‘ಕ್ಷಮೆ’ ಕೇಳೋದು ಧೈರ್ಯವಂತರು ಮಾತ್ರ – ಹಿರಿಯೂರು ಪ್ರಕಾಶ್



ನೀವು ಯಾರಿಗಾದರೂ ಮನಸ್ಸಿನಿಂದ ಕ್ಷಮೆ ಕೇಳಿದ್ದೀರಾ? ಕ್ಷಮೆ ಕೇಳಿದಲ್ಲಿ ನಿಮ್ಮ ಘನತೆಗೆ ವ್ಯಕ್ತಿತ್ವ ಕಮ್ಮಿಯಾಗುವುದಿಲ್ಲ. ತಪ್ಪಿದ್ದರೆ ಅಹಂನ್ನು ಬಿಟ್ಟು ಕ್ಷಮೆ ಕೇಳಿ, ನಿಮ್ಮ ಮನಸ್ಸು ಹಗುರವಾಗುವುದು ಎನ್ನುತ್ತಾರೆ ಲೇಖಕ ಹಿರಿಯೂರು ಪ್ರಕಾಶ್ ಅವರು. ಮುಂದೆ ಓದಿ…

ಜೀವನದಲ್ಲಿ ಅಕಸ್ಮಾತ್ ನೀವು ಮಾಡಿರ ಬಹುದಾದ ತಪ್ಪಿಗೆ ಎಂದಾದರೂ ಯಾರಲ್ಲಾದರೂ ಕ್ಷಮೆ ಕೇಳಿದ್ದೀರಾ?, ಆ ಸಂದರ್ಭದಲ್ಲಿ ನಿಮ್ಮ ಮನಸಿನ ಭಾವನೆಗಳೇನು?, ಒಮ್ಮೆ ಹಾಗೆಯೇ ನೆನಪು ಮಾಡಿಕೊಳ್ಳಿ. ಆ ಸಂದರ್ಭದಲ್ಲಿ ಅಪಮಾನವಾಯಿತೆಂದು ಅನಿಸಿತ್ತಾ?, ಪ್ರತಿಷ್ಠೆ ಕಡಿಮೆಯಾಯಿತೆಂದು ಎಂದೆನಿಸಿತ್ತಾ? ಅಥವಾ ತುಂಬಾ ಚಿಕ್ಕವನಾದೆ? ಎಂದೆನ್ನಿಸಿ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತಾಗಿತ್ತಾ?.

ನಾವೇನೇ ಹೇಳಿದರೂ ಕೇಳಿದರೂ, ” ಕ್ಷಮೆ‌ ಕೇಳುವುದು” ಎಂದರೆ ಇಂದಿಗೂ ಸಾಮಾನ್ಯವಾಗಿ ಅಪಮಾನದ ಲಿಸ್ಟ್ ನಲ್ಲೇ ನೇತಾಡುತ್ತಿರುವ ಪದಪುಂಜ ! ಕ್ಷಮೆ ಕೇಳಿದಲ್ಲಿ ತನ್ನ ಘನತೆಗೆ -ವ್ಯಕ್ತಿತ್ವಕ್ಕೆ ಆಗುವ ಅಪಮಾನವೆಂದೇ ನಮ್ಮೊಳಗಿನ‌ ಅಂತಃಕರಣ ನಮ್ಮನ್ನು ಹಾಕಿ ತಿವಿಯುತ್ತಿರುತ್ತದೆ. ನಮ್ಮಲ್ಲಿನ ಅಹಂಕಾರವೆನ್ನುವುದು‌ ಮತ್ತೊಬ್ಬರಲ್ಲಿ ಕ್ಷಮೆ ಕೇಳಿದಲ್ಲಿ ನಾವು ತಲೆ ತಗ್ಗಿಸಿದಂತೆ ಎಂದು ನಮ್ಮನ್ನು ಕೇಳದಂತೆ ಪ್ರವೋಕ್ ಮಾಡುತ್ತಾ ಇರುತ್ತದೆ. ಹೀಗಾಗಿಯೇ ನಾವು ಕ್ಷಮೆ ಕೇಳುವುದೆಲ್ಲಾ ಕೇವಲ ಕೈಲಾಗದವರ ಕೆಲಸವೇ ಹೊರತು ಶಕ್ತರಾದವರದಲ್ಲ ಎಂಬುದು ನಮ್ಮೊಳಗಿನ ಕಾಮನ್ ಫ಼ೀಲಿಂಗ್.

ಫೋಟೋ ಕೃಪೆ : The Times

ಆದರೆ ವಾಸ್ತವವೆಂದರೆ ಕ್ಷಮೆ ಕೇಳುವುದು ಶಕ್ತವಂತರ ಲಕ್ಷಣವೇ ಹೊರತು ದೌರ್ಬಲ್ಯವಲ್ಲ. ಯಾರು ಮಾನಸಿಕವಾಗಿ ಸ್ಟ್ರಾಂಗ್ ಆಗಿ ಇರುತ್ತಾನೋ ಅಂತಹವನು ಮಾತ್ರ ತನ್ನದಾದ ತಪ್ಪಿಗೆ ಯಾವುದೇ ಮುಜುಗರವಿಲ್ಲದೇ ಕ್ಷಮೆ ಕೇಳಬಲ್ಲನು.! ಇಲ್ಲಿ ತಪ್ಪು ಎಂದರೆ ವ್ಯಕ್ತಿಗಳ ನಡುವಿನ ಅಂತರ್ಗತವಾದ ಸಂಬಂಧಗಳ ನಡುವೆ ಘಟಿಸಬಹುದಾದ ಪ್ರಮಾದ !

ನಾವು‌ ನಮ್ಮ‌ ಬದುಕಲ್ಲಿ ಎಷ್ಟೋ ಸಂಬಂಧಗಳನ್ನು ಕೆಲವೊಮ್ಮೆ ನಮ್ಮ ಅಹಂಕಾರದಿಂದಲೇ ಕಳೆದುಕೊಳ್ಳುತ್ತೇವೆಂದು ಅನಿಸುವುದಿಲ್ಲವೇ ? ಆಧುನಿಕ ಜೀವನಶೈಲಿ, ಡಿಜಿಟಲ್ ಯುಗ, ಧಾವಂತದ ಬದುಕಿನ ಮಧ್ಯೆ, ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ- ತಮ್ಮ, ಸ್ನೇಹ- ಸಂಬಂಧ, ಬಂಧು- ಬಳಗ…. ಹೀಗೆ ನಮ್ಮ ಬದುಕಿನ ಬಹುಮುಖ್ಯ ಸಂಬಂಧಗಳು ಸ್ವಪ್ರತಿಷ್ಠೆಯಿಂದಲೋ, ಸಹನೆಯ ಕೊರತೆಯಿಂದಲೋ, ತಪ್ಪು ತಿಳಿವಳಿಕೆಯಿಂದಲೋ ಅಥವಾ ತಿರಸ್ಕಾರ ಭಾವದಿಂದಲೋ ಕಡೆಗಾಣಿಸಿರುತ್ತೇವೆ. ಎಂದೋ ಆಡಿದ ಒಂದು ಮಾತು, ಎಂದೋ ಆದ ಒಂದು ಕ್ಷುಲ್ಲಕ ಕಹಿ ಘಟನೆ, ಯಾರದೋ ತಪ್ಪು , ಇನ್ಯಾರದೋ ಒಪ್ಪು, ಈ ಎಲ್ಲಾ ಕಾರಣಗಳಿಂದಲೋ ಅಥವಾ ಸಂಬಂಧಗಳ ಹಾಲಿನಲ್ಲಿ ಹುಳಿ ಹಿಂಡುವ ಮೂರನೇ ವ್ಯಕ್ತಿಯ ಕೃತಿಮತೆಯಿಂದಲೋ ನಮ್ಮ ಸಂಬಂಧಗಳ ನಡುವೆ ಮುಚ್ಚಲಾಗದ ಬಿರುಕು ಉಂಟಾಗಿದ್ದಿರಬಹುದು.

ಅದೇನೇ ಇದ್ದರೂ ಕಾಲವೆನ್ನುವುದು ಎಲ್ಲಾ ಗಾಯಗಳನ್ನು ವಾಸಿ ಮಾಡುವ ಮಾಸ್ಟರ್ ಇದ್ದಂತೆ. ಕಾಲ ಕಳೆದಂತೆ, ವಯಸ್ಸು ಮಾಗಿದಂತೆ ಮಾಡಿರಬಹುದಾದ ತಪ್ಪುಗಳ ಸರಮಾಲೆ ಕಣ್ಣಮುಂದೆ ಆತ್ಮಸಾಕ್ಷಿಯನ್ನೇ ಅಣಕಿಸುವಂತೆ ಸುಳಿದಾಡಿ ಯೋಚಿಸುವಂತೆ ಮಾಡುತ್ತದೆ. ಲೈಫ಼ಲ್ಲಿ ಏನೆಲ್ಲಾ ಹಾರಾಡಿ ಹೋರಾಡಿರಬಹುದು, ಒಂದು ಹಂತದಲ್ಲಿ ಮನುಷ್ಯನಾದವನು ತನ್ನನ್ನು ತಾನು ತಿರುಗಿ ನೋಡಿಕೊಳ್ಳಲೇ ಬೇಕು, ತನ್ನ ಪ್ರಮಾದಗಳಿಗೆ ಭಾದ್ಯಸ್ಥನಾಗಲೇ‌ಬೇಕು. ಇದು ಪ್ರಕೃತಿ ನಿಯಮ. ಅಂತಹಾ ಮನ್ವಂತರದಲ್ಲಿಯಾದರೂ ತಪ್ಪಿಗಾಗಿ ಕ್ಷಮೆ ಕೇಳುವ ಪ್ರಬುದ್ಧತೆ ಇರದಿದ್ದಲ್ಲಿ ….. I think.., ಅಂತಹವರ ಎದೆ ಚಿಪ್ಪಿನಲ್ಲಿ ಪ್ರೀತಿಯ ಸೆಲೆ ಬತ್ತಿ ಹೋಗಿದೆ ಎಂದರ್ಥ !



ನಮಗೆ ಗೊತ್ತಿರುತ್ತೆ ಕೆಲವು ವಿಚಾರಗಳಲ್ಲಿ ತಪ್ಪು ನಮ್ಮದೇ ,ಇದರಲ್ಲಿ ಅವರದೇನೂ ಇಲ್ಲ ಎಂದು ! ಆದರೂ ಈ ಬಡ್ಡಿಮಗಂದು ” ಇಗೋ” ಎನ್ನುವ ಮತ್ತೇರಿಸುವ ಮಾದಕ ದ್ರವ್ಯ ನಮ್ಮನ್ನು‌ ಅಷ್ಟು ಸುಲಭವಾಗಿ ಬಿಟ್ಟು ಹೋಗುವುದಲ್ಲವಲ್ಲ ! ಹೀಗಾಗಿ ನಾವೇ ಮುಂದೆ ಬಿದ್ದು ಕ್ಷಮೆಯಾಚಿಸುವ ಹೃದಯವಂತಿಕೆ ತೋರುವುದಿಲ್ಲ. ಅಲ್ಲಿಗೆ ಕಂದಕಗಳೂ ಮುಚ್ಚಿರುತ್ತವೆ. ಸ್ವಲ್ಪ ದೊಡ್ಡ ಮನಸ್ಸು ಮಾಡಿ ನಾವೇ‌ ಒಂದು ಹೆಜ್ಜೆ ಮುಂದಿಟ್ಟಲ್ಲಿ ಕಳೆದುಕೊಳ್ಳುವುದಾಗಲೀ ಅಥವಾ ನಾವು ಅದರಿಂದ ಸಣ್ಣವರಾಗುವುದಾಗಲೀ ಏನೂ ಇಲ್ಲ ! ಬದಲಿಗೆ ನಿಮ್ಮ‌ ವ್ಯಕ್ತಿತ್ವ ಇನ್ನಷ್ಟು ಎತ್ತರಕ್ಕೆ ಬೆಳೆದಂತೆ. ನೆನಪಿಡಿ …. ಧೈರ್ಯವಂತನಿಗೆ ಮಾತ್ರವೇ ಕ್ಷಮೆ ಕೇಳುವ ದಿಲ್ ಇದ್ದರೆ , ಹೃದಯವಂತನಿಗೆ ಮಾತ್ರವೇ ಕ್ಷಮಿಸುವ ಗುಣವಿರುತ್ತೆ.

ಫೋಟೋ ಕೃಪೆ : shutter stock (ಸಾಂದರ್ಭಿಕ ಚಿತ್ರ)

ಬದುಕು ಎಷ್ಟು ನಶ್ವರವೆಂದು ಶತಶತಮಾನಗಳ ಹಿಂದಿನಿಂದಲೂ ನೂರಾರು ದಾಸರು, ಶರಣರು, ಪುಣ್ಯಪುರುಷರು _ವೇದಾಂತಿಗಳು ಹೇಳಿದ ಮಾತುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲನಾದ ಮಾನವನಿಗೆ ಇಂದು ಕಣ್ಣಿಗೆ ಕಾಣದ ಒಂದು ತೃಣಮಾತ್ರದ ಕೊರೋನಾ ವೈರಸ್ ಎಂಬ ಮಾಯಾವಿ ಮಾರಿ ನಮ್ಮೆಲ್ಲರ ಬದುಕಿನ ನಶ್ವರತೆ ಬಗೆಗೆ ಜನುಮಾಪಿ ಮನದಟ್ಟಾಗುವಂತೆ ಪಾಠ ಕಲಿಸಿ ಬಿಟ್ಟಿದೆ. ಬೆಳಿಗ್ಗೆ ಇದ್ದವರು ಮಧ್ಯಾಹ್ನವಿಲ್ಲ, ಸಂಜೆಗೆ ನೋಡಿದವರು ರಾತ್ರಿ ಹೊತ್ತಿಗೆ ಜೀವಂತವಿಲ್ಲ….. ಈ ತರಹದ ದಯನೀಯ ದೃಶ್ಯಗಳಿಗೆ ಬದುಕು ಸಾಕ್ಷಿಯಾಗುತ್ತಿದೆ. ಜೀವನವೆನ್ನುವುದು ನೀರ ಮೇಲಿನ ಗುಳ್ಳೆಯೆಂಬುದು ದೃಶ್ಯಸಹಿತ ವೇದ್ಯವಾಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಪ್ರೀತಿ ಪ್ರೇಮ, ವಿಶ್ವಾಸ, ಅನುಬಂಧ ,ಸ್ನೇಹ, ಮಾನವೀಯ ಮೌಲ್ಯಗಳು.. ಮಾತ್ರವೇ ಮಹತ್ತರವಾದದ್ದೇ ವಿನಃ , ಸಂಪಾದಿಸಿ ಕೂಡಿಟ್ಟ ಕೋಟಿ ಕೋಟಿ ರೂಪಾಯಿಗಳು ಹೋಗಲೇ ಬೇಕೆಂದಿರುವ ಉಸಿರನ್ನು ತಡೆದು ನಿಲ್ಲಿಸಲಾರವು. ಬಾಂಧವ್ಯಗಳು ಗಟ್ಟಿಯಾಗಿದ್ದು, ಮನದಲ್ಲಿ ನಿಷ್ಕಲ್ಮಶ ಪ್ರೀತಿ ತುಂಬಿದ್ದಲ್ಲಿ ಅವು ಸರಾಗ ಉಸಿರಾಟದ ಮೇಲೆ ಸತ್ಪರಿಣಾಮವನ್ನೇ ಬೀರಬಲ್ಲವು !

ಈ ವಾಸ್ತವಿಕತೆಯ ಬೆಳಕಲ್ಲಿ ಹಿಂದಿನ ತಪ್ಪುಗಳಿಗೆ ಕ್ಷಮೆ ಕೇಳುವುದರಿಂದ ಮನಸು ಹಗುರವಾಗಿ ಒಮ್ಮೆ ಗಟ್ಟಿಯಾಗಿದ್ದು ನಂತರ ಬಿರುಕು‌ ಬಿಟ್ಟಿದ್ದ ಭಾಂದವ್ಯಗಳು ಪುನಃ ಬೆಸೆದುಕೊಳ್ಳುವುದರಲ್ಲಿ ಬದುಕಿನ ಸತ್ವ- ಸತ್ಯ ಅಡಗಿದೆ.

ಫೋಟೋ ಕೃಪೆ : The Times of India (ಸಾಂದರ್ಭಿಕ ಚಿತ್ರ)

ಮರೆಯುವ ಮುನ್ನ

ನೆನಪಿರಲಿ.. ಕತ್ತಲನ್ನು ಕತ್ತಲಿಂದಲೇ ಓಡಿಸಲು ಆಗಲ್ಲ. ಕತ್ತಲನ್ನು‌ ಓಡಿಸಲು ಬೆಳಕಿನಿಂದ ಮಾತ್ರವೇ ಸಾಧ್ಯ. ಹಾಗೆಯೇ ದ್ವೇಷವನ್ನು ದ್ವೇಷದಿಂದ ಹೋಗಲಾಡಿಸಲು ಸಾಧ್ಯವಿಲ್ಲ ! ಅದನ್ನು ಮರೆಯಾಗಿಸಬೇಕಾದದ್ದು ಪ್ರೀತಿ ಮಾತ್ರವೇ. ಆ ಪ್ರೀತಿ ಬೆಳೆಯಬೇಕಾದಲ್ಲಿ ಮಾಡಿದ ತಪ್ಪಿಗೆ ಕ್ಷಮೆ‌ ಕೇಳುವ, ಕ್ಷಮೆ ಕೇಳಿದವರನ್ನು ಕ್ಷಮಿಸುವ ಹೃದಯ ವೈಶಾಲ್ಯತೆ ಬೇಕು.

ಮಾಡಿದ ತಪ್ಪಿಗೆ ಕ್ಷಮೆ ಕೇಳುವುದು ಎಂದರೆ ಖಂಡಿತಾ ಅಪಮಾನವೂ ಅಲ್ಲ , ಕೈಲಾಗದವರ ಲಕ್ಷಣವೂ ಅಲ್ಲ. ಅದು ಧೈರ್ಯವಂತರು ಮಾತ್ರ ಮಾಡುವ ಕೆಲಸ. ತಪ್ಪು ಯಾರದ್ದು ಎಂದು ನಿಮ್ಮ ಆತ್ಮಸಾಕ್ಷಿಗೆ ಕೇಳಿಕೊಳ್ಳಿ! ನಿಮ್ಮ ಸ್ವಪ್ರತಿಷ್ಠೆಯನ್ನು ಸ್ವಲ್ಪಕಾಲ ಲಾಕ್ ನಲ್ಲಿಡಿ. ನಂತರ ಸರಿಯಾದ ನಿರ್ಧಾರ ತೆಗೆದುಕೊಳ್ಳಿ…. ಇದರಿಂದ ಕಳೆದುಕೊಳ್ಳುವುದೇನೂ ಇಲ್ಲ. ಧೈರ್ಯವಂತರು ಕ್ಷಮೆ ಕೇಳಿದರೆ, ಹೃದಯವಂತರು ಕ್ಷಮಿಸುವ ಮನಸ್ಸು ಮಾಡುತ್ತಾರೆ.

ಮೇಲಾಗಿ ಕೆಲವರು ಕ್ಷಮೆಗೆ ಅರ್ಹರೆಂದು ಕ್ಷಮೆ ಕೇಳಬೇಡಿ ; ಆದರೆ‌ ನೀವು ಮನಃಶಾಂತಿಗೆ ಅರ್ಹರೆಂದು‌ ನಿಮಗಾಗಿ ಕ್ಷಮೆ ಕೇಳಿ. ಅದರಿಂದ ಕೊನೇ ಪಕ್ಷ ಮನದ ಗೊಂದಲವಾದರೂ ಕರಗಿ ಶಾಂತಿ ದೊರೆತೀತು !!

ಲಾಸ್ಟ್ ಪಂಚ್ 
ಅಯೋಗ್ಯನಾದವನು ತಪ್ಪನ್ನು ಕ್ಷಮಿಸೋದೂ ಇಲ್ಲ ಹಾಗೆಯೇ ಮರೆಯೋದು ಇಲ್ಲ ;
ನಿಷ್ಕಪಟನಾದವನು ತಪ್ಪನ್ನು ಕ್ಷಮಿಸಿ, ಅದನ್ನು ಮರೆತು‌ ಬಿಡುತ್ತಾನೆ.
ಬುದ್ದಿವಂತನಾದವನು ತಪ್ಪನ್ನು ಕ್ಷಮಿಸುತ್ತಾನೆ. ಆದರೆ ಅದನ್ನು ತನ್ನ ಜೀವನದಲ್ಲಿ ಮರೆಯೋದಿಲ್ಲ..!!
ಪ್ರೀತಿಯಿಂದ….

  • ಹಿರಿಯೂರು ಪ್ರಕಾಶ್ (ಲೇಖಕರು, ಚಿಂತಕರು)

One thought on “‘ಕ್ಷಮೆ’ ಕೇಳೋದು ಧೈರ್ಯವಂತರು ಮಾತ್ರ – ಹಿರಿಯೂರು ಪ್ರಕಾಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading