ಕಾದಂಬರಿಕಾರ ಶಶಿಧರ ಹಾಲಾಡಿ ಅವರ “ಅಬ್ಬೆ” ಪುಸ್ತಕದಲ್ಲಿ ಅವರಿಗಿರುವ ಪರಿಸರದ ಮೇಲಿನ ಕಾಳಜಿ, ಪರಿಸರದ ನಡುವಿನ ಅನುಭವವನ್ನು ಕಾಣಬಹುದು. ಅಬ್ಬೆ ಪುಸ್ತಕದ ಕುರಿತು ಲೇಖಕಿ ನೀತಾ ರಾವ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಪುಸ್ತಕ : ಅಬ್ಬೆ
ಲೇಖಕರು : ಶಶಿಧರ ಹಾಲಾಡಿ
ಪ್ರಕಾಶನ: ಅಂಕಿತ ಪುಸ್ತಕ ಪ್ರಕಾಶಕರು
ಬೆಲೆ : 250 /
ಪುಸ್ತಕ ಖರೀದಿ : 9019190502
ನಾನು ಇತ್ತೀಚಿಗೆ ಓದಿದ ಕಾದಂಬರಿಗಳಲ್ಲಿ ನನ್ನ ಮನಸ್ಸಿಗೆ ಒಂದು ರೀತಿಯ ಸಮಾಧಾನವನ್ನು ಕೊಟ್ಟಂಥ ಕಾದಂಬರಿ “ಅಬ್ಬೆ”. ಈ ಭೂಮಿಯು ತಾಯಿ, ಅಂದರೆ ಸೃಷ್ಟಿಕಾರ್ಯವನ್ನು ಸತತವಾಗಿ ಮಾಡುತ್ತಲೇ ಇರುವವಳು. ಅವಳು ವೈವಿಧ್ಯತೆಯಿಂದ ಕಂಗೊಳಿಸುವ ಶ್ರೇಷ್ಠ ನಾರಿಸ್ವರೂಪಿಯೂ ಹೌದು. ಅವಳ ಮೇಲ್ಮೈ ಯಲ್ಲಿ ವ್ಯಕ್ತವಾಗುವ ದಟ್ಟ ಅರಣ್ಯಗಳೂ, ಸಮತಟ್ಟು ಪ್ರದೇಶಗಳೂ, ಕುರುಚಲು ಕಾಡುಗಳೂ, ಉಕ್ಕಿ ಹರಿಯುವ ನದಿಗಳೂ, ಸಿಳ್ಳನೇ ಓಡುವ ಝರಿಗಳೂ ಎಲ್ಲವೂ ಅವಳ ಸೌಂದರ್ಯದ ಸಾವಿರಾರು ನೋಟಗಳು. ಅಂಥ ಅವಳ ಸೌಂದರ್ಯವನ್ನು ಬಯಲುಸೀಮೆಯಲ್ಲೂ ನೋಡುವುದು ರಸಿಕರ ಕಂಗಳು ಮಾತ್ರ. ಅಂಥ ಒಂದು ಬಯಲುಸೀಮೆಯಾದ ಅರಸೀಕೆರೆಯ ಹತ್ತಿರದ ಕಲ್ಕೆರೆ ಎಂಬ ಹಳ್ಳಿ, ಅದಕ್ಕಂಟಿಕೊಂಡಂತಿರುವ ಗರುಡನಗಿರಿ ಬೆಟ್ಟ, ಹಿರೇಕಲ್ಲು ಬೆಟ್ಟ ಇಲ್ಲೆಲ್ಲ ತಿರುಗಾಡುತ್ತ ನಮ್ಮನ್ನೂ ಹಂತಹಂತವಾಗಿ ಅಲ್ಲೆಲ್ಲ ಕರೆದೊಯ್ಯುವ ಪರಿಸರ ಕೇಂದ್ರಿತ ಕಾದಂಬರಿ “ಅಬ್ಬೆ” ಯಲ್ಲಿ ಗುಡ್ಟಬೆಟ್ಟಗಳ ನಿಗೂಢ ಜೀವಜಗತ್ತಿನ ಜೊತೆಜೊತೆಗೇ ಹಳ್ಳಿಯ ಅನೂಹ್ಯ ಚಟುವಟಿಕೆಗಳು, ಮತ್ತು ಬ್ಯಾಂಕಿನ ರಾಜಕೀಯ ಇವೆಲ್ಲವುಗಳ ಅನಾವರಣವಾಗುತ್ತದೆ.
ಶಿವರಾಂ ಈ ಕಾದಂಬರಿಯ ಕೇಂದ್ರವ್ಯಕ್ತಿ ಅಥವಾ ಕಥಾನಾಯಕ. ಅವನ ಕಣ್ಣುಗಳಿಂದ ನಾವು ಕಲ್ಕೆರೆ ಹಳ್ಳಿ, ಸುತ್ತಲಿನ ಕಾಡು, ಕೆರೆ, ಬೆಟ್ಟ, ಪಾಳುಬಿದ್ದ ಬ್ರಿಟಿಷ್ ಬಂಗಲೆ, ಚಿಪ್ಪುಹಂದಿ, ಬಾತು, ಕೊಕ್ಕರೆ ಎಲ್ಲವನ್ನೂ ನೋಡುತ್ತ ಅನುಭವಿಸುತ್ತ ಕಾದಂಬರಿಯ ಆಳಕ್ಕೆ ಆಳಕ್ಕೆ ಇಳಿಯುತ್ತ ಸಾಗುತ್ತೇವೆ.
ಕರಾವಳಿಯ ಯುವಕ ಶಿವರಾಂ ಬ್ಯಾಂಕಿನ ಕೆಲಸ ಸಿಕ್ಕಿ ಬಯಲುಸೀಮೆಯ ಕಲ್ಕೆರೆಗೆ ಬಂದಿಳಿಯುವ ಸನ್ನಿವೇಶದಿಂದ ಪ್ರಾರಂಭವಾಗುತ್ತದೆ ಕಾದಂಬರಿಯ ಪಯಣ. ನಿಸರ್ಗವು ಉದಾರವಾಗಿ ನೀಡಿದ ಸೌಂದರ್ಯವನ್ನು ಸವಿಯುತ್ತ ಬಯಲುಸೀಮೆಯ ಹಳ್ಳಿಗೆ ಮೊದಲಬಾರಿಗೆ ಬಂದಿಳಿಯುತ್ತಲೂ ಚಿಪ್ಪುಹಂದಿಯನ್ನೂ, ಅದನ್ನು ಹಿಡಿದುಕೊಂಡಿರುವ ಮುಗ್ಧನಂತೆ ಕಾಣುವ ಕೆಂಚನನ್ನೂ, ಹುಷಾರಿಯಿಂದ ಮಾತನಾಡುವ ಪೆಟ್ಟಿಗೆ ಅಂಗಡಿಯ ಅನಸೂಯಮ್ಮನನ್ನೂ ಎದುರಾಗುತ್ತಾನೆ. ಬ್ಯಾಂಕಿನಲ್ಲಿ ರಿಪೋರ್ಟ್ ಮಾಡಿಕೊಂಡ ನಂತರ ಮ್ಯಾನೇಜರ್, ಕ್ಯಾಷಿಯರ್, ಗುಮಾಸ್ತರು, ಹಂಗಾಮಿ ನೌಕರರು, ಪ್ಯೂನಗಳ ಪುಟ್ಟ ಪ್ರಪಂಚದ ಪರಿಚಯವಾಗುತ್ತ ಅವರ ದೊಡ್ಡ ರಾಜಕೀಯದಿಂದ ಕಂಗೆಡುತ್ತಾನೆ. ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಯೂ ಕಾರಣವೇ ಇಲ್ಲದೇ ಮ್ಯಾನೇಜರ್ ನ ಅವಕೃಪೆಗೆ ಪಾತ್ರನಾಗುವ ಶಿವರಾಂ ಕಡಿಮೆ ಮಾತಿನವನಾದರೂ ತನ್ನ ಮೃದು ಸ್ವಭಾವದಿಂದ ಹಳ್ಳಿಯ ಜನರ ಮನಸ್ಸನ್ನು ಗೆಲ್ಲುತ್ತಾನೆ. ಹೊಸದಾಗಿ ಪ್ರಾರಂಭವಾದ ಕಾಲೇಜಿನ ಪ್ರಾಚಾರ್ಯರಾಗಿ ಬರುವ ಕರಾವಳಿಯ ಕಲ್ಲೂರಾಯರೊಡನೆ ಸಹಜವಾಗಿ ಸ್ನೇಹ ಬೆಳೆದು ಇಬ್ಬರಿಗೂ ಬೇರೆ ಬೇರೆ ಕಾರಣಗಳಿಂದಾಗಿ ಕಾಡಿನ ಆಕರ್ಷಣೆ ಇದ್ದ ಕಾರಣ ಕಾಡು ಅಲೆಯುತ್ತ ನಮ್ಮನ್ನೂ ಅಲೆದಾಡಿಸುತ್ತಾರೆ. ಕಾಡಿನ ಮಧ್ಯೆ ಥಟ್ಟನೆ ಎದುರಾಗುವ ಸ್ವಾಮಿಗಳು ಮತ್ತು ಅವರ ಹಿಂದೆ ಹಿಂದೆಯೇ ಬರುವ ಬಿಳಿವಸ್ತ್ರಧಾರಿ ಮುಕುಂದೂರು ಸ್ವಾಮಿಜಿ ಮತ್ತು ಬೆಳೆಗೆರೆ ಕೃಷ್ಣಶಾಸ್ತ್ರಿಗಳು ಎಂದು ಹೊಳೆದು ಮನಸ್ಸು ರೋಮಾಂಚಿತಗೊಳ್ಳುತ್ತದೆ.
ಮಧ್ಯೆ ಮಧ್ಯೆ ಬರುವ “ಅಬ್ಬೆ” ಎಂಬ ಜೇಡದ ವಿಚಾರ ಶಿವರಾಂನ ಕುತೂಹಲವನ್ನು ಕೆರಳಿಸುತ್ತದೆ. ಅಬ್ಬೆ ಎನ್ನುವ ಈ ವಿಷಪೂರಿತ ಜೇಡದಿಂದ ಸತ್ತವರ ಬಗ್ಗೆ ಕೇಳುವಾಗ ಅವನಲ್ಲಿ ಇದರ ಸತ್ಯಸತ್ಯತೆಯ ಬಗ್ಗೆ ಹುಟ್ಟಿಕೊಳ್ಳುವ ಜಿಜ್ಞಾಸೆಯು ಕಥೆಯ ಜೀವಾಳವಾದರೂ ಅದು ನಿಗೂಢವಾಗಿಯೇ ಉಳಿದುಹೋಗುತ್ತದೆ. ಅದೇ ರೀತಿ ಕಲ್ಕೆರೆಯ ಕೆಂಚನು ಚಿಪ್ಪು ಹಂದಿಯನ್ನು ಹಿಡಿಯುವ ಮತ್ತು ಸಾಗಿಸುವ ಗೂಢ ಚಟುವಟಿಕೆ ಕೂಡ ಕೊನೆಗೂ ಗೂಢವಾಗಿಯೇ ಉಳಿಯುತ್ತದೆ. ಬ್ಯಾಂಕಿನ ಮ್ಯಾನೇಜರನ ಮಸಲತ್ತಿನಿಂದಾಗಿ ಕೆಲಸ ಕನ್ಫರ್ಮ್ ಆಗುವದಕ್ಕೂ ಮುನ್ನವೇ ಅಂದಮಾನಿಗೆ ವರ್ಗಾವಣೆಗೊಳ್ಳುವ ಶಿವರಾಂ ಭಾರವಾದ ಹೃದಯದಿಂದ ಬಯಲುಸೀಮೆಯ ಹಳ್ಳಿಗೆ ಮತ್ತು ಅಲ್ಲಿನ ಜನರಿಗೆ ವಿದಾಯ ಹೇಳುವುದರೊಂದಿಗೆ ಕೊನೆಗೊಳ್ಳುವ ಕಾದಂಬರಿಯಲ್ಲಿ ಸುಖಾಂತ್ಯವಿದೆ. ಶಿವರಾಂ ಪತ್ರಿಕೆಗೆ ಬರೆದ ಪತ್ರದಿಂದ ಸರಕಾರವು ರಕ್ಷಿತ ಅರಣ್ಯಕ್ಕೆ ಬೇಲಿ ಹಾಕುವ ಚಟುವಟಿಕೆ ಪ್ರಾರಂಭಿಸಿದ್ದನ್ನು ಕಾಣುವ ಯುವಕನ ಸಮಾಜಮುಖಿ ಕೆಲಸಕ್ಕೆ ಸಿಕ್ಕ ಜಯ ಅವನ ಮುಖದಲ್ಲಿ ನಗುವರಳಿಸಿದಂತೆಯೇ ನಮ್ಮ ಮನಸ್ಸಿಗೂ ಸಮಾಧಾನ ನೀಡುತ್ತದೆ.
ಲೇಖಕರಾದ ಶಶಿಧರ ಹಾಲಾಡಿಯವರಿಗೆ ಪರಿಸರದ ಬಗ್ಗೆ ಅಪರೂಪದ ಕಾಳಜಿ ಮತ್ತು ಅನುಭವ ಇರುವುದು ನಮಗೆ ಸ್ಪಷ್ಟವಾಗುತ್ತದೆ. ಅಂತೆಯೇ ಎಂಬತ್ತು-ತೊಂಬತ್ತರ ದಶಕದಲ್ಲಿ ಬ್ಯಾಂಕಿಂಗ್ ವಾತಾವರಣ ಹೇಗಿತ್ತು, ಪುಜಾರಿ ಸಾಲಮೇಳಗಳು ಹೇಗೆ ನಡೆಯುತ್ತಿದ್ದವು ಎನ್ನುವ ಮಾಹಿತಿಯೂ ಲೇಖಕರಿಗೆ ಅನುಭವಜನ್ಯವಾದದ್ದು ಎಂದು ಬ್ಯಾಂಕಿನಲ್ಲಿ ಕೆಲಸ ಮಾಡಿರುವ ನನಗೆ ಸಹಜವಾಗಿ ತಿಳಿಯುತ್ತದೆ. ಒಟ್ಟಾರೆ ಒಂದೊಳ್ಳೆ ಓದಿನ ಸುಖವನ್ನು ನೀಡುವ ಕಾದಂಬರಿ ಅಬ್ಬೆ ಹಲವು ಕಾರಣಗಳಿಗೆ ಓದುಗರಿಗೆ ಇಷ್ಟವಾಗುವುದು ಎನ್ನುವುದು ನನ್ನ ಅನಿಸಿಕೆ. ಇಂಥ ಅಪರೂಪದ ಕಾದಂಬರಿಯನ್ನು ಕನ್ನಡಿಗರಿಗೆ ನೀಡಿದ ಕಾದಂಬರಿಕಾರ ಶ್ರೀ. ಶಶಿಧರ ಹಾಲಾಡಿಯವರು ಅಭಿನಂದನಾರ್ಹರು.
- ನೀತಾ ರಾವ್, ಬೆಳಗಾವಿ