‘ಬದುಕೊಂದು ಬಯಲಾಟ… ಇಲ್ಲಿ ಎಲ್ಲರೂ ಒಂದಲ್ಲ ಒಂದು ದಿನ ಬಯಲ ಮುಂದೆ…ಬೆತ್ತಲಾಗಲೇ ಬೇಕು “ಗಿರಿರಾಜ” …ಕವಿ ಅಲ್ಲಾಗಿರಿರಾಜ್ ಕನಕಗಿರಿ ಅವರ ಅಪ್ಪನ ಅಗಲಿಕೆ ಮೇಲೆ ಬರೆದಂತಹ ಭಾವುಕ ಬರಹ, ತಪ್ಪದೆ ಮುಂದೆ ಓದಿ…
ಅಪ್ಪ ಬದುಕಿದ್ದಾಗ ತೊಟ್ಟ ಅಂಗಿಗೆ
ಮೂರು ಜೇಬು ಇಟ್ಟುಕೊಂಡು ತಿರುಗುತ್ತಿದ್ದ.
ನಿನ್ನೆ ಮುಂಜಾನೆ ಅಪ್ಪ ಸಾವಿಗೆ ಶರಣಾದ.
ಆದರೂ ಈ ಸಮಾಜ ಸತ್ತ ಅಪ್ಪನಿಗೆ ಹೊಸ
ಬಟ್ಟೆ (ಕಫನ್) ಅಳತೆ ಮಾಡಿ ತಂದು ತೊಡಿಸಿತು.
ಆದರೆ…. ಆದರೆ…
ಹೆಣವಾಗಿ ಮಲಗಿದ್ದ ಅಪ್ಪನ ಹೊಸ ಬಟ್ಟೆಗೆ
ಒಂದು ಜೇಬು ಹೊಲಿಸುವುದನ್ನೇ ಮರೆತ್ತಿತ್ತು.
ಇಷ್ಟೇ ಅಲ್ಲವೇ ಈ ನೆಲದ ಜೀವನ?
ಇರುವ ತನಕ ನನ್ನದು ನಿನ್ನದು
ಆ ಮನೆ ಈ ಮನೆ ಬಂಧು ಬಳಗ
ಗಂಡ ಹೆಂಡತಿ ಮಕ್ಕಳು ಹಣ ಆಸ್ತಿ.
ಹೆಣವಾದ ಮೇಲೆ ಈ ಸಮಾಜ ತೊಡಿಸುವ
ಹೊಸ ಬಟ್ಟೆಗೂ ಜೇಬಿರಲಿಲ್ಲ…!!
ಬಂದಿದ್ದು ಬರಿಗೈಯಲ್ಲಿ ಹೊರಟಿದ್ದು ಬರಿಗೈಯಲ್ಲಿ
ಅದಕ್ಕೆ ಅಪ್ಪ ಬದುಕಿದ್ದಾಗ ತೊಟ್ಟ
ಅಂಗಿಗೆ ಮೂರು ಜೇಬು ಇಟ್ಟುಕೊಂಡು
ಮೆರೆದ ಅವರಿವರ ನಡುವೆ ಬದುಕಿ ಬಾಳಿದ.
ಹೆಗಲ ಹೆಣವಾದ ಮೇಲೆ ತೊಟ್ಟ
ಹೊಸ ಬಟ್ಟೆ (ಕಫನ್) ಗೂ ಜೇಬು ಇಲ್ಲದೆ ಹೊರಟು ಹೋದ.
‘ ಅದಕ್ಕೆ ನಾನು ಹೇಳಿದ್ದು
ಸಾವು ಸಾವಲ್ಲ ಅದು ಜೀವನದ
ಕೊನೇ ಸೋಲು ‘ ಎಂದು.
ಈಗ ಅಮ್ಮ ಬದುಕಿದ್ದಾಳೆ
ಅಪ್ಪನ ಹಳೇ ಕಾಲದ ನೆನಪುಗಳ
ಜೊತೆ ಜೊತೆಯಲಿ ನಾಳೆ ಬರುವ
ಸಾವಿಗಾಗಿ ಲೋಕದ ಎದುರು
ಮಕ್ಕಳ ನೋವು ನಲಿವಿನಲ್ಲಿ ಅಪ್ಪನನ್ನ ಹುಡುಕುತ್ತಾ.
ಬದುಕೊಂದು ಬಯಲಾಟ
ಇಲ್ಲಿ ಎಲ್ಲರೂ ಒಂದಲ್ಲ ಒಂದು ದಿನ ಬಯಲ ಮುಂದೆ
ಬೆತ್ತಲಾಗಲೇ ಬೇಕು “ಗಿರಿರಾಜ”
ಎಷ್ಟೋ ಬಣ್ಣ ಬಣ್ಣದ ಬಟ್ಟೆಗೆ ಹತ್ತಾರು ಜೇಬು ಇಟ್ಟರೂ
ಬಯಲ ಎದುರು ಜೇಬು ಇಲ್ಲದೆ ಹೋಗಬೇಕು…
- ಅಲ್ಲಾಗಿರಿರಾಜ್ ಕನಕಗಿರಿ
