‘ The least I can do is speak for those who
Can not speak for themselves’
_ Jane Goodall
ಜೀವಪರ ವಿಜ್ಞಾನಿಯಾಗಿ,ಜಾಗತಿಕ ಮಾನ್ಯತೆ ಪಡೆದ ಜೇನ್ ಗುಡಾಲ್ ಸುಮಾರು ಐವತ್ತು ವರ್ಷಗಳಿಗೂ ಮಿಗಿಲಾಗಿ ಚಿಂಪಾಜಿಗಳ ಜೀವನಕ್ರಮ ಮತ್ತು ಸಾಮಾಜಿಕ ನಡವಳಿಕೆಗಳ ಸತತ ,ಆಳವಾದ ಅಧ್ಯಯನದಿಂದ ಇಂದು ಜಗತ್ತಿನ ಅತಿ ಮುಖ್ಯ ಪ್ರೈಮೆಟಲೋಜಿಸ್ಟ್ ಎಂಬ ಕೀರ್ತಿಗೆ ಭಾಜನಾಗಿದ್ದಾರೆ.

೧೯೩೪ ಏಪ್ರಿಲ್ ೩ ರಂದು ಇಂಗ್ಲೆಂಡಿನ ಹ್ಯಾಮ್ ಸ್ಟೆಡ್ ನಲ್ಲಿ ಜನಿಸಿದ ಗುಡಾಲ್ ಬಾಲ್ಯದಿಂದಲೂ ಪ್ರಾಣಿ ಜಗತ್ತಿನ ವಿಸ್ಮಯಗಳ ಕುರಿತು ಕುತೂಹಲ,ಪ್ರಶ್ನಿಸುವ ಅಭ್ಯಾಸ ,ಉತ್ತರ ಸಿಗದೇ ಇದ್ದಾಗ ಮೂಡಿದ ಚಡಪಡಿಕೆ,ಅದಕ್ಕಾಗಿ ಹುಡುಕಾಟ,ತಪ್ಪುಗಳನ್ನು ಮಾಡುತ್ತಾ ಬೆಳೆದ ಪರಿ , ಸಾಧನೆಯ ಕಠಿಣ ಹಾದಿಯಲ್ಲಿ ಗಾಢವಾಗಿ ತನ್ನನ್ನು ತೊಡಗಿಸಿಕೊಂಡ ಪರಿಯನ್ನು ಹಸನ್ಮುಖಿಯಾಗಿ ವಿವರಿಸುತ್ತಾರೆ.
ಎಳವೆಯಲ್ಲಿ ಡಾ. ಡೂಲಿಟ್ಟಲರ ಪ್ರಾಣಿಗಳ ಬಗ್ಗೆ ಪುಸ್ತಕಗಳು,ಆಫ್ರಿಕಾದ ಟಾರ್ಜನ್ ಕಥೆ ಪುಸ್ತಕಗಳನ್ನು ಓದಿ , ಸ್ಫೂರ್ತಿಗೊಂಡು ಪ್ರಾಣಿಗಳ ಬಗ್ಗೆ ಇದ್ದ ಅದರಲ್ಲೂ ಚಿಂಪಾಜಿಗಳ ಮೇಲಿದ್ದ ಈ ವಿಶೇಷ ಒಲವೇ ಇಪ್ಪತ್ತಾರು ವರ್ಷದ ಗುಡಾಲರನ್ನು ಆಫ್ರಿಕಾಕ್ಕೆ ಎಳೆತರುತ್ತದೆ.ಮುಂದೆ ಏನಿದ್ದರೂ ಸಾಧನೆಯ ಕಠಿಣ ಹಾದಿ.ಆಫ್ರಿಕಾದ ಕೆನ್ಯಾದಲ್ಲಿದ್ದ ಪ್ರಸಿದ್ಧ ಮಾನವ ಶಾಸ್ತ್ರಜ್ಞ ಪ್ರೊ.ಲೀಕಿಯವರ ನೇತೃತ್ವದಲ್ಲಿ ಆರಂಭವಾದ ಅಧ್ಯಯನ ಮುಂದೆ ಆಫ್ರಿಕಾದ ಗೊಂಬೆ ಸ್ಟ್ರೀಮ್ ನ್ಯಾಷನಲ್ ಪಾರ್ಕ್ ನಲ್ಲಿ ಚಿಂಪಾಜಿಗಳ ಒಡನಾಟದಲ್ಲಿ ಮುಂದುವರೆಯುತ್ತದೆ.

ಫೋಟೋ ಕೃಪೆ : Bookstr
ವೈಜ್ಞಾನಿಕ ಜಗತ್ತನ್ನೇ ಬೆರಗುಗೊಳಿಸಿದ ಗುಡಾಲರ ಸಂಶೋಧನೆಗಳು ಮುಖ್ಯವಾಗಿ, ಮನುಷ್ಯನಿಗೆ ಮಾತ್ರ ಸ್ವತಂತ್ರ ವ್ಯಕ್ತಿತ್ವ,ಸಂತೋಷ, ದುಃಖಗಳಂತಹ ಭಾವನೆಗಳಿವೆ ಎಂದು ನಂಬಿದ್ದ ಕಾಲದಲ್ಲಿ ಚಿಂಪಾಜಿಗಳಿಗೂ ಅವುಗಳದೇ ಆದ ವ್ಯಕ್ತಿತ್ವವಿದೆ.ಮನುಷ್ಯಸಹಜ ಬಯಕೆಗಳಾದ ತಬ್ಬಿಕೊಳ್ಳುವುದು,ಬೆನ್ನು ತಟ್ಟುವುದು,ಕಚಗುಳಿ ಇಡುವುದು ಇವೆಲ್ಲವುಗಳನ್ನು ಚಿಂಪಾಜಿಗಳೂ ನಡೆಸುತ್ತವೆ.ಮತ್ತು ಅವುಗಳ ಸಂಸಾರದಲ್ಲಿ ಮತ್ತು ತಮ್ಮಗುಂಪಿನ ಇತರ ಸದಸ್ಯರೊಡನೆ ಅವು ಹೊಂದಿರುವ ಮಾನವ ಸದೃಶ ಭಾವನೆಗಳು ಚಿಂಪಾಜಿಗಳಿಗೂ ಮಾನವನಿಗೂ ಇರುವ ಸಾದೃಶ್ಯವನ್ನು ಸಾಬೀತುಪಡಿಸುತ್ತವೆ.ಹಾಗೂ ಅದುವರೆಗೆ ಮನುಷ್ಯರು ಮಾತ್ರ ಉಪಕರಣಗಳನ್ನು ಮಾಡಬಲ್ಲ, ಉಪಯೋಗಿಸಬಲ್ಲ ಮತ್ತು ಚಿಂಪಾಜಿಗಳು ಸಸ್ಯಾಹಾರಿಗಳು ಎಂಬ ನಂಬಿಕೆಗಳು ಗುಡಾಲರ ಸಂಶೋಧನೆಯಿಂದ ಆಘಾತಕ್ಕೀಡಾಗುತ್ತವೆ. ಚಿಂಪಾಜಿಗಳ ಶಾಂತಿ ,ಪ್ರೀತಿಗಳ ಸ್ವಭಾವ ಮಾತ್ರವಲ್ಲದೆ ಅವುಗಳ ಆಕ್ರಮಣಕಾರಿ ಪ್ರವೃತ್ತಿಯಿಂದ ಅವುಗಳ ಸ್ವಭಾವದಲ್ಲಿ ಸಹಾ ಮನುಷ್ಯನ ಕ್ರೂರತೆ ಇದೆ ಎಂಬ ಸತ್ಯವನ್ನು ಹೊರಗೆಡವಿದರು.
ಸುದೀರ್ಘ ಕಾಲ ತಾಂಜಾನಿಯದಲ್ಲಿ ಚಿಂಪಾಜಿಗಳ ಬಗ್ಗೆ ಸಂಶೋಧನೆ ನಡೆಸಿದ ಗುಡಾಲ್ ಜೇನ್ ಗುಡಾಲ್ ಇನ್ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ,ಇಂದಿನ ದಿನಗಳಲ್ಲಿ ಚಿಂಪಾಂಜಿಗಳ ಮತ್ತು ಜಗತ್ತಿನ ಪರಿಸರದ ಬಗೆಗಿನ ಕೆಲಸಗಳಿಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.ಇವರ ಅವಿರತ ಶ್ರಮದ ಫಲವಾಗಿ ಅರಸಿ ಬಂದ ಪ್ರಶಸ್ತಿಗಳು ಹಲವಾರು.ಯುನೈಟೆಡ್ ನೇಶನ್ಸ್ ನ ಏಪ್ರಿಲ್ 2002 ಶಾಂತಿ ರಾಯಭಾರಿಯೂ ಹೌದು.ಇಂದು ಪ್ರಪಂಚದ ಸುಮಾರು ಇಪ್ಪತ್ತೆಂಟು ದೇಶಗಳಲ್ಲಿ ಜೇನ್ ಗುಡಾಲ್ ಇನ್ಸ್ಟಿಟ್ಯೂಟ್ ಗಳು ಸ್ಥಾಪಿತವಾಗಿವೆ.ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ,ವಿಶೇಷವಾಗಿ ಅಪರೂಪದ ಚಿಂಪಾಜಿಗಳನ್ನು ರಕ್ಷಿಸುವ ,ಹಾಗೂ ಹಸಿರು ಕ್ರಾಂತಿಗಾಗಿ ಶ್ರಮಿಸುತ್ತಿವೆ.

ಫೋಟೋ ಕೃಪೆ : Britaanica
ಜೇನ್ ಗುಡಾಲಗೆ ಈಗ ಎಂಬತ್ತೇಳು ವಯಸ್ಸು. ಕ್ರಿಯಾತ್ಮಕತೆಯೆನ್ನುವುದು ಪ್ರಕೃತಿಯ ಮೂಲ ಗುಣವಾದರೆ,ಪ್ರಕೃತಿಯನ್ನೇ ಆರಾಧಿಸಿ,ಈ ಜೀವ ಪ್ರೀತಿಯ ಮಿಡಿತಕ್ಕಾಗಿ,ನಿಜವಾದ ಜ್ಞಾನದ ಹುಡುಕಾಟಕ್ಕೆ, ಕಲಿಕೆಯ ಸೌಂದರ್ಯವನ್ನು ಆನಂದಿಸುವ ಹಾಗೂ ಅದಕ್ಕೆ ಅಗತ್ಯವಾಗಿ ಬೇಕಿರುವ ಶ್ರದ್ಧೆ,ವಿನಯ,ತಾಳ್ಮೆ ಎಲ್ಲವನ್ನೂ ರೂಢಿಸಿಕೊಂಡು , ಸರಳತೆಯಲ್ಲೂ ವಿರಳವನ್ನು, ಸಾಮಾನ್ಯ ತೆಯಲ್ಲೂ ಮಹತ್ತನ್ನು ಸಾಧಿಸಿದ ಅದ್ಭುತ ಮಹಿಳೆ ಗುಡಾಲ್ ಲೋಕದ ಅಸಂಖ್ಯಾತ ಜನರೊಂದಿಗೆ ದನಿಯಾಗುತ್ತಾ ಹೋಗುತ್ತಾರೆ. ಜೀವಪ್ರೀತಿಯ ಬಗ್ಗೆ,ವೈಜ್ಞಾನಿಕ ಶೋಧಗಳ ಬಗ್ಗೆ,ನಮ್ಮದೇ ಭೂಮಿ – ಪರಿಸರದ ಜೊತೆ ಸಾಮರಸ್ಯದಿಂದ ಬದುಕುವ ಬಗ್ಗೆ.ದಣಿವಿಲ್ಲದೇ ಪ್ರತಿದಿನವೂ ಚಿಗುರುತ್ತಿರುವ ವಿಶಿಷ್ಟ ಮಹಿಳೆಗೆ ನಮನಗಳು.
Every individual matters
Every individual has a role to play
Every individual makes difference
ಗುಡಾಲ್ ಮಾತುಗಳು ಸದಾ ಸ್ಮರಣೀಯ.
- ವೈಶಾಲಿ ನಾಯಕ , ಮುಂಬೈ
