ಮನೆಗಳಲ್ಲಿ ಎರಡನೇ ಮಗು ಹುಟ್ಟಿದಾಗ ಮೊದಲ ಮಗುವಿನ ವರ್ತನೆ ಬದಲಾಗುತ್ತದೆ. ಎರಡನೇ ಮಗು ಹುಟ್ಟಿದಾಗ ಮೊದಲ ಮಗುವಿನ ಬಗ್ಗೆ ವಹಿಸಬೇಕಾದ ಜಾಗ್ರತೆಗಳೇನು? ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ ತಪ್ಪದೆ ಮುಂದೆ ಓದಿ.
ಸಹನ ಈಗ ಎರಡನೇ ಮಗುವಿನ ತಾಯಿ. ಸಿಝರಿನ್ ಆಗಿದ್ದರಿಂದ ಹೆಚ್ಚು ವಿಶ್ರಾಂತಿಯಲ್ಲೇ ಇರಬೇಕಾದ ಕಾರಣ ಅವಳಿಗೆ ಮೊದಲ ಮಗುವಿನ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಅವಳ ಗಂಡನಿಗೆ ಆಫೀಸ್ ಕೆಲಸದ ಒತ್ತಡ. ಮನೆಯಲ್ಲಿರುವ ಹಿರಿಯರಿಗೆ ಬಾಣಂತಿ, ಮಗುವಿನ ಆರೈಕೆ, ಅಡುಗೆ ಮಾಡುವುದರಲ್ಲೇ ಸಮಯ ಕಳೆಯುತ್ತಿತ್ತು. ಈಗ ಇದೆಲ್ಲದರ ಪರಿಣಾಮ ಆಗಿದ್ದು ಮೊದಲ ಮಗುವಿನ ಮೇಲೆ. ಮೊದಲೆಲ್ಲಾ ತನ್ನೊಂದಿಗೆ ಸದಾ ಜೊತೆಯಾಗಿರುತ್ತಿದ್ದ ಅಮ್ಮ ಈಗ ತನ್ನ ತಮ್ಮನ ಜೊತೆಗೇ ಹೆಚ್ಚು ಇರುತ್ತಾಳೆ. ತನಗೆ ಬೇಕಾದ್ದೆಲ್ಲವನ್ನೂ ಪ್ರೀತಿಯಿಂದ ಮಾಡುತ್ತಿದ್ದ ಅಮ್ಮನಿಗೆ ಈಗ ತನಗೆ ಓದಿಸಲು, ಶಾಲೆಯಿಂದ ಬಂದ ಬಳಿಕ ತಾನು ಹೇಳಿದ್ದನ್ನು ಕೇಳುತ್ತಾ, ತಿನ್ನಿಸಿ ಮುದ್ದು ಮಾಡಿ ಮಲಗಿಸಲು ಪುರುಸೊತ್ತಿಲ್ಲ. ಈಗ ಅಮ್ಮ ತಾನು ಬರುವಾಗ ಒಮ್ಮೊಮ್ಮೆ ನಿದ್ರಿಸುತ್ತಲೋ, ಪಾಪುಗೆ ಹಾಲು ಕುಡಿಸುತ್ತಲೋ, ಅದನ್ನು ಸಮಾಧಾನಿಸುತ್ತಲೋ ಇರುತ್ತಾಳೆ. ತಾನು ಬಂದ ತಕ್ಷಣ ತನ್ನನ್ನು ಅಪ್ಪಿ ಮುದ್ದಾಡುವುದೂ ಇಲ್ಲ. ಇದಂತೂ ಆ ಮಗುವಿಗೆ ಜೀರ್ಣಿಸಿಕೊಳ್ಳಲಾಗದ ಸತ್ಯ. ಇದು ಮಗು ದಿನೇ ದಿನೇ ಎಲ್ಲದರಲ್ಲೂ ಹಿಂದುಳಿಯಲು ಕಾರಣವಾಗುತ್ತದೆ.
ಶ್ರೀಕಾಂತ್ ಗೆ ತನ್ನ ತಮ್ಮನನ್ನು ಕಂಡರೆ ಅಸೂಯೆ, ಹೊಟ್ಟೆಕಿಚ್ಚು, ದ್ವೇಷ ಎಲ್ಲಾ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮೊದಲು ತನಗೆ ಸಿಗುತ್ತಿದ್ದ ಪ್ರೀತಿ ತಮ್ಮ ಹುಟ್ಟಿದ ಮೇಲೆ ಇದ್ದಕ್ಕಿದ್ದಂತೆ ಅವನಿಗೆ ವರ್ಗಾವಣೆಯಾಗಿದ್ದು ಶ್ರೀಕಾಂತ್ ಎಂಬ ಆರು ವರ್ಷದ ಪುಟ್ಟ ಮಗುವಿನ ಮೇಲೆ ಆದ ದೊಡ್ಡ ಆಘಾತ. ಶ್ರೀಕಾಂತ್ ಹುಟ್ಟಿದ ಮೇಲೆ ಎರಡು ಬಾರಿ ಗರ್ಭಪಾತವಾಗಿ ಮೂರನೇ ಬಾರಿ ಬಹಳ ಜತನವಾಗಿ ಕಾಪಾಡಿಕೊಂಡ ಮಗು ಇದು. ಇದರಿಂದ ಅವರಿಗೇ ಅರಿಯದಂತೆ ತಂದೆ-ತಾಯಿ ಇಬ್ಬರೂ ದೊಡ್ಡ ಮಗು ಶ್ರೀಕಾಂತ್ ನನ್ನು ನಿರ್ಲಕ್ಷಿಸಿದ್ದರು. ಹೇಗಿದ್ದರೂ
ಅಜ್ಜಿ-ತಾತ ಅವನಿಗೆ ಬೇಕಾಗಿದ್ದೆಲ್ಲಾ (ಅಂದರೆ ಊಟ, ತಿಂಡಿ, ಓದಿಸುವುದು, ಶಾಲೆಗೆ ಬಿಡುವುದು, ಕರೆದುಕೊಂಡು ಬರುವುದು, ಸ್ನಾನ, ಇತ್ಯಾದಿ ದಿನಚರಿ ) ಹೊತ್ತಿಂದ್ಹೊತ್ತಿಗೆ ಮಾಡುತ್ತಾರೆ ಎಂಬುದು ಅವರ ಲೆಕ್ಕಾಚಾರ. ಆದರೆ ಅದೇ ಇಲ್ಲಿ ತಲೆಕೆಳಗಾಗಿದ್ದು. ಅವರು ಬರೀ ಅವನಿಗೆ ಅಗತ್ಯದ ಸವಲತ್ತುಗಳನ್ನು ಕೊಟ್ಟರು. ಮಗುವಿಗೆ ಕೊಡಬೇಕಾದ ಪ್ರೀತಿ, ಮಮತೆ, ಅಪ್ಪುಗೆ ಇದರ ಬಗ್ಗೆ ಗಮನ ಹರಿಸಲೇ ಇಲ್ಲ. ಅಜ್ಜಿ, ತಾತ ಎಷ್ಟು ಪ್ರೀತಿಯಿಂದ ನೋಡಿಕೊಂಡರೂ ಇಷ್ಟು ದಿನ ಸಿಗುತ್ತಿದ್ದ ತಂದೆ, ತಾಯಿಯ ಪ್ರೀತಿಯ ಸ್ಪರ್ಶ, ಅವರ ಮಡಿಲಿನ ಸುರಕ್ಷಿತ ಭಾವ ಇದೆಲ್ಲಾ ಒಮ್ಮೆಲೇ ಕಳೆದುಕೊಂಡಿದ್ದರ ಪರಿಣಾಮ ಮಾನಸಿಕವಾಗಿ ಮಗುವಿನ ಮೇಲೆ ಆಗಿ ಮಗುವಿನ ವರ್ತನೆಯೇ ಬದಲಾಯಿತು. ಈಗ ಇವರೂ ಮೊಂಡುತನ ಮಾಡುತ್ತಾನೆಂದು ಶ್ರೀಕಾಂತ್ ಗೆ ಬಯ್ಯುವುದು, ಹೊಡೆಯುವುದು ಮಾಡಲು ಪ್ರಾರಂಭಿಸಿದರು. ಇದರಿಂದ ಶ್ರೀಕಾಂತ್ ಗೆ ಗೊತ್ತಿಲ್ಲದಂತೆಯೇ ತಮ್ಮನ ಮೇಲೆ ದ್ವೇಷ ಬೆಳೆಯಲು ಪ್ರಾರಂಭವಾಯಿತು. ಇವನಿಂದಲೇ ನಂಗೆ ಅಪ್ಪ-ಅಮ್ಮ ಹೊಡೆಯೋದು, ಬಯ್ಯೋದು . ಯಾವಾಗ್ಲೂ ಇವ್ನ್ ಜೊತೇನೆ ಇರ್ತಾರೆ, ನಂಜೊತೆ ಸಮಯ ಕಳ್ಯಲ್ಲ. ಅಪ್ಪ ಅಮ್ಮನ್ನ ತಮ್ಮ ತನ್ನಿಂದ ಕಿತ್ಕೊಂಡಿದ್ದಾನೆ ಅನ್ನೋ ಭಾವನೆ ಶ್ರೀಕಾಂತನ ಮನದಲ್ಲಿ ಮೂಡಿ ದಿನೇ ದಿನೇ ಅದು ಗಟ್ಟಿಯಾಗುತ್ತಾ ಹೋಯ್ತು. ಇದೆಲ್ಲದರ ಪರಿಣಾಮ ಇತ್ತೀಚೆಗೆ ಅವನಲ್ಲಿ ಸಿಟ್ಟು, ಹಠ ಎಲ್ಲಾ ಜಾಸ್ತಿಯಾಗಿತ್ತು. ಯಾರೂ ಇಲ್ಲದಿದ್ದಾಗ ತೊಟ್ಟಿಲ ಬಳಿ ಹೋಗಿ ತಮ್ಮನಿಗೆ ಹೊಡೆಯುವುದು, ಚಿವುಟುವುದು, ಗಿಬುರುವುದು ಮಾಡುತ್ತಿದ್ದ.
ಫೋಟೋ ಕೃಪೆ : ಗೂಗಲ್
ಅನೇಕ ಮನೆಗಳಲ್ಲಿ ಎರಡನೇ ಮಗು ಹುಟ್ಟಿದಾಗ ಮೊದಲ ಮಗುವಿನ ವರ್ತನೆ ಬದಲಾಗುತ್ತದೆ. ಸದಾ ಮಗುವಿನ ಜೊತೆಗಿರುತ್ತಿದ್ದ ತಾಯಿಗೆ ಎರಡನೇ ಮಗು ಹುಟ್ಟಿದಾಗ ಮೊದಲಿನಷ್ಟು ಸಮಯ ಕೊಡಲು ಸಾಧ್ಯವಾಗದೇ ಇರುವುದು ಇದಕ್ಕೆ ಮುಖ್ಯ ಕಾರಣ. ಎರಡನೆಯ ಮಗು ಹುಟ್ಟಿದಾಗ ಮೊದಲ ಮಗುವಿಗೆ ಮನೆಯವರೆಲ್ಲ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಭಾವನೆ ಕಾಡಲು ಪ್ರಾರಂಭಿಸುತ್ತದೆ.
ಪರಿಹಾರ:
- ಎರಡನೇ ಬಾರಿ ಗರ್ಭ ಧರಿಸಿದಾಗಲೇ ಮೊದಲ ಮಗುವನ್ನು ಮುಂದೆ ಹುಟ್ಟಲಿರುವ ತಮ್ಮ/ತಂಗಿಯ ಬಗ್ಗೆ ಮಾನಸಿಕವಾಗಿ ತಯಾರಿ ಮಾಡಬೇಕು.
- ನಿನ್ನ ತಮ್ಮ ಅಥವಾ ತಂಗಿಗೆ ನಿನ್ನ ವಸ್ತುಗಳನ್ನೆಲ್ಲ ಕೊಡಬೇಕು (ಶೇರ್ ಮಾಡಬೇಕು) ಆಟದ ವಸ್ತುಗಳು, ಚಾಕಲೇಟ್ ಇತ್ಯಾದಿ ಎಂದು ಮೊದಲೇ ಹೇಳಿಕೊಡಬೇಕು.
- ಗರ್ಭಿಣಿಯಾಗಿದ್ದಾಗ ತನ್ನ ಮೊದಲ ಮಗುವಿಗೆ ಗರ್ಭಸ್ಥ ಮಗುವಿನ ಹೃದಯದ ಬಡಿತ ಕೇಳಿಸುವುದು. ನೋಡು ಮಗು ಒದಿತಾ ಇದೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸ್ತಾ ಇದೆ (ಮೂವ್ ಆಗ್ತಾ ಇದೆ) ಹೀಗೆ ಮೊದಲ ಮಗುವಿನ ಕೈಯ್ಯನ್ನು ಹೊಟ್ಟೆಯ ಮೇಲೆ ಇಟ್ಟುಕೊಂಡು ಅದಕ್ಕೆ ಸ್ಪರ್ಶದ ಮೂಲಕ ಒಂದು ಬಾಂಧವ್ಯ, ಅನ್ಯೋನ್ಯತೆ ಬರುವಂತೆ ಮಾಡುವುದು.
- ಮಗು ಹುಟ್ಟಿದ ಮೇಲೆ ಮೊದಲ ಮಗುವಿನ ಮಡಿಲಲ್ಲಿ ಮಲಗಿಸುವುದು.
- ಎರಡನೇ ಮಗುವಿನ ಎಲ್ಲಾ ಕೆಲಸಗಳಲ್ಲೂ ಮೊದಲ ಮಗುವನ್ನು ಸೇರಿಸಿಕೊಳ್ಳಬೇಕು. ಉದಾಹರಣೆಗೆ, ಸ್ನಾನವಾದ ಮೇಲೆ ಮಗುವಿಗೆ ಪೌಡರ್ ಹಚ್ಚುವಾಗ, ಡೈಪರ್ ಹಾಕುವಾಗ ತಿನ್ನಿಸುವಾಗ, ಹೀಗೆ ಪ್ರತಿಯೊಂದು ಹಂತದಲ್ಲೂ ನೀನೂ ಹೀಗೆ ಮಾಡು ಎಂದು ಹೇಳಿ ಜೊತೆಗೆ ಇರಿಸಿಕೊಂಡು ಚಿಕ್ಕ ಚಿಕ್ಕ ಸಹಾಯ ಮಾಡಿದಾಗ ವೆರಿ ಗುಡ್ ಎಂದು ಬೆನ್ನು ತಟ್ಟಿ ಮುದ್ದು ಮಾಡಿದರೆ ಆಗ ಆ ಮಗುವೂ ಚಿಕ್ಕ ಮಗುವನ್ನು ಇಷ್ಟಪಡಲು ಶುರು ಮಾಡುತ್ತದೆ. ಹೀಗೆ ಆ ಮಗುವಿನ ಪ್ರತಿಯೊಂದು ವಿಷಯದಲ್ಲೂ ಮೊದಲ ಮಗುವನ್ನು ಸೇರಿಸಿಕೊಂಡಾಗ ಮೊದಲ ಮಗುವಿಗೂ ಖುಷಿಯಾಗುತ್ತದೆ. ಅರಿಯದಂತೆಯೇ ಮನದೊಳಗೆ ಬಾಂಧವ್ಯ ಮೂಡಿ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳಲು ಶುರು ಮಾಡುತ್ತದೆ. ಇದರಿಂದ ತಾಯಿಗೂ ಎರಡು ಮಕ್ಕಳನ್ನು ಒಟ್ಟಿಗೆ ನೋಡಿಕೊಳ್ಳಲು ( ಸಂಭಾಳಿಸಲು) ಸುಲಭವಾಗುತ್ತದೆ.
- ಎರಡನೇ ಮಗು ಮಲಗಿದ್ದಾಗ ಅಥವಾ ಬೇರೆ ಯಾರಾದರೂ ನೋಡಿಕೊಳ್ಳುವವರಿದ್ದರೆ ಮೊದಲ ಮಗುವಿಗೆ ಆದಷ್ಟು ಸಮಯ ಕೊಡಬೇಕು.
- ಒಂದು ವೇಳೆ ತಾಯಿಗೆ ಆಗದಿದ್ದರೂ ತಂದೆ ಆ ಸಮಯದಲ್ಲಿ ಮಗುವಿನ ಜೊತೆ ಇದ್ದು ಅದರ ಮನಸ್ಸಿನ ಮೇಲೆ ಬೇರೆ ರೀತಿಯ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು.
ಮುಖ್ಯವಾಗಿ ತಂದೆ-ತಾಯಿ ಅಥವಾ ಬಂಧುಗಳು, ಮಗುವನ್ನು ನೋಡಲು ಬಂದವರು ಯಾರಾದರೂ ಸರಿ ಎರಡನೇ ಮಗುವಿಗೆ ಮೊದಲ ಮಗುವನ್ನು ಹೋಲಿಸಿ ಮಾತನಾಡಬಾರದು. ಬಣ್ಣ, ಕೂದಲು, ಉದ್ದ , ಗಿಡ್ಡ , ತುಂಬಾ ಸುಂದರವಾಗಿದೆ, ಅಳಲ್ಲ, ಹಠ ಮಾಡಲ್ಲ, ಹಾಗೆ, ಹೀಗೆ ಎಂದು. ಇದು ಮಕ್ಕಳ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತದೆ. ಅವರ ಮುಗ್ಧ ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ಯಾರೋ ಹೇಳಿದ ಮಾತಿನಿಂದ ತಾವು ಹಾಗೆಯೇ ಎಂದುಕೊಂಡು ಕೆಲವೊಮ್ಮೆ ತಮ್ಮ ಬಗ್ಗೆಯೇ ಕೀಳರಿಮೆ ಬೆಳೆಯುತ್ತಾ ಹೋಗುತ್ತದೆ. ಇದರಿಂದ ನಿಜವಾಗಿ ಮಗುವಿನಲ್ಲಿರುವ ಪ್ರತಿಭೆ ಹೊರಬರದೆ ಮಗು ಎಲ್ಲಾ ವಿಷಯದಲ್ಲೂ ಹಿಂದುಳಿಯಲು ಕಾರಣವಾಗುತ್ತದೆ.
ಫೋಟೋ ಕೃಪೆ : ಗೂಗಲ್
ಅಲ್ಲದೆ ಹುಟ್ಟಿದ ಮಗುವಿನ ಜೊತೆಗೆ ಮೊದಲ ಮಗುವನ್ನೂ ಪ್ರೀತಿಯಿಂದ ಮಾತನಾಡಿಸಬೇಕು. ಆ ಸಮಯದಲ್ಲಿ ಹುಟ್ಟಿದ ಮಗುವಿಗೆ, ದುಡ್ಡು, ಬಟ್ಟೆ, ಇತ್ಯಾದಿ ಉಡುಗೊರೆಗಳನ್ನು ತಂದು ಕೊಡುವಾಗ ಮೊದಲ ಮಗುವಿಗೂ ಚಿಕ್ಕ ಪುಟ್ಟ ಉಡುಗೊರೆ ಕೊಟ್ಟಲ್ಲಿ ಆ ಮಗುವಿಗೂ ಬಹಳ ಸಂತೋಷವಾಗುತ್ತದೆ. ಇಲ್ಲದಿದ್ದಲ್ಲಿ ತಮ್ಮ/ ತಂಗಿ ಹುಟ್ಟಿದ ಮೇಲೆ ಎಲ್ಲರೂ ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಭಾವನೆ ಮಗುವನ್ನು ಕಾಡಲು ಶುರುವಾಗುತ್ತದೆ.
ಎರಡನೇ ಮಗು ಹುಟ್ಟಿದಾಗ ಬಾಣಂತನ ಮಾಡಲು ಅಜ್ಜಿ , ಸಂಬಂಧಿಕರು ಬಂದು ಮನೆಯಲ್ಲಿದ್ದಾಗ ಮೊದಲ ಮಗುವಿಗೆ ಅವರೆಲ್ಲರ ಜೊತೆ ತಾನೂ ಇರಬೇಕೆಂಬ ಹಂಬಲ ಜಾಸ್ತಿ ಇರುತ್ತದೆ. ಮಗು ನೋಡಲು ಮನೆಗೆ ಬರುವವರು, ತರುವ ಉಡುಗೊರೆಗಳು, ಅವರೆಲ್ಲರ ಮಾತುಕತೆ, ನಗು, ಹರಟೆ, ಚಿಕ್ಕ ಮಗುವಿನ ಸಾನಿಧ್ಯ ಎಲ್ಲವನ್ನೂ ಬಿಟ್ಟು ಶಾಲೆಗೆ ಹೋಗಲು ಮೊದಲ ಮಗುವಿಗೆ ಕಷ್ಟವಾಗಬಹುದು. ಇದರಿಂದ ಮೊದಲು ಖುಷಿಯಾಗಿ ಶಾಲೆಗೆ ಹೋಗುತ್ತಿದ್ದ ಮಗು ಈಗ ಶಾಲೆಗೆ ಹೋಗಲು ಇಷ್ಟಪಡದೇ ಇರಬಹುದು. ಶಾಲೆಗೆ ಹೋಗುವ ಸಮಯಕ್ಕೆ ಸರಿಯಾಗಿ ಹೊಟ್ಟೆ ನೋವು, ವಾಂತಿ ಬರುವ ಹಾಗೆ ಅನಿಸುವುದು, ಒಟ್ಟಿನಲ್ಲಿ ಏನೋ ಒಂದು ರೀತಿಯ ತಳಮಳ. ಇದು ಅನೇಕ ಮಕ್ಕಳಲ್ಲಿ ಕಂಡು ಬಂದಂಥ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲು ಅವರನ್ನು ಮಾನಸಿಕವಾಗಿ ತಯಾರಿ ಮಾಡುವುದು ಸಹ ಹೆತ್ತವರ ಕರ್ತವ್ಯ. ಹೇಗೆಂದರೆ, ನೀನು ಶಾಲೆಯಲ್ಲಿ ಕಲಿತ ಎಬಿಸಿಡಿ, ಮಗ್ಗಿ ತಮ್ಮ/ ತಂಗಿಗೆ ನೀನೇ ಹೇಳಿಕೊಡಬೇಕು ಎಂದೋ, ನೀನು ಬರೆದ ಚಿತ್ರ ಪಾಪುಗೆ ತೋರ್ಸು ಎಂದೋ, ತೋರಿಸಿದಾಗ ನೋಡು, ಪಾಪು ಖುಷಿಯಾಗಿ ನಗ್ತಾ ಇದೆ ಎಂದೋ ಅಥವಾ ಮಗುವಿನ ಕೈಯ್ಶನ್ನು ಜೋಡಿಸಿ ಚಪ್ಪಾಳೆ ತಟ್ತಿದೆ ಎಂದೋ, ಪಾಪುಗೆ ಇಷ್ಟ ಆಯ್ತು ಎಂದೋ, ಶಾಲೆಗೆ ಹೊರಡುವಾಗ ಟಾಟಾ ಮಾಡ್ತಾ ಇದಾಳೆ/ ಇದಾನೆ ಎಂದೋ ಅಥವಾ ಮೊದಲ ಮಗು ಶಾಲೆಯಿಂದ ಬಂದ ತಕ್ಷಣ ನೋಡು ನಿನಗೆ ಕಾಯ್ತಾ ಇದ್ದ/ಇದ್ದಳು ಎಂದೋ, ಹೀಗೆ ಮಾನಸಿಕವಾಗಿ ತಯಾರು ಮಾಡಿದರೆ ಮೊದಲ ಮಗುವಿಗೆ ಹೌದು ನಾನು ಕಲಿತದ್ದನ್ನು ತಮ್ಮ/ತಂಗಿಗೆ ಹೇಳಿಕೊಡಬೇಕು, ತೋರಿಸಬೇಕು ಎಂಬ ಭಾವನೆ ಬೆಳೆದು ಕಲಿಕೆಯಲ್ಲಿ ಇನ್ನೂ ಹೆಚ್ಚಿನ ಆಸಕ್ತಿ ಮೂಡುತ್ತದೆ. ಶಾಲೆಗೆ ಯಾವ ತಕರಾರಿಲ್ಲದೇ ಹೋಗುತ್ತಾರೆ.
ಮಕ್ಕಳನ್ನು ಮಾನಸಿಕವಾಗಿ ಕುಗ್ಗದಂತೆ, ಅವರಿಗೆ ಪ್ರೀತಿಯ ಕೊರತೆಯಾಗದಂತೆ, ಅಸುರಕ್ಷಿತ ಭಾವ ಬರದಂತೆ ಅವರು ಮುಕ್ತವಾಗಿ ನಮ್ಮ ಬಳಿ ಎಲ್ಲಾ ವಿಷಯವನ್ನೂ ಹಂಚಿಕೊಳ್ಳುವಂತೆ ಅವರೊಡನೆ ನಡೆದುಕೊಳ್ಳುವುದು ತಂದೆ-ತಾಯಿಯ ಕರ್ತವ್ಯ. ಏಕೆಂದರೆ, ಮನೆ, ತಂದೆ-ತಾಯಿ, ಬಿಟ್ಟರೆ ಶಾಲೆ ಅಷ್ಟೇ ಚಿಕ್ಕ ಮಕ್ಕಳ ಪ್ರಪಂಚ. ಎಂಥಾ ಸಂದರ್ಭದಲ್ಲಿಯೂ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಮನೆಯ ವಾತಾವರಣವಿರಲಿ. ಎರಡನೇ ಮಗು ಹುಟ್ಟಿದಾಗ ಮೊದಲ ಮಗುವೂ ಸಂಭ್ರಮಿಸುವಂತಿರಲಿ. ಚೆಂದದ ಬಾಂಧವ್ಯ ಮಕ್ಕಳಲ್ಲಿ ಮೂಡಲಿ. ಎರಡನೆಯ ಮಗುವಿನ ಆಗಮನದಿಂದ ಮನೆ, ಮನ ಬೆಳಗಲಿ.
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಮಂಗಳ ಎಂ ನಾಡಿಗ್
