‘ನನ್ನೊಳಿಗಿನ ನಾನೆಂಬ ವ್ಯಕ್ತಿತ್ವಕೆ ದರ್ಪಣವಾಗಿ, ಅಂತರಂಗದ ವಿಹಾರಿಯಾಗುವುದೇ ಹಿತವಲ್ಲವೇ??’… ಕವಿಯತ್ರಿ ಪೂರ್ಣಿಮಾ ಮರಳಿಹಳ್ಳಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಓದಿ…
ತುಸು ಅಂತರವೇ ಹಿತವಲ್ಲವೇ
ಸಾಗಬಹುದು ಬಹುದೂರ
ರೈಲಿನ ಕಂಬಿಗಳಂತೆ ಜೊತೆಗೆ
ಪಯಣದ ಸಮಯದ ಮೊತ್ತ ಹೆಚ್ಚಾದಷ್ಟು
ಸಲುಗೆಯ ಭಾವ ಬೆಳೆದಷ್ಟು
ಸಂಬಂಧಗಳ ಬಂಡಿ ಬೀಳಬಹುದು
ಅದಕ್ಕೆ ತುಸು ಅಂತರವೇ ಹಿತವಲ್ಲವೇ?
ಇಳಿದಷ್ಟು ಆಳ ಅರಿತಷ್ಟು ಭಾವ
ಸತ್ಯ ಮಿಥ್ಯಗಳ ಸಮ್ಮಿಲನದ ಛಾಯೆ
ದೂರದ ಬೆಟ್ಟದಂತೆ ದೂರವೇ ಚೆನ್ನ
ಸನಿಹ ಹೋದಷ್ಟು ಬರೀ ಕಲ್ಲು ಮುಳ್ಳುಗಳು
ಅದಕ್ಕೆ ತುಸು ಅಂತರವೇ ಹಿತವಲ್ಲವೇ ?
ಕರಿ ಮುಗಿಲಲಿ ತೇಲುತ ಸೆಳೆಯುವ
ಆ ಚಂದಿರನ ಮೊಗವೆಷ್ಟು ಅಂದ
ಅಂದವ ಅರಸುತ್ತ ಮನ ಹವಣಿಸಲು
ಉಬ್ಬು ತಗ್ಗಲ್ಲದೇ ಕಪ್ಪು ಕಲೆಗಳು
ಅದಕ್ಕೆ ತುಸು ಅಂತರವೇ ಹಿತವಲ್ಲವೇ ?
ಸಂಬಂಧಗಳ ಆಳಕ್ಕಿಳಿದು ಪರಾಮರ್ಶಿಸಿ
ವ್ಯಕ್ತಿತ್ವದ ತೀರ್ಪು ನೀಡುವ ನ್ಯಾಯಾಧೀಶರಲ್ಲ
ತುಸು ಅಂತರದಲ್ಲೇ ಹಿತವ ಕಾಣುತ
ನನ್ನೊಳಿಗಿನ ನಾನೆಂಬ ವ್ಯಕ್ತಿತ್ವಕೆ ದರ್ಪಣವಾಗಿ
ಅಂತರಂಗದ ವಿಹಾರಿಯಾಗುವುದೇ ಹಿತವಲ್ಲವೇ??
- ಪೂರ್ಣಿಮಾ ಮರಳಿಹಳ್ಳಿ, ಧಾರವಾಡ.