ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮಗಳು ರಚನಾ ಅಮ್ಮನ ಸೀರೆ ಇನ್ನೇನು ಫ್ಯಾನಿಗೆ ಹಾಕಬೇಕು, ಅಷ್ಟರಲ್ಲಿ ಬಾಗಿಲನ್ನು ಒಡೆದುಕೊಂಡೆ ಒಳಗೆ ಬಂದರು ತಂದೆ ವಿಶ್ವನಾಥ್ ಅವರು. ಅದೇ ಅಪ್ಪನಿಂದ ಮೊದಲ ಏಟು ಸಿಕ್ಕದ್ದು, ಮುಂದೇನಾಯಿತು ಕತೆಗಾರ್ತಿ ಅರ್ಚನಾ ರವಿ ಅವರು ಅಪ್ಪಾ ಮಗಳ ಬಾಂಧವ್ಯದ ಕತೆಯನ್ನು ರೋಚಕವಾಗಿ ಓದುಗರಿಗೆ ಹೇಳಿದ್ದಾರೆ. ತಪ್ಪದೆ ಓದಿ…
2003.. ಇಸವಿ
ಟ್ರೀಣ್… ಟ್ರೀಣ್… ಸೈಕಲ್ ಬೆಲ್ ಶಬ್ದ ಸೈಕಲ್ ಹಿಂದೆ ಕೂತಿದ್ದ ರಚನಾ ಜೋರಾಗಿ ನಕ್ಕುಬಿಟ್ಟಳು. ಸೈಕಲ್ ಬೆಲ್ ಶಬ್ದ ಕೂಡ ಸುಮಧುರವೇ. ಯಾಕೆಂದರೆ ಅಪ್ಪ ತಾನೇ ಸೈಕಲ್ ಓಡಿಸುತ್ತಿರುವುದು, ಆ ನಗು ನೋಡಲ್ಲಾದರೂ ಬೇಕೆಂದೇ ಸೈಕಲ್ ಬೆಲ್ ಶಬ್ದ ಜಾಸ್ತಿ ಮಾಡುತ್ತಾರೆ. ವಿಶ್ವನಾಥ್
“ಅಪ್ಪ… ಅಪ್ಪ… “ಸೈಕಲ್ ಓಡಿಸುತ್ತಿರುವ ವಿಶ್ವನಾಥ್ ಅವರಿಗೆ ರಸ್ತೆಯ ಕಡೆ ಗಮನವಿದ್ದರೆ ಮಗಳು ಏನೋ ಹೇಳಲು ತವಕಿಸುತ್ತಿರುವ ಅಂದಾಜು ಇರಲಿಲ್ಲ. ಯಾವಾಗ ಶರ್ಟ್ ನಿಧಾನವಾಗಿ ಎಳೆಯಲು ಶುರು ಮಾಡಿದಳೋ ಅಂದಾಜಾಯಿತು. ಏನೋ ಹೇಳಲು ಪ್ರಯತ್ನಿಸುತ್ತಿದ್ದಾಳೆ ಎಂದು,
ಸೈಕಲ್ ಸೈಡಿಗೆ ನಿಲ್ಲಿಸಿ, ‘ಏನು ನನ್ನ ಪುಟ್ಟಮ್ಮ’… ಯಾವುದೋ ವಿಷಯ ಹೇಳೋಕೆ ಪೀಠಿಕೆ ಹಾಕ್ತಾ ಇದ್ದಾಳೆ, ಅಂದ್ರೆ ಯಾವುದೋ ಗಂಭೀರ ವಿಷಯವೇ ಇರ್ಬೇಕು..ಅವಳ ಎತ್ತರಕ್ಕೆ ಬಗ್ಗಿ ಹುಬ್ಬನು ಮೇಲೆ ಹಾರಿಸಿ ಅವರು ಕೇಳಿದ ರೀತಿಗೆ ಅವಳ ಮನಸ್ಸಲ್ಲಿ ಕೊರಿಯುತ್ತಿರುವ ಪ್ರಶ್ನೆಗಳ ನಡುವೆ ಮುದ್ದಾದ ಮುಗುಳ್ನಗೆ ಮೂಡಿತು ರಚನಾ ಮುಖದಲ್ಲಿ.
ವಯಸ್ಸು ಎಂಟು. ಅಪ್ಪ ಅಮ್ಮನೇ ಜೀವ ಜೀವನ ಅದರಲ್ಲೂ ಅಪ್ಪ ಎಂದರೆ ಸ್ನೇಹಿತ ಅವಳ ಮನಸ್ಸಿನ ಕನ್ನಡಿ ಒಂದು ರೀತಿ ಅವಳ ಬದುಕಿನ ಹೀರೋ.
“ನಮ್ಮನೆಗೆ ಪುಟ್ಟ ಪಾಪು ಬರುತ್ತಂತೆ ಹೌದಾ …? ನನಗೆ ತಮ್ಮ ಬರ್ತಾನಂತೆ ಆಮೇಲೆ ಯಾರು ನನ್ನನ್ನು ಪ್ರೀತ್ಸೋದೆ ಇಲ್ವಂತೆ ಹೌದಾ…?”ಮಗಳ ಪ್ರಶ್ನೆಗೆ ಉತ್ತರ ಅವರದು ಅದೇ ಮಾಸದ ಮುಗುಳ್ನಗೆ..
“ಯಾರು ಹೇಳಿದ್ದು ನಿನಗೆ..”
“ಪಕ್ಕದ್ಮನೆ ಸಂಜು ಅಣ್ಣಾ..”
“ನಮ್ಮನಗೆ ಸದ್ಯಕ್ಕೆ ಯಾವ ಪುಟ್ಟ ಪಾಪು ಬರಲ್ಲ. ಬಂದ್ರು… ಈ ಮನೆಗೆ ಯುವರಾಣಿ ಮಹಾರಾಣಿ ನನ್ನ ಮಗಳೇ ಸರೀನಾ…” ಹಾಗೆ ಅಂದವರೇ ಅವಳಿಗೆ ಪ್ರೀತಿಯಿಂದ ಕೆನ್ನೆಗೆ ಮಮತೆಯ ಮುತ್ತು ನೀಡಿದರು. ಅವಳ ತಲೆ ಕೂದಲು ಪ್ರೀತಿಯಿಂದ ಸವರುತ್ತಾ ಮಂಡಿಯೂರಿ ಕುಳಿತು.
“ಅಪ್ಪನ ಮುದ್ದು ರಾಜಕುಮಾರಿ ನೀನು ಯಾರೇ ಬಂದ್ರು ನಿನ್ನ ಮೇಲಿರೋ ಪ್ರೀತಿ ಕಮ್ಮಿಯಾಗಲು ಗೊತ್ತಾಯ್ತಾ…” ಹಾಗೆ ಅಂದಾಕ್ಷಣ ಅವಳ ಮುಖದಲ್ಲೂ ಕೂಡ ಮುದ್ದಾದ ನಗು.
“ಅಪ್ಪ ನೋಡು ನಕ್ಷತ್ರ ನನ್ನ ಹಿಂದೆನೇ ಬರ್ತಾ ಇದೆ”
“ಹೌದು… ಹೌದು… ಯಾರಿದು ರಾಜಕುಮಾರಿ ಎಷ್ಟು ಸುಂದರವಾಗಿದ್ದಾಳೆ ಅಂತ ನೋಡೋಕೆ ಬರ್ತಾ ಇದ್ದಾರೆ…”ಜೋರಾದ ನಗು ಇಬ್ಬರ ನಡುವೆ ದೃಷ್ಟಿ ಬೀಳದಿರಲಿ ಎಂಬ ಭಾವ ಮೂಡಿತೊ ಆ ನಕ್ಷತ್ರಗಳಿಗೂ ಕೂಡ.
***
ಎಂಟು ವರ್ಷಗಳ ನಂತರ…
ಅಪ್ಪನನ್ನು ಅಂಟಿಕೊಂಡೇ ಕೂತಿದ್ದಳು. ಹೆದರಿಕೆ ಮನದೊಳಗೆ ಇಂದು ಎಸ್ ಎಸ್ ಎಲ್ ಸಿ ರಿಸಲ್ಟ್ ಅದು ಯಾಕೋ ತುಂಬಾ ಕಾನ್ಫಿಡೆಂಟ್ ಅವಳಿಗೆ. ನಾ ಪಾಸಾಗುವುದಿಲ್ಲ ಎಂದು ಕಾರಣವೂ ಇದೆ ಎಲ್ಲವೂ ಸುಲಭ ಗಣಿತ ಮಾತ್ರ ಕಠಿಣ.
ಅರ್ಧ ಗಂಟೆ ಕಳೆದಿತ್ತೇನೋ ಮೊಬೈಲ್ ಗೆ ಸಂದೇಶ ಬಂದಿತ್ತು. ಅವಳು ಅಂದುಕೊಂಡಂತೆ ಫೇಲ್ ಆಗಿದ್ದಳು. ವಿಶ್ವನಾಥ್ ಅವರ ಕಣ್ಣಂಚಲಿ ಒಂದು ಹನಿ ಕಣ್ಣೀರು, ಮಗಳ ಮುಖ ನೋಡಿ ಒಂದು ಮಾತನಾಡದೆ ಹೊರ ನಡೆದರು. ಹೋಗುವಾಗ ಅವರ ಹೆಂಡತಿ ರಚನಾ ತಾಯಿ ಜಾನಕಿ ಅವರಿಗೆ ಕಣ್ಣಲ್ಲಿ ಹೆದರಿಸಿ ಹೋಗಿದ್ದು ಮಗಳಿಗೆ ಒಂದು ಪೆಟ್ಟು ಬೀಳುವ ಹಾಗಿಲ್ಲ ಎಂದು. ಆದರೆ ತಮ್ಮ ಮನದ ನೋವಿಗೆ ಸಾಂತ್ವನಿಸಲು ಹೋದವರಿಗೆ ಆ ಕ್ಷಣ ಹೊಳೆಯಲ್ಲೇ ಇಲ್ಲ. ಮಗಳು ಮನಸ್ಸು ಈಗ ಸೂಕ್ಷ್ಮ ಎಂದು.
ಮಗಳಿಗೆ ಹೊಡೆಯುವ ಹಾಗಿಲ್ಲ ಎಂದು ಹೇಳಿದ್ದಕ್ಕೆ ಅಡುಗೆ ಮನೆಯ ಪಾತ್ರೆ ಮೇಲೆ ಅವರ ಕೋಪ…!! ಮಗಳ ಮೇಲೆ ಅಪಾರ ಪ್ರೀತಿ ಇದೆ, ಹಾಗೆ ಭವಿಷ್ಯದ ಹೆದರಿಕೆ ಕೂಡ.
ಅಪ್ಪ ಅಮ್ಮನ ಸಾಂತ್ವಾನವಿಲ್ಲದೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳಲು ರೂಮಿಗೆ ಹೋಗಿ ಬಿಟ್ಟಿದ್ದಳು.
ಕೈಯಲ್ಲಿದ್ದ ಅಮ್ಮನ ಸೀರೆ ಇನ್ನೇನು ಫ್ಯಾನಿಗೆ ಹಾಕಬೇಕು, ಬಾಗಿಲನ್ನು ಒಡೆದುಕೊಂಡೆ ಒಳಗೆ ಬಂದಿದ್ದರು ವಿಶ್ವನಾಥ್ ಅವರು. ಅರ್ಧ ದೂರ ಹೋದವರಿಗೆ ಮಗಳ ನೆನಪಾಗಿತ್ತು. ಮನೆಗೆ ಓಡಿ ಬಂದಿದ್ದರು. ಅವಳ ನಿರ್ಧಾರ ಕಣ್ಣೆದುರೇ ಇದ್ದಿದ್ದು ನೋಡಿ ಬಲವಾಗಿ ಕೆನ್ನೆಗೆ ಹೊಡೆದಿದ್ದರು…!! ಮೊದಲ ಏಟು ಅಪ್ಪನ ಕೈಯಿಂದ. ಅವಳು ಪಾಸಾಗದೆ ಹೋಗಿದ್ದು ಬೇಜಾರಿಲ್ಲ, ಆದರೆ ಈ ನಿರ್ಧಾರ ಅವರ ಗಟ್ಟಿ ಮನಸ್ಸನ್ನೇ ಕಲುಕಿತು.
“ಅಪ್ಪಾ…”
“ಮಾತಾಡಬೇಡ ನೀನು..”
“ಅಪ್ಪ ಐ ಯಾಮ್ ಸಾರಿ..”
“ಮಾತಾಡಬೇಡ ರಚನಾ … ಅಪ್ಪ ಅಂತನು ಕರಿಬೇಡ…”
“ಅಪ್ಪ…”ಬಿಕ್ಕಳಿಸಿ ಅಳಲು ಶುರು ಮಾಡಿದಳು. ಮಗಳ ಅಳು ನೋಡಲಾಗದೆ ಅವಳ ಪಕ್ಕದಲ್ಲಿ ಬಂದು ಕೂತು,
ಅವಳನ್ನು ಮಡಿಲ ಮೇಲೆ ಮಲಗಿಸಿಕೊಂಡು “ನೀನು ಎಂತ ದೊಡ್ಡ ತಪ್ಪು ಮಾಡ್ತಿದೆ ಗೊತ್ತಾ ಪುಟ್ಟ. ನಮ್ಮ ಜೀವ ಆ ದೇವರು ಕೊಟ್ಟಿದ್ದು ಅವರೇ ಕರೆಸಿಕೊಳ್ಬೇಕು, ಆತ್ಮಹತ್ಯೆ ಮಹಾ ಪಾಪ. ಈಗ ನೀನು ಫೇಲ್ ಆಗಿದ್ದು ಈ ಅಂಕ ಪಟ್ಟಿಯಲ್ಲಿ ಅಷ್ಟೇ…! ಜೀವನದಲ್ಲಿ ಅಲ್ಲ. ನಿನ್ನ ಮುಂದೆ ವಿಶಾಲವಾದ ಜೀವನ ಇದೆ. ಆ ಜೀವನದಲ್ಲಿ ಇನ್ನೂ ಕಠಿಣ ಹಾದಿ ಬರುತ್ತೆ, ಎಲ್ಲವೂ ಹೂವಿನ ಹಾದಿ ಇರಲ್ಲ. ಕಲ್ಲು ಮುಳ್ಳು ಸುಡುವ ರಸ್ತೆ ಕೂಡ ಸಿಗತ್ತೆ . ಅದೆಲ್ಲವನ್ನು ದಾಟಿ ಹೋದ್ರೆ ಜೀವನದಲ್ಲಿ ಏನಾದರೂ ಸಾಧಿಸೋಕೆ ಸಾಧ್ಯ…!! ಸೋಲು ಅನ್ನೋದು ಬದುಕಲ್ಲಿ ಬರ್ಲಿಲ್ಲ ಅಂದ್ರೆ ಗೆಲುವಿನ ರುಚಿ ಸಿಕ್ಕಿದ್ರು ಕೂಡ ಅದು ಸಿಹಿ ಇರಲ್ಲ, ಯಾಕಂದ್ರೆ ಸೋಲಿನ ಕಷ್ಟ ನೋಡೇ ಇರಲ್ಲ. ಬರಿ ಬದುಕಲ್ಲಿ ಗೆದ್ದು, ಗೆದ್ದು ಆಕಾಶದ ಎತ್ತರಕ್ಕೆ ಹಾರಿದೆ ಅಂದುಕೋ ಒಂದೇ ಒಂದು ಸೋಲು ಅರಗಿಸಿಕೊಳ್ಳಲಾಗದೆ ಪಾತಾಳಕ್ಕೆ ಬೀಳ್ತೀಯ. ಸೋಲು ಅವಮಾನ ಜೀವನದ ದೊಡ್ಡ ಪಾಠ ಮುಂದೊಂದು ದಿನ ಗೆಲುವಿನ ಶಾಶ್ವತ ಮೆಟ್ಟಿಲು ನಾವು ಹತ್ತಲು…” ಅಷ್ಟು ಹೇಳಿದವರ ಮನಸಿನಲ್ಲೂ ಕೂಡ ಮಗಳು ಈಗ ತೆಗೆದುಕೊಂಡ ನಿರ್ಧಾರ ನಡುಗಿಸಿತ್ತು ಒಮ್ಮೆ ಯೋಚನೆ ಮಾಡಿಯೇ.
ಹೆಂಡತಿಗೆ ಅವಳ ಪಕ್ಕದಲ್ಲಿ ಇರಲು ಹೇಳಿ ತಾವೇ ಅಡುಗೆ ಮನೆಗೆ ಹೋಗಿ ಮಗಳಿಗೆ ಇಷ್ಟವಾದ ಉಪ್ಪಿಟ್ಟು ಮಾಡಿದ್ದರು.
ಜಾನಕಿಯವರು “ಎಂಥ ತಪ್ಪು ಮಾಡುತ್ತಿದ್ದೆ ಪುಟ್ಟಮ್ಮ ಈಗಿಲ್ಲ ಅಂದ್ರೆ ಸಪ್ಲಿಮೆಂಟರಿ ಪಾಸ್ ಮಾಡ್ಕೋಬಹುದು, ಆದರೆ ಜೀವ ವಾಪಸ್ ಬರುತ್ತಾ …?! ಅಮ್ಮನಾಗಿ ಸ್ವಲ್ಪನೂ ಕೋಪ ಮಾಡ್ಕೊಳೋ ಹಕ್ಕು ಇಲ್ವ ನನಗೆ” ಹಾಗೆ ಅಂದವರೇ ಅವಳ ಕೆನ್ನೆಗೆ ಪುಟ್ಟದಾದ ಏಟು ಕೊಟ್ಟಿದ್ದರು.
ಆ ಕ್ಷಣ ಇಬ್ಬರಿಗೂ ತಿಳಿದಿರಲಿಲ್ಲ, ತಮ್ಮ ಮಗಳ ಬದುಕಲ್ಲಿ ಬರುವ ನೂರಾರು ನೋವಿನ ಕಠಿಣ ಹಾದಿಗಳು.
ಕಲ್ಲು ಮುಳ್ಳಿನ ಹಾದಿ ದಾಟಿ ಅಪ್ಪನ ಕನಸಿನ ಗೆಲುವಿನ ದಾರಿ ನೋಡುತ್ತಾಳ ರಚನಾ…?
ಮುಂದುವರಿಯುತ್ತದೆ
- ಅರ್ಚನಾ ರವಿ
