್ ಅವರ ಇನ್ನಷ್ಟು ಲೇಖನಗಳು :

bf2fb3_90f3133197a2408e8e50f4c733ca019c~mv2.jpg

ಲೇಖನ : ಶಾಲಿನಿ ಹೂಲಿ ಪ್ರದೀಪ್
aakrutikannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW