ಎದೆಗೆ ಚೂರು ದನಿಯಾಗು ಸಾಕು, ಹೇಳದೇನೂ ನಿನ್ನ ಮಾತು ಬಲ್ಲೆನು…ಕೊಡಗಿನ ಕವಿ ಹೇಮಂತ್ ಪಾರೇರಾ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಯಾವ ದಿಕ್ಕಿನಲ್ಲಿ ನಿಂತು ಕಾದರೂ
ಯಾರೂ ಕಾಣರು ನಿನ್ನ ಹೊರತು
ಉಳಿಸಿದ ಮೌನ ನಿನ್ನದೇ ಆದರೂ
ನಾನು ಎಂದೂ ನಿನ್ನೆದೆಯ ಮಾತು ll
ಎದೆಗೆ ಚೂರು ದನಿಯಾಗು ಸಾಕು
ಹೇಳದೇನೂ ನಿನ್ನ ಮಾತು ಬಲ್ಲೆನು
ನೋಡುವಲ್ಲಿ ನಿಲ್ಲಲಾರೆ ಕೇಳಬೇಕು
ನನ್ನ ಬಾಳ ಕನಸಲ್ಲಿ ಯಾರು ನೀನು ll
ಹುಡುಕಿದಷ್ಟು ಹತ್ತಿರ ಕೂಡಿ ಬರಲಿ
ಸನಿಹದಲ್ಲೇ ಇರುದೂರವ ಬೇಡೆನು
ಮಾತಾಡು ಮೋಡ ಮಳೆಯಾಗಲಿ
ಬೊರ್ಗೆರೆದು ತಂಪಾಗಲಿ ಆ ಬಾನು ll
ನಿನ್ನೆಯ ದಿನದ ಹಳೆಯ ದಾರಿಯಲ್ಲಿ
ಮರಳಿ ಬಂದ ಇವತ್ತಿನ ಅವಳ ಬಗೆ
ನೂರು ಮಾತಾದವು ಹೇಳದೆ ಕಣ್ಣಲ್ಲಿ
ಮರುಗಳಿಗೆ ಉತ್ತರ ಮುಗುಳು ನಗೆ ll
- ಹೇಮಂತ್ ಪಾರೇರಾ – ಕೊಡಗು.
